ಜೂ.ಎನ್‌ಟಿಆರ್‌ ಹೆಂಡ್ತಿ, ತಾಯಿ ಎಲ್ಲರಿಗೂ ನನ್ನ ಮೇಲೆ ಸಿಟ್ಟುಬಂದಿತ್ತು: ಪ್ರಶಾಂತ್‌ ನೀಲ್

Published : May 22, 2026, 09:28 AM IST
prashanth neel birthday south director films and box office records

ಸಾರಾಂಶ

'ಡ್ರ್ಯಾಗನ್‌' ಚಿತ್ರಕ್ಕಾಗಿ ಜೂ.ಎನ್‌ಟಿಆರ್‌ 16 ಕೆಜಿ ತೂಕ ಇಳಿಸಿಕೊಂಡಿದ್ದು, ಅವರ ಹಠಕ್ಕೆ ನಿರ್ದೇಶಕರೇ ಬೆರಗಾಗಿದ್ದರು. ಮಹಾಭಾರತದ ಶಕುನಿಯ ದೃಷ್ಟಿಕೋನದಿಂದ ಪ್ರೇರಿತರಾಗಿ ಕಥೆಯ ತಿರುಳನ್ನೇ ಬದಲಿಸಿದ್ದು, ಇದೊಂದು ಹಿಂದೆಂದೂ ಕೇಳಿರದ ದೇಶಭಕ್ತಿಯ ಕಥೆಯಾಗಿದೆ ಎಂದು ನಿರ್ದೇಶಕರು ಹಂಚಿಕೊಂಡಿದ್ದಾರೆ.

ಡ್ರ್ಯಾಗನ್‌ ಸಿನಿಮಾ ಇನ್ನೇನು ಟೇಕಾಫ್‌ ಆಗುವುದರಲ್ಲಿತ್ತು. ಒಂದು ಸಂಜೆ ಜೂ.ಎನ್‌ಟಿಆರ್‌ ಜೊತೆಗೆ ಕೂತು ಮಾತಾಡುತ್ತಿದ್ದಾಗ ಅದೇನನಿಸಿತೋ, ‘ಈ ಸಿನಿಮಾದಲ್ಲಿ ನಿಮ್ಮದು ಹಂತಕನ ಪಾತ್ರ. ಇನ್ನೂ ಸ್ವಲ್ಪ ತೂಕ ಇಳಿಸಿ ಸಣ್ಣಗಿದ್ದರೆ ಚೆನ್ನಾಗಿರುತ್ತೆ’ ಅಂದೆ. ಕೂಡಲೇ ಅವರ ಟ್ರೇನರ್‌ನ ಕರೆಸಿದರು. ಇದಾದದ್ದು ಸಂಜೆ ಏಳೂವರೆ ಹೊತ್ತಿಗೆ. ಮರುದಿನ ಮುಂಜಾನೆಯಿಂದಲೇ ಹೊಸ ವರ್ಕೌಟ್‌ ಶುರು ಆಗಿತ್ತು. ಎರಡು ತಿಂಗಳ ಹೊತ್ತಿಗೆ ಹತ್ತು ಕೆಜಿಯಷ್ಟು ತೂಕ ಇಳಿಸಿದರು. ಇದು ಸರಿಯಾಗಿದೆ ಅಂದು ಸುಮ್ಮನಾದೆ. ಆದರೆ ಅವರು ಬಿಡಲಿಲ್ಲ. ನಿರಂತರವಾಗಿ ನಾಲ್ಕು ತಿಂಗಳ ಕಾಲ ತೂಕ ಇಳಿಸುತ್ತಲೇ ಹೋದರು. ಅವರ ತೂಕ 15-16 ಕೆಜಿಗಳಷ್ಟು ಇಳಿಯಿತು. ಅವರ ಪತ್ನಿಗೆ ನನ್ನ ಮೇಲೆ ಸಿಟ್ಟು ಬಂತು. ಅವರ ಅಮ್ಮ, ಆಪ್ತರು, ಅಭಿಮಾನಿಗಳು ಎಲ್ಲ ನನ್ನ ಬಗ್ಗೆ ಸಿಟ್ಟಾದರು. ಹೊರಗೆಲ್ಲ ಜೂ.ಎನ್‌ಟಿಆರ್‌ಗೆ ಆರೋಗ್ಯ ಸಮಸ್ಯೆ ಇದೆ, ಅದಕ್ಕೆ ಹೀಗಾಗಿದ್ದಾರೆ ಎಂಬ ಮಾತು ಕೇಳಿಬಂತು. ಆದರೆ ನಿಜಕ್ಕೂ ನಾನು ಒಂಚೂರು ಸಣ್ಣಗಾಗಿ ಅಂತಷ್ಟೇ ಹೇಳಿದ್ದೆ. ಅವರದು ಯಾವ ಬಗೆಯ ಹಠ ಎಂದರೆ ನಾಲ್ಕು ತಿಂಗಳು ಹಠತೊಟ್ಟು 16 ಕೆಜಿ ಇಳಿಸುವ ತನಕ ಬಿಡಲಿಲ್ಲ.

- ಇನ್ನೊಂದು ಸನ್ನಿವೇಶ. ಜೂ.ಎನ್‌ಟಿಆರ್‌ ನನ್ನ ಬಳಿ, ‘ಮಹಾಭಾರತದಲ್ಲಿ ನಿಜವಾದ ವಿನ್ನರ್‌ ಯಾರು’ ಅಂತ ಕೇಳಿದರು. ನಾನು ಕೃಷ್ಣ, ಅರ್ಜುನ ಅಂತೆಲ್ಲ ಹೇಳಿದೆ. ‘ಅಲ್ಲ ಶಕುನಿ. ಆತನಿಂದಾಗಿ ನಾವು ಆ ಕಥೆಯನ್ನು ನೆನಪಿಟ್ಟುಕೊಳ್ಳುವಂತಾಗಿದೆ’ ಅಂದರು ಜೂ.ಎನ್‌ಟಿಆರ್‌. ನಾನು ಅಲ್ಲಿಯವರೆಗೆ ಈ ದೃಷ್ಟಿಕೋನದಲ್ಲಿ ಮಹಾಭಾರತವನ್ನು ನೋಡಿರಲಿಲ್ಲ. ಇದು ನನ್ನ ಮೇಲೆ ಎಷ್ಟು ಪರಿಣಾಮ ಬೀರಿತು ಅಂದರೆ ಅವರ ಜೊತೆಗೆ ಸೇರಿ ಕತೆಯ ತಿರುಳನ್ನೇ ಬದಲಿಸುತ್ತ ಹೋದೆ. ಅದು ಒಂದು ಹಂತಕ್ಕೆ ಬರಲು ಮೂರು ವರ್ಷ ತೆಗೆದುಕೊಂಡಿತು.

- ‘The only soil worth remembering is the one soaked in blood.’ ನೀವು ಟ್ರೇಲರ್‌ನಲ್ಲಿ ನೋಡಿರುವ ಈ ಡೈಲಾಗ್‌ ನನ್ನ ಹೆಂಡತಿಯ ಕೊಡುಗೆ. ಜೂ.ಎನ್‌ಟಿಆರ್‌ ಜೊತೆಗೆ ನಮ್ಮ ಕೊಲ್ಯಾಬರೇಶನ್‌ ಆದ ಸಂದರ್ಭದಲ್ಲಿ ಹೇಳಿದ್ದು. ನನಗದು ಇಂಟರೆಸ್ಟಿಂಗ್‌ ಅನಿಸಿ ಸಿನಿಮಾಕ್ಕೆ ತೆಗೆದುಕೊಂಡೆ.

- ವರ್ಷಗಳ ಕೆಳಗೆ ಇನ್‌ಸ್ಟಾಗ್ರಾಂ, ಎಕ್ಸ್‌ ಅಕೌಂಟ್‌ ಡಿಲೀಟ್‌ ಮಾಡಿದೆ. ಅದಕ್ಕೂ ಒಂದು ಕಾರಣ ಇದೆ. ನನಗೆ ಈ ಕಥೆಯನ್ನು ಕತ್ತಲ ಶೇಡ್‌ನಲ್ಲಿ ಹೇಳಬೇಕಿತ್ತು. ಅದರೆ ಇದಕ್ಕೆ ಹಲವರಿಂದ ಬಗೆ ಬಗೆಯ ಅಭಿಪ್ರಾಯ ಬರುತ್ತಾ ಹೋಯ್ತು. ನನಗದು ಬೇಕಿರಲಿಲ್ಲ. ಕತ್ತಲ ಹಿನ್ನೆಲೆಯಲ್ಲಿ ಈ ಕತೆ ಹೇಳದಿದ್ದರೆ ಕಥೆಗೆ ಅನ್ಯಾಯವಾಗುತ್ತಿತ್ತು. ಹೀಗಾಗಿ ನನ್ನ ಅಭಿಪ್ರಾಯ ಅಲ್ಲಾಡದಂತಿರಬೇಕು ಎಂದು ಸೋಷಿಯಲ್‌ ಮೀಡಿಯಾದಿಂದಲೇ ಆಚೆ ಬಂದೆ.

- ಮೊದಲ ಸಲ ಜಗತ್ತಿನೆದುರು ಸಿನಿಮಾವನ್ನು ಪರಿಚಯಿಸುವಾಗ ಜನ ಕತೆಯ ಬಗ್ಗೆಯೂ ಕುತೂಹಲದಿಂದಿರುತ್ತಾರೆ. ಜೊತೆಗೆ ಹೀರೋ ಸೆಲೆಬ್ರೇಶನ್‌ ಆಗುತ್ತದೆ. ಅದನ್ನು ಅರಿತು ನಾನು ಈಗ ಬಿಡುಗಡೆ ಮಾಡಿರುವ ಗ್ಲಿಂಪ್ಸ್‌ನಲ್ಲಿ ಕತೆಯ ಚೌಕಟ್ಟನ್ನೇ ತೋರಿಸಿದ್ದೇನೆ. ಇವತ್ತು ಜನ ಥಿಯೇಟರ್‌ಗೆ ಬರುವ ಮೊದಲೇ ಕತೆಯ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ನಮ್ಮಲ್ಲಿ ಸಾಮಾನ್ಯವಾಗಿ ಸಿನಿಮಾಕ್ಕೂ ಮೊದಲೇ ಕತೆ ಮರೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ನಾನು ಕತೆಯನ್ನು ಹೇಳಿದರೆ ಜನ ಆ ಕಥೆ ಹೇಗಾಯ್ತು ಅನ್ನುವ ಕುತೂಹಲದಲ್ಲಿ ಬರುತ್ತಾರೆ ಎನ್ನುವುದು ನನಗೆ ಗೊತ್ತು. ಸದ್ಯದ ಗ್ಲಿಂಪ್ಸ್‌ನಲ್ಲಿ ಸ್ಟೇಡಿಯಂ, ಪಿಚ್‌ ಕಂಡೀಶನ್‌ ಹೇಳಿದ್ದೇನೆ. ಟ್ರೇಲರ್‌ನಲ್ಲಿ ಡ್ರಾಮಾವನ್ನು ತೆರೆದಿಡುತ್ತೇನೆ.

- ನೀವು ಈವರೆಗೂ ಕೇಳಿರದ ದೇಶಭಕ್ತಿಯ ಕಥೆಯನ್ನು ಡ್ರ್ಯಾಗನ್‌ನಲ್ಲಿ ಹೇಳಿದ್ದೇನೆ. ಇದು ನನ್ನ ಕೆರಿಯರ್‌ ಅತೀದೊಡ್ಡ ದೇಶಭಕ್ತಿಯ ಸಿನಿಮಾ.

- ನನ್ನ ಮುಂದಿನ ಸಿನಿಮಾ ಕಲರ್‌ಫುಲ್‌ ಆಗಿರುತ್ತೆ. ಕತ್ತಲೆ ಕತ್ತಲೆ ಸಿನಿಮಾ ಇಲ್ಲಿಗೇ ಕೊನೆ. ಇನ್ನು ಮೇಲೆ ಈ ಥರ ಪರಿಸರ ಇರುವ ಸಿನಿಮಾ ಮಾಡೋದಿಲ್ಲ. ಇನ್ನೇನಿದ್ದರೂ ಕಲರ್‌ಫುಲ್‌ ಸಿನಿಮಾ.

- ಕೆಜಿಎಫ್‌ 3 ಬಗ್ಗೆ ಏನೂ ಹೇಳಲಾರೆ. ಸದ್ಯ ನನ್ನ ಸಂಪೂರ್ಣ ಗಮನ ‘ಡ್ರ್ಯಾಗನ್‌’ ಸಿನಿಮಾದ ಮೇಲಿದೆ.

- ಮುಂದೆ ಪುರಾಣದ ಕಥೆಯನ್ನಿಟ್ಟು ಸಿನಿಮಾ ಮಾಡುವ ಯೋಜನೆ ಇದೆ. ಕಥೆಯ ಲೈನ್‌ ತಲೆಯಲ್ಲಿದೆ. ಆದರೆ ಇದು ಸಿನಿಮಾವಾಗಿ ಬರಲು ಇನ್ನೊಂದು ಹತ್ತು ವರ್ಷ ಕಾಯಬೇಕೇನೋ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಯ್ಯ ಜಾತಕದಲ್ಲಿದೆ ದೊಡ್ಡ ಗಂಡಾಂತರ: ಭಾನುವಾರ ಆ ಬಣ್ಣದ ಬಟ್ಟೆ ಮುಟ್ಟೋದೇ ಇಲ್ವಂತೆ!
ಪವನ್ ಕಲ್ಯಾಣ್‌ರನ್ನು ನೋಡಿ ಭಾವುಕರಾದ ಚಿರಂಜೀವಿ: ‘ಮೆಗಾ158’ ಮುಹೂರ್ತದಲ್ಲಿ ಏನಾಯ್ತು?