ರಮಾಕಾಂತ್ ಬರೆಯುತ್ತಾರೆ.. ಕನ್ನಡದ Attitude ಪೈಲ್ವಾನ್ ಸುದೀಪ...

Published : Sep 13, 2019, 07:20 PM ISTUpdated : Sep 13, 2019, 07:39 PM IST
ರಮಾಕಾಂತ್ ಬರೆಯುತ್ತಾರೆ.. ಕನ್ನಡದ Attitude ಪೈಲ್ವಾನ್ ಸುದೀಪ...

ಸಾರಾಂಶ

ಇಡೀ ರಾಜ್ಯದಲ್ಲಿ ಕಿಚ್ಚ ಸುದೀಪ್ ಪೈಲ್ವಾನ್  ಪ್ರದರ್ಶನ/ 5 ಭಾಷೆಗಳಲ್ಲಿ ತೆರೆಕಂಡಿರುವ ಚಿತ್ರ/ ವಿಭಿನ್ನ ಗೆಟಪ್ ನಲ್ಲಿ ಕಿಚ್ಚ ಸುದೀಪ್

ಕನ್ನಡದ Attitude ಪೈಲ್ವಾನ್ ಸುದೀಪ..

ಸುದೀಪ್ ಹಾಗೇನೇ, ನೋಡಿದ‌ ತಕ್ಷಣ ಅಹಂಕಾರಿ ಅನ್ನೋ ಹಾಗೆ. ಅದು ಅಹಂಕಾರ, ಗಾಂಭೀರ್ಯ, ತೂಕದ ನಡುವಿನ ಸಣ್ಣ ಗೆರೆ. ಅಂತಹ ಒಂದು ಗೆರೆಯ ಅವಶ್ಯಕತೆ ಕನ್ನಡಕ್ಕಂತೂ ಇತ್ತು.

ಕನ್ನಡದ ಒಬ್ಬ ನಟ ಬಾಲಿವುಡ್, ಹಾಲಿವುಡ್ ಲೆವೆಲ್ ನಲ್ಲಿ ಮಿಂಚಬೇಕಾದರೆ ಅದು ಸುಲಭಕ್ಕೆ ದಕ್ಕುವಂತದ್ದಲ್ಲ.‌ ಬರೀ ನಟನೆ, ಕಲೆ ಸಾಕೇ? ಸಾಲಲ್ಲ. ಕೆಲವು ಬಾರಿ ಅದಕ್ಕೆ ಮೀರಿದ್ದು ಇನ್ನೇನೋ ಬೇಕಿರುತ್ತೆ. ಅದು ಸುದೀಪನ ತರ ಕಾಣುತ್ತೆ ಅಷ್ಟೇ.

ನೀವು ಅನಾಮತ್ತಾಗಿ ಒಪ್ಪಿಕೊಳ್ಳಬೇಕು ಇಲ್ಲ, ಎಷ್ಟು ಕೊಬ್ಬು ಅಂತ ಮಾತಾಡಿಕೊಳ್ಳಬೇಕು. ಅದನ್ನ ಬಿಟ್ಟು ತಿರಸ್ಕರಿಸಿ ನೋಡಿ, ನಿಮ್ಮ‌ಮನಸ್ಸೇ‌ ಒಪ್ಪೊಲ್ಲ. ಅದು ಸುದೀಪನ so called Attitude!

ಅಭಿಮಾನಿಗಳ‌ ಕಿಚ್ಚ, ಅಭಿಮಾನದ ಬೆಳಕಾಗಿದ್ದೇ ಹಾಗೆ? ಏನ್ ಕಮ್ಮಿ ಇದೆ ಹೇಳಿ.
ಹೇಳಿ ಕೇಳಿ ಭರ್ತಿ ಆರಡಿ ತುಂಬಿರುವ ಆಜಾನುಬಾಹು, ಸ್ಫುರದ್ರೂಪಿ, ಹದ್ದಿನ ಕಣ್ಣು, ಭಾಷೆಯ ಮೇಲೆ ಅದ್ಭುತ ಹಿಡಿತ, ನಿರೂಪಣೆಗೆ ನಿಂತರೆ ಬಿಗ್ ಬಾಸ್.... ನಟನೆ, ನಿರ್ದೇಶನ, ಕ್ರಿಕೆಟ್ , ಜ್ಞಾನ, ಗ್ಯಾಜೆಟ್ ಗಳ‌‌ ಬಗ್ಗೆ ಅದ್ಭುತ ತಿಳುವಳಿಕೆ. ಸೋಷಿಯಲ್‌ ಮೀಡಿಯಾದಲ್ಲಿ, ಮೀಡಿಯಾದಲ್ಲಿ ಎಷ್ಟು ಮಾತನಾಡಬೇಕು? ಮಾತನಾಡಬಾರದು ಎಂಬುವ ಅಕ್ಷರಗಳ‌ Clarity.
ಇಷ್ಟೆಲ್ಲಾ‌ ಇದ್ದಾಗ Attitude ಇರಬಾರದಾ? ಇರಬೇಕು. ಅವನಿಗೆ ಮಾತ್ರ ಒಪ್ಪುವಂತೆ.
ಕೆಲವು attitude ಗಳು ಕೆಲವರಿಗೆ ಮಾತ್ರ match ಆಗುತ್ತವೆ. ಅಂತಹ ಅಪರೂಪದ‌ Combination Sudeep.

ಅದು ಆಗಷ್ಟೇ ಧೋನಿ ಅದ್ಭುತ ಸಿಕ್ಸರ್ ನಿಂದ ವರ್ಲ್ಡ್ ಕಪ್ ಗೆದ್ದು ಕೊಟ್ಟು ಕೆಲವೇ ಗಂಟೆಗಳು ಕಳೆದಿದ್ದ ಸಮಯ. ಗುಂಗು‌ ಇನ್ನೂ ಇಳಿದಿರಲಿಲ್ಲ. ಗೆಳೆಯ ಜಿಕೆ ಅನಿಲ್ ಮತ್ತು ನಾನು ಸುದೀಪ್ ಮನೆಗೆ ರಾತ್ರಿ ಊಟಕ್ಕೆ ಹೊರಟಿದ್ದಿವಿ. ದ್ವಾರಕೀಶ್ ಮಗ, ಚಿರಂಜೀವಿ ಸರ್ಜಾ ಹಾಗೆ ಜೊತೆಯಾಗಿದ್ದರು. ಸುದೀಪ್ ಸರ್ಕಲ್ ನ ಮತ್ತಷ್ಟು ಜನರೂ ಮೊದಲ ಮಹಡಿಯಲ್ಲಿ ಹಾಗೆ ಸೇರಿದ್ದರು‌. ಸುದೀಪ್ ನನ್ನ ಬರಮಾಡಿಕೊಂಡ‌ ರೀತಿಗೆ ಬೆರಗಾಗಿದ್ದೆ.

ಪೈಲ್ವಾನ್ ಚಿತ್ರ ವಿಮರ್ಶೆ

ಅಲ್ಲಿಯವರೆಗೂ ಸುದೀಪ್ ನನ್ನ‌ ನಡುವೆ ಇದ್ದದ್ದು ಒಬ್ಬ‌ ಸ್ಟಾರ್‌ ಮತ್ತು ಜರ್ನಲಿಸ್ಟ್ ನಡುವಿನ ಸಂಬಂಧ ಮಾತ್ರ. ಆದರೆ ಆ‌ Welcome ಇತ್ತಲ್ಲ. ಅಲ್ಲಿವರೆಗೆ ನಮ್ಮ‌ ಕಲ್ಪನೆಯಲ್ಲಿ ಇದ್ದ ಸುದೀಪೇ‌ ಮರೆಯಾಗುವ ಹಾಗಿತ್ತು.

ಹರಟೆಯಲ್ಲಿ ಮಾಧ್ಯಮ, TRP, Cinema ಎಲ್ಲವೂ ಹಾದು ಹೋಗುತ್ತಿದ್ದವು. ಊಟಕ್ಕೆ ಆರ್ಡರ್ ಆಗಿತ್ತು. ಇಷ್ಟಪಟ್ಟೇ ಗೋಬಿ ಮಂಚೂರಿಯನ್ ಕೇಳಿದ್ದೆ. ನಾನ್ ವೆಜ್ ತಿನ್ನಲ್ವಾ ಎಂದಿದ್ದರು. ಅಭ್ಯಾಸ ಇಲ್ಲ ಎಂದಿದ್ದೆ. ನನ್ನನ್ನುಳಿದು ಎಲ್ಲರೂ ನಾನ್ ವೆಜ್‌ಪ್ರಿಯರೇ.

ಅಖಾಡಕ್ಕಿಳಿದ ಪೈಲ್ವಾನ್: ಪ್ರೊಜೆಕ್ಟರ್ ಬಳಿಯೇ ಫ್ಯಾನ್ಸ್ ನೋಡಿದ ಕಿಚ್ಚ!

ಆಗಷ್ಟೇ ಮಧ್ಯರಾತ್ರಿ ಒಂದು ಜಾರಿತ್ತು. ಊಟ ಟೇಬಲ್ ಮೇಲಿತ್ತು. ಚಂದಿರನ ಬೆಳಕು ಬಿಟ್ಟರೆ ಬೇರೆ ಬೆಳಕಿಗೆ ಆಸ್ಪದವಿರಲಿಲ್ಲ. ಒಂಥರಾ Moonlight Dinner. ಸುದೀಪ ಬೆಳಕನ್ನ ತುಂಬ ಇಷ್ಟ ಪಡಲ್ಲ. Interviewಗಳಲ್ಲೂ ಅಷ್ಟೇ Natural light ಸಾಕು ಎಂದು ಬಿಡುತ್ತಾರೆ. ಧ್ವನಿಯಲ್ಲಿ ಆಜ್ಞೆ ಮಾತ್ರ ಕಾಣುವಂತೆ. ಅದು ನಿರ್ದೇಶಕನಿಗಿರಬೇಕಾದ‌ ಕಣ್ಣು.

ಜಿಕೆ‌‌ ಅನಿಲ್ ಪಕ್ಕ ನಾನು ಕುಳಿತಿದ್ದೆ. ಅಗ್ನಿ ಸಾಕ್ಷಿ ಜೆಕೆ ಅವರ ಪಕ್ಕ. ನಟಿಯೊಂದಿಗಿನ ರೊಮಾಂಟಿಕ್ ಸೀನ್ ಅಭಿನಯಕ್ಕೆ‌ ಎಲ್ಲರೂ ಚಿರು ಸರ್ಜನಿಗೆ ಕಾಲೆಳೆಯುತ್ತಿದ್ದರು. ಸರ್ಜಾ, ಅಣ್ಣಾ ಸುಮ್ನಿರಣ್ಣ ರೇಗಿಸಬೇಡ ಅಂದಿದ್ದ. ಸುದೀಪ್ ಗ್ರೂಪ್ ನಲ್ಲಿ ಸುದೀಪೇ ಕೇಳದಿದ್ದರೂ ಅದು ಅಣ್ಣನಂತ ಮರ್ಯಾದೆ ಸಿಗೋ ಸ್ಥಳ. ಸುಮ್ಮನೆ ಆವರಿಸಿಕೊಂಡು ಬಿಡುವ ವ್ಯಕ್ತಿತ್ವ.

ಗೋಬಿ ನನ್ನ ತಟ್ಟೆಯಲ್ಲಿ. ಒಂದೇ‌ ಒಂದು ತುಣುಕು ಹಾಗೆ ಕಚ್ಚಿದ್ದೆ. ಅಯ್ಯೋ! ಅದು ಚಿಕನ್! ಎಂದಿದ್ದಷ್ಟೇ, ನಂಬಿ, ಅಲ್ಲೇ ಇದ್ದ ಕವರ್ ತೆಗೆದು, ಇದ್ರಲ್ಲಿ ಉಗಿದುಬಿಡಿ ಅಂತ ಹೇಳಿ ಕವರ್ ಅನ್ನ ನನ್ನ‌ ಬಾಯಿ ಬಳಿ ತಂದಿದ್ದರು...ಸುದೀಪರದ್ದೇ ಕೈಗಳು.
ನನಗೇ ಮುಜುಗರವಾಗುವಂತೆ. ನಾನು ವಾಷ್ ಬೇಸಿನ್ ಬಳಿ ಓಡಿದ್ದೆ. ಮನುಷ್ಯನ ಖಾಸಗಿ ಇಷ್ಟ, ಬೇಕು ಬೇಡಗಳನ್ನ ಆ ಪರಿ ಗೌರವಿಸಿದ್ದು ನಾನು ಅಲ್ಲೇ ನೋಡಿದ್ದು.

ಒಬ್ಬ ಸ್ಟಾರ್ ನಟ, ಇಷ್ಟು ಸರಳವಾಗಿರಲು ಸಾಧ್ಯವಾ? ಅದು ಸುದೀಪನಿಗೆ ಮಾತ್ರ ಸಾಧ್ಯವಿರುವ ದೊಡ್ಡತನವಾ? ಗೊತ್ತಿಲ್ಲ.
ನಾನೇ ಕೇಳಿದ್ದೆ. ಹೊರಗಡೆ ನೀವು ಹೀಗೆ ಕಾಣಿಸಲ್ವಲ್ಲಾ ಅಂತ. ಅದಕ್ಕೆ, ಕೆಲವು ಕಡೆ ಹಾಗೆ ಇರಬೇಕಾಗುತ್ತದೆ. ತುಂಬ ಪಾಠಗಳನ್ನ ಇಂಡಸ್ಟ್ರಿ ಫ್ರೀಯಾಗಿಯೆ‌ ಕಲಿಸಿಕೊಟ್ಟಿದೆ. ಸ್ನೇಹ ಅಂತ ಬಂದರೆ ನಾನು ಗೆಳೆಯನಿಗೆ ಚಪ್ಪಲಿ ತೊಡಿಸಲು ಸಿದ್ಧ. ಆದರೆ ಎಲ್ಲಿ ಹೇಗಿರಬೇಕೋ ಹಾಗೆ ಇರುತ್ತೇನೆ. ಎಲ್ಲಾ ಕಡೆ ಒಂದೇ ರೀತಿ ಇದ್ದರೆ Taken for granted ಆಗಿಬಿಡ್ತೀನಿ ಎಂದು ಬಿಟ್ಟರು. ಅದೇನು ಸುಳ್ಳೂ ಅಲ್ಲ.

ಸ್ಪರ್ಶದಿಂದ ಆರಂಭವಾದ ಜರ್ನಿ ಸದ್ಯ ಹಾಲಿವುಡ್‌ ಲೆವೆಲ್ನಲ್ಲಿದೆ. ಸಾಮರ್ಥ್ಯಕ್ಕೆ ಸಲ್ಲುವ ಗೌರವಗಳವು.
ಒಂದು CCL ಶುರು ಮಾಡಿದ ಸುದೀಪ, ಅಲ್ಲಿಂದ ಬಾಲಿವುಡ್ ಮತ್ತು ಕನ್ನಡಕ್ಕೆ ಬಾಂಧವ್ಯದ‌ ಕೊಂಡಿಯಾಗಿಬಿಡುತ್ತಾರೆ. ಕ್ರಿಕೆಟ್ ಅಂತಹ ಕೊಂಡಿ..ಅನುಮಾನವೇ‌ಬೇಡ.

ಸಲ್ಮಾನ್ ಖಾನ್ ಕೂಡಾ ಸುದೀಪ್‌ನನ್ನ‌ ಇಷ್ಟ ಪಡದೇ ಇರಲಿಲ್ಲ. ಅದು ಸುದೀಪ ತನ್ನೊಳಗೇ‌ ಇರಿಸಿಕೊಂಡಿರುವ‌ ಜಾದು.
ಈಗ ಪೈಲ್ವಾನ್ ರಿಲೀಸ್ ಆಗಿದೆ. Release ಗಿಂತ ಮುಂಚೆಯೇ ಬೀಗಿದ್ದ ಸಿನಿಮಾ ಅಲ್ಲ ಇದು. ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ತುಂಬಾ ಸದ್ದು ಮಾಡುತ್ತಿರುವ ಸಿನಿಮಾ. ಕುಸ್ತಿ ಮತ್ತು ಬಾಕ್ಸಿಂಗ್ ಮೇಳೈಸಿರುವ ಸಿನಿಮಾ ಅಂತೆ. ಅಷ್ಟಕ್ಕೆ ಅಷ್ಟೂ ತಯಾರಿ ಬೇಡುವ ಸಿನಿಮಾ. ಸುದೀಪ್ ಗೆ Dedication ಹೊಸದಲ್ಲ. ಸುದೀಪ್‌ ಗೆ ಒಂದು Wish ಮಾಡಿಯೇ ನೋಡುತ್ತೇನೆ. ಕೆಲವೊಮ್ಮೆ Attitude ಏನನ್ನೋ ಗಳಿಸಿಕೊಡುತ್ತದೆ. ಅರ್ಹತೆ ಇದ್ದರೆ ಮಾತ್ರ.

Attitude matters...

-ರಮಾಕಾಂತ್ ಆರ್ಯನ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌