
ಅನಿಲ್ ಪಂಡಿತ್ ಯಾರು, ಎಲ್ಲಿದ್ದಾನೆ?
ಮುಂಬೈನಲ್ಲಿ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಫೈರಿಂಗ್ ಪ್ರಕರಣ ಈಗ ಅಮೆರಿಕದಲ್ಲಿರುವ ಗ್ಯಾಂಗ್‌ಸ್ಟರ್ ಅನಿಲ್ ಪಂಡಿತ್ ಕಡೆ ತಿರುಗಿದೆ. ಭದ್ರತಾ ಏಜೆನ್ಸಿಗಳಿಗೆ ಸಿಕ್ಕಿರುವ ಆಡಿಯೋದಲ್ಲಿ ಈ ದಾಳಿಯ ಹೊಣೆಯನ್ನು ಪಂಡಿತ್ ಹೊತ್ತುಕೊಂಡಿದ್ದಾನೆ. ಈ ಆಡಿಯೋದಲ್ಲಿ ಆತ ಬಾಲಿವುಡ್ ಗಣ್ಯರಿಗೆ ಬೆದರಿಕೆ ಹಾಕಿದ್ದಾನೆ. ಜೊತೆಗೆ ತನ್ನ ಸಹಚರನ ಹೆಸರನ್ನು ಹೇಳಿ, ಸಲ್ಮಾನ್ ಖಾನ್ ಜೊತೆ ಗುರುತಿಸಿಕೊಂಡವರಿಗೂ ವಾರ್ನಿಂಗ್ ಕೊಟ್ಟಿದ್ದಾನೆ. ಆದರೆ, ಈ ಘಟನೆಯಲ್ಲಿ ಆತನ ಪಾತ್ರವನ್ನು ತನಿಖಾಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.
ಅನಿಲ್ ಪಂಡಿತ್ ಹರಿಯಾಣದ ಪಾಣಿಪತ್ ಮೂಲದವನು. ಆತನ ಹಿನ್ನೆಲೆ ಬಲ್ಲ ಮೂಲಗಳ ಪ್ರಕಾರ, ಭಾರತ ಬಿಡುವ ಮುನ್ನ ಆತನ ಮೇಲೆ ಯಾವುದೇ ಕ್ರಿಮಿನಲ್ ಕೇಸ್‌ಗಳು ಇರಲಿಲ್ಲ. 2024ರಲ್ಲಿ ಆತ 'ಡಂಕಿ ರೂಟ್' (ಅಕ್ರಮ ವಲಸೆ ಮಾರ್ಗ) ಮೂಲಕ ಅಮೆರಿಕಕ್ಕೆ ಹೋಗಿದ್ದಾನೆ ಎಂದು ಹೇಳಲಾಗಿದೆ.
(A post shared by indiainlast24hr ™ (@indiainlast24hr)
ಅಮೆರಿಕಕ್ಕೆ ಹೋದ ಬಳಿಕ ಪಂಡಿತ್, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಕೆಲಸ ಮಾಡಲು ಶುರು ಮಾಡಿದ್ದಾನೆ. ಸುಮಾರು ಎಂಟು ತಿಂಗಳ ಹಿಂದೆ, ರಣದೀಪ್ ಮಲಿಕ್ ಎಂಬ ಗ್ಯಾಂಗ್ ಸದಸ್ಯನ ಜಾಗಕ್ಕೆ ಈತ ಬಂದಿದ್ದಾನೆ. ಅಂದಿನಿಂದ ಈತನ ಮೇಲೆ ಹಲವು ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
ವೈರಲ್ ಆಡಿಯೋದಲ್ಲಿ ಪಂಡಿತ್, ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬಳಸಿದ್ದಾನೆ. ಆದರೆ, ಆತ ನೇರವಾಗಿ ಬಿಷ್ಣೋಯ್‌ನಿಂದ ಸೂಚನೆಗಳನ್ನು ಪಡೆಯುತ್ತಿಲ್ಲ. 2022ರಿಂದ ಅಮೆರಿಕದಲ್ಲಿ ಕುಳಿತು ಆಪರೇಟ್ ಮಾಡುತ್ತಿರುವ ಹರಿ ಚಂದ್ ಜಾಟ್ ಅಲಿಯಾಸ್ ಹ್ಯಾರಿ ಬಾಕ್ಸರ್ ಈತನ ಹ್ಯಾಂಡ್ಲರ್ ಆಗಿದ್ದಾನೆ. ಈ ಬಾಕ್ಸರ್ ಮೇಲೆ ರಾಜಸ್ಥಾನ, ಪಂಜಾಬ್ ಮತ್ತು ದೆಹಲಿಯಲ್ಲಿ ಸುಲಿಗೆ, ದರೋಡೆ ಮತ್ತು ಕೊಲೆ ಯತ್ನದ ಕೇಸ್‌ಗಳಿವೆ.
ಟೈಗರ್ ಶ್ರಾಫ್ ಕಾರಿನ ಮೇಲಿನ ಫೈರಿಂಗ್ ಕೇವಲ ಒಂದು ಎಚ್ಚರಿಕೆ ಆಗಿತ್ತು, ಆದರೆ ನಟ ಅದನ್ನು ನಿರ್ಲಕ್ಷಿಸಿದ್ದಾನೆ ಎಂದು ಆಡಿಯೋದಲ್ಲಿ ಪಂಡಿತ್ ಹೇಳಿದ್ದಾನೆ. ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವ ಚಿತ್ರರಂಗದ ಇತರರಿಗೂ ಆತ ಬೆದರಿಕೆ ಹಾಕಿದ್ದಾನೆ.
ಲಾರೆನ್ಸ್ ಬಿಷ್ಣೋಯ್ ಮತ್ತು ಬಿಷ್ಣೋಯ್ ಸಮುದಾಯದ ಬಳಿ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎಂದು ಆಡಿಯೋದಲ್ಲಿ ಡಿಮ್ಯಾಂಡ್ ಮಾಡಿದ್ದಾನೆ. ಇದು "ಮೊದಲ ಮತ್ತು ಕೊನೆಯ ಎಚ್ಚರಿಕೆ" ಎಂದಿರುವ ಪಂಡಿತ್, ಖಾನ್ ಕುಟುಂಬಕ್ಕೂ ಬೆದರಿಕೆ ಹಾಕಿದ್ದಾನೆ.
ಈ ಆಡಿಯೋದಲ್ಲಿ ಹರ್ಮನ್ ಸಂಧು ಎಂಬಾತನನ್ನು ತನ್ನ ಸಹಚರ ಎಂದು ಆತ ಹೆಸರಿಸಿದ್ದಾನೆ. ಆದರೆ, ಆಡಿಯೋದಲ್ಲಿರುವ ಈ ಹೇಳಿಕೆಗಳನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಘಟನೆಯಲ್ಲಿ ಭಾಗಿಯಾದವರ ಗುರುತು ಮತ್ತು ಪಾತ್ರವನ್ನು ತನಿಖೆ ಇನ್ನಷ್ಟೇ ಖಚಿತಪಡಿಸಬೇಕಿದೆ.
ಬಾಲಿವುಡ್‌ಗೆ ಸರಣಿ ಬೆದರಿಕೆಗಳ ಬೆನ್ನಲ್ಲೇ ಟೈಗರ್ ಶ್ರಾಫ್ ಘಟನೆ
ಜುಹುವಿನಲ್ಲಿ ನಡೆದ ಈ ಘಟನೆ, ಮನರಂಜನಾ ಕ್ಷೇತ್ರದ ಗಣ್ಯರ ಮೇಲೆ ನಡೆಯುತ್ತಿರುವ ಸರಣಿ ದಾಳಿ ಮತ್ತು ಬೆದರಿಕೆಗಳ ಮುಂದುವರಿದ ಭಾಗವಾಗಿದೆ.
ಫೆಬ್ರವರಿ 1ರಂದು ಮುಂಬೈನಲ್ಲಿರುವ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಹೊರಗೆ ಗುಂಡಿನ ದಾಳಿ ನಡೆದಿತ್ತು. ಆ ಬಳಿಕ ನಟ ರಣವೀರ್ ಸಿಂಗ್, ಸಲ್ಮಾನ್ ಖಾನ್ ಭಾವ ಆಯುಷ್ ಶರ್ಮಾ ಮತ್ತು ಮತ್ತೊಬ್ಬ ವ್ಯಕ್ತಿಗೆ ಬೆದರಿಕೆಗಳು ಬಂದಿದ್ದವು.
ಜೂನ್ 11ರಂದು ಪಶ್ಚಿಮ ದೆಹಲಿಯ ಪಶ್ಚಿಮ್ ವಿಹಾರ್‌ನಲ್ಲಿರುವ ಪಂಜಾಬಿ ಗಾಯಕ ಗುರು ರಾಂಧವಾ ಅವರ '24HS ಫಿಟ್‌ನೆಸ್ ಜಿಮ್' ಹೊರಗೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ಶೂಟರ್‌ಗಳು ಫೈರಿಂಗ್ ಮಾಡಿದ್ದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ಪೊಲೀಸರು ಸ್ಥಳದಿಂದ ಏಳು ಖಾಲಿ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದರು. ನಂತರ ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದರು.
ಈ ಹಲವು ಘಟನೆಗಳಿಗೆ ಸಂಬಂಧಿಸಿದ ಬೆದರಿಕೆಗಳ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ ಇದೆ ಎಂದು ಹೇಳಲಾಗಿದೆ. ಇದೀಗ ಟೈಗರ್ ಶ್ರಾಫ್ ಕಾರಿನ ಮೇಲಿನ ಫೈರಿಂಗ್ ಬಳಿಕ ಪಂಡಿತ್ ಕೂಡ ಅದೇ ಗ್ಯಾಂಗ್ ಹೆಸರನ್ನು ಬಳಸಿದ್ದಾನೆ. ಹೀಗಾಗಿ ಈ ಹೊಸ ಹೇಳಿಕೆಗಳನ್ನು ಪರಿಶೀಲಿಸಿ, ಅಸಲಿ ಆರೋಪಿಗಳನ್ನು ಪತ್ತೆ ಹಚ್ಚುವ ಸವಾಲು ತನಿಖಾಧಿಕಾರಿಗಳ ಮುಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.