ಮೈಸೂರು ಚಿತ್ರನಗರಿಗೆ ತಿಂಗಳಲ್ಲಿ ಶಂಕು

Kannadaprabha News   | Asianet News
Published : Mar 25, 2021, 07:46 AM IST
ಮೈಸೂರು ಚಿತ್ರನಗರಿಗೆ ತಿಂಗಳಲ್ಲಿ ಶಂಕು

ಸಾರಾಂಶ

ಶೀಘ್ರದಲ್ಲೇ ಮೈಸೂರು ಚಿತ್ರ ನಗರಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗುತ್ತದೆ. ಇದಕ್ಕೆ 110 ಎಕರೆ ಜಾಗವನ್ನು ಮೀಸಲಿಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. 

ಬೆಂಗಳೂರು (ಮಾ.25):  ಇನ್ನೊಂದು ತಿಂಗಳ ಒಳಗೆ ಭೂಮಿ ಪೂಜೆ ಮಾಡುವ ಮೂಲಕ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ವಾರ್ತಾ ಸಚಿವ ಸಿ.ಸಿ. ಪಾಟೀಲ್‌ ಭರವಸೆ ನೀಡಿದ್ದಾರೆ.

ಬುಧವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿ ಚಿತ್ರರಂಗದಿಂದ ಸನ್ಮಾನ ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಕನ್ನಡ ಚಿತ್ರರಂಗಕ್ಕೆ ಚಿತ್ರನಗರಿ ಬಹು ದೊಡ್ಡ ಕನಸು. ಡಾ. ರಾಜ್‌ಕುಮಾರ್‌ ಕಾಲದಿಂದಲೂ ಚಿತ್ರನಗರಿ ನಿರ್ಮಾಣದ ಬೇಡಿಕೆ ಕೇಳಿಬರುತ್ತಲೇ ಇದೆ. ಚಿತ್ರೋದ್ಯಮಕ್ಕೆ ಅಗತ್ಯವಾಗಿ ಬೇಕಾಗಿರುವ ಯೋಜನೆ ಇದು ಎಂಬುದನ್ನು ನಮ್ಮ ಸರ್ಕಾರ ಮನಗಂಡಿದೆ. ಹೀಗಾಗಿ ಮೈಸೂರಿನ ಇಮ್ಮಾವು ಬಳಿ 110 ಎಕರೆ ಜಾಗವನ್ನು ಈಗಾಗಲೇ ಮೀಸಲಿಟ್ಟಿದ್ದೇವೆ. ಇದೇ ಜಾಗದಲ್ಲಿ ಒಂದು ತಿಂಗಳೊಳಗೆ ಭೂಮಿ ಪೂಜೆ ಮಾಡುವ ಮೂಲಕ ಚಿತ್ರನಗರಿ ನಿರ್ಮಾಣಕ್ಕೆ ಚಾಲನೆ ನೀಡುತ್ತೇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ಮಾಡಲಿದ್ದೇನೆ’ ಎಂದು ತಿಳಿಸಿದರು.

‘ಚಿತ್ರಮಂದಿರಗಳಲ್ಲಿ ಶೇ.50ರಷ್ಟುಸೀಟುಗಳಿಗೆ ಮಿತಿ ಹೇರುವ ನಿರ್ಧಾರ ಸರ್ಕಾರದ ಮುಂದೆ ಇಲ್ಲ. ಚಿತ್ರಮಂದಿರಗಳ ಹೌಸ್‌ಫುಲ್‌ಗೆ ಬ್ರೇಕ್‌ ಹಾಕುವ ಚಿಂತನೆಯನ್ನು ನಾವು ಮಾಡಿಲ್ಲ. ಆದರೆ, ಶೇ.50ರಷ್ಟುಮಾತ್ರ ಸೀಟು ಭರ್ತಿಗೆ ಅವಕಾಶ ಕಲ್ಪಿಸಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳಬಾರದು. ಆ ನಿಟ್ಟಿನಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು’ ಎಂದು ಇದೇ ಸಂದರ್ಭದಲ್ಲಿ ಚಿತ್ರಮಂದಿರಗಳ ಮಾಲೀಕರಲ್ಲಿ ಮನವಿ ಮಾಡಿಕೊಂಡರು.

ಫಿಲಂ ಸಿಟಿ ಕೊನೆಗೂ ಮೈಸೂರಿಗೆ ಎತ್ತಂಗಡಿ

‘ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಕೇಳಿ, ಬೇಡಿಕೆಗಳಿಗೆ ಸ್ಪಂದಿಸುವುದಕ್ಕಾಗಿಯೇ ನಾನು ನಿಯೋಗದ ಜತೆಗೆ ವಾಣಿಜ್ಯ ಮಂಡಳಿಗೆ ಆಗಮಿಸಿದ್ದೇನೆ. ನಿರ್ಮಾಪಕರು, ಚಿತ್ರಮಂದಿರದ ಮಾಲೀಕರ ಬೇಡಿಕೆಗಳು, ಪೈರಸಿ ಹಾವಳಿ, ಐದಾರು ಭಾಷೆಗಳ ನಡುವೆ ಮಾರುಕಟ್ಟೆಸಮಸ್ಯೆಯನ್ನು ಎದುರಿಸುತ್ತಿರುವ ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡಿದ್ದೇನೆ. ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟಇಲಾಖೆ ಅಧಿಕಾರಿಗಳ ಜತೆ ಮಾತುಕತೆ ಮಾಡಿ ಆದಷ್ಟುಬೇಗ ಚಿತ್ರರಂಗದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

‘ಸರ್ಕಾರಕ್ಕೂ ಲಾಕ್‌ಡೌನ್‌ ಹಾಗೂ ಕೊರೋನಾ ಬಿಸಿ ತಟ್ಟಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಕೂಡ ದುಂದು ವೆಚ್ಚ ಮಾಡುವುದಕ್ಕೆ ತಯಾರಿಲ್ಲ. ಹೀಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ದುಂದು ವೆಚ್ಚ ಮಾಡಲ್ಲ. ಚಿತ್ರೋತ್ಸವಕ್ಕೆ ಎಷ್ಟುಅಗತ್ಯವೋ ಅಷ್ಟುಮಾತ್ರ ಸರ್ಕಾರ ಹಣ ನೀಡಲಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆಯಲು ಬಿಡಲ್ಲ’ ಎಂದು ಮಾಧ್ಯಮಗಳ ಪ್ರಶ್ನೆಗೆ ಸಿ.ಸಿ. ಪಾಟೀಲ್‌ ಅವರು ಉತ್ತರಿಸಿದರು.

ವಾರ್ತಾ ಮತ್ತು ಪ್ರಸಾರ ಇಲಾಖೆಯ ಆಯುಕ್ತ ಹರ್ಷಗುಪ್ತಾ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌, ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ಕಾರ್ಯದರ್ಶಿ ಎನ್‌.ಎಂ. ಸುರೇಶ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌, ಪ್ರಮುಖರಾದ ಕೆ. ಮಂಜು, ಬಾ.ಮಾ. ಹರೀಶ್‌, ನರಸಿಂಹಲು, ಜಯಣ್ಣ, ಕೆ.ಸಿ.ಎನ್‌. ಚಂದ್ರಶೇಖರ್‌, ಚಿನ್ನೇಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಿತ್ರನಗರಿಗೆ ಮೈಸೂರು ಒಡೆಯರ ಹೆಸರಿಡಿ: ಸಾ.ರಾ. ಗೋವಿಂದು

ಮೈಸೂರಿನಲ್ಲಿ ನಿರ್ಮಾಣ ಆಗಲಿರುವ ಚಿತ್ರನಗರಿಗೆ ಮೈಸೂರು ಮಹಾರಾಜರ ಹೆಸರು ಇಡಿ. ಒಡೆಯರ ಚಿತ್ರನಗರಿ ಎನ್ನುವ ಹೆಸರನ್ನು ನಾಮಕರಣ ಮಾಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಸಚಿವ ಸಿ.ಸಿ. ಪಾಟೀಲ್‌ ಅವರಲ್ಲಿ ಮನವಿ ಮಾಡಿದರು.

ಆ ಕಾಲದಿಂದಲೂ ಕಲಾವಿದರಿಗೆ ಬೆನ್ನೆಲುಬಾಗಿ ನಿಂತು ಕಲೆಯನ್ನು ಪ್ರೋತ್ಸಾಹಿಸುತ್ತ ಬಂದವರು ಮೈಸೂರು ರಾಜರು. ಹೀಗಾಗಿ ಚಿತ್ರನಗರಿಗೆ ಅವರ ಹೆಸರು ಇಟ್ಟರೆ ಅರ್ಥಪೂರ್ಣವಾಗಿರುತ್ತದೆ ಎಂದು ಗೋವಿಂದು ಅಭಿಪ್ರಾಯಪಟ್ಟರು. ಅವರ ಮನವಿಗೆ ಸ್ಪಂದಿಸಿದ ಸಚಿವ ಸಿ.ಸಿ. ಪಾಟೀಲ್‌ ಅವರು, ‘ಚಿತ್ರನಗರಿ ನಿರ್ಮಾಣದ ಕಡತಕ್ಕೆ ಒಂದು ಸಲ ಅನುಮತಿ ಸಿಕ್ಕಿ ಭೂಮಿ ಪೂಜೆ ಆದ ನಂತರ ತಮ್ಮ ಮನವಿಯನ್ನು ಪರಿಶೀಲನೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?