
ಬೆಂಗಳೂರು ಗ್ರಾಮಾಂತರ (ಮಾ.19): ಕನ್ನಡ ಚಿತ್ರರಂಗದಲ್ಲಿ ಕೆಲವೇ ಸಿನಿಮಾ ಮಾಡಿದರೂ ತನ್ನದೇ ಆದ ಛಾಪು ಮೂಡಿಸಿರುವ ನಟ ವಿನೋದ್ ರಾಜ್ ಕೇವಲ ತೆರೆಯ ಮೇಲಷ್ಟೇ ಅಲ್ಲದೆ, ನೈಜ ಜೀವನದಲ್ಲೂ ತಮ್ಮ ತಾಯಿ ಹಿರಿಯ ನಟಿ ಡಾ. ಲೀಲಾವತಿ ಅವರ ಆಶಯದಂತೆ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸುತ್ತಿದ್ದಾರೆ. ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂಭ್ರಮದ ನಡುವೆ, ಹಸಿದವರಿಗೆ ಅನ್ನದಾನ ಮಾಡುವ ಮೂಲಕ ನೆಲಮಂಗಲದಲ್ಲಿ ವಿನೋದ್ ರಾಜ್ ಮಾನವೀಯತೆ ಮೆರೆದಿದ್ದಾರೆ.
ಸ್ಯಾಂಡಲ್‌ವುಡ್‌ನ ಹಿರಿಯ ಜೀವ, ದಿವಂಗತ ಡಾ. ಲೀಲಾವತಿ ಅವರು ಬದುಕಿದ್ದಾಗ ಹಬ್ಬ ಹರಿದಿನಗಳಲ್ಲಿ ಬಡವರಿಗೆ ದಾನ ಮಾಡುವುದನ್ನು ಒಂದು ವ್ರತದಂತೆ ಪಾಲಿಸುತ್ತಿದ್ದರು. ತಾಯಿ ಅಗಲಿದ ನಂತರವೂ ಅವರ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ವಿನೋದ್ ರಾಜ್, ಈ ಬಾರಿ ಯುಗಾದಿ ಹಾಗೂ ರಂಜಾನ್ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸುತ್ತಮುತ್ತಲಿನ ಹಳ್ಳಿಗಳ ಬಡ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ದೈನಂದಿನ ಅವಶ್ಯಕ ವಸ್ತುಗಳನ್ನೊಳಗೊಂಡ ಈ ಕಿಟ್ ಹಬ್ಬದ ಸಂಭ್ರಮವನ್ನು ಬಡವರ ಮನೆಗೂ ತಲುಪಿಸಿದೆ.
ರಂಜಾನ್ ಹಬ್ಬದ ಪ್ರಯುಕ್ತ ನೆಲಮಂಗಲ ಪಟ್ಟಣದ ಪ್ರಮುಖ ಮಸೀದಿಗೆ ಭೇಟಿ ನೀಡಿದ ವಿನೋದ್ ರಾಜ್, ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಬಾಂಧವರೊಂದಿಗೆ ಬೆರೆತು ಹಬ್ಬದ ಶುಭಾಶಯ ಕೋರಿದ ಅವರು, ಸೌಹಾರ್ದತೆಯ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಅವರಿಗೆ ಸ್ಥಳೀಯ ಮುಸ್ಲಿಂ ಮುಖಂಡರು ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಸ್ವಾಗತ ಕೋರಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ನಟ ವಿನೋದ್ ರಾಜ್, 'ಭಾರತ ಒಂದು ಜಾತ್ಯತೀತ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮದವರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು. ಜಾತಿ-ಧರ್ಮಗಳಿಗಿಂತ ಮನುಷ್ಯತ್ವ ದೊಡ್ಡದು. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಇರಬೇಕು ಎಂಬುದು ನನ್ನ ಆಶಯ. ಪ್ರತಿ ವರ್ಷ ನಮ್ಮ ತಾಯಿಯವರು ಹಬ್ಬಗಳ ಸಂದರ್ಭದಲ್ಲಿ ದಾನ-ಧರ್ಮ ಮಾಡುತ್ತಿದ್ದರು. ಬಡವರ ಹೊಟ್ಟೆ ತುಂಬಿಸುವುದು ಅವರಿಗೆ ಅತೀವ ಸಂತೋಷ ನೀಡುತ್ತಿತ್ತು. ಅವರು ಹಾಕಿಕೊಟ್ಟ ಈ ಹಾದಿಯಲ್ಲಿ ನಡೆಯುವುದು ನನ್ನ ಕರ್ತವ್ಯ. ಅವರ ಆಶೀರ್ವಾದದಂತೆ ಈ ಕಿಟ್ ವಿತರಣೆ ಮಾಡುತ್ತಿದ್ದೇನೆ' ಎಂದು ಭಾವುಕರಾಗಿ ನುಡಿದರು.
ನೆಲಮಂಗಲದ ಸುತ್ತಮುತ್ತಲಿನ ಗ್ರಾಮಸ್ಥರು ವಿನೋದ್ ರಾಜ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಲೀಲಾವತಿ ಅಮ್ಮನವರು ನಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಈಗ ಅವರ ಮಗ ವಿನೋದ್ ರಾಜ್ ಅವರು ಕೂಡ ಅದೇ ಪ್ರೀತಿಯನ್ನು ನಮಗೆ ನೀಡುತ್ತಿದ್ದಾರೆ' ಎಂದು ಫಲಾನುಭವಿಗಳು ಕೃತಜ್ಞತೆ ಸಲ್ಲಿಸಿದರು. ಕೇವಲ ಪ್ರಚಾರಕ್ಕಾಗಿ ಸೀಮಿತವಾಗದೆ, ಹಳ್ಳಿಗಳ ಮೂಲೆಯಲ್ಲಿರುವ ಅರ್ಹ ಬಡವರನ್ನು ಗುರುತಿಸಿ ಅವರಿಗೆ ನೆರವಾಗುತ್ತಿರುವ ವಿನೋದ್ ರಾಜ್ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.