
OTP ನೀಡಿಲ್ಲ, ಲಿಂಕ್ ಕ್ಲಿಕ್ ಮಾಡಿಲ್ಲ; ಆದ್ರೂ ನಟಿಯ ಅಕೌಂಟ್‌ನಿಂದ ಲಕ್ಷ ಲಕ್ಷ ಮಾಯ! ಸೈಬರ್ ಕಳ್ಳರ ಈ 'ಖತರ್ನಾಕ್' ಪ್ಲಾನ್ ಬೆಚ್ಚಿಬೀಳಿಸುವಂತಿದೆ!
ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಾವೆಲ್ಲರೂ ನಮ್ಮ ಹಣ ಸೇಫ್ ಆಗಿದೆ ಅಂದುಕೊಳ್ಳುತ್ತೇವೆ. ಆದರೆ, ಹ್ಯಾಕರ್ಸ್‌ಗಳು ಸಾಮಾನ್ಯ ಜನರನ್ನು ಬಿಡಿ, ಸ್ವತಃ ಸೆಲೆಬ್ರಿಟಿಗಳನ್ನೇ ಬೆನ್ನತ್ತಿ ಶಾಕ್ ನೀಡುತ್ತಿದ್ದಾರೆ. 'ಪಿಂಕ್' (Pink) ಮತ್ತು 'ಉರಿ' (Uri) ಸಿನಿಮಾಗಳ ಮೂಲಕ ಕಮಾಲ್ ಮಾಡಿದ್ದ ಖ್ಯಾತ ಬಾಲಿವುಡ್ ನಟಿ ಕೀರ್ತಿ ಕುಲ್ಹಾರಿ (Kirti Kulhari) ಅವರ ಬ್ಯಾಂಕ್ ಅಕೌಂಟ್‌ಗೆ ಕನ್ನ ಹಾಕಿರುವ ಖತರ್ನಾಕ್ ಕಳ್ಳರು, ಯಾವ ಸಿನಿಮಾ ಸೀನ್‌ಗೂ ಕಮ್ಮಿ ಇಲ್ಲದಂತೆ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾರೆ!
ಕಳೆದ ಜುಲೈ 24ರ ರಾತ್ರಿ, ಮುಂಬೈನ ಅಂಧೇರಿಯಲ್ಲಿರುವ ಮಲ್ಟಿಪ್ಲೆಕ್ಸ್‌ವೊಂದರಲ್ಲಿ ಕೀರ್ತಿ ಕುಲ್ಹಾರಿ ಅವರು ಆರಾಮವಾಗಿ ಸಿನಿಮಾ ವೀಕ್ಷಿಸುತ್ತಿದ್ದರು. ಆದರೆ, ತೆರೆಯ ಮೇಲೆ ಸಿನಿಮಾ ಓಡುತ್ತಿದ್ದರೆ, ಅವರ ಮೊಬೈಲ್‌ಗೆ ಬ್ಯಾಂಕ್‌ನಿಂದ ಲಟಾ ಲಟಾ ಅಂತ ಮೆಸೇಜ್‌ಗಳು ಬರತೊಡಗಿದವು. ಅವರು ಯಾವುದೇ ಶಾಪಿಂಗ್ ಮಾಡಿರಲಿಲ್ಲ, ಯಾರಿಗೂ ಹಣ ಕಳುಹಿಸಿರಲಿಲ್ಲ. ಆದರೆ, ಮೆಕ್ಸಿಕೋದ 'ಏರೋಮೆಕ್ಸಿಕೊ' ಹೆಸರಿನಲ್ಲಿ ವಿದೇಶಿ ವಿಮಾನಯಾನ ಸಂಸ್ಥೆಗೆ ಲಕ್ಷಾಂತರ ರೂಪಾಯಿ ಪಾವತಿಯಾಗುತ್ತಿದೆ ಎಂಬ ನೋಟಿಫಿಕೇಶನ್ ನೋಡಿ ನಟಿ ಕಂಗಾಲಾದರು.
ಅರೆಕ್ಷಣದಲ್ಲಿ ಮಾಯವಾಯಿತು 2.43 ಲಕ್ಷ ರೂಪಾಯಿ!
ಕೇವಲ ಕೆಲವೇ ನಿಮಿಷಗಳಲ್ಲಿ ವಂಚಕರು ನಟಿಯ ಕ್ರೆಡಿಟ್ ಕಾರ್ಡ್‌ನಿಂದ ಬರೋಬ್ಬರಿ 2.11 ಲಕ್ಷ ರೂಪಾಯಿಯನ್ನು ಎಗರಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಹ್ಯಾಕರ್ಸ್ ಮತ್ತೆ ನಾಲ್ಕು ಬಾರಿ ಹಣ ಕದಿಯಲು ಯತ್ನಿಸಿದರು. ತಕ್ಷಣವೇ ಬ್ಯಾಂಕ್‌ನಿಂದ ಕರೆ ಬಂದಾಗ ಎಚ್ಚೆತ್ತ ಕೀರ್ತಿ, ಅಕೌಂಟ್‌ನಲ್ಲಿ ಏನೋ ದೊಡ್ಡ ವಂಚನೆ ನಡೆಯುತ್ತಿದೆ ಎಂದು ಅರಿತು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದರು. ಅಷ್ಟರಲ್ಲಾಗಲೇ 2.43 ಲಕ್ಷ ರೂಪಾಯಿ ಅವರ ಕೈಬಿಟ್ಟು ಹೋಗಿತ್ತು. ಕೂಡಲೇ ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೌಡಾಯಿಸಿ ಸೈಬರ್ ಕ್ರೈಮ್ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಸಾಮಾನ್ಯವಾಗಿ ನಾವು ಯಾರೊಂದಿಗೂ OTP (One Time Password) ಹಂಚಿಕೊಳ್ಳದಿದ್ದರೆ ಹಣ ಸುರಕ್ಷಿತವಾಗಿರುತ್ತದೆ ಎಂದು ನಂಬುತ್ತೇವೆ. ಆದರೆ ಕೀರ್ತಿ ಕುಲ್ಹಾರಿ ಅವರ ಪ್ರಕರಣ ಸೈಬರ್ ತಜ್ಞರನ್ನೂ ಚಿಂತೆಗೀಡು ಮಾಡಿದೆ. ನಟಿ ಪೊಲೀಸರಿಗೆ ನೀಡಿದ ಹೇಳಿಕೆಯಂತೆ, ಅವರು ಯಾರೊಂದಿಗೂ OTP ಹೇಳಿಲ್ಲ, ಕಾರ್ಡ್ ಪಿನ್ ಹಂಚಿಕೊಂಡಿಲ್ಲ ಅಥವಾ ಯಾವುದೇ ಅನುಮಾನಾಸ್ಪದ ಲಿಂಕ್ ಮೇಲೆ ಕ್ಲಿಕ್ ಮಾಡಿಲ್ಲ.
ಸೈಬರ್ ಪೊಲೀಸರ ಪ್ರಕಾರ, ಇದು 'ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್' ಲೂಪ್‌ಹೋಲ್! ಹೌದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣ ಪಾವತಿ ಮಾಡುವಾಗ ಭಾರತದಂತೆ OTP ಕೇಳುವುದಿಲ್ಲ. ಕೇವಲ ಕಾರ್ಡ್ ನಂಬರ್ ಮತ್ತು CVV ಇದ್ದರೆ ಸಾಕು, ಜಗತ್ತಿನ ಯಾವುದೇ ಮೂಲೆಯಿಂದ ಹಣ ವರ್ಗಾಯಿಸಬಹುದು. ವಂಚಕರು 'ಡಾರ್ಕ್ ವೆಬ್' ಮೂಲಕ ನಟಿಯ ಕಾರ್ಡ್ ವಿವರಗಳನ್ನು ಖರೀದಿಸಿರಬಹುದು ಅಥವಾ ಅವರ ಮೊಬೈಲ್‌ಗೆ ಗುಟ್ಟಾಗಿ 'ಸ್ಪೈವೇರ್' ಕಳುಹಿಸಿ ಮಾಹಿತಿ ಕದ್ದಿರಬಹುದು ಎಂದು ಶಂಕಿಸಲಾಗಿದೆ.
ಸೈಬರ್ ತಜ್ಞರ ಎಚ್ಚರಿಕೆ: ನೀವು ಸೇಫ್ ಆಗಿರಬೇಕೆ?
ಈ ಘಟನೆಯಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠವಿದೆ. ಫ್ರೀ ಸಿಗುತ್ತದೆ ಎಂದು ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಅಥವಾ ಕೆಫೆಗಳಲ್ಲಿ 'ಪಬ್ಲಿಕ್ ವೈ-ಫೈ' (Public Wi-Fi) ಬಳಸಿ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಆಫ್ ಮಾಡಿ ಇಡಿ ಅಥವಾ ಕಡಿಮೆ ಮಾಡಿಡಿ. ಕೆವೈಸಿ ಅಪ್‌ಡೇಟ್ ಅಥವಾ ಉಚಿತ ಉಡುಗೊರೆಯ ಹೆಸರಿನಲ್ಲಿ ಬರುವ ಲಿಂಕ್‌ಗಳಿಂದ ದೂರವಿರಿ.
ಒಟ್ಟಿನಲ್ಲಿ, ಕೀರ್ತಿ ಕುಲ್ಹಾರಿ ಸಮಯಪ್ರಜ್ಞೆಯಿಂದ ದೊಡ್ಡ ಮಟ್ಟದ ಹಣ ಉಳಿದಿದ್ದರೂ, ಸೈಬರ್ ಕಳ್ಳರ ಈ ಹೊಸ ಅವತಾರ ಮಾತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.