ಆಟಕ್ಕುಂಟು ಲೆಕ್ಕಕ್ಕಿಲ್ಲ.. ಇದು ಈ ಸ್ಟಾರ್ ನಟಿ ಪ್ರತಿಭೆಗೆ ಮಾಡಿದ ಭಾರೀ ಮೋಸ ಎಂಬ ಆಕ್ರೋಶ!

Published : Nov 09, 2026, 01:15 PM IST
Kajal Aggarwal

ಸಾರಾಂಶ

ಈಗ ಎಲ್ಲರ ಗಮನ ‘ರಾಮಾಯಣ ಭಾಗ 2’ರ ಮೇಲಿದೆ. ಮುಂದಿನ ಭಾಗದಲ್ಲಾದರೂ ಮಂಡೋದರಿ ಪಾತ್ರಕ್ಕೆ ಹೆಚ್ಚಿನ ಅವಕಾಶ ಸಿಗುತ್ತದೆಯೇ ಎಂಬ ಕುತೂಹಲವಿದೆ. ಕಾಜಲ್ ಅವರಂತಹ ಅನುಭವಿ ನಟಿಯ ಪ್ರತಿಭೆಗೆ ತಕ್ಕ ಅವಕಾಶ ನೀಡಬೇಕು ಎಂಬುದು ಅಭಿಮಾನಿಗಳ ಒತ್ತಾಯ. ಏನಿದು ವಿವಾದ? ನೋಡಿ..

'ರಾಮಾಯಣ'ದಲ್ಲಿ ಕಾಜಲ್ ಅಗರ್ವಾಲ್‌ಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಾತ್ರವೇ? ಪ್ರತಿಭಾವಂತ ನಟಿಗೆ ಅನ್ಯಾಯ ಎಂದ ಅಭಿಮಾನಿಗಳು!

ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಒಂದೆಡೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಚಿತ್ರದ ಪಾತ್ರಗಳ ಆಯ್ಕೆ ಕುರಿತು ಚರ್ಚೆ ಶುರುವಾಗಿದೆ. ಅದರಲ್ಲೂ ದಕ್ಷಿಣ ಭಾರತದ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಅವರಿಗೆ ನೀಡಿರುವ ಮಂಡೋದರಿ ಪಾತ್ರ ಈಗ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟು ದೊಡ್ಡ ಸಿನಿಮಾದಲ್ಲಿ ಸ್ಟಾರ್ ನಟಿಯನ್ನು ಆಯ್ಕೆ ಮಾಡಿಕೊಂಡು, ತೆರೆಮೇಲೆ ಅಷ್ಟೊಂದು ಅವಕಾಶ ನೀಡದಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.

ಕೇವಲ ಹಾಡುಗಳಿಗೆ ಅಥವಾ ಒಂದೆರಡು ದೃಶ್ಯಗಳಿಗೆ ಸೀಮಿತಗೊಳಿಸುವ ಪ್ರವೃತ್ತಿ ಬದಲಾಗಬೇಕು

ಸಿನಿಮಾಗಳಲ್ಲಿ ನಾಯಕಿಯರನ್ನು ಕೇವಲ ಹಾಡುಗಳಿಗೆ ಅಥವಾ ಒಂದೆರಡು ದೃಶ್ಯಗಳಿಗೆ ಸೀಮಿತಗೊಳಿಸುವ ಪ್ರವೃತ್ತಿ ಬದಲಾಗಬೇಕು ಎಂಬುದು ಪ್ರೇಕ್ಷಕರ ಅಭಿಪ್ರಾಯ. ಇಂದಿನ ನಟಿಯರಿಗೂ ದೊಡ್ಡ ಅಭಿಮಾನಿ ಬಳಗವಿದೆ. ಅವರ ಅಭಿನಯವನ್ನು ನೋಡಲು ಚಿತ್ರಮಂದಿರಕ್ಕೆ ಬರುವವರೂ ಸಾಕಷ್ಟಿದ್ದಾರೆ. ಹೀಗಿರುವಾಗ ನಟಿಯರ ಜನಪ್ರಿಯತೆ ಮತ್ತು ಪ್ರತಿಭೆಗೆ ತಕ್ಕಂತೆ ಪಾತ್ರಗಳನ್ನು ರೂಪಿಸುವುದು ನಿರ್ದೇಶಕರ ಜವಾಬ್ದಾರಿ ಎನ್ನಲಾಗುತ್ತಿದೆ.

ಕಾಜಲ್ ಅಗರ್ವಾಲ್ ಅವರ ಸಿನಿ ಪಯಣ ಗಮನಿಸಿದರೆ, ತೆಲುಗು ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಅವರು ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಮದುವೆ ಮತ್ತು ತಾಯ್ತನದ ನಂತರ ಸ್ವಲ್ಪ ವಿರಾಮ ಪಡೆದು ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ನಿರೀಕ್ಷಿತ ಮಟ್ಟದ ಪಾತ್ರಗಳು ಅವರಿಗೆ ಸಿಗುತ್ತಿಲ್ಲ ಎಂಬ ಚರ್ಚೆಯಿದೆ. 'ಸತ್ಯಭಾಮಾ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರೂ ಸಿನಿಮಾ ಯಶಸ್ಸು ಕಾಣಲಿಲ್ಲ. ಬಾಲಕೃಷ್ಣ ಅಭಿನಯದ 'ಭಗವಂತ್ ಕೇಸರಿ'ಯಲ್ಲಿ ಸೀಮಿತ ಪಾತ್ರ ಸಿಕ್ಕರೆ, 'ಇಂಡಿಯನ್ 2' ಚಿತ್ರದಲ್ಲೂ ಅವರ ಉಪಸ್ಥಿತಿ ಕೆಲವೇ ದೃಶ್ಯಗಳಿಗೆ ಸೀಮಿತವಾಗಿತ್ತು.

ಕಾಜಲ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು

ಇಂತಹ ಸಂದರ್ಭದಲ್ಲಿ ‘ರಾಮಾಯಣ’ ಸಿನಿಮಾ ಕಾಜಲ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಕಾಜಲ್ ಮಂಡೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗ ಸಾಕಷ್ಟು ಕುತೂಹಲ ಮೂಡಿತ್ತು. ಆದರೆ ಮೊದಲ ಭಾಗದಲ್ಲಿ ಅವರ ಪಾತ್ರಕ್ಕೆ ಸಿಕ್ಕಿರುವ ಅವಕಾಶ ನಿರಾಸೆ ಮೂಡಿಸಿದೆ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, 'ರಾಮಾಯಣ ಭಾಗ 1'ರಲ್ಲಿ ಕಾಜಲ್ ಅವರ ಸ್ಕ್ರೀನ್ ಟೈಮ್ 10 ನಿಮಿಷಕ್ಕಿಂತಲೂ ಕಡಿಮೆ. ಹೀಗಾಗಿ ಇಷ್ಟು ದೊಡ್ಡ ಪ್ರಾಜೆಕ್ಟ್‌ನಲ್ಲಿ ಮಂಡೋದರಿ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡದಿರುವುದೇಕೆ ಎಂಬ ಪ್ರಶ್ನೆ ಅಭಿಮಾನಿಗಳಿಂದ ಕೇಳಿಬರುತ್ತಿದೆ.

ಈಗ ಎಲ್ಲರ ಗಮನ ‘ರಾಮಾಯಣ ಭಾಗ 2’ರ ಮೇಲಿದೆ. ಮುಂದಿನ ಭಾಗದಲ್ಲಾದರೂ ಮಂಡೋದರಿ ಪಾತ್ರಕ್ಕೆ ಹೆಚ್ಚಿನ ಅವಕಾಶ ಸಿಗುತ್ತದೆಯೇ ಎಂಬ ಕುತೂಹಲವಿದೆ. ಕಾಜಲ್ ಅವರಂತಹ ಅನುಭವಿ ನಟಿಯ ಪ್ರತಿಭೆಗೆ ತಕ್ಕ ಅವಕಾಶ ನೀಡಬೇಕು ಎಂಬುದು ಅಭಿಮಾನಿಗಳ ಒತ್ತಾಯ. ದೊಡ್ಡ ಸಿನಿಮಾಗಳಲ್ಲಿ ಸ್ಟಾರ್ ನಟಿಯರ ಹೆಸರು ಬಳಸುವುದಷ್ಟೇ ಅಲ್ಲ, ಅವರ ಅಭಿನಯಕ್ಕೂ ಸೂಕ್ತ ಮನ್ನಣೆ ಸಿಗಬೇಕು ಎಂಬ ಚರ್ಚೆ ಇದೀಗ ಜೋರಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಗ 'ಆಯುಷ್‌' ಸಿನಿಮಾದಿಂದ ನಿರ್ದೇಶಕ ಪುರುಷೋತ್ತಮ್‌ ಬದಲಾವಣೆಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಪುಷ್ಪಕ ವಿಮಾನದ ಕಾರಣಕ್ಕೆ 'ಜಟಾಯು-ರಾವಣ ಫೈಟ್' ದೃಶ್ಯ ಮಾಡಲು ಆರೂವರೆ ವರ್ಷ ಬೇಕಾಯ್ತು!