ಅ.28ರ ಬೆಳಗ್ಗೆಯೇ ಹೊಸಪೇಟೆಯ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ರಿಲೀಸ್: ರಾರಾಜಿಸುತ್ತಿರುವ ಪುನೀತ್ ಕಟೌಟ್‌ಗಳು

By Govindaraj S  |  First Published Oct 27, 2022, 8:04 PM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಗಂಧದ ಗುಡಿ’ ಚಿತ್ರ ಅಕ್ಟೋಬರ್‌ 28ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯ ಎರಡು ಚಿತ್ರಮಂದಿರಗಳಲ್ಲಿ ನಾಳೆ ರಿಲೀಸ್ ಗಂಧದ ಗುಡಿ ಸಾಕ್ಷ್ಯಚಿತ್ರ ತೆರೆ ಕಾಣಲಿದೆ. 


ವಿಜಯನಗರ (ಅ.27): ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಗಂಧದ ಗುಡಿ’ ಚಿತ್ರ ಅಕ್ಟೋಬರ್‌ 28ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯ ಎರಡು ಚಿತ್ರಮಂದಿರಗಳಲ್ಲಿ ನಾಳೆ ರಿಲೀಸ್ ಗಂಧದ ಗುಡಿ ಸಾಕ್ಷ್ಯಚಿತ್ರ ತೆರೆ ಕಾಣಲಿದೆ. ಬೆಳಗ್ಗೆ 7 ಗಂಟೆಗೆ ಮೀರಾಲಂ ಮತ್ತು ಬಾಲಾ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ರಿಲೀಸ್ ಮಾಡಲಾಗುತ್ತದೆ. ಈಗಾಗಲೇ ಅಭಿಮಾನಿಗಳು ಕಟೌಟ್‌ಗಳನ್ನು ಕಟ್ಟಿ ಸ್ವಾಗತ ಕೋರಿದ್ದಾರೆ. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮತ್ತು ಸಿಂಗ್ ಪುತ್ರ ಸಿದ್ಧಾರ್ಥ್ ಸಿಂಗ್ ಜತೆಗಿರೋ ಬ್ಯಾನರ್‌ಗಳನ್ನು ಸಹ ಅಭಿಮಾನಿಗಳು ಹಾಕಿದ್ದಾರೆ. ಜೊತೆಗೆ ಪಲ್ಸ್ ಪೋಲಿಯೊ ಜಾಗೃತಿ ಅಭಿಯಾನದ ಭಾವಚಿತ್ರಗಳು ರಾರಾಜಿಸುತ್ತಿವೆ. ವಿಶೇಷವಾಗಿ ಅಪ್ಪು ಮತ್ತು ಸಚಿವ ಆನಂದ್ ಸಿಂಗ್ ಭಾವಚಿತ್ರಗಳಿರೋ ಬ್ಯಾನರ್ ಹಾಗೂ ಆನಂದ್ ಸಿಂಗ್ ಮನೆಗೆ ಪುನೀತ್ ಭೇಟಿ ನೀಡಿರೋ ಭಾವಚಿತ್ರಗಳುಳ್ಳ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಸ್ಕೂಬಾ ಡೈವಿಂಗ್‌ ಮಾಡಿ ಅಪ್ಪು ಚಿತ್ರದ ಪ್ರಮೋಶನ್‌: ಮುರ್ಡೇಶ್ವರ ಸಮೀಪದ ನೇತ್ರಾಣಿ ದ್ವೀಪದಲ್ಲಿ ಸಾಗರದಾಳದಲ್ಲಿ ಅಪ್ಪು ಚಿತ್ರ ಗಂಧದ ಗುಡಿಯ ಪ್ರಮೋಶನ್‌ ಮಾಡಲಾಗಿದೆ. ಗಂಧದ ಗುಡಿ ಕಿರುಚಿತ್ರದ ಪೋಸ್ಟರ್‌ ಫ್ರೇಮ್‌ ಹಿಡಿದುಕೊಂಡು ಸ್ಕೂಬಾ ಡೈವಿಂಗ್‌ ಮಾಡಿ ಸಾಗರದಾಳದಲ್ಲಿ ಪ್ರದರ್ಶಿಸಲಾಗಿದೆ. ವನ್ಯಜೀವಿ ಹಾಗೂ ಸಮುದ್ರಜೀವಿಗಳನ್ನು ರಕ್ಷಿಸಿ ಎಂಬ ಟ್ಯಾಗ್‌ಲೈನ್‌ ಜತೆ ಈ ಡಾಕ್ಯುಮೆಂಟರಿಯ ಪ್ರಮೋಷನ್‌ ಮಾಡುವ ಮೂಲಕ ಗಮನ ಸೆಳೆಯಲಾಗಿದೆ. ಬೆಂಗಳೂರಿನಲ್ಲಿ ಈ ಕಿರುಚಿತ್ರದ ಫ್ರೀ ರಿಲೀಸ್‌ ಇವೆಂಟ್‌ ಬಳಿಕ ಅಭಿಮಾನಿಗಳು ಈ ರೀತಿ ಪ್ರಮೋಶನ್‌ ಮಾಡಿದ್ದಾರೆ.

Tap to resize

Latest Videos

Dharwad: ಪದ್ಮಾ ಚಿತ್ರಮಂದಿರದಲ್ಲಿ ಶುಕ್ರವಾರ ಗಂಧದ ಗುಡಿ ಪ್ರದರ್ಶನ, ಅಪ್ಪು ಭಾವಚಿತ್ರ ಮೆರವಣಿಗೆ

ಪುನೀತ್‌ ರಾಜಕುಮಾರ ಈ ಹಿಂದೆ ಇದೇ ಕಿರುಚಿತ್ರಕ್ಕಾಗಿ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ ಮಾಡಿದ್ದರು. ನೇತ್ರಾಣಿ ಅಡ್ವೆಂಚರ್ಸ್‌ ಮಾಲೀಕ ಗಣೇಶ ಹರಿಕಂತ್ರ ನೇತೃತ್ವದ ತಂಡ ಪುನೀತ್‌ಗೆ ಸ್ಕೂಬಾ ಡೈವಿಂಗ್‌ ತರಬೇತಿ ನೀಡಿತ್ತು. ಜೋಯಿಡಾ, ದಾಂಡೇಲಿ, ಯಲ್ಲಾಪುರ, ಮಾಜಾಳಿಯಲ್ಲೂ ಚಿತ್ರೀಕರಣ ನಡೆದಿತ್ತು. ಸ್ಕೂಬಾ ಡೈವಿಂಗ್‌ ತರಬೇತಿ ಪಡೆದ ಅಪ್ಪು 10 ಮೀಟರ್‌ನಷ್ಟುಸಾಗರದಾಳದಲ್ಲಿ ಡೈವಿಂಗ್‌ ಮಾಡಿ 30-40 ನಿಮಿಷಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅದಾದ ಎರಡು ತಿಂಗಳ ಬಳಿ ಅಪ್ಪು ನಿಧನರಾದರು.

ಪುನೀತ್‌ ಕಟೌಟ್‌ಗೆ ಕ್ಷೀರಾಭಿಷೇಕ: ಅಖಿಲ ಕರ್ನಾಟಕ ಯುವರಾಜ ಕುಮಾರ ಸೇನೆಯಿಂದ ಗಂಧದ ಗುಡಿ ಚಿತ್ರದ ಸಂಭ್ರಮಾಚರಣೆಯನ್ನು ಅ.28ರಂದು ನಗರದ ವಸಂತ ಚಿತ್ರ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇನೆ ಜಿಲ್ಲಾಧ್ಯಕ್ಷ ಪುನೀತ ಹಂಪನಗೌಡ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಚಿತ್ರ ಪ್ರದರ್ಶನವಾಗುತ್ತಿರುವ ವಸಂತ ಚಿತ್ರ ಮಂದಿರದ ಮುಂದೆ ಅಪ್ಪು ಕಟೌಟ್‌ಗೆ 17 ಅಡಿಯ ಭಾರೀ ಗಾತ್ರದ ಬೃಹತ್‌ ಹೂವಿನ ಹಾರವನ್ನು ಜೆಸಿಬಿ ಯಂತ್ರದ ನೆರವಿನಿಂದ ಅರ್ಪಿಸಲಾಗುವುದು. ವಸಂತ ಚಿತ್ರ ಮಂದಿರದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ ಎಂದು ಹೇಳಿದರು.

Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ

ಸೇನೆ ಜಿಲ್ಲಾ ಗೌರವಾಧ್ಯಕ್ಷ ವಿನಯ್‌ ಉಪ್ಪಾರ್‌ ಮಾತನಾಡಿ, ವಿಬಿಪಿ ಫೌಂಡೇಷನ್‌ನಿಂದ ಎಚ್‌ಐವಿ ಪೀಡಿತ ಮಕ್ಕಳಿಗೆ, ಅಲ್ಲಿನ ಸಿಬ್ಬಂದಿ ಸೇರಿದಂತೆ 40 ಜನರಿಗೆ ಉಚಿತ ಚಿತ್ರ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ವಸಂತ ಚಿತ್ರ ಮಂದಿರದಲ್ಲಿ ಚಪ್ಪರ ಹಾಕಿ, ನಾಸಿಕ್‌ ಡೋಲ್‌ನ ವ್ಯವಸ್ಥೆಯೊಂದಿಗೆ ಪಟಾಕಿ ಸಿಡಿಸಲಾಗುವುದು. ಗಂಧದ ಗುಡಿ ಚಿತ್ರದ ಮೊದಲ ದಿನದ ಮೊದಲ ಶೋ ವೇಳೆ ಡಿಜೆ, ಲೈಟ್ಸ್‌ ಅಳವಡಿಸುವುದರೊಂದಿಗೆ ಪೇಪರ್‌ ಶಾಟ್ಸ್‌ ಹೊಡೆಯಲಾಗುವುದು ಎಂದು ತಿಳಿಸಿದರು. ಅಲ್ಲದೇ, ಗಂಧದ ಗುಡಿ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪುನೀತ್‌ಗಾಗಿ ಒಂದು ಸಸಿ ನೆಡಿ ಎಂಬ ಘೋಷಣೆಯೊಂದಿಗೆ ಸಸಿಗಳನ್ನು ವಿತರಣೆ ಮಾಡಲಾಗುವುದು ಎಂದರು.

click me!