
ಇದು ಕನ್ನಡದ ರೆಬೆಲ್ ಸ್ಟಾರ್ ಅಂಬರೀಷ್ (Ambareesh) ಹಾಗೂ ನಟ ಸುಂದರ್ ರಾಜ್ (Sundar Raj) ಅವರಿಬ್ಬರ ಕಥೆ. ಇದನ್ನು ಸಂದರ್ಶನವೊಂದರಲ್ಲಿ ಹೇಳಿದ್ದು ಸುಂದರ್ ರಾಜ್ ಅವರೇ.. ಏನಿದು ಅವರಿಬ್ಬರ ಕಥೆ..? ಗೊತ್ತಾದ ಮೇಲೆ ನೀವು ನಗು ತಡೆಯಲು ಅಸಾಧ್ಯವಾದರೆ ಬೇರೆ ಯಾರೂ ಜವಾಬ್ದಾರರಲ್ಲ! ಓಕೆ ಅಂದ್ರೆ ನೋಡಿ, ಅಂಬರೀಷ್ ಹಾಗೂ ಸುಂದರ್ ರಾಜ್ ಮಧ್ಯೆ ನಡೆದ ಒಂದು ಹಾಸ್ಯಕ್ಕೆ ಹತ್ತಿರವಾದ ಪ್ರಸಂಗ. ಅವರಿಬ್ಬರೂ ಹೋಗಿದ್ದೆಲ್ಲಿಗೆ? ಯಾಕೆ ಅಂಬರೀಷ್ ಜೊತೆ ಸುಂದರ್ ರಾಜ್ ಹೋಗುವಂತಾಯ್ತು? ನೋಡಿ...
ಅದೊಂದು ದಿನ ನಟ ಸುಂದರ್ ರಾಜ್ ಅವರು ಕಾರಉ ಓಡಿಸಿಕೊಂಡು ಜೆಪಿ ನಗರದ ರಸ್ತೆಯಲ್ಲಿ ಬರುತ್ತಿದ್ದರಂತೆ. ತಮ್ಮ ಮನೆಯ ಗೇಟ್ ಮುಂದೆ ಚಡ್ಡಿ ಹಾಕಿಕೊಂಡು ನಿಂತಿದ್ದರಂತೆ ನಟ ಅಂಬರೀಷ್. ಅವರನ್ನು ನೋಡಿ ಸುಮ್ಮನಿರಲಾಗದ ನಟ ಸುಂದರ್ ರಾಜ್ ಅವರು 'ಏನೋ, ಫ್ರೀ ಆಗಿ ನಿಂತಿದೀಯಾ..? ನೀನೊಬ್ನೇ ಎಂಜಾಯ್ ಮಾಡ್ತೀಯಾ ಲೈಫ್‌ನ.. ನಮ್ಗೂ ಸ್ವಲ್ಪ.. 'ಎನ್ನುತ್ತಿದ್ದಂತೆ ರೆಬೆಲ ಸ್ಟಾರ್ ಅವರು 'ಹ' ಎಂದಷ್ಟೇ ಹೇಳಿದ್ರಂತೆ. ಅಷ್ಟರಲ್ಲಿ ಅವರ ಮುಂದೆ ಕಾರೊಂದು ಬಂದು ನಿಂತಿದೆ.
ನಟ ಸುಂದರ್ ರಾಜ್ ನೋಡಿ ಅಂಬಿ 'ನಡಿ, ಕಾರು ಹತ್ತು' ಎಂದಿದ್ದಾರೆ. ಅದಕ್ಕೆ ಸುಂದರ್ ರಾಜ್ ಅವರು 'ನನ್ ಕಾರು..' ಎಂದಿದ್ದಕ್ಕೆ ಅಂಬರೀಷ್ 'ಅದು ಇಲ್ಲೇ ಇರುತ್ತೆ..' ಎಂದು ಹೇಳಿ ಕಾರಿನ ಕಡೆ ಹೋಗಿ ಹತ್ತಿ ಡ್ರೈವಿಂಗ್ ಶುರು ಮಾಡಿದ್ದಾರೆ. ಸುಂದರ್ ರಾಜ್ ಅವರು ಬೇರೆ ದಾರಿ ಇಲ್ಲದೇ ಅಂಬರೀಷ್ ಕಾರು ಹತ್ತಿದ್ದಾರೆ. ಅಂಬರೀಷ್ ಕಾರು ಓಡಿಸುವ ಬಗ್ಗೆ ಹಲವರಿಗೆ ಗೊತ್ತು, ಹೇಳಲೇಬೇಕಿಲ್ಲ. ಒಂದು ಗಂಟೆ ನಲವತ್ತೈದು ನಿಮಿಷದಲ್ಲಿ ಬೆಂಗಳೂರಿಂದ ಆಗಿನ ರಸ್ತೆಯಲ್ಲಿ ಮೈಸೂರಿಗೆ ಹೋಗಿದ್ದಾರಂತೆ ಅಂಬರೀಷ್.
ಸರಿ, ಅಲ್ಲಿ ಹೋಗುವ ಮೊದಲು ಅವರ ಮತ್ತೊಬ್ಬರು ಸ್ನೇಹಿತರಾದ ಶ್ರೀನಿವಾಸಮೂರ್ತಿ ಅವರನ್ನು ಕೂಡ ಕರೆದುಕೊಂಡು ಹೋಗಿದ್ದಾರೆ ಅಂಬರೀಷ್. ಅಲ್ಲಿ ಅಂಬರೀಷ್ ಅವರು ತಮ್ಮ ಸ್ನೇಹಿತರ 'ಕಿಂಗ್ಸ್ ಕೋರ್ಟ್' ಹೊಟೆಲ್‌ಗೆ ಹೋಗಿ ಉಳಿದುಕೊಂಡಿದ್ದಾರೆ. ಮೈಸೂರಿಗೆ ಸುಂದರ್ ರಾಜ್ ಅವರನ್ನು ಕರೆದುಕೊಂಡು ಹೋಗಿದ್ದಾರೆ ಅಂಬರೀಷ್. ಆದ್ರೆ, ಮುಂದೆ ಎಲ್ಲಿಗೆ? ಯಾಕೆ ಬಂದಿದ್ದು ಅದೇನೂ ಇವರಿಗೆ ಹೇಳಿಲ್ಲ ಅಂಬಿ. ಸುಂದರ್ ರಾಜ್ ಅವರು ಕೇಳಿದರೆ, 'ನೀನು ಸುಮ್ನಿರು' ಎಂದಿದ್ದರಂತೆ.
ಮರುದಿನ ರಾಹುಕಾಲ ನೋಡಿ, ಅದಕ್ಕೂ ಮೊದಲು ಅಂಬರೀಷ್ ಅವರು ಸುಂದರ್ ರಾಜ್ ಅವರನ್ನು ಕರೆದುಕೊಂಡು ಹೋಗಿದ್ದು ಮೈಸೂರು ಅರಮನೆಗೆ.. ಅಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಭೇಟಿಯಾಗಿದ್ದಾರೆ. ಅಚ್ಚರಿಯಾದರೂ ಸತ್ಯ ಎಂದರೆ, ಅದುವರೆಗೂ ಅಂದಿನ ಮೈಸೂರು ಮಹಾರಾಜರನ್ನು ಹತ್ತಿರದಿಂದ ನೋಡಿರಲಿಲ್ಲವಂತೆ ಸುಂದರ್ ರಾಜ್. ಅವರು ಚಿಕ್ಕವರಿದ್ದಾಗ, ಅಂದರೆ ಸುಮಾರು 4 ವರ್ಷದವರಿದ್ದಾಗ ತಮ್ಮ ಅಪ್ಪನ ಹೆಗಲ ಮೇಲೆ ಕುಳಿತು ಮೈಸೂರು ದಸರಾ, ಅರಮನೆ ಲೈಟಿಂಗ್ ವೀಕ್ಷಿಸಿದ್ದು ಬಿಟ್ಟರೆ, ಅವರು ಮೈಸೂರು ಅರಮನೆಗೆ ಮತ್ತೆ ಯಾವತ್ತೂ ಹೋಗಿಯೇ ಇರಲಿಲ್ಲವಂತೆ.
ಆದರೆ, ಆವತ್ತು ನಟ ಅಂಬರೀಷ್ ಅವರು ಸುಂದರ್ ರಾಜ್ ಅವರನ್ನು ಹೇಳದೇ ಕೇಳದೇ ಕರೆದುಕೊಂಡು ಹೋಗಿ ಮೈಸೂರು ಮಹಾರಾಜರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ದರ್ಶನ ಮಾಡಿಸಿದ್ದಾರೆ. ಅದನ್ನು ಅನುಭವಿಸಿ ನಟ ಸುಂದರ್ ರಾಜ್ ಅವರು ಧನ್ಯರಾಗಿದ್ದಾರೆ, ಖುಷಿ ಅನುಭವಿಸಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದನ್ನು ಸ್ವತಃ ನಟ ಸುಂದರ್ ರಾಜ್ ಅವರೇ ಮಾಧ್ಯಮದ ಸಂದರ್ಶನದಲ್ಲಿ ಹಂಚಿಕೊಂಡಿದ್ದು, ಇದೀಗ ಆ ವಿಡಿಯೋದ ತುಣುಕೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.