
Sanjay Gupta Death: ಮನೆಯೊಳಗೇ ಬಿದ್ದು ಬಾಲಿವುಡ್ ನಟ-ನಿರ್ದೇಶಕ ಸಂಜಯ್ ಗುಪ್ತಾ ನಿಧನ; ತಡರಾತ್ರಿ ಆಗಿದ್ದೇನು?
ಬಾಲಿವುಡ್ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಸಂಜಯ್ ಗುಪ್ತಾ (Sanjay Gupta) ಅವರು ತಮ್ಮ ನಿವಾಸದಲ್ಲೇ ಆಕಸ್ಮಿಕವಾಗಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದಾರೆ. 59 ವರ್ಷದ ಸಂಜಯ್ ಗುಪ್ತಾ ಅವರು ಶನಿವಾರ ಬೆಳಗ್ಗೆ ಮುಂಬೈನ ವರ್ಸೋವಾದಲ್ಲಿರುವ ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶುಕ್ರವಾರ ತಡರಾತ್ರಿ ಮನೆಯಲ್ಲಿ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಾಹಿತಿಯ ಪ್ರಕಾರ, ಸಂಜಯ್ ಗುಪ್ತಾ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಬೆಳಗ್ಗೆ ಎದ್ದಾಗ ಅವರು ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಪರೀಕ್ಷಿಸಿದ ಬಳಿಕ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಆಪ್ತರು ಮತ್ತು ಅಭಿಮಾನಿಗಳಲ್ಲಿ ಆಘಾತ ಮೂಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ವರ್ಸೋವಾ ಪೊಲೀಸರು ಆಕಸ್ಮಿಕ ಸಾವಿನ ವರದಿ (ADR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸಂಜಯ್ ಗುಪ್ತಾ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ಸಂಜಯ್ ಗುಪ್ತಾ ಅವರು ಮನೆಯ ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದರು. ಬಳಿಕ ಅಡುಗೆ ಮನೆಗೆ ತೆರಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಮತೋಲನ ತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯವಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕುಟುಂಬದ ಸದಸ್ಯರು ಪೊಲೀಸರೊಂದಿಗೆ ಮಾತನಾಡಿದ್ದು, ಈ ಸಾವಿನ ಹಿಂದೆ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಘಟನೆಯ ಸಂಪೂರ್ಣ ವಿವರಗಳನ್ನು ಖಚಿತಪಡಿಸಿಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.
ಸಂಜಯ್ ಗುಪ್ತಾ ಎಂದರೆ ಬಾಲಿವುಡ್‌ನಲ್ಲಿ ಕ್ರೈಮ್ ಥ್ರಿಲ್ಲರ್ ಸಿನಿಮಾಗಳ ಮೂಲಕವೇ ವಿಶೇಷ ಗುರುತು ಮೂಡಿಸಿದ್ದ ಹೆಸರು. ಅಮಿತಾಭ್ ಬಚ್ಚನ್, ಸಂಜಯ್ ದತ್ ಮತ್ತು ಸುನೀಲ್ ಶೆಟ್ಟಿ ಅಭಿನಯದ 'ಕಾಂಟೆ' (Kaante), ಜಾನ್ ಅಬ್ರಹಾಂ ಹಾಗೂ ಸಂಜಯ್ ದತ್ ನಟನೆಯ 'ಜಿಂದಾ' (Zinda) ಸೇರಿದಂತೆ ಹಲವು ಗಮನಾರ್ಹ ಸಿನಿಮಾಗಳ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇಷ್ಟೇ ಅಲ್ಲದೆ, 'ಶೂಟೌಟ್ ಅಟ್ ಲೋಖಂಡ್‌ವಾಲಾ' (Shootout at Lokhandwala) ಚಿತ್ರದ ಮೂಲಕವೂ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಅಭಿನಯದ 2017ರಲ್ಲಿ ಬಿಡುಗಡೆಯಾದ 'ಕಾಬಿಲ್' (Kaabil) ಅವರ ವೃತ್ತಿಜೀವನದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿತ್ತು. ಇತ್ತೀಚೆಗೆ 2025ರಲ್ಲಿ ಬಿಡುಗಡೆಯಾದ 'ದಿ ಮಿರಾಂಡಾ ಬ್ರದರ್ಸ್' (The Miranda Brothers) ಚಿತ್ರಕ್ಕೂ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ಈ ಚಿತ್ರದಲ್ಲಿ ಹರ್ಷವರ್ಧನ್ ರಾಣೆ ಹಾಗೂ ಮೀಜಾನ್ ಜಾಫ್ರಿ ನಟಿಸಿದ್ದರು.
ಸಿನಿಮಾ ಲೋಕದಲ್ಲಿ ತಮ್ಮದೇ ಆದ ಶೈಲಿಯ ಮೂಲಕ ಗುರುತಿಸಿಕೊಂಡಿದ್ದ ಸಂಜಯ್ ಗುಪ್ತಾ ಅವರ ಅಕಾಲಿಕ ನಿಧನ ಬಾಲಿವುಡ್‌ಗೆ ತುಂಬಲಾರದ ನಷ್ಟವಾಗಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.