
ನವದೆಹಲಿ(ಅ.16): ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ಪ್ರತಿ ದಿನದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೊನೆಗೊಳಿಸಿದೆ.
ಇಂದು 40ನೇ ಹಾಗೂ ಅಂತಿಮ ದಿನದ ವಿಚಾರಣೆ ವೇಳೆ ಸಿಜೆಐ ರಂಜನ್ ಗಗೋಯ್, 'ಇಲ್ಲಿಗೆ ಸಾಕು..' ಎಂದು ಹೇಳುವ ಮೂಲಕ ಪ್ರತಿದಿನದ ವಿಚಾರಣೆಗೆ ತೆರೆ ಎಳೆದಿದ್ದಾರೆ.
ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೋರಿ ಹಿಂದೂ ಮಹಾಸಭಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿರುವ ಗಗೋಯ್, ಇನ್ನಷ್ಟು ದಿನಗಳ ಕಾಲ ಈ ಪ್ರಕರಣವನ್ನು ಜೀವಂತವಾಗಿಡಲು ಸುಪ್ರೀಂಕೋರ್ಟ್ ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಅಯೋಧ್ಯೆ ಪ್ರಕರಣದ ಅಂತಿಮ ದಿನದ ವಿಚಾರಣೆ ವೇಳೆ ಭಾರೀ ನಾಟಕೀಯ ಬೆಳವಣಿಗೆಗಳು ಘಟಿಸಿದ್ದು, ತಮ್ಮ ವಾದಗಳಿಗೆ ಬೆಂಬಲವಾಗಿ ಹಿಂದೂ ಮಹಾ ಸಭಾ ವಕೀಲರು ನ್ಯಾಯಾಲಯದಲ್ಲಿ ಪ್ರದರ್ಶಿಸಿದ ಪುಸ್ತಕ ಹಾಗೂ ನಕ್ಷೆಯನ್ನು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ರಾಜೀವ್ ಧವನ್ ಹರಿದು ಹಾಕಿದರು.
ರಾಜೀವ್ ಧವನ್ ವರ್ತನೆಯಿಂದ ಕೆಂಡಾಮಂಡಲವಾದ ಸಿಜೆಐ ರಂಜನ್ ಗೊಗೊಯ್, ತಾವು ನ್ಯಾಯಪೀಠದಿಂದ ಎದ್ದು ಹೊರ ನಡೆಯುವುದಾಗಿ ಗಂಭೀರ ಎಚ್ಚರಿಕೆ ಕೂಡ ನೀಡಿದರು. ಬಳಿಕ ರಾಜೀವ್ ಧವನ್ ತಮ್ಮ ವರ್ತನೆಗೆ ಕ್ಷಮೆ ಕೇಳಿದ ಪ್ರಸಂಗ ಕೂಡ ನಡೆಯಿತು.
ಸದ್ಯ ಅಯೋಧ್ಯೆ ಪ್ರಕರಣದ ಪ್ರತಿದಿನದ ವಿಚಾರಣೆ ಮುಗಿದಿದ್ದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತರಾಗುವ(ನವೆಂಬರ್ 17) ಮೊದಲು ತೀರ್ಪು ಹೊರ ಬೀಳುವುದು ಖಚಿತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.