ಶಿರಾಡಿ ಘಾಟ್  ಸಂಕಟ, ಯಾರಿಗೋ ಬರೆದ ಬಹಿರಂಗ ಪತ್ರ!

By Web DeskFirst Published Sep 5, 2018, 4:36 PM IST
Highlights

ಮಾನವ ಇಂದು ಸಮುದ್ರದ ಮೇಲೆ ಸೇತುವೆ ಕಟ್ಟಿದ್ದಾನೆ,, ಚಂದ್ರ-ಮಂಗಳ ಗ್ರಹಕ್ಕೂ ಹೋಗಿ ಬಂದಿದ್ದಾನೆ. ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಕಿಮೀ ಹೆದ್ದಾರಿಗಳು ನಿರ್ಮಾಣವಾಗುತ್ತದೆ. ಆದರೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವುದು...??  ರಸ್ತೆ ಸಮಸ್ಯೆ ಹಾಗೆ ಇದೆ. ಶಿರಾಡಿ ಘಾಟ್ ಮಾತ್ರ ಬದಲಾಗಿಲ್ಲ..ಇದು ಒಂದು ವರ್ಷದ ಸಮಸ್ಯೆ ಅಲ್ಲ ಎಂಬುದು ಎಲ್ಲರಿಗೂ ಗೊತ್ತು ಹಾಗಾದರೆ ಇದಕ್ಕಿರುವ ದೊಡ್ಡ ಅಡೆ ತಡೆ ಏನು? ಉತ್ತರ ಗೊತ್ತಿಲ್ಲ.

ಬಂದ್ ಆಗಿರುವ..ಪ್ರತಿ ಮಳೆಗಾಲ ಬಂದಾಗ ಬಂದ್ ಆಗುತ್ತಲೇ ಇರುವ ಶಿರಾಡಿ ಘಾಟ್ ಸಮಸ್ಯೆ ಬಗ್ಗೆ ಉಪ್ಪಿನಂಗಡಿಯ ಗೋಪಾಲಕೃಷ್ಣ ಕುಂಟಿನಿ ಅವರು ಬರೆದಿರುವ ಪತ್ರವೊಂದು ಅನೇಕ ವಿಚಾರಗಳನ್ನು ನಮ್ಮ ಮುಂದೆ ಇಡುತ್ತದೆ. ಆ ಪತ್ರವನ್ನು ನೀವು ಒಮ್ಮೆ ಓದಿಕೊಂಡು ಬನ್ನಿ...

ಶಿರಾಡಿ ಘಾಟ್ ಹೆದ್ದಾರಿಯನ್ನು ಮುಚ್ಚಲಾಗಿದೆ.ಬೆಂಗಳೂರಿನಲ್ಲಿ ಏನಿಲ್ಲಾ ಎಂದರೂ ಐದು ಲಕ್ಷ ಮಂದಿ ದಕ್ಷಿಣಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯ ಮೂಲದವರಿದ್ದಾರೆ.ಪ್ರತಿ ನಿತ್ಯ ರಾತ್ರಿ ಮತ್ತು ಹಗಲು ಐನ್ನೂರಕ್ಕೂ ಮಿಕ್ಕಿ ಬಸ್ಸುಗಳಲ್ಲಿ 15 ಸಾವಿರ ಮಂದಿ ಬೆಂಗಳೂರಿಗೆ ಮತ್ತು 10 ಸಾವಿರ ಮಂದಿ ಮಂಗಳೂರಿಗೆ ಪ್ರಯಾಣ ಮಾಡುತ್ತಿರುತ್ತಾರೆ,ಇನ್ನು ಕಾರಿನಲ್ಲಿ ಹೋಗುವವರು ಬರುವವರು ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಅಲ್ಲಿಗೆ ದಿನಕ್ಕೆ ಐವತ್ತು ಸಾವಿರ ಮಂದಿ ಈ ಹೆದ್ದಾರಿಯನ್ನು ನಿತ್ಯವೂ ಅವಲಂಬಿಸಿದ್ದಾರೆ ಎಂದಾಯಿತು.  ಮಂಗಳೂರು ಬಂದರು ನಗರ.ಇಲ್ಲಿಂದ ಬೆಂಗಳೂರು ಸಹಿತ ಹತ್ತೂರುಗಳಿಗೆ ದಿನಂಪ್ರತಿ ಹೋಗುವ, ಬರುವ ಟ್ರಕ್ಕುಗಳ ಸಂಖ್ಯೆ ಹತ್ತು ಸಾವಿರ.ಅಂದರೆ ಒಂದು ಲಕ್ಷ ಟನ್ ಸರಕು ನಿತ್ಯವೂ ಈ ಹೆದ್ದಾರಿಯಲ್ಲಿ ಸಾಗುತ್ತದೆ.
ಇದಿಷ್ಟು ಈ ಹೆದ್ದಾರಿಯ ಚಿತ್ರ.

350 ಕಿಮೀ ಉದ್ದದ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ಉದ್ದ ಹಚ್ಚೆಂದರೆ 26 ಕಿಮೀ. ಕಾಂಕ್ರೀಟ್ ಹಾಕಿದ ಸಪಾಟು ಹೆದ್ದಾರಿ ಇದು. ನೀವು ಇದನ್ನು ಮುಚ್ಚಿದ್ದೀರಿ. ಇದಕ್ಕೆ ಇನ್ನೂ ನೀವು ಕೊಡುತ್ತಿರುವ ಕಾರಣವನ್ನು ನಾವು ನಂಬುವುದಿಲ್ಲ.ಹೆದ್ದಾರಿ ಮೇಲೆ ಮಣ್ಣು ಬಂಡೆ ಬಿದ್ದಿದ್ದರೆ ಅದನ್ನು ತೆರವು ಮಾಡಲು ಒಬ್ಬ ಪಂಚಾಯತ್ ಮೋರಿ ಕಟ್ಟುವ ಕಾಂಟ್ರಾಕ್ಟರ್ ಸಾಕು.ಇಪ್ಪತ್ತು ದಿನ ಕಳೆಯಿತು, ಬಿದ್ದ ಮಣ್ಣು ಕಲ್ಲು ನೀವು ತೆರವು ಮಾಡಿಸಿಲ್ಲ ಎಂದರೆ ನಿಮ್ಮನ್ನು ನಂಬಬೇಕಾ? 

ಶಿರಾಡಿ ಘಾಟ್ ದುರಸ್ತಿಗೆ ಎಷ್ಟು ದಿನ ಬೇಕು? ಸರ್ಕಾರಕ್ಕೆ ಒಂದೇ ಪ್ರಶ್ನೆ

ಭೂಕುಸಿತದ ಸಂಭಾವ್ಯತೆ ಕಾರಣ ಅಂತ ನೀವು ಹೇಳುವುದಾದರೆ ಅದನ್ನು ಸ್ಪಷ್ಟ ಪಡಿಸಬೇಕು. ಎಲ್ಲೆಲ್ಲಿ ಭೂಕುಸಿತ ಆಗಬಹುದು, ಮತ್ತು ಅದಾಗಲು ಏನು ಕಾರಣ ಎಂದು ನೀವು ಜನರಿಗೆ ತಿಳಿಸಬೇಕು.ಶಿರಾಡಿ ಪರ್ವತ ಪ್ರದೇಶಗಳು ಶಿಥಿಲವಾಗಿವೆಯಾ? ಅಲ್ಲೇನಾದರೂ ಭೂಕಂಪನ ಆಗಿದೆಯಾ? ಅಲ್ಲಿ ಜ್ವಾಲಾಮುಖಿ ಚಿಮ್ಮುವ ಮಾಹಿತಿ ಸಿಕ್ಕಿದೆಯಾ? ಏನಾಗಿದೆ ಎಂಬುದನ್ನು ನೀವು ಹೇಳಬೇಕು.ನೀವು ಹೇಳುತ್ತಿಲ್ಲ. ಕಾರಣವೇ ಇಲ್ಲದೇ ಹೆದ್ದಾರಿ ಮುಚ್ಚಿದ್ದೀರಿ?

ಯಾವ ಸರ್ವಾಧಿಕಾರಿಯೂ ತನ್ನ ದೇಶದಲ್ಲಿ ಹೆದ್ದಾರಿ ಮುಚ್ಚಿದ ಉದಾಹರಣೆ ಇಲ್ಲ.ಎರಡು ಮಹಾಯುದ್ಧಗಳ ದಿನಗಳಲ್ಲೂ ಭಾರತದಲ್ಲಿ ಹೆದ್ದಾರಿ ಮುಚ್ಚಿಸಿರಲಿಲ್ಲ. ಹಾಗಾದರೆ ಸರ್ವಾಧಿಕಾರದ, ಮಹಾಯುದ್ಧದ ದಿನಗಳಿಗಿಂತಲೂ ಕ್ಲಿಷ್ಟವಾಗಿರುವುದು ಏನು? ಅದನ್ನು ಹೇಳಿ?

ಮಡಿಕೇರಿ ರಸ್ತೆ ಪ್ರಕೃತಿ ದುರಂತದಲ್ಲಿ ಕಳೆದುಹೋಗಿದೆ,ನಾವು ಒಪ್ಪುತ್ತೇವೆ.ಚಾರ್ಮಾಡಿ ಘಾಟ್ ರಸ್ತೆ ಇದೆ ಎಂದು ನೀವು ಬೊಟ್ಟು ಮಾಡಿದರೆ ನಾವು ಒಪ್ಪುತ್ತೇವೆ ಎಂದುಕೊಳ್ಳಬೇಡಿ.ರಸ್ತೆಯಲ್ಲಿ ಸಂಚಾರ ಮಾಡುವ ಹಕ್ಕು ನಮಗಿದೆ.ಏಕೆಂದರೆ ನಾವು ತೆರಿಗೆ ಕಟ್ಟುತ್ತಿದ್ದೇವೆ. ನಮ್ಮ ಪ್ರಯಾಣದ ಅನುಕೂಲ, ನಮ್ಮವರ ಸಂಪರ್ಕ,ನಮ್ಮ ಕನೆಕ್ಟಿವಿಟಿ ನಮ್ಮ ಹಕ್ಕುಗಳಾಗಿವೆ.ಅದನ್ನು ಸಕಾರಣವಿಲ್ಲದೇ ಕಡಿದು ಹಾಕುವುದು ತಪ್ಪಾಗುತ್ತದೆ.

ಶಿರಾಡಿ ಘಾಟ್ ಸಂಚಾರಕ್ಕೆ ಡಿಸಿ ರೋಹಿಣಿ ಅವಕಾಶ ಸಾಧ್ಯತೆ

ಈ ಭಾಗದಲ್ಲಿ ಪ್ರಯಾಣಿಕರು ಮಾತ್ರವೇ ಸಂಚರಿಸುತ್ತಿದ್ದಾರೆ ಎಂದುಕೊಳ್ಳಬೇಡಿ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರಿದ್ದಾರೆ. ಅವರ ಮನೆಗಳಿವೆ.ಅವರ ಬದುಕುಗಳಿವೆ.
ಅದೆಲ್ಲವನ್ನೂ ನಿಮಗೆ ನಾವು ಅರ್ಥ ಮಾಡಿಸಬೇಕಾಗಿಲ್ಲ. ನೀವು ದಡ್ಡರಿರಬಹುದು, ನಾವಲ್ಲ.

ಗೋಪಾಲಕೃಷ್ಣ ಕುಂಟಿನಿ, ಉಪ್ಪಿನಂಗಡಿ

 

"

 

 

 

 

 

click me!