ಟಾಲಿವುಡ್ ಬಗ್ಗೆ ಬಾಲಿವುಡ್ ನಟಿಯರ ಟೀಕೆ; ಈ ನಟಿಯರದು'ಡಬಲ್ ಸ್ಟ್ಯಾಂಡರ್ಡ್' ಎಂದು ತೆಲುಗು ಚಿತ್ರಪ್ರೇಕ್ಷಕರು ಗರಂ!

Published : Nov 04, 2026, 04:51 PM IST
Bollywood Actress

ಸಾರಾಂಶ

ಬಾಲಿವುಡ್ ಸಿನಿಮಾಗಳಲ್ಲಿಯೂ ವಿವಿಧ ರೀತಿಯ ಗ್ಲಾಮರ್ ಮತ್ತು ಬೋಲ್ಡ್ ದೃಶ್ಯಗಳು ಇರುತ್ತವೆ. ಅಲ್ಲಿ ನಟಿಸುವಾಗ ಕಾಣಿಸದ ಆಕ್ಷೇಪಗಳು ದಕ್ಷಿಣದ ಕಮರ್ಷಿಯಲ್ ಸಿನಿಮಾಗಳ ವಿಚಾರ ಬಂದಾಗ ಮಾತ್ರ ಏಕೆ ವ್ಯಕ್ತವಾಗುತ್ತವೆ ಎಂದು ಈ ವಿವಾದದ ನಡುವೆ ಸಿನಿಪ್ರಿಯರು ಪ್ರಶ್ನೆಯನ್ನು ಎತ್ತುತ್ತಿದ್ದಾರೆ.

ದಕ್ಷಿಣದ ಸಿನಿಮಾಗಳಿಂದ ಸ್ಟಾರ್‌ಡಮ್ ಪಡೆದು ಈಗ ಟಾಲಿವುಡ್ ವಿರುದ್ಧವೇ ಟೀಕೆ! ನಟಿಯರ ಹೇಳಿಕೆಗಳಿಗೆ ಪ್ರೇಕ್ಷಕರ ಆಕ್ರೋಶ

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಮೂಲಕವೇ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿ, ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದಿದ್ದ ಕೆಲವು ಉತ್ತರ ಭಾರತದ ನಟಿಯರು ಈಗ ಟಾಲಿವುಡ್‌ನ ಸಿನಿಮಾ ಶೈಲಿಯ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಹೊಸ ವಿವಾದಕ್ಕೆ ಕಾರಣವಾಗಿವೆ. ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡ ಬಳಿಕ ದಕ್ಷಿಣ ಭಾರತದ ಚಿತ್ರರಂಗದ ಮೇಕಿಂಗ್ ಶೈಲಿ, ಸಿನಿಮಾ ಸಂಸ್ಕೃತಿ ಹಾಗೂ ಕಮರ್ಷಿಯಲ್ ಅಂಶಗಳನ್ನು ಟೀಕಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ತೆಲುಗು ಸಿನಿಮಾ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.

ಅವಕಾಶ ಕೊಟ್ಟ ಚಿತ್ರರಂಗವನ್ನೇ ಟೀಕಿಸುತ್ತಿದ್ದಾರಾ?

ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡಿದ ನಿರ್ದೇಶಕರು ಮತ್ತು ನಿರ್ಮಾಪಕರು ಉತ್ತರ ಭಾರತದ ಹಲವು ನಟಿಯರಿಗೆ ಅದ್ಧೂರಿ ಸ್ವಾಗತ ಕೋರಿದ್ದರು. ಸ್ಥಳೀಯ ಭಾಷೆ ತಿಳಿದಿಲ್ಲದಿದ್ದರೂ, ಟಾಲಿವುಡ್ ಮತ್ತು ಕಾಲಿವುಡ್‌ನ ಸ್ಟಾರ್ ನಟರ ಜೊತೆ ಅಭಿನಯಿಸುವ ಅವಕಾಶ ನೀಡಿದ್ದರು. ಈ ಸಿನಿಮಾಗಳ ಯಶಸ್ಸಿನ ಮೂಲಕ ನಟಿಯರು ದಕ್ಷಿಣದಲ್ಲಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡರು.

ಆದರೆ ಈಗ ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನ ರೂಪಿಸಿಕೊಂಡ ಬಳಿಕ ಕೆಲವರು ದಕ್ಷಿಣದ ಸಿನಿಮಾಗಳಲ್ಲಿ ನಾಯಕಿಯರನ್ನು ಚಿತ್ರಿಸುವ ರೀತಿಯ ಬಗ್ಗೆ ಟೀಕೆ ಮಾಡುತ್ತಿರುವುದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಸಿನಿಮಾ ಒಪ್ಪಿಕೊಳ್ಳುವಾಗ ಇಲ್ಲದ ಆಕ್ಷೇಪಗಳು, ಚಿತ್ರ ಬಿಡುಗಡೆಯಾಗಿ ಯಶಸ್ಸು ಸಿಕ್ಕ ನಂತರ ಅಥವಾ ಬಾಲಿವುಡ್‌ನಲ್ಲಿ ಅವಕಾಶಗಳು ಹೆಚ್ಚಾದ ಮೇಲೆ ಏಕೆ ವ್ಯಕ್ತವಾಗುತ್ತಿವೆ ಎಂಬ ಪ್ರಶ್ನೆಯನ್ನು ನೆಟ್ಟಿಗರು ಮುಂದಿಟ್ಟಿದ್ದಾರೆ.

ತಾಪ್ಸಿ ಪನ್ನು ಹೇಳಿಕೆ ಸೃಷ್ಟಿಸಿದ್ದ ಚರ್ಚೆ

ನಟಿ ತಾಪ್ಸಿ ಪನ್ನು ದಕ್ಷಿಣ ಭಾರತದ ಸಿನಿಮಾಗಳ ಮೂಲಕವೇ ಚಿತ್ರರಂಗಕ್ಕೆ ಪರಿಚಿತರಾದವರು. ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅವರು, ನಂತರ ಹಿಂದಿ ಸಂದರ್ಶನವೊಂದರಲ್ಲಿ ದಕ್ಷಿಣದ ನಿರ್ದೇಶಕರು ನಾಯಕಿಯರ ಸೊಂಟ ಮತ್ತು ಹೊಕ್ಕಳಿನ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂಬರ್ಥದ ವ್ಯಂಗ್ಯಭರಿತ ಹೇಳಿಕೆ ನೀಡಿದ್ದರು. ಈ ಮಾತು ಟಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿತ್ತು.

ಇದೇ ರೀತಿಯ ವಿವಾದದಲ್ಲಿ ನಟಿ ಪೂಜಾ ಹೆಗ್ಡೆ ಹೆಸರು ಕೂಡ ಕೇಳಿಬಂದಿತ್ತು. ‘ಅಲಾ ವೈಕುಂಠಪುರಮುಲೋ’ ಸೇರಿದಂತೆ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಅವರು, ದಕ್ಷಿಣದ ಚಿತ್ರಗಳಲ್ಲಿ ಮಹಿಳೆಯರ ದೇಹದ ಅಂಗಾಂಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಹೇಳಿಕೆಗಳಿಗೆ ವಿರೋಧ ವ್ಯಕ್ತವಾದ ಬಳಿಕ ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ರಾಧಿಕಾ ಆಪ್ಟೆ ಹೇಳಿಕೆಗೆ ಅಭಿಮಾನಿಗಳ ಪ್ರಶ್ನೆ

ನಟಿ ರಾಧಿಕಾ ಆಪ್ಟೆ ಕೂಡ ದಕ್ಷಿಣದ ಚಿತ್ರರಂಗದ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಗಳಿಂದ ಗಮನ ಸೆಳೆದಿದ್ದರು. ನಂದಮೂರಿ ಬಾಲಕೃಷ್ಣ ಅವರೊಂದಿಗೆ ಸತತವಾಗಿ ಎರಡು ಸಿನಿಮಾಗಳಲ್ಲಿ ನಟಿಸಿದ್ದ ಅವರು, ಹಿರಿಯ ನಾಯಕನ ಜೊತೆ ರೊಮ್ಯಾನ್ಸ್ ಮಾಡುವ ಪಾತ್ರ ನೀಡಲಾಗಿತ್ತು ಹಾಗೂ ಚಿತ್ರೀಕರಣದ ವಾತಾವರಣ ಪಿತೃಪ್ರಧಾನವಾಗಿತ್ತು ಎಂಬ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವು ಅಭಿಮಾನಿಗಳು, ಮೊದಲ ಸಿನಿಮಾದ ಅನುಭವ ಅಷ್ಟು ಅಸಮಾಧಾನಕರವಾಗಿದ್ದರೆ ಅದೇ ನಾಯಕನ ಜೊತೆ ಮತ್ತೊಂದು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ಇತ್ತೀಚೆಗೆ ಬಿಡುಗಡೆಯಾದ ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಜೊತೆ ಕಾಣಿಸಿಕೊಂಡಿದ್ದ ಜಾನ್ವಿ ಕಪೂರ್ ಕೂಡ ತಮ್ಮ ಪಾತ್ರದ ಚಿತ್ರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಾಲಿವುಡ್ ಸಿನಿಮಾಗಳ ಬಗ್ಗೆ ಮೌನ ಏಕೆ?

ಈ ವಿವಾದದ ನಡುವೆ ಸಿನಿಪ್ರಿಯರು ಮತ್ತೊಂದು ಪ್ರಶ್ನೆಯನ್ನು ಎತ್ತುತ್ತಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿಯೂ ವಿವಿಧ ರೀತಿಯ ಗ್ಲಾಮರ್ ಮತ್ತು ಬೋಲ್ಡ್ ದೃಶ್ಯಗಳು ಇರುತ್ತವೆ. ಅಲ್ಲಿ ನಟಿಸುವಾಗ ಕಾಣಿಸದ ಆಕ್ಷೇಪಗಳು ದಕ್ಷಿಣದ ಕಮರ್ಷಿಯಲ್ ಸಿನಿಮಾಗಳ ವಿಚಾರ ಬಂದಾಗ ಮಾತ್ರ ಏಕೆ ವ್ಯಕ್ತವಾಗುತ್ತವೆ ಎಂಬುದು ಅವರ ಪ್ರಶ್ನೆ.

ಆದರೆ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳ ಚಿತ್ರಣ, ಗ್ಲಾಮರ್ ಬಳಕೆ ಮತ್ತು ನಟಿಯರಿಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆಯುವುದು ಸಹಜ ಎಂಬ ಅಭಿಪ್ರಾಯವೂ ಇದೆ. ಪ್ರತಿಯೊಬ್ಬ ಕಲಾವಿದರಿಗೂ ತಮ್ಮ ಅನುಭವವನ್ನು ಬಹಿರಂಗಪಡಿಸುವ ಹಕ್ಕಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಅಂದಹಾಗೆ, ದಕ್ಷಿಣದ ಸಿನಿಮಾಗಳಿಂದ ಹೆಸರು ಮತ್ತು ಜನಪ್ರಿಯತೆ ಗಳಿಸಿದ ಬಳಿಕ ಅದೇ ಚಿತ್ರರಂಗದ ಬಗ್ಗೆ ಟೀಕೆ ಮಾಡಲಾಗುತ್ತಿದೆ ಎಂಬ ಆರೋಪ ಟಾಲಿವುಡ್ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನಟಿಯರನ್ನು ಆಯ್ಕೆ ಮಾಡುವಾಗ ಅವರ ಹಿಂದಿನ ಅನುಭವಗಳು ಮತ್ತು ಹೇಳಿಕೆಗಳನ್ನು ನಿರ್ಮಾಪಕರು ಗಮನಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಈ ಚರ್ಚೆ ಸಿನಿಮಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರಾಮಾಯಣ: ಪಾರ್ಟ್ 2' ಸಿನಿಮಾ 2027ರ ಬದಲು 2028ಕ್ಕೆ ಬಿಡುಗಡೆ; ಈ ನಿರ್ಧಾರದ ಹಿಂದಿದೆ ಜಗತ್ತು ಅರಿಯದ ಮಹಾ ತಂತ್ರ!
ನಾವು ಮದುವೆಯಾಗುತ್ತಿದ್ದೇವೆ.. ಅಧಿಕೃತವಾಗಿ ಘೋಷಿಸಿದ ಬಿಗ್‌ಬಾಸ್‌ ಜೋಡಿ ಐಶ್ವರ್ಯಾ ಸಿಂದೋಗಿ, ಶಿಶಿರ್‌ ಶಾಸ್ತ್ರಿ