All Eyes On Rafah ಪೋಸ್ಟ್‌ ಮಾಡಿ ಡಿಲೀಟ್‌ ಮಾಡಿದ ರಿತಿಕಾ, ಮಾಧುರಿ ದೀಕ್ಷಿತ್‌!

By Santosh Naik  |  First Published May 29, 2024, 5:32 PM IST

ಗಾಜಾಪಟ್ಟಿಯಲ್ಲಿ ಇಸ್ರೇಲ್‌ನ ಸೇನಾಪಡೆಗಳು ರಫಾಹ್‌ ಗಡಿಯತ್ತ ಸಾಗುತ್ತಿರುವ ಸೋಶಿಯಲ್‌ ಮೀಡಿಯಾದಲ್ಲಿ ಅದನ್ನು ವಿರೋಧಿಸುವ ಟ್ರೆಂಡ್‌ ಶುರುವಾಗಿದೆ. 'ಅಲ್‌ ಐಸ್ ಆನ್‌ ರಫಾಹ್‌' ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಪ್ಯಾಲೆಸ್ತೇನ್‌ ಹಾಗೂ ಹಮಾಸ್‌ಗೆ ಬೆಂಬಲ ನೀಡುವ ಪ್ರಯತ್ನ ಮಾಡಿದ್ದಾರೆ.
 


ನವದೆಹಲಿ (ಮೇ.29): ಗಾಜಾಪಟ್ಟಿಯ ರಫಾಹ್‌ ಗಡಿಯಲ್ಲಿ ಇಸ್ರೇಲ್‌ನ ಸೇನಾಪಡೆಗಳು ವೈಮಾನಿಕ ದಾಳಿ ನಡೆಸಿವೆ. ಇದರಲ್ಲಿ 46ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆಯ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಹೊಸ ರೀತಿಯ ಟ್ರೆಂಡ್‌ ಶುರುವಾಗಿದೆ. ಶವಪೆಟ್ಟಿಗೆಗಳನ್ನು ಹಿನ್ನಲೆಯಲ್ಲಿ ಹೊಂದಿರುವ ಆಲ್‌ ಐಸ್‌ ಆನ್‌ ರಫಾಹ್‌ ಎನ್ನುವ ಎಐ ಚಿತ್ರವನ್ನು ಭಾರತದ ಸೆಲೆಬ್ರಿಟಿಗಳು ಪುಂಖಾನುಪುಂಖವಾಗಿ ಹಂಚಿಕೊಳ್ಳುತ್ತಿದ್ದಾರೆ. ಭಾನುವಾರ ನಡೆದ ದಾಳಿಯ ಬಳಿಕ ಇಂಥದ್ದೊಂದು ಟ್ರೆಂಡ್‌ ಶುರುವಾಗಿತ್ತು. ಬಾಲಿವುಡ್‌, ಟಾಲಿವುಡ್‌ನ ಸಾಕಷ್ಟು ಹೀರೋಯಿನ್‌ಗಳು ನಟರು ಒಂದೇ ರೀತಿಯ ಫೋಟೋವನ್ನು ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದರು. ಒಂದೇ ರೀತಿಯ ಪೋಸ್ಟ್‌ಗಳು ಎಲ್ಲರ ಹ್ಯಾಂಡಲ್‌ಗಳಲ್ಲಿ ಪೋಸ್ಟ್‌ ಆದಾಗ ಇವುಗಳು ಪೇಯ್ಡ್‌ ಪ್ರಮೋಷನ್‌ನ ಭಾಗ ಎಂದೂ ಟೀಕೆ ಮಾಡಲಾಗಿತ್ತು. All Eyes On Rafah ಪೋಸ್ಟ್‌ಗಳನ್ನು ಹಂಚಿಕೊಂಡವರ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಕೂಡ ಆರಂಭವಾಗಿದ್ದವು. ಸಾಮಾನ್ಯವಾಗಿ ಇಂಥ ವಿವಾದಿತ ವಿಚಾರಗಳಿಂದ ಅಂತರ ಕಾಯ್ದುಕೊಳ್ಳುವ ರೋಹಿತ್‌ ಶರ್ಮ ಅವರ ಪತ್ನಿ ರಿತಿಕಾ ಸಜ್ದೆ ಹಾಗೂ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ತಾವು ಹಂಚಿಕೊಂಡ ಸ್ಟೋರಿಗಳಿಗೆ ಟೀಕೆ ಬಂದ ಬೆನ್ನಲ್ಲಿಯೇ ಅದನ್ನು ಡಿಲೀಟ್‌ ಮಾಡಿದ್ದರು.

ಇನ್ನು ಈ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದ್ದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದೆ. ಯಾರೋ ಏನೋ ಹೇಳ್ತಾರೆ ಅಂತಾ ಪೋಸ್ಟ್‌ ಮಾಡಿ ಡಿಲೀಟ್‌ ಮಾಡೋದು ಅಸಹ್ಯ ಎನಿಸುತ್ತದೆ. ನಿಜಕ್ಕೂ ನಿಮ್ಮ ಬಗ್ಗೆ ಬೇಸರವಾಗಿದೆ ಎಂದು ಮಾಧುರಿ ದೀಕ್ಷಿತ್‌ ಅವರ ಪೋಸ್ಟ್‌ಗೆ ಬರೆದಿದ್ದಾರೆ. ಟೀಕೆ ಬರುತ್ತದೆ ಎನ್ನುವ ಕಾರಣಕ್ಕೆ ನೀವು ನಿಮ್ಮ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದ್ದೀರಿ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಅವರ ಇನ್ಸ್‌ಟಾಗ್ರಾಮ್‌ ಸ್ಟೋರಿಗಳ ಸ್ಕ್ರೀನ್‌ಶಾಟ್‌ ತೆಗೆದುಕೊಂಡಿರುವ ಒಬ್ಬರು, ಪ್ರೊಪಗಾಂಡಾ ಸ್ಟೋರಿಯನ್ನು ಮಾಧುರಿ ದೀಕ್ಷಿತ್‌ ಕೂಡ ಡಿಲೀಟ್‌ ಮಾಡಿದ್ದಾರೆ ಎಂದು ಬರೆದಿದ್ದಾರೆ.  ಗಾಜಾದ ಬಗ್ಗೆ All Eyes On Rafah ಪೋಸ್ಟ್‌ ಮಾಡೋ ಸೆಲೆಬ್ರಿಟಿಗಳಿಗೆ ಕಾಶ್ಮೀರ ಕಾಣೋದಿಲ್ಲ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಇನ್ನು ರೋಹಿತ್‌ ಶರ್ಮ ಅವರ ಪತ್ನಿ ರಿತಿಕಾ ಕೂಡ All Eyes On Rafah ಪೋಸ್ಟ್‌ ಮಾಡಿದ್ದಕ್ಕೆ ಟ್ರೋಲ್‌ ಆಗಿದ್ದರು. ಯಾವುದೇ ವಿಚಾರದ ಬಗ್ಗೆ ಸೆಲೆಕ್ಷಿವ್‌ ಆಗಿ ಮಾತನಾಡಬೇಡಿ ಎಂದು ರಿತಿಕಾಗೆ ತಿಳಿಸಿದ್ದಾರೆ. ಕಾಶ್ಮೀರಿ ಪಂಡಿತರ ಮೇಲೆ ಹಲ್ಲೆ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ಹಿಂದುಗಳ ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆಯಾದಾಗ ನೀವು ಮಾತನಾಡಿಲ್ಲ ಎಂದು ತಿಳಿಸಿದ್ದಾರೆ. "ಇವರು ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್. ಕಾಶ್ಮೀರಿ ಪಂಡಿತರ ಬಗ್ಗೆ ಎಂದಿಗೂ ಮಾತನಾಡಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಬಗ್ಗೆ ಎಂದಿಗೂ ಮಾತನಾಡಿಲ್ಲ. ಆದರೆ ಪ್ಯಾಲೆಸ್ತೀನ್ ಮತ್ತು ಗಾಜಾದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ" ಎಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಪೋಸ್ಟ್‌ಗೆ ಸಾಕಷ್ಟು ಟೀಕೆ ಬಂದ ಬಳಿಕ ರಿತಿಕಾ ಸಜ್ದೆ ಈ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದ್ದಾರೆ.

Latest Videos

undefined

Viral Video: 'ಅವರಿಗೆ ಅವರ ಸ್ಥಳ ನೀಡಿ..' ಪ್ಯಾಲೆಸ್ತೇನ್‌ ಜೊತೆ ಕಾಶ್ಮೀರ ಹೋಲಿಸಿದ ಪ್ರಕಾಶ್‌ ರಾಜ್‌!

'ಆಲ್ ಐಸ್ ಆನ್ ರಫಾಹ್‌' ಪೋಸ್ಟ್‌ ಅನ್ನು ಸಾಕಷ್ಟು ಬಾಲಿವುಡ್‌ ಸೆಲೆಬ್ರಿಟಿಗಳು ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವರುಣ್ ಧವನ್, ಸೋನಮ್ ಕಪೂರ್, ರಾಕುಲ್ ಪ್ರೀತ್, ತೃಪ್ತಿ ಡಿಮ್ರಿ, ನೋರಾ ಫತೇಹಿ, ಭೂಮಿ ಪೆಡ್ನೇಕರ್ ಮತ್ತು ಇತರರು ಇದ್ದಾರೆ. ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಗಾಯಕಿ ಶಿಲ್ಪಾ ರಾವ್ ಮತ್ತು ದಕ್ಷಿಣದ ತಾರೆಗಳಾದ ದುಲ್ಕರ್ ಸಲ್ಮಾನ್ ಮತ್ತು ಸಮಂತಾ ರುತ್ ಪ್ರಭು ಕೂಡ ಇದೇ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಹಾಸ್ಯನಟ ವೀರ್ ದಾಸ್, ಗಾಯಕ ಧ್ವನಿ ಭಾನುಶಾಲಿ, ನಟ ಸ್ವರಾ ಭಾಸ್ಕರ್, ರಾಪರ್ ರಾಫ್ತಾರ್ ಮತ್ತು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಾಸ್ರಾ ಅವರು ಇದೇ ರೀತಿಯ ಪೋಸ್ಟ್‌ಗಳ ಮೂಲಕ ಗಾಜಾ ಪರಿಸ್ಥಿತಿಯ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.

ಇಸ್ರೇಲ್‌ ಕಟ್ಟಿಹಾಕಲು ಸುರಂಗದಲ್ಲೇ ಹೊಂಚು ಹಾಕಿದ 40000 ಉಗ್ರರು: ಸುರಂಗಗಳಲ್ಲಿ ಶಸ್ತ್ರಾಸ್ತ್ರ, ಆಹಾರ ಸಂಗ್ರಹ

click me!