ನಿರ್ಮಲಾ ‘ರಫೇಲ್‌ ದಾಳಿ’: ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹಿಗ್ಗಾಮುಗ್ಗಾ ತರಾಟೆ

By Web DeskFirst Published Jan 5, 2019, 10:32 AM IST
Highlights

ಬೊಫೋರ್ಸ್‌ ಹಗರಣ ಕಾಂಗ್ರೆಸ್ಸನ್ನು ಅಧಿಕಾರದಿಂದ ಕೆಳಗಿಳಿಸಿತ್ತು| ಮೋದಿ ಅವರನ್ನು ರಫೇಲ್‌ ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೆ| ಹಣ ಸಿಗಲಿಲ್ಲ ಎಂದು ರಫೇಲ್‌ಗೆ ಕಾಂಗ್ರೆಸ್‌ ಅಡ್ಡಿ ಮಾಡಿತ್ತು

ನವದೆಹಲಿ[ಜ.05]: ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದದಲ್ಲಿ ಭಾರಿ ಗೋಲ್‌ಮಾಲ್‌ ನಡೆದಿದೆ ಎಂದು ಕಳೆದ ಹಲವಾರು ತಿಂಗಳುಗಳಿಂದ ನಿರಂತರವಾಗಿ ಆರೋಪ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ ಪಕ್ಷವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಹಣ ಸಿಗಲಿಲ್ಲ ಎಂಬ ಕಾರಣಕ್ಕೆ ರಾಷ್ಟ್ರೀಯ ಭದ್ರತೆಯನ್ನೂ ಕಡೆಗಣಿಸಿ, ರಫೇಲ್‌ ಒಪ್ಪಂದಕ್ಕೆ ಕಾಂಗ್ರೆಸ್‌ ತಡೆಯೊಡ್ಡಿತ್ತು ಎಂದು ಆಪಾದಿಸಿದ್ದಾರೆ. ಅಲ್ಲದೆ, ರಫೇಲ್‌ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ.

ರಫೇಲ್‌ ವಿಷಯವಾಗಿ ಲೋಕಸಭೆಯಲ್ಲಿ ನಡೆದ ಚರ್ಚೆಗೆ 2 ತಾಸು ಉತ್ತರ ನೀಡಿದ ನಿರ್ಮಲಾ, ರಫೇಲ್‌ ವಿಚಾರದಲ್ಲಿ ಅಕ್ರಮ ನಡೆದಿದೆ, ವಿಮಾನದ ಬೆಲೆಯನ್ನು ಬೇಕಂತಲೇ ಹೆಚ್ಚಿಸಲಾಗಿದೆ, ಅಂಬಾನಿಗೆ ಅನುಕೂಲ ಮಾಡಿಕೊಡಲಾಗಿದೆ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಚ್‌ಎಎಲ್‌ ಅನ್ನು ಕಡೆಗಣಿಸಲಾಗಿದೆ ಎಂಬ ಕಾಂಗ್ರೆಸ್ಸಿನ ಪ್ರತಿ ಆರೋಪಕ್ಕೂ ತಿರುಗೇಟು ನೀಡಿದರು. ದೇಶವನ್ನು ದಾರಿತಪ್ಪಿಸಲು ಕಾಂಗ್ರೆಸ್‌ ಸುಳ್ಳಿನ ಮೊರೆ ಹೋಗಿದೆ ಎಂದು ಕಿಡಿಕಾರಿದರು.

ರಫೇಲ್‌ನಿಂದ ಮೋದಿ ಅಧಿಕಾರಕ್ಕೆ:

ಪ್ರಧಾನಿ ಮೋದಿ ಅವರ ಐದು ವರ್ಷಗಳ ಅವಧಿಯಲ್ಲಿ ರಕ್ಷಣಾ ಸಚಿವಾಲಯ ದಲ್ಲಾಳಿಗಳಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ರಫೇಲ್‌ ಎಂಬುದು ರಾಷ್ಟ್ರೀಯ ಹಿತಾಸಕ್ತಿಯ ನಿರ್ಧಾರ. ಬೊಫೋರ್ಸ್‌ ಬಗ್ಗೆ ನಾನು ಮಾತನಾಡಲ್ಲ. ಏಕೆಂದರೆ ಅದೊಂದು ಹಗರಣ. ಆದರೆ ರಫೇಲ್‌ ಹಗರಣವಲ್ಲ. ಕಾಂಗ್ರೆಸ್ಸನ್ನು ಬೊಫೋರ್ಸ್‌ ಅಧಿಕಾರದಿಂದ ಕೆಳಗಿಳಿಸಿತು. ನವ ಹಾಗೂ ಬದಲಾವಣೆಯ ಭಾರತವನ್ನು ಹೊಂದಲು, ಕಾಂಗ್ರೆಸ್‌ ಸುತ್ತ ನಾರುತ್ತಿರುವ ಭ್ರಷ್ಟಾಚಾರವನ್ನು ಕಿತ್ತೊಗೆಯಲು ಮೋದಿ ಅವರನ್ನು ರಫೇಲ್‌ ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ ಎಂದು ನಿರ್ಮಲಾ ಹೇಳಿದರು.

36 ವಿಮಾನ ಸೂಚಿಸಿದ್ದು ಸೇನೆ:

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 18 ವಿಮಾನಗಳನ್ನು ಹಾರಾಟ ಸ್ಥಿತಿಯಲ್ಲಿ ಖರೀದಿಸಲು ಯೋಜಿಸಿತ್ತು. ಆದರೆ 36 ವಿಮಾನಗಳ ಎರಡು ಸ್ಕಾ$್ವಡ್ರನ್‌ಗಳನ್ನು ಹಾರಾಟ ಸ್ಥಿತಿಯಲ್ಲೇ ಖರೀದಿಸುವಂತೆ ಸೂಚಿಸಿದ್ದು ವಾಯುಪಡೆ. 126 ಯುದ್ಧ ವಿಮಾನಗಳನ್ನು ಖರೀದಿಸುವಾಗ ಕಾಂಗ್ರೆಸ್‌ ಪಕ್ಷ ತನ್ನ ಬೊಕ್ಕಸ ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಂಡಿತ್ತು ಎಂದು ದೂಷಿಸಿದರು. ನಮ್ಮ ಒಪ್ಪಂದದಡಿ, ಮೊದಲ ರಫೇಲ್‌ ವಿಮಾನ 2019ರಲ್ಲಿ ಡೆಲಿವರಿ ಆಗಲಿದೆ. 36 ವಿಮಾನಗಳ ಪೈಕಿ ಕೊನೆಯದ್ದು 2022ರಲ್ಲಿ ಬರಲಿದೆ ಎಂದು ಮಾಹಿತಿ ನೀಡಿದರು.

ಮತ್ತೆ ಲೋಕಸಭೆಯಲ್ಲಿ ಕಣ್ಣು ಹೊಡೆದ ರಾಹುಲ್‌!

ಸೇಬನ್ನು ಕಿತ್ತಳೆ ಜತೆ ಹೋಲಿಸಿದಂತೆ:

526 ಕೋಟಿ ರು. ಇದ್ದ ವಿಮಾನದ ಬೆಲೆಯನ್ನು ಎನ್‌ಡಿಎ ಸರ್ಕಾರ 1600 ಕೋಟಿ ರು.ಗೆ ಹೆಚ್ಚಿಸಿದೆ ಎಂಬ ಕಾಂಗ್ರೆಸ್ಸಿನ ಆರೋಪಕ್ಕೆ ನಿರ್ಮಲಾ ತಿರುಗೇಟು ನೀಡಿದರು. ಕಾಂಗ್ರೆಸ್‌ ಹೇಳುತ್ತಿರುವ 526 ಕೋಟಿ ಅಧಿಕೃತ ಬೆಲೆಯಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ಪ್ರಸ್ತಾಪಿಸುತ್ತಿದ್ದ ದರಕ್ಕಿಂತ ಶೇ.9 ಬೆಲೆಗೆ ರಫೇಲ್‌ ಒಪ್ಪಂದ ಮಾಡಿಕೊಂಡಿದ್ದೇವೆ. 526 ಕೋಟಿ ಹಾಗೂ 1600 ಕೋಟಿ ರು. ಅನ್ನು ಹೋಲಿಕೆ ಮಾಡುವುದು ಸೇಬಿನ ಹಣ್ಣನ್ನು ಕಿತ್ತಳೆ ಜತೆ ಹೋಲಿಕೆ ಮಾಡಿದಂತೆ. 2007ರಲ್ಲಿ ಸೂಚಿಸಲಾಗಿದ್ದ ಬೆಲೆ 2016ರಲ್ಲೂ ಅಷ್ಟೇ ಇರುತ್ತದೆಯೇ? ವೆಚ್ಚ ಹೆಚ್ಚಾಗಿರುತ್ತದೆ, ವಿದೇಶಿ ವಿನಿಮಯ ದರದಲ್ಲೂ ವ್ಯತ್ಯಾಸವಾಗಿರುತ್ತದೆ. ಖಾಲಿ ವಿಮಾನದ ಬೆಲೆಯನ್ನು ಶಸ್ತ್ರಸಜ್ಜಿತ ವಿಮಾನದ ಜತೆ ಹೋಲಿಸಿ ನೋಡಲು ಆಗದು ಎಂದು ರಕ್ಷಣಾ ಸಚಿವೆ ಹೇಳಿದರು.

ಎಚ್‌ಎಎಲ್‌ ಬಗ್ಗೆ ಮೊಸಳೆ ಕಣ್ಣೀರು:

ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರು ಸುರಿಸುತ್ತಿದೆ. ಎಚ್‌ಎಎಲ್‌ಗೆ ರಫೇಲ್‌ ಉಪಗುತ್ತಿಗೆ ನೀಡಿಲ್ಲ ಎಂದು ಆರೋಪಿಸುತ್ತಿದೆ. ಆದರೆ ಎಚ್‌ಎಎಲ್‌ ಸಾಮರ್ಥ್ಯ ವೃದ್ಧಿಗೆ ಏನನ್ನೂ ಮಾಡಲಿಲ್ಲ. ಬಿಜೆಪಿ ಸರ್ಕಾರ 1 ಲಕ್ಷ ಕೋಟಿ ರು. ಮೌಲ್ಯದ ಗುತ್ತಿಗೆಗಳನ್ನು ಎಚ್‌ಎಎಲ್‌ಗೆ ಕೊಟ್ಟಿದೆ ಎಂದರು. ಅಲ್ಲದೆ ಎಚ್‌ಎಎಲ್‌ಗೆ ಗುತ್ತಿಗೆ ಕೊಡಲಿಲ್ಲ ಎನ್ನುವ ಕಾಂಗ್ರೆಸ್‌ಗೆ, ಅಗಸ್ಟಾಕಾಪ್ಟರ್‌ ಖರೀದಿ ವೇಳೆ ಎಚ್‌ಎಎಲ್‌ ಕೂಡಾ ಕಾಪ್ಟರ್‌ ನಿರ್ಮಿಸುತ್ತಿದೆ ಎಂದು ಗೊತ್ತಿರಲಿಲ್ಲವೇ ಎಂದು ಟಾಂಗ್‌ ನೀಡಿದರು.

ಹಣ ಸಿಗಲಿಲ್ಲ ಎಂದು ಬ್ರೇಕ್‌ ಹಾಕಿದಿರಿ:

ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲಿ ರಫೇಲ್‌ ವಿಮಾನ ಖರೀದಿಗೆ ಮಾತುಕತೆ ನಡೆದಿತ್ತು. ಆದರೆ ವಾಯುಪಡೆ ತೊಂದರೆ ಅನುಭವಿಸುತ್ತಿದೆ ಎಂಬುದನ್ನು ಮರೆತು ಒಪ್ಪಂದಕ್ಕೆ ತಡೆಯೊಡ್ಡಿದಿರಿ. ಒಪ್ಪಂದವನ್ನು ಮುಗಿಸಲಿಲ್ಲ. ಏಕೆಂದರೆ ಅದು ನಿಮಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ನಿಮಗೆ ಹಣ ತಂದುಕೊಡುತ್ತಿರಲಿಲ್ಲ. ನಿಮಗೆ ಏನಾದರೂ ಅನುಕೂಲ ಮಾಡುವವರೆಗೂ ವಿಮಾನ ಖರೀದಿಸುವ ಬಯಕೆಯೇ ಇರಲಿಲ್ಲ. ಡಿಫೆನ್ಸ್‌ ಡೀಲ್‌ (ರಕ್ಷಣಾ ಒಪ್ಪಂದ) ಹಾಗೂ ಡೀಲ್‌ ಇನ್‌ ಡಿಫೆನ್ಸ್‌ (ರಕ್ಷಣೆಯಲ್ಲಿ ವ್ಯವಹಾರ) ಎರಡಕ್ಕೂ ವ್ಯತ್ಯಾಸವಿದೆ ಎಂದು ಚಾಟಿ ಬೀಸಿದರು.

ಅಂಬಾನಿಗೆ ಭರ್ಜರಿ ರಿಯಾಯ್ತಿ

ಎಷ್ಟು ಗಂಭೀರತೆ ಇದೆ ನಿಮಗೆ?:

ರಫೇಲ್‌ ಒಪ್ಪಂದ ಕುರಿತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬುಧವಾರ ಸದನದಲ್ಲಿ ಮಾತನಾಡುತ್ತಿದ್ದಾಗ ಕಾಂಗ್ರೆಸ್‌ ಸದಸ್ಯರು ಫೋಟೋ ತೆಗೆಯುತ್ತಿದ್ದರು, ಕಾಗದದ ವಿಮಾನ ಎಸೆಯುತ್ತಿದ್ದರು. ವಾಸ್ತವಾಂಶ ಚರ್ಚೆಯಲ್ಲಿ ನಿಮಗೆಷ್ಟುಗಂಭೀರತೆ ಇದೆ ಎಂದು ನಿರ್ಮಲಾ ಪ್ರಶ್ನಿಸಿದರು.

click me!