ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ

Kannadaprabha News   | Kannada Prabha
Published : Mar 19, 2026, 07:31 AM IST
KD Prem

ಸಾರಾಂಶ

ತೀವ್ರ ವಿವಾದ ಸೃಷ್ಟಿಸಿರುವ ಕನ್ನಡದ ‘ಕೆಡಿ’ ಚಿತ್ರ ‘ಸರ್‌ಸೆ ಸೆರಗು ಸರ್‌ಸೆ’ ಹಾಗೂ ಅದರ ಹಿಂದಿ ಅವತರಣಿಗೆ ‘ಸರ್ಕೆ ಚುನರ್‌ ತೇರಿ ಸರ್ಕೆ’ ಗದ್ದಲ ಇದೀಗ ಸಂಸತ್ತಿನ ಮೆಟ್ಟಿಲೇರಿದ್ದು, ಅಲ್ಲೂ ಹಾಡಿನ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

  ನವದೆಹಲಿ :  ತೀವ್ರ ವಿವಾದ ಸೃಷ್ಟಿಸಿರುವ ಕನ್ನಡದ ‘ಕೆಡಿ’ ಚಿತ್ರ ‘ಸರ್‌ಸೆ ಸೆರಗು ಸರ್‌ಸೆ’ ಹಾಗೂ ಅದರ ಹಿಂದಿ ಅವತರಣಿಗೆ ‘ಸರ್ಕೆ ಚುನರ್‌ ತೇರಿ ಸರ್ಕೆ’ ಗದ್ದಲ ಇದೀಗ ಸಂಸತ್ತಿನ ಮೆಟ್ಟಿಲೇರಿದ್ದು, ಅಲ್ಲೂ ಹಾಡಿನ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ‘ಇಂಥ ಅಶ್ಲೀಲ ಸಾಹಿತ್ಯ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ’ ಎಂದು ಸಂಸದರು ಕಿಡಿಕಾರಿದ್ದಾರೆ. ಅದರ ಬೆನ್ನಲ್ಲೇ ಚಿತ್ರದ ಹಿಂದಿ ಆವೃತ್ತಿಯ ಹಾಡಿಗೆ ನಿಷೇಧ ಹಾಕಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಅಲ್ಲದೆ ಕಠಿಣ ಕ್ರಮದ ಭರವಸೆ ನೀಡಿದೆ.

ಮತ್ತೊಂದೆಡೆ ಪ್ರಕರಣದ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಕೇಂದ್ರ ಮಾನವ ಹಕ್ಕು ಆಯೋಗವು, ಕೇಂದ್ರ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗೆ ನೋಟಿಸ್‌ ಜಾರಿ ಮಾಡಿದೆ.

ಅಶ್ಲೀಲ ಸಾಹಿತ್ಯ:

ಬಾಲಿವುಡ್‌ನಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಕೆಡಿ ಹಿಂದಿ ಚಿತ್ರದಲ್ಲಿನ ‘ಸರ್ಕೆ ಚುನರ್‌’ ಹಾಡಿನ ಬಗ್ಗೆ ಸಮಾಜವಾದಿ ಪಕ್ಷದ ಸದಸ್ಯ ಆನಂದ್‌ ಭಡೋರಿಯಾ ಬುಧವಾರ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದರು. ‘ಹಾಡು ಅಶ್ಲೀಲ ಸಾಹಿತ್ಯ ಹೊಂದಿದೆ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸದೆಯೇ ಅದನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದರಿಂದ ಕೆಟ್ಟ ಪ್ರಭಾವ ಬೀರಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್‌, ‘ಹಾಡಿನ ಮೇಲೆ ನಿಷೇಧ ಹೇರಲಾಗಿದೆ. ಸಂವಿಧಾನ ನಿರ್ಮಾತೃಗಳು ಕೆಲವು ಸಮಂಜಸವಾದ ನಿರ್ಬಂಧಗಳನ್ನು ವಿಧಿಸಿದ್ದಾರೆ. ನಾವು ಆ ಮಿತಿಗಳೊಳಗೆ ಕಾರ್ಯನಿರ್ವಹಿಸಬೇಕು. ವಾಕ್ ಸ್ವಾತಂತ್ರ್ಯವು ಸಂಪೂರ್ಣವಾಗಲು ಸಾಧ್ಯವಿಲ್ಲ, ಅದು ಸಮಾಜ ಮತ್ತು ಸಂಸ್ಕೃತಿಯ ಚೌಕಟ್ಟಿನಲ್ಲಿ ಇರಬೇಕು’ ಎಂದರು.

‘ಇಂದು ಡಿಜಿಟಲ್ ಮಾಧ್ಯಮದ ಮೂಲಕ ವಿಷಯಗಳು ವೇಗವಾಗಿ ಹರಡುತ್ತಿವೆ. ಸಮಾಜದ ರಕ್ಷಣೆಗಾಗಿ, ವಿಶೇಷವಾಗಿ ಮಕ್ಕಳು, ಮಹಿಳೆಯರು ಮತ್ತು ಸಮಾಜದ ಹಿಂದುಳಿದ ವರ್ಗಗಳ ರಕ್ಷಣೆಗಾಗಿ, ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲೂ ಸರ್ಕಾರ ಸಿದ್ಧವಾಗಿದೆ’ ಎಂದು ಭರವಸೆ ನೀಡಿದರು.

ಆಯೋಗ ನೋಟಿಸ್‌:

ಈ ನಡುವೆ, ‘ಹಾಡು ಅಶ್ಲೀಲ ಸಾಹಿತ್ಯ ಹೊಂದಿದ್ದು, ಸಮಾಜದ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವಂತಿದೆ. ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು’ ಎಂದು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಗವು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದೆ. ಹಾಡಿನ ಕುರಿತು ಸಮಗ್ರ ತನಿಖೆ ನಡೆಸಿ, ಕ್ರಮ ಕೈಗೊಂಡ ಬಗ್ಗೆ 2 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಕನ್ನಡದ ‘ಕೆಡಿ’ ಚಿತ್ರದ ಈ ಹಾಡಿಗೆ ಚಿತ್ರ ನಿರ್ದೇಶಕ ಪ್ರೇಮ್‌ ಸಾಹಿತ್ಯ ರಚಿಸಿದ್ದಾರೆ. ಬಾಲಿವುಡ್‌ ನಟಿ ನೋರಾ ಫತೇಹಿ ಹಾಗೂ ನಟ ಸಂಜಯ್‌ ದತ್‌ ಹೆಜ್ಜೆ ಹಾಕಿದ್ದಾರೆ. ಹಿಂದಿ ಆವೃತ್ತಿಯಲ್ಲಿ ಬಿಡುಗಡೆಯಾದ ಹಾಡನ್ನು ಯೂಟ್ಯೂಬ್‌ನಿಂದ ಡಿಲೀಟ್‌ ಮಾಡಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪೆದ್ದಿ ಸೆಟ್‌ನಲ್ಲಿ ಟಿ20 ಹೀರೋ ತಿಲಕ್ ವರ್ಮಾ; ರಾಮ್ ಚರಣ್ ಕೊಟ್ಟ ಸ್ಪೆಷಲ್ ಗಿಫ್ಟ್ ಏನು ಗೊತ್ತಾ?
Rajamouli: ಈ ಐಡಿಯಾ ನನಗೆ ಯಾಕೆ ಬರಲಿಲ್ಲ?: ಸುಕುಮಾರ್ ಸೀನ್ ನೋಡಿ ರಾಜಮೌಳಿ ಶಾಕ್