'ನನ್ನ ರಾಮ ಯಾರು..' ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ನಟ ಕಿಶೋರ್‌ ಪೋಸ್ಟ್‌

Published : Mar 31, 2026, 07:45 PM IST
Actor KIshore on Ram

ಸಾರಾಂಶ

ನಟ ಕಿಶೋರ್ ಅವರು ರಾಮನ ಕುರಿತು ತಮ್ಮ ವಿಭಿನ್ನ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ವ್ಯವಸ್ಥೆಗಾಗಿ ವಾಲಿಯನ್ನು ಕೊಂದ, ಸೀತೆಯನ್ನು ಕಾಡಿಗಟ್ಟಿದ ರಾಮನಿಗಿಂತ, ಸಹಾನುಭೂತಿಯಿಂದ ಎಲ್ಲವನ್ನೂ ಪ್ರಶ್ನಿಸುವ, ಸಂವಾದಕ್ಕೆ ಒತ್ತು ನೀಡುವ ಮಾನವೀಯ ರಾಮನೇ 'ನನ್ನ ರಾಮ' ಎಂದು ಅವರು ಪ್ರತಿಪಾದಿಸಿದ್ದಾರೆ.

ಬೆಂಗಳೂರು (ಮಾ.31): ನಟ ಕಿಶೋರ್‌ ರಾಮನ ಬಗ್ಗೆ ತಮ್ಮದೇ ಆದ ದೃಷ್ಟಿಕೋನವನ್ನು ಹಂಚಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಕಲ್ಪನೆಯ ರಾಮನೆಂದರೆ ಯಾರು? ಅತನ ವ್ಯಕ್ತಿತ್ವವೇನು ಅನ್ನೋದರ ಬಗ್ಗೆ ಅವರು ಹಂಚಿಕೊಂಡಿದ್ದಾರೆ. 'ರಾಮಾಯಣ ಎಂಬುದು ಕೇವಲ ಒಂದು ಕಾವ್ಯವಲ್ಲ, ಅದು ಈ ದೇಶದ ಸಾಂಸ್ಕೃತಿಕ ಅಸ್ಮಿತೆ. ವಾಲ್ಮೀಕಿಯಿಂದ ಹಿಡಿದು ಕಂಬನ್, ಪಂಪನವರೆಗೆ ಪ್ರತಿಯೊಬ್ಬರೂ ತಮ್ಮದೇ ಆದ ರಾಮನನ್ನು ಸೃಷ್ಟಿಸಿಕೊಂಡಿದ್ದಾರೆ ಆದರೆ, ಇಂದಿನ ತಾರ್ಕಿಕ ಮತ್ತು ಮಾನವೀಯ ನೆಲೆಯಲ್ಲಿ ನಿಂತು ನೋಡಿದಾಗ ನಮ್ಮ ಮುಂದಿರುವ ಪ್ರಶ್ನೆ- 'ನನ್ನ ರಾಮ ಯಾರು?' ಎಂಬುದು. ಧರ್ಮದ ರಕ್ಷಣೆಗಾಗಿ ವಾಲಿಯನ್ನು ಮರೆಯಲ್ಲಿ ನಿಂತು ಕೊಂದ, ಶೂರ್ಪನಖಿಯ ಅಂಗವಿಕಲತೆಗೆ ಕಾರಣನಾದ ಅಥವಾ ಶಂಭೂಕನ ತಪಸ್ಸನ್ನು ನಿಗ್ರಹಿಸಿದ ವ್ಯವಸ್ಥೆಯ ಪರ ನಿಂತ ರಾಮನಿಗಿಂತ ಭಿನ್ನವಾದ ರಾಮನೊಬ್ಬನ ಅವಶ್ಯಕತೆ ನಮಗಿದೆ' ಎಂದು ಬರೆದುಕೊಂಡಿದ್ದಾರೆ.

ನನ್ನ ರಾಮ ಕೇವಲ ಪೂಜಿಸುವ ವಿಗ್ರಹವಲ್ಲ; ಆತ ವ್ಯವಸ್ಥೆಯ ಕ್ರೌರ್ಯವನ್ನು ಪ್ರಶ್ನಿಸುವ, ಸೀತೆಯ ಮೌನವನ್ನು ಅರ್ಥೈಸುವ ಮತ್ತು ಶೂದ್ರ ತಪಸ್ವಿಯ ಆಧ್ಯಾತ್ಮಿಕ ಹಕ್ಕನ್ನು ಗೌರವಿಸುವ ಸಂವೇದನಾಶೀಲ ವ್ಯಕ್ತಿತ್ವ. ಧರ್ಮವೆಂಬುದು ಕೇವಲ ಕಠಿಣ ಆದೇಶವಾಗದೆ, ಅದು ಮುಕ್ತ ಸಂವಾದವಾಗಬೇಕು ಎಂದು ಬಯಸುವವನು ಆತ. ಇಲ್ಲಿ ಪ್ರಶ್ನೆ ಅಂದು ರಾಮ ಮಾಡಿದ್ದು ಸರಿಯೇ ಅಥವಾ ತಪ್ಪೇ ಎಂಬುದಲ್ಲ; ಬದಲಾಗಿ, ರಾಮಾಯಣದ ಪಾತ್ರಗಳು ತೆತ್ತ ಬೆಲೆಯನ್ನು ಮತ್ತೆ ಯಾರೂ ತೆರಬೇಕಿಲ್ಲದಂತಹ ಸಮಾನ ಮತ್ತು ನ್ಯಾಯಯುತ ಜಗತ್ತನ್ನು ನಾವು ನಿರ್ಮಿಸಬಲ್ಲವೇ ಎಂಬುದೇ ಆಗಿದೆ ಎಂದು ಬರೆದುಕೊಂಡಿದ್ದಾರೆ.

ನಟ ಕಿಶೋರ್‌ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ನ ಪೂರ್ಣ ಪಾಠ

ನನ್ನ ರಾಮ ಯಾರು?

ವಾಲ್ಮೀಕಿಯ ರಾಮನೇ ಅಥವಾ ತುಳಸಿದಾಸರ ರಾಮನೇ ಅಥವಾ ತಮಿಳು ಕಂಬನ್ ಅಥವಾ ಕನ್ನಡ ಜೈನ ಅಥವಾ ಮಲಯಾಳಿ ಮಾಪ್ಪಿಳೈ ಅಥವಾ ಜಾನಪದ ಅಥವಾ ಥಾಯ್??

ನಾನು ಒಪ್ಪುವ ಅಥವಾ ಒಪ್ಪದ ಒಂದು ರಾಮ ಎಂಬುದಿಲ್ಲ.

ಹಲವು ರಾಮರಿದ್ದಾರೆ. ಪ್ರತಿಯೊಬ್ಬರೂ. ಒಂದೊಂದು ಸಂಸ್ಕೃತಿಯೂ ಏನನ್ನು ಸಮರ್ಥಿಸಲು, ಮೃದುವಾಗಿಸಲು ಅಥವಾ ಹೊಸಕನಸು ಕಾಣಲು ಸಿದ್ಧವಾಗಿದೆ ಎಂಬುದನ್ನು ತೋರುತ್ತಾರೆ.

ನಾನು ದೇವರನ್ನು ನಂಬದವನು, ಆದರೆ ರಾಮನ ವಿರೋಧಿಯಲ್ಲ, ನನ್ನ ರಾಮ ಸ್ವಲ್ಪ ವಿಭಿನ್ನ , ಹೆಚ್ಚು ಮಾನವೀಯ ಅಷ್ಟೆ..

ಹಾಗಾದರೆ ನನ್ನ ರಾಮ ಯಾರು?

ವಾಲ್ಮೀಕಿ ರಾಮಾಯಣದ ಕಾಲದಲ್ಲಿ, ವ್ಯವಸ್ಥೆಯ ಪರ ನಿಂತ, ನೋವನ್ನನುಭವಿಸುತ್ತಿದ್ದರೂ ಧರ್ಮವನ್ನು ಕಾಪಾಡುವ ಆ ರಾಮ ಬಹಳ ದೂರ ಸಾಗಿ ಬಂದಿದ್ದಾನೆ..

ನನ್ನ ರಾಮ ಕೇವಲ ಜನರು ನಂಬುವ ಆಕೃತಿ ಮಾತ್ರವಲ್ಲ, ಜೊತೆ ಕಲೆತು ಯೋಚಿಸುವ, ವಾದಿಸುವ ಮತ್ತು ನಮ್ಮನ್ನು ನಾವು ಅಳೆದು ನೋಡುವ ಒಂದು ಮಾನದಂಡ.

ನನ್ನ ರಾಮ ಅಂಕೆಯಿಲ್ಲದ ಬಲದ ಮೇಲೆ ನೈತಿಕತೆಯ ಕಾನೂನನ್ನು ಪ್ರತಿಷ್ಠಾಪಿಸಲು ವಾಲಿಯನ್ನು ಅವಿತು ಕೊಂದ ರಾಮನಲ್ಲ,

ರೂಢಿಗತ ಸಂಪ್ರದಾಯಗಳನ್ನು ಮುರಿಯುವ ಶೂರ್ಪನಖಿಯ ಬಯಕೆಯನ್ನು ನಿಗ್ರಹಿಸಲು ಅವಳನ್ನು ಅಂಗವಿಕಲಗೊಳಿಸಲು ಆದೇಶಿಸಿದವನಲ್ಲ,

ವ್ಯವಸ್ಥೆ/ ರಾಜಧರ್ಮ ವೈಯಕ್ತಿಕ ಪ್ರೀತಿಯನ್ನು ಮೀರಿದ್ದು ಎಂದು ತೋರಲು ಸೀತೆಯನ್ನು ಕಾಡಿಗಟ್ಟಿದವನಲ್ಲ,

ಶ್ರೇಣೀಕೃತ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಶೂದ್ರ ತಪಸ್ವಿ ಶಂಭೂಕನನ್ನು ಕೊಂದವನು ಅವನಲ್ಲ,

ವೈಯುಕ್ತಿಕ ದುಃಖವನ್ನು ಕಡೆಗಣಿಸಿ ವ್ಯವಸ್ಥೆಯ ಕ್ರಮವನ್ನು ಆರಿಸಿಕೊಂಡವನಲ್ಲ.

ನನ್ನ ರಾಮ ಇದೆಲ್ಲವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವ. ಅವನು ವ್ಯವಸ್ಥೆ/ಕ್ರಮವನ್ನು ತಿರಸ್ಕರಿಸಿಬಿಡುವುದಿಲ್ಲ. ಆದರೆ ಆ ಕ್ರಮವನ್ನು ಕಾಪಾಡಿಕೊಳ್ಳಲು ತೆರಬೇಕಾದ ಬೆಲೆಯನ್ನು ಪ್ರಶ್ನಿಸುತ್ತಾನೆ.

ವಾಲಿಯ ವಾದವನ್ನು ಕೇಳುವ ಮೊದಲೇ ಅವನೇಕೆ ಸಾಯಬೇಕೆಂದು ಕೇಳುತ್ತಾನೆ? ಶೂರ್ಪಣಖಿಯನ್ನು ಅವಮಾನಿಸುವ ಬದಲು ಅರ್ಥಮಾಡಿಕೊಳ್ಳಬಾರದೇಕೆ?

ಚಾರಿತ್ರ್ಯವನ್ನು ಸಾಬೀತುಪಡಿಸಲೆಂದು ಸೀತೆ ಮೌನವಾಗಿ ಬಳಲಬೇಕೆ?

ಶೂದ್ರ ಶಂಭೂಕನ ಆಧ್ಯಾತ್ಮಿಕ ಅನ್ವೇಷಣೆಯನ್ನು ನಿರಾಕರಿಸಬೇಕೆಂದು ಕೇಳುತ್ತಾನೆ.

ನನ್ನ ರಾಮ ಆದೇಶವಾಗಿದ್ದ ಧರ್ಮದ ಅರ್ಥವನ್ನು ಸಂವಾದಕ್ಕೆ ಬದಲಿಸುತ್ತಾನೆ.

ತ್ಯಾಗವನ್ನು ವೈಭವೀಕರಿಸದೆ ಸಮ್ಮತಿ ಮತ್ತು ಹೊಣೆಗಾರಿಕೆ ಮುಖ್ಯವೆನ್ನುತ್ತಾನೆ .

ಅವನಿಗೀಗ ವೇದನೆ ಪವಿತ್ರವಲ್ಲ, ಸರಿಪಡಿಸಬೇಕಾದ ಒಂದು ವಿಫಲತೆ.

ಅವನ ಶಕ್ತಿಯೀಗ ಬಹಿರಂಗವಾಗಿ ಕಾರ್ಯನಿರ್ವಹಿಸುತ್ತದೆ, ಅವಿತುಕೊಂಡಲ್ಲ

ಆ ಕ್ರಮ/ ವ್ಯವಸ್ಥೆ ಹಾಗೇ ಉಳಿದಿದೆ, ಆದರೆ ಅದು ನ್ಯಾಯಯುತ, ಮುಕ್ತ ಮತ್ತು ಮಾನವೀಯವಾಗಿದೆ.

ಈಗ ನಮ್ಮ ಮುಂದಿನ ಪ್ರಶ್ನೆ “ಅಂದಿನ ರಾಮ ಮಾಡಿದ್ದು ಸರಿಯೇ?” ಎಂಬುದಲ್ಲ,

“ಮತ್ತೆ ಯಾರೂ ಅವರು ತೆತ್ತ ಬೆಲೆಯನ್ನು ತೆರಬೇಕಿಲ್ಲದ ಜಗತ್ತನ್ನು ನಾವು ಕಟ್ಟಬಹುದೇ ಎಂಬುದು!!!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿದ್ಯಾ ಬಾಲನ್​ಗೆ 'ಪನೌತಿ' ಪಟ್ಟ! ಚಿತ್ರರಂಗದಿಂದಲೇ ಔಟ್​- ಹೊರಗೆ ಹಾಕಿದವರೇ ನಟಿಯ ಕಾಲಿಗೆ ಬಿದ್ದರು
ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್