ಕೋವಿಡ್ ಹೆಚ್ಚಳ: ನಿತ್ಯಾನಂದ ಕೈಲಾಶಕ್ಕೆ ಭಾರತೀಯರಿಗಿಲ್ಲ ಪ್ರವೇಶ

By Suvarna News  |  First Published Apr 22, 2021, 4:30 PM IST

ತನ್ನದು ಪ್ರತ್ಯೇಕ ದೇಶ ಎಂದು ಹೇಳಿಕೊಳ್ಳುವ ಸ್ವಾಮಿ ನಿತ್ಯಾನಂದ, ಈಗ ಕೋವಿಡ್ ನೆಪದಲ್ಲಿ ಭಾರತೀಯರನ್ನು ಬ್ಯಾನ್ ಮಾಡಿದ್ದಾನೆ. ನಿಜಕ್ಕೂ ಅಂಥದೊಂದು ದೇಶ ಇದೆಯಾ?


ಸ್ವಾಮಿ ನಿತ್ಯಾನಂದ ಅಲಿಯಾಸ್ ನಿತ್ಯಾ ಅಲಿಯಾಸ್ ಬಿಡದಿ ನಿತ್ಯಾ, ತನ್ನ ಕೈಸಾಸಕ್ಕೆ ಭಾರತೀಯರು ಬರೋದು ಬೇಡ ಅಂತ ಬ್ಯಾನ್ ಮಾಡಿದ್ದಾನಂತೆ. ಕಾರಣ ಕೋವಿಡ್ ಸೋಂಕು. ಭಾರತದಲ್ಲೆಲ್ಲ ಕೋವಿಡ್ ಅತಿಯಾಗಿ ಹಬ್ಬುತ್ತಾ ಇದ್ದು, ಅವರು ಇಲ್ಲಿಗೆ ಬಂದು ಇಲ್ಲೆಲ್ಲ ಕೋಇಡ್ ಹಬ್ಬಿಸಬಹುದು ಅಂತ ನಿತ್ಯಾನ ಆತಂಕ. ನಿತ್ಯಾನಂದನ ಆತಂಕವೂ ನ್ಯಾಯವೇ. ಯಾಕೆಂದರೆ ಕೈಲಾಸದಲ್ಲಿ ಕೋವಿಡ್ ಹಬ್ಬಿದರೆ ಅಲ್ಲಿ ಆತನನ್ನಾಗಲೀ ಅವನ ಭಕ್ತರನ್ನಾಗಲೀ ಕಾಯುವವರೇ ಇಲ್ಲ! ಯಾಕೆಂದರೆ ಅಲ್ಲಿ ಸರಿಯಾದ ಆಸ್ಪತ್ರೆಯಾಗಲೀ ಡಾಕ್ಟರ್‌ಗಳಾಗಲೀ ಇದ್ದಂತಿಲ್ಲ!

ಹೀಗಾಗಿ ಸದ್ಯ ನಿತ್ಯಾನಂದನ ಕೈಲಾಸಕ್ಕೆ ಹೀಗುವ ಪ್ಲಾನ್ ಇದ್ದರೆ ಅದನ್ನು ಡ್ರಾಪ್ ಮಾಡಿ. ಬಡಪಾಯಿ ಭಾರತೀಯರು ಮಾತ್ರವಲ್ಲ, ಯುರೋಪಿಯನ್ನರು, ಬ್ರೆಜಿಲ್‌ ಹಾಗೂ ಮಲೇಷಿಯದವರನ್ನೂ ಆತ ಬ್ಯಾನ್ ಮಾಡಿದ್ದಾನೆ.

Latest Videos

undefined

 

KAILASA's
Executive order directly from the for all the embassies of across the globe. pic.twitter.com/I2D0ZvffnO

— KAILASA'S SPH JGM HDH Nithyananda Paramashivam (@SriNithyananda)

 

2019ರಲ್ಲಿ ಈತ ಭಾರತವನ್ನು ಬಿಟ್ಟು ತನ್ನ ಕೆಲವು ಶಿಷ್ಯರ ಜೊತೆಗೆ ಪಲಾಯನ ಮಾಡಿದ. ಇಲ್ಲಿ ನಿತ್ಯಾನ ಮೇಲೆ ರೇಪ್ ಕೇಸು, ವಂಚನೆ ಕೇಸು ಹೀಗೆ ಹತ್ತೆಂಟು ಪ್ರಕರಣಗಳು ಇವೆ. ಈಗ ತನ್ನ ದುಡ್ಡು ಸುರಿದು ಈಕ್ವಡಾರ್ ಬಳಿ ಒಂದು ದ್ವೀಪವನ್ನು ಕೊಂಡುಕೊಂಡಿದ್ದಾನೆ.



ನಿತ್ಯಾನ ತಿಕ್ಕಲು ಹೆಚ್ಚಿದ್ದು ಈ ದ್ವೀಪವನ್ನು ಕೊಂಡುಕೊಂಡ ಬಳಿಕ. ಎಣಿಸಿದರೆ ಐವತ್ತು ಚದರ ಕಿಲೋಮೀಟರ್ ವಿಸ್ತೀರ್ಣ ಕೂಡ ಇಲ್ಲದ ಆ ದ್ವೀಪವನ್ನು ಒಂದು ಪ್ರತ್ಯೇಕ ದೇಶ ಎಂದು ಘೋಷಿಸಿಕೊಂಡಿದ್ದಾನೆ. ಅದಕ್ಕೆ ಅವನಿಟ್ಟ ಹೆಸರು ಕೈಲಾಸ. ಈ ಕೈಲಾಸವನ್ನು ಪ್ರತ್ಯೇಕ ರಾಷ್ಟ್ರವಾಗಿ ಅಂಗೀಕರಿಸಬೇಕು ಎಂದು ವಿಶ್ವಸಂಸ್ಥೆಯ ಮುಂದೆ ಬೇಡಿಕೆ ಇಟ್ಟಿದ್ದಾನಂತೆ. ವಿಶ್ವಸಂಸ್ಥೆ ಎಂದು ಯಾರ ಮುಂದೆ ಏನು ಪುಂಗಿ ಬಿಟ್ಟನೋ ಯಾರಿಗೆ ಗೊತ್ತು. ಯಾರೂ ಈತನಿಗೆ ಈ ದ್ವೀಪದ ಹಕ್ಕುಪತ್ರ ಕೊಟ್ಟ ದಾಖಲೆ ಇಲ್ಲ. ಆದರೂ ಈತ ಈ ದೇಶದ ಮಹಾನ್‌ ಅಧ್ಯಕ್ಷ. ಅದಕ್ಕೇ ಪ್ರತ್ಯೇಕ ಪ್ರಧಾನಿ, ರಾಷ್ಟ್ರಧ್ವಜ, ಲಾಂಛನ, ಕರೆನ್ಸಿ, ಸಂವಿಧಾನ ಎಲ್ಲ ಮಾಡಿಕೊಂಡಿದ್ದಾನೆ. ಅಲ್ಲಿನ ಪ್ರಜೆಗಳಿಗೆ ಪ್ರತ್ಯೇಕ ಪಾಸ್‌ಪೋರ್ಟ್ ಮತ್ತು ಪೌರತ್ವ ಕೂಡ ಇದೆ. ಎಲ್ಲವೂ ನಿತ್ಯಾನ ಆಧ್ಯಾತ್ಮದ ಪುಂಗಿಗೆ ಪೂರಕವಾಗಿರುವಂತಹುದೇ ಆಗಿವೆ. ಬಹುಶಃ ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕಾಮಿಡಿಗೆ ಒಳಗಾದ ಆಧ್ಯಾತ್ಮ ಗುರು ಎಂದರೆ ಈ ನಿತ್ಯಾ.

ಈ ಕೈಲಾಸದ ಬಗ್ಗೆ ಹಲವು ಅನುಮಾನಗಳೂ ಇವೆ. ಈತ ಉಲ್ಲೇಖಿಸುತ್ತಿರುವ ದ್ವೀಪ ಪೆಸಿಫಿಕ್ ಸಮುದ್ರದಲ್ಲಿ ಇದೆ. ಇಲ್ಲಿನ ದಕ್ಷಿಣ ಅಮೆರಿಕದ ಈಕ್ವಡಾರ್ ಎಂಬ ದ್ವೀಪಸಮೂಹಕ್ಕೆ ಇದು ಸೇರಿದ್ದು. ಆದರೆ ಇದು ಟ್ರಿನಿಡಾಡ್ ಮತ್ತು ಟೊಬ್ಯಾಗೋ ಎಂಬ ದೇಶಗಳ ಹತ್ತಿರದಲ್ಲಿ ಇದೆ. ಹೀಗಾಗಿ ಈತ ಈಕ್ವಡಾರ್‌ನಿಂದ ಇದನ್ನು ಖರೀದಿಸಿದ್ದು ಎನ್ನುವುದರಲ್ಲೂ ಅನುಮಾನ ಇದೆ. ಅಷ್ಟು ದೂರದಲ್ಲಿರುವ ದ್ವೀಪವನ್ನು ಈಕ್ವಡಾರ್ ಹೇಗೆ ಮಾರಾಟ ಮಾಡಲು ಸಾಧ್ಯ? ಗೊತ್ತಿಲ್ಲ.



ಹಾಗೇ ನಿತ್ಯಾಗೆ ಹತ್ತಿರದ ಮೂಲಗಳು ಉಲ್ಲೇಖಿಸಿರುವ ಪ್ರಕಾರ ಈ ದ್ವೀಪವನ್ನು ಆತ ಖರೀದಿಸಿದ್ದು ವ್ಲಾಡಿ ಐಲ್ಯಾಂಡ್ಸ್ ಎಂಬ ರಿಯಾಲ್ಟಿ ಏಜೆಂಟ್‌ ವೆಬ್‌ಸೈಟ್‌ನಿಂದ. ಇದೊಂದು ಬೃಹತ್ ರಿಯಾಲ್ಟಿ ವ್ಯವಸ್ಥೆ. ದಕ್ಷಿಣ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ಬಳಿಕ ಇಂಥ ನೂರಾರು ದ್ವೀಪ ಸಮುದಾಯಗಳಿವೆ. ಇವುಗಳ್ನು ಕೋಟ್ಯಂತರ ಡಾಲರ್ ಸುರಿದು ಖರೀದಿಸುವ ಶ್ರೀಮಂತರು ಇದ್ದಾರೆ. ನಿತ್ಯಾನೂ ಹಾಗೇ ಒಂದು ಪುಟ್ಟ ದ್ವೀಪವನ್ನು ಖರೀದಿಸಿದ್ದಾನೆ. ಅಂದರೆ ಅದು ನೀವು ಬೆಂಗಳೂರಿನಲ್ಲಿ ಒಂದು ಥಟ್ರಿ ಬೈ ಫಾರ್ಟಿ ಸೈಟನ್ನು ಖರೀದಿಸಿದಷ್ಟೇ ಸರಳ. ಆ ಜಾಗ ಮಾತ್ರ ನಿಮ್ಮದು ಎಂದಷ್ಟೇ ಅರ್ಥ ಹೊರತು, ಅದು ಪ್ರತ್ಯೇಕ ದೇಶ ಆಗುವುದಿಲ್ಲ. ಹಾಗೇನಾದರೂ ನೀವು ಇದು ನನ್ನದೇ ದೇಶ ಎಂದು ಹೇಳಿಕೊಂಡು ಹೋದರೆ ಏನಾಗುತ್ತದೆ? ಪೊಲೀಸರು ಒದ್ದು ಒಳಗೆ ಹಾಕುತ್ತಾರೆ. ನಿತ್ಯಾ ಕೂಡ ಇಂಥ ತಿಕ್ಕಲು ತರಲೆಗಳನ್ನು ಹೆಚ್ಚು ಮಾಡುತ್ತ ಹೋದರೆ ಅಲ್ಲಿನ ಪೊಲೀಸ್ ವ್ಯವಸ್ಥೆ ಆತನನ್ನು ಒಳಗೆ ಹಾಕಿ ಬೆಂಡೆತ್ತುವದರಲ್ಲಿ ಸಂಶಯವೇ ಇಲ್ಲ. ಅಲ್ಲಿಯವರೆಗೂ ನಿತ್ಯಾನ ಆಟ ಸಾಗಲಿದೆ. ಅಥವಾ ಯಾವುದಾದರೂ ಇಲ್ಲೇ ಹತ್ತಿರದ ರೆಸಾರ್ಟ್‌ನಲ್ಲಿ ಕುಳಿತೇ ಈ ಪ್ರತ್ಯೇಕ ರಾಷ್ಟ್ರದ ಬೊಗಳೆ ಬಿಡುತ್ತಿದ್ದಾನಾ ಎಂಬ ಅನುಮಾನಗಳೂ ಇಲ್ಲದೇ ಇಲ್ಲ.



 

click me!