ನರೇಂದ್ರ ಮೋದಿ ಆಳ್ವಿಕೆಯಲ್ಲಿ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ ಎಂದು ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿರುವುದಾಗಿ ದೂರಿದ್ದಾರೆ.
ದಾವಣಗೆರೆ (ಜು.18): ನರೇಂದ್ರ ಮೋದಿ ಆಳ್ವಿಕೆಯಲ್ಲಿ ಸಂವಿಧಾನ, ಪ್ರಜಾಪ್ರಭುತ್ವಕೆ ಗಂಡಾಂತರ ಎದುರಾಗಿದೆ. ರಾಜ್ಯದ ಕಾಂಗ್ರೆಸ್-ಜೆಡಿಎಸ್‌ನ ಅತೃಪ್ತ ಶಾಸಕರು ಬಿಜೆಪಿ ಕುತಂತ್ರಕ್ಕೆ ಬಲಿಯಾದರೆ ಆ ಎಲ್ಲರ ವಿರುದ್ಧ ಸ್ಪೀಕರ್ ರಮೇಶ್ ಕುಮಾರ ಕಠಿಣ ಕ್ರಮ ಜರುಗಿಸಿ, ದೇಶದ ಜನ ಪ್ರತಿನಿಧಿಗಳಿಗೆ ತಕ್ಕ ಸಂದೇಶವನ್ನು ರವಾನಿಸಬೇಕು ಎಂದು ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಮುವಾದಿ ಬಿಜೆಪಿ ಕುತುಂತ್ರಕ್ಕೆ ಅತೃಪ್ತ ಶಾಸಕರು ಬಲಿಯಾಗಬಾರದು. ಲೋಕಸಭೆಯಲ್ಲಿ ಭಾರಿ ಬಹುಮತ ನೀಡಿದ ಜನರ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್‌ನ ಶಾಸಕರಿಗೆ ಕೋಟಿ ಕೋಟಿ ಹಣ ನೀಡಿ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ದಳಗಳ ದಾಳಿಯಂತಹ ಬೆದರಿಕೆ ಅಸ್ತ್ರ ಬಳಸಿ, ಆಪರೇಷನ್ ಕಮಲ ಮಾಡಿದ್ದಾರೆ ಎಂದು ಆರೋಪಿಸಿದರು.
ಅಘೋಷಿತ ತುರ್ತು ಪರಿಸ್ಥಿತಿ:
ದೇಶದಲ್ಲಿ ಅಘೋಷಿಕ ತುರ್ತು ಪರಿಸ್ಥಿತಿ ಇದ್ದು, ಜನಾದೇಶವನ್ನು ಜನಸೇವೆಗೆ ಬಳಸದೆ, ಚುನಾಯಿತ ಜನಪ್ರತಿನಿಧಿಗಳನ್ನು ಕುರಿ-ಕೋಳಿ ಖರೀದಿಸುವಂತೆ ಬಿಜೆಪಿ ಖರೀದಿಸಲು ಮುಂದಾಗಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ. 1985ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು, 2003ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಯ್ದೆಗೆ ಮತ್ತಷ್ಟುಶಕ್ತಿ ತುಂಬಿದ್ದರು. ಇಂತಹ ಕಾಯ್ದೆಯನ್ನೇ ಮೋದಿ-ಶಾ-ಬಿಎಸ್‌ವೈ ಮುರಿದು ಹಾಕುತ್ತಿದ್ದಾರೆ ಎಂದು ದೂರಿದರು.
ಅತೃಪ್ತರ ಪರ ವಾದ ಮಾಡಲು ಬಿಜೆಪಿಯಿಂದಲೇ ಹಣ:
ಅತೃಪ್ತ ಶಾಸಕರೊಂದಿಗೆ ದೆಹಲಿಯಲ್ಲಿ ಬಿಜೆಪಿಯ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಲಸ ಮಾಡುತ್ತಿದ್ದಾರೆ. ವಿಶೇಷ ವಿಮಾನ, ಪಂಚಾತಾರಾ ಹೊಟೆಲ್, ಮೋಜು, ಮಸ್ತಿ ವ್ಯವಸ್ಥೆ ಮಾಡುತ್ತಿದ್ದಾರೆ. ಬಿಜೆಪಿ ಸಂಸದರು, ಶಾಸಕರು, ಬಿಎಸ್‌ವೈ ಪುತ್ರ, ಆಪ್ತ ಸಹಾಯಕ ಸೇರಿ ಅನೇಕರು ಇದರ ಹಿಂದೆ ಇದ್ದಾರೆ. ಅತೃಪ್ತರ ಪರ ವಾದ ಮಾಡಲು ವಕೀಲರಿಗೆ ಬಿಜೆಪಿಯೇ ಹಣ ಸಂದಾಯ ಮಾಡುತ್ತಿರುವುದು ಗುಟ್ಟಾಗಿಲ್ಲ. ಈ ಕಾರಣಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ವಿಪಕ್ಷದಲ್ಲಿ ಕೂರಿಸಿದ್ದರು ಎಂದು ಹೇಳಿದರು.
ತುರ್ತು ಪರಿಸ್ಥಿತಿ ನೆನೆದ ಪ್ರಧಾನಿ: ಸದನದಲ್ಲಿ ಕಾಂಗ್ರೆಸ್ ಮೌನಿ!
ಜೈಲಿನಲ್ಲಿ ಮುದ್ದೆ ಮುರಿದು ವಿಧಾನಸಭೆಗೆ ಬರ್ತಿದ್ದಾರೆ:
ಹಿಂದೆ ರಾಯಚೂರು ಜಿಲ್ಲೆ ದೇವದುರ್ಗ ಪ್ರವಾಸಿ ಮಂದಿರದಲ್ಲಿ ಶಾಸಕರ ಖರೀದಿಗೆ ಹೋಗಿದ್ದ ಯಡಿಯೂರಪ್ಪ ಮಾನ ಹರಾಜಾಗಿತ್ತು. ಹಿಂದೆಲ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಸೇರಿದ್ದ ನಾಯಕರು ಸಂಸತ್, ವಿಧಾನಸಭೆಗೆ ಬರುತ್ತಿದ್ದರು. ಈಗ ಮೋದಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ, ನಕಲಿ ಎನ್‌ಕೌಂಟರ್ ಸೇರಿ ಅನೇಕ ಅಪರಾಧ ಎಸಗಿ, ಜೈಲಿನಲ್ಲಿ ಮುದ್ದೆ ಮುರಿದು ನಂತರ ವಿಧಾನಸಭೆ, ಸಂಸತ್‌ಗೆ ಬರುವವರು ಹೆಚ್ಚಾಗಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಿಡಿಕಾರಿದರು. ಕಾಂಗ್ರೆಸ್ ಮುಖಂಡರಾದ ಎಸ್.ನಂಜ್ಯಾನಾಯ್ಕ, ಅಲ್ಲಾವಲಿ ಘಾಜಿಖಾನನ್, ಲಿಯಾಖತ್ ಅಲಿ, ಎಚ್.ಹರೀಶ, ಡಿ.ಶಿವಕುಮಾರ, ಅಬ್ದುಲ್ ಜಬ್ಬಾರ್, ಮಂಜುನಾಥ ಇದ್ದರು.