
ಬೆಂಗಳೂರು: ನಗರದ ಕೆಂಗೇರಿ ಪ್ರದೇಶದಲ್ಲಿರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಿರ್ಮಿಸಲಾದ ಕನ್ನಡದ ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿ ಧ್ವಂಸ ಮಾಡಿರುವುದು ಅವರ ಅಭಿಮಾನಿಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅಭಿಮಾನ್ ಸ್ಟುಡಿಯೊ ಅರಣ್ಯ ಜಮೀನು ರದ್ದು ಪಡಿಸಲು ಸರ್ಕಾರ ಸೂಚನೆ ನೀಡಿದೆ. ಷರತ್ತಿನ ಉಲ್ಲಂಘನೆಯಾಗಿರೋದ್ರಿಂದ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸರ್ಕಾರ ಸೂಚನೆ ನೀಡಿದೆ.
ಅಭಿಮಾನ್ ಸ್ಟುಡಿಯೋಗೆ ನೀಡಲಾಗಿದ್ದ ಭೂಮಿ ಅರಣ್ಯ ಇಲಾಖೆಯ ಅಧೀನಕ್ಕೆ ಸೇರಿರುವ ಜಮೀನು ಎಂಬುದು ಈಗಾಗಲೇ ದಾಖಲೆಗಳಿಂದ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಷರತ್ತುಗಳ ಉಲ್ಲಂಘನೆ ನಡೆದಿದೆ ಎಂಬ ಕಾರಣಕ್ಕೆ, ಅಭಿಮಾನ್ ಸ್ಟುಡಿಯೋಗೆ ನೀಡಿದ ಭೂಮಿಯನ್ನು ರದ್ದುಗೊಳಿಸಿ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ವಿಶೇಷವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಈ ಜಮೀನನ್ನು ಕಡ್ಡಾಯವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿಸಬೇಕಾಗಿದೆ.
ಆದರೆ, ಈ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ಸಾಗದೆ ಇರುವುದರಿಂದ, ಕಂದಾಯ ಇಲಾಖೆ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಅರಣ್ಯ ಇಲಾಖೆಗೆ ಜಾಗ ಹಸ್ತಾಂತರಿಸುವ ವಿಷಯದಲ್ಲಿ ಕಂದಾಯ ಇಲಾಖೆ ಮೀನಾಮೇಷ ಎಣಿಸುತ್ತಿದೆ ಎಂದು ವಿಷ್ಣು ಸೇನೆ ಬಹಿರಂಗವಾಗಿ ಆರೋಪಿಸಿದೆ.
ಈ ಸಂಬಂಧ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿಯೇ ಕಂದಾಯ ಇಲಾಖೆಯ ಪ್ರಧಾನ ಕಾರ‍್ಯದರ್ಶಿಗಳಿಗೆ ಬೆಂಗಳೂರು ಜಿಲ್ಲಾಧಿಕಾರಿ ಅವರು ಅಭಿಮಾನ್ ಸ್ಟುಡಿಯೋಗೆ ನೀಡಿರುವ ಜಮೀನು ರದ್ದುಪಡಿಸಲು ಕ್ರಮ ಕೈಗೊಳ್ಳಲು ಸೂಕ್ತ ನಿರ್ದೇಶನಕ್ಕಾಗಿ ಪತ್ರ ಬರೆದಿದ್ದರು. ಆದರೆ, ಇಷ್ಟು ಸಮಯ ಕಳೆದರೂ ಕಂದಾಯ ಇಲಾಖೆಯಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಆಗಲಿ, ಯಾವುದೇ ಆದೇಶವಾಗಲಿ ಹೊರಬಂದಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇಲಾಖೆಯ ಈ ಮೌನ ಧೋರಣೆಯ ವಿರುದ್ಧ ವಿಷ್ಣು ಅಭಿಮಾನಿಗಳು ಸಿಡಿದೆದ್ದು, ಸರ್ಕಾರದ ಆದೇಶಗಳನ್ನು ಜಾರಿಗೆ ತರುವಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರದ ವಶಕ್ಕೆ ಈ ಜಮೀನು ಬಂದಲ್ಲಿ, ಅಲ್ಲಿ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ, ಅದನ್ನು ಸ್ಮಾರಕವಾಗಿ ರೂಪಿಸುವ ಕನಸು ಅಭಿಮಾನಿಗಳಲ್ಲಿ ಇನ್ನೂ ಜೀವಂತವಾಗಿದೆ.
ಆದರೆ, ಕಂದಾಯ ಇಲಾಖೆ ಸೈಲೆಂಟ್ ಆಗಿರುವುದರಿಂದ ಈ ಕನಸು ಇನ್ನೂ ಸಾಕಾರವಾಗದಂತಾಗಿದೆ. “ನ್ಯಾಯಾಲಯದ ತೀರ್ಪು, ಸರ್ಕಾರದ ಆದೇಶ ಮತ್ತು ಜಿಲ್ಲಾಧಿಕಾರಿಗಳ ಪತ್ರ ಎಲ್ಲವೂ ಇದ್ದರೂ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ” ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ಮಧ್ಯಪ್ರವೇಶಿಸಿ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ನಡುವೆ ಸಂಯೋಜನೆ ಸಾಧಿಸಿ, ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂಬುದು ಅಭಿಮಾನಿಗಳ ಒತ್ತಾಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.