
ಸಿಹಿ.. ಎಂದರೆ ಇಷ್ಟು ದಿನ ಸೀರಿಯಲ್ ವೀಕ್ಷಕರಿಗೆ ಸೀತಾರಾಮ ಸೀರಿಯಲ್ ಪುಟಾಣಿಯ ನೆನಪಾಗುತ್ತಿತ್ತು. ಈಗಲೂ ಅವಳದ್ದೇ ನೆನಪು ಮಾಸಿಲ್ಲ. ಆದರೂ ಒಂದು ಸೀರಿಯಲ್ ಮುಗಿದ ಮೇಲೆ, ಆ ಸೀರಿಯಲ್ನಲ್ಲಿ ಟ್ರೆಂಡಿಂಗ್ನಲ್ಲಿ ಇರುವ ತಾರೆಯರು, ಕೆಲ ದಿನಗಳಲ್ಲಿಯೇ ವೀಕ್ಷಕರ ಮನಸ್ಸಿನಿಂದ ಮಾಸಿ ಹೋಗಿ ಬಿಡುತ್ತಾರೆ. ಅದರಲ್ಲಿಯು ಬಣ್ಣದ ಲೋಕವೇ ಹಾಗೆ. ಚಾಲ್ತಿಯಲ್ಲಿ ಇದ್ದರಷ್ಟೇ ಡಿಮಾಂಡು. ಇಲ್ಲದೇ ಹೋದರೆ memory is short ಎನ್ನುವಂತೆ ಜನರ ನೆನಪು ತುಂಬಾ ಕಡಿಮೆಯಾಗಿಬಿಡುತ್ತದೆ. ಇದೇ ಕಾರಣಕ್ಕೆ ಒಂದು ಕಾಲದಲ್ಲಿ ಮಿಂಚುತ್ತಿದ್ದ ತಾರೆಯರನ್ನು ಈಗ ನೆನಪಿಸಿಕೊಳ್ಳುವವರೇ ಇಲ್ಲ. ಈಗಲೂ ಚಾಲ್ತಿಯಲ್ಲಿ ಇರುವವರನ್ನು ಬಿಟ್ಟರೆ ಉಳಿದವರ ಪಾಡು ಅಷ್ಟೇ. ಅದಕ್ಕೇ ತಾನೇ ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟೆ ರೀಲ್ಸ್ ಮಾಡುತ್ತಾ, ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತಾ, ಟ್ರೋಲ್ಗೆ ಒಳಗಾಗುತ್ತಲಾದರೂ ಹೆಸರನ್ನು ಉಳಿಸಿಕೊಳ್ಳಲು ಹಲವರು ನೋಡ್ತಿರೋದು!
ಅವರ ಮಾತು ಬಿಡಿ. ಸದ್ಯ ಸೀತಾರಾಮ ಸಿಹಿ ಕೂಡ ಜನರ ಮನಸ್ಸಿನಿಂದ ಕ್ರಮೇಣ ದೂರ ಆಗುತ್ತಿದ್ದಾಳೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡವರನ್ನೂ ಮೀರಿಸುವಂಥ ನಟನೆ ಮಾಡಿ, ಅತ್ತ ಶಾಲೆ, ಇತ್ತ ನಟನೆಯನ್ನೂ ಸಮದೂಗಿಸಿಕೊಂಡು ಹೋಗುತ್ತಿದ್ದ ಪುಟಾಣಿ ಈಕೆ. ಇವಳ ವಯಸ್ಸು ಇದೀಗ ಏಳು. ಆದರೂ ವಯಸ್ಸಿಗೆ ಮೀರಿದ ಮಾತನಾಡಿ ಕೆಲವೊಮ್ಮೆ ಅತಿಯಾಯಿತು ಎನ್ನಿಸುವಂತೆ ಅನ್ನಿಸಿಕೊಳ್ಳುತ್ತಿದ್ದರೂ ಇವಳ ಅಭಿನಯಕ್ಕೆ ಬಂದರೆ, ಅಬ್ಬಾ ಎಂಥವರೂ ತಲೆದೂಗಲೇಬೇಕು. ಅದೆಂಥ ನಟನೆ, ನೋವು, ನಲಿವು, ಹಾಸ್ಯ, ಕಣ್ಣೀರು... ಯಾವುದೇ ಸನ್ನಿವೇಶ ಇರಲಿ, ಆ ದೃಶ್ಯಗಳಿಗೆ ತಕ್ಕಂತೆ ನಟನೆ ಮಾಡುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಹಿಂದಿನ ಜನ್ಮದ ಗಿಫ್ಟ್ ಈಕೆಯದ್ದು ಎನ್ನುವಂಥ ನಟನೆಯ ಮೂಲಕ ಮನೆ ಮಾತಾಗಿದ್ದವಳು.
ಹಾಗಿದ್ದರೆ ಪುಟಾಣಿ ರಿತು ಈಗ ಎಲ್ಲಿದ್ದಾಳೆ? ಇದು ಆಕೆಯ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಸೀತಾರಾಮ ಸೀರಿಯಲ್ ಮುಗಿದಾಗ ಎಲ್ಲರಿಗಿಂತಲೂ ಹೆಚ್ಚಾಗಿ ಅತ್ತಿದ್ದು ಸಿಹಿಯೇ. ಈ ಬಗ್ಗೆ ನಟ ಅಶೋಕ್ ಕೂಡ ಸಂದರ್ಶನದಲ್ಲಿ ಹೇಳಿದ್ದರು. ನಾನು ಸೀತಾರಾಮ ಸೀರಿಯಲ್ಗಾಗಿಯೇ ಹುಟ್ಟಿದ್ದೇನೆ ಎನ್ನುತ್ತಲೇ ಸಿಹಿ ಬಿಕ್ಕಿಬಿಕ್ಕಿ ಅತ್ತಿರುವುದನ್ನು ಅವರು ನೆನಪಿಸಿಕೊಂಡಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಈ ಪರಿಯ ಹೆಸರು ಕೂಡ ಮಕ್ಕಳ ಭವಿಷ್ಯಕ್ಕೆ ಮಾರಕ ಎನ್ನುವ ಮಾತು ಕೂಡ ಇದೆ. ಅದೇ ರೀತಿ ಈ ಸೀರಿಯಲ್ ಮುಗಿದ ಮೇಲೆ ತನ್ನನ್ನು ಯಾರೂ ಕೇಳುವವರಿಲ್ಲ ಎನ್ನುವ ನೋವು ಪುಟ್ಟಜೀವಕ್ಕೆ ಆಗಲೇ ಕಾಡಿದಂತಿತ್ತು. ಅದಕ್ಕಾಗಿಯೇ ಆ ಪರಿಯಲ್ಲಿ ರಿತು ಸಿಂಗ್ ಅತ್ತಿದ್ದಳು.
ಸದ್ಯ ಆಕೆ ಶಿಕ್ಷಣದ ಮೇಲೆ ಗಮನ ಹರಿಸಿರುವಂತಿದೆ. ಯಾವುದೇ ಪ್ರಾಜೆಕ್ಟ್ಗೆ ಸಹಿ ಮಾಡಿದ ಮಾಹಿತಿ ಇಲ್ಲ. ಸೀತಾರಾಮ ಸೀರಿಯಲ್ನಲ್ಲಿ ಒಂದರ್ಥದಲ್ಲಿ ಅವಳೇ ನಾಯಕಿ ಆಗಿದ್ದಳು. ಇನ್ನು ಬೇರೆ ಸೀರಿಯಲ್ಗಳು ಮಕ್ಕಳ ಮೇಲೆ ಕೇಂದ್ರಿತವಾಗಿದ್ದರೆ ಆಕೆಗೆ ಛಾನ್ಸ್ ಸಿಗಬಹುದು, ಇಲ್ಲವೇ ಚಿಕ್ಕಪುಟ್ಟ ರೋಲ್ ಸಿಗಬಹುದು. ಮೊದಲ ಸೀರಿಯಲ್ನಲ್ಲಿಯೇ ಅಷ್ಟು ದೊಡ್ಡ ರೋಲ್ ಮಾಡಿದವಳಿಗೆ ಬೇರೆ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ರೋಲ್ ಮಾಡುವುದೂ ಕಷ್ಟವಾಗಬಹುದು. ಇವೆಲ್ಲವೂ ಒಂದು ಹಂತದ ವಯಸ್ಸು ದಾಟಿದ ನಟ-ನಟಿಯರಿಗೆ ಆಗುವುದು ಇದೆ. ಆದರೆ ರಿತು ಸಿಂಗ್ ಚಿಕ್ಕ ವಯಸ್ಸಿನಲ್ಲಿಯೇ ಇಂಥದ್ದೊಂದು ಅನುಭವ ಪಡುತ್ತಿರುವುದು ಒಂದು ರೀತಿಯ ಕಳವಳಕಾರಿಯ ವಿಷಯವೂ ಹೌದು ಎನ್ನುವುದು ಬಲ್ಲವರ ಮಾತು. ಹೋದಲ್ಲಿ ಬಂದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದವರು, ಕಾಲ ಕ್ರಮೇಣ ಅವಳನ್ನು ಮರೆತುಬಿಡುವುದು ಸಹಜ. ಆಗ ಸೆಲೆಬ್ರಿಟಿಗಳಿಗೆ ಏನಾಗುತ್ತದೆ ಎಂದು ಊಹಿಸುವುದೂ ಕಷ್ಟವೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.