'ಅಂತರಜಾತೀಯ ವಿವಾಹವನ್ನು ತುಂಬಿದ ಸಂಸತ್ತಿನಲ್ಲಿ ಅವಹೇಳನ ಮಾಡಿದ್ದು ಅಕ್ಷಮ್ಯ..' ಮೋದಿ ಸರ್ಕಾರದ ಮೇಲೆ ಮುಗಿಬಿದ್ದ ಕಿಶೋರ್‌!

By Santosh NaikFirst Published Aug 2, 2024, 9:10 PM IST
Highlights

ನಟ ಕಿಶೋರ್‌ ಮತ್ತೊಮೆ ರಾಂಗ್‌ ಆಗಿದ್ದಾರೆ. ಮೋದಿ ಸರ್ಕಾರದ ವಿರುದ್ಧ ತಮ್ಮ ಪೋಸ್ಟ್‌ಗಳಲ್ಲಿ ಚಾಟಿ ಬೀಸುತ್ತಲೇ ಇರುವ ನಟ ಕಿಶೋರ್‌, ಈಗ ಅನುರಾಗ್‌ ಠಾಕೂರ್ ಸಂಸತ್ತಿನಲ್ಲಿ ಆಡಿದ ಮಾತಿಗೆ ಕಿಡಿಕಿಡಿಯಾಗಿದ್ದಾರೆ.
 

ಬೆಂಗಳೂರು (ಆ.2): ನಟ ಕಿಶೋರ್‌ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ರಾಂಗ್‌ ಆಗಿದ್ದಾರೆ. ಇತ್ತೀಚೆಗೆ ಬಿಜೆಪಿಯ ಹಿರಿಯ ನಾಯಕ, ಅನುರಾಗ್‌ ಠಾಕೂರ್‌ ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಭಾಷಣದ ವೇಳೆ ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ್ದರು. ರಾಹುಲ್‌ ಗಾಂಧಿಯ ಹೆಸರನನ್ನು ಹೇಳದೇ, ಜಾತಿಯೇ ಗೊತ್ತಿಲ್ಲದ ವ್ಯಕ್ತಿಗಳು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು. ಇವರ ಈ ಹೇಳಿಕೆ ಲೋಕಸಭೆಯಲ್ಲಿ ವಾಕ್ಸಮರಕ್ಕೆ ಕಾರಣವಾಗಿತ್ತು. ಅನುರಾಗ್‌ ಠಾಕೂರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ ನೀವು ನನ್ನನ್ನು ಎಷ್ಟೇ ನಿಂದಿಸಬಹುದು. ಆದರೆ, ಇದೇ ಸಂಸತ್ತಿನಲ್ಲಿ ಜಾತಿ ಗಣತಿಯ ವಿಧೇಯಕವನ್ನು ನಾವು ಪಾಸ್‌ ಮಾಡಿಯೇ ಮಾಡುತ್ತೇವೆ. ಅದರ ಬಗ್ಗೆ ಯಾವುದೇ ಗೊಂದಲವೂ ಇಲ್ಲ. ಅದಲ್ಲದೆ, ನಿಮ್ಮಿಂದ ನನಗೆ ಯಾವ ಕ್ಷಮಾಪಣೆಯೂ ಬೇಕಿಲ್ಲ ಎಂದು ಹೇಳಿದ್ದರು. ಇದಕ್ಕೆ ಉತ್ತರ ನೀಡಿದ ಅನುರಾಗ್‌ ಠಾಕೂರ್‌, ನಾನು ಯಾರ ಹೆಸರನ್ನು ಹೇಳಿಯೇ ಇಲ್ಲ. ಹಾಗಿದ್ದರೂ ಅವರು ಮಾತನಾಡಿ ಉತ್ತರ ನೀಡಿರುವುದು ಆಶ್ಚರ್ಯ ನೀಡಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಇನ್ನು ಸಮಾಜವಾದಿ ಪಕ್ಷದ ಮುಖಸ್ಥ ಅಖಿಲೇಶ್‌ ಯಾದವ್‌ ಅಂತೂ, ಸಂಸತ್ತಿನಲ್ಲಿ ಯಾರೊಬ್ಬರ ಜಾತಿಯನ್ನು ಹೇಗೆ ಕೇಳಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು.

ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಕಿಶೋರ್‌, ತಮ್ಮ ಕಾಮೆಂಟ್‌ಅನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಧರ್ಮಾಂಧತೆಯ ಬೌದ್ಧಿಕ ದಿವಾಳಿತನದಲ್ಲಿ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಅವಾಚ್ಯ ಬೈಗುಳಗಳಿಗಿಳಿದ ಮೋದಿ ಪಕ್ಷದ, ಮನುವಾದಿ ಜಾತಿವಾದಿ ಮುಖದ ಅನಾವರಣ.. ನಿಜ, ಕೊಲೆಯನ್ನೂ ಸಮರ್ಥಿಸಿಕೊಳ್ಳುವ ಭಕ್ತರು ಹೇಳುವಂತೆ ಜಾತಿ ಯಾವುದೆಂದು ಕೇಳಿಯೇ ಜಾತಿ ಜನಗಣತಿ ಮಾಡಬೇಕು. ಆದರೆ ಜಾತಿ ಕೇಳುವುದರ ಹಿಂದಿನ ಉದ್ದೇಶ, ವಿರೋಧ ಪಕ್ಷದ ನಾಯಕ ಹೇಳಿದಂತೆ ಪ್ರತಿಯೊಬ್ಬರ ಪಾಲುಗೊಳ್ಳುವಿಕೆ ಮತ್ತು ಪಾಲುದಾರಿಕೆಯನ್ನು ನಿರ್ಧರಿಸಲು ಆಗಬೇಕು .. ಮೋದಿಯ ಮುಖವಾಣಿ ಅನುರಾಗ(ವಿಲ್ಲದ) ಠಾಕುರನಂತೆ ಜಾತಿ ಗೊತ್ತಿಲ್ಲದವನು “ಜಾತಿ ಜನಗಣತಿಯ ಬಗ್ಗೆ ಮಾತಾಡಬಾರದು” ಎಂದು ಅವಮಾನಿಸಲಲ್ಲ.

ಮೋದಿ ಮತ್ತವರ ಚೇಲಾಗಳು ಅವಮಾನಿಸುತ್ತಿರುವುದು ಪ್ರಸ್ತುತ ಸಮಸ್ಯೆಗಳಿಗೆ ದನಿಯಾಗುತ್ತಿರುವ ಪ್ರತಿಪಕ್ಷದ ನಾಯಕನನ್ನೂ ಜಾತಿ ಜನಗಣತಿಯಂಥ ಪ್ರಮುಖ ವಿಷಯವನ್ನೂ ಮಾತ್ರವಲ್ಲ, ಜಾತಿ ವ್ಯವಸ್ಥೆಯನ್ನು ಮೀರುವ ಅಂತರಜಾತೀಯ ವಿವಾಹದ ಪ್ರಯತ್ನಗಳನ್ನೂ ಸಹ. ಅಂತರಜಾತೀಯ ವಿವಾಹವನ್ನು ತುಂಬಿದ ಸಂಸತ್ತಿನಲ್ಲಿ ಅವಹೇಳನ ಮಾಡಿದ್ದು ಅಕ್ಷಮ್ಯ. ಮೋದಿ ಮತ್ತವರ ಕೂಟ ಅದನ್ನು ಬೆಂಬಲಿಸುತ್ತಿರುವುದು ಇನ್ನೂ ಘೋರ. ಇದೇ ವರ್ಣಬೇಧದ ಪ್ರತಿಪಾದಕರ ನಿಜವಾದ ಬಣ್ಣ. ಇದೇ ಬಿಜೆಪಿಯ ನಿಜವಾದ ಹಿಂದುತ್ವ' ಎಂದು ಕಿಶೋರ್ ಬರೆದುಕೊಂಡಿದ್ದಾರೆ.

Latest Videos

ದರ್ಶನ್ ಬಗ್ಗೆ ಕೇಳಿದ್ದ ಪ್ರಶ್ನೆಗೂ ಪ್ರಧಾನಿ ಮೋದಿ ಎಳೆದು ತಂದ ನಟ ಕಿಶೋರ್; ಯಾಕ್ ಹಿಂಗೆ ಅಂತಿದಾರೆ!

ಅದರೊಂದಿಗೆ ಅನುರಾಗ್‌ ಠಾಕೂರ್‌ ರಾಹುಲ್ ಗಾಂಧಿಯ ಜಾತಿ ಕೇಳಿದ್ದರಿಂದ ಲೋಕಸಭೆಯ ಕಲಾಪಕ್ಕೆ ಅಡ್ಡಿಯಾಗಿದೆ ಎನ್ನುವ ನ್ಯೂಸ್‌ ಪೇಪರ್‌ ಕಟಿಂಗ್‌ಅನ್ನೂ ಕಿಶೋರ್‌ ಹಂಚಿಕೊಂಡಿದ್ದಾರೆ.  'ಇಂಥವರಿಗೆ ಅಧಿಕಾರ ಕೊಟ್ಟ ನಾವು ಮತದಾರರೇ ಈ ಅಧೋಗತಿಗೆ ಜವಾಬ್ದಾರರು' 'ಎಂಥಾ ಅದ್ಬುತ ಮಾತು..' ಎನ್ನುವಂಥ ಕಾಮೆಂಟ್‌ಗಳೂ ಈ ಪೋಸ್ಟ್‌ಗೆ ಬಂದಿವೆ.
ಕೆಲ ದಿನಗಳ ಹಿಂದೆ ಕನ್ವರ್‌ ಯಾತ್ರೆಯ ಕುರಿತಾಗಿಯೂ ಕಿಶೋರ್‌ ಪೋಸ್ಟ್‌ ಹಂಚಿಕೊಂಡಿದ್ದರು. ' ರೈತರು, ಯೋಧರು, ವಿದ್ಯಾರ್ಥಿಗಳು, ನೌಕರಿ ಹುಡುಕಿ ಹೊರಟವರು ಸಾಯುತ್ತಿದ್ದಾರೆ.., ಮಹಿಳೆಯರು ಕಾಣೆಯಾಗುತ್ತಿದ್ದಾರೆ.., ಬಡತನ, ಬೆಲೆಗಳು ಏರುತ್ತಿವೆ.., ರೈಲುಗಳು ಸೇತುವೆಗಳು ಕಟ್ಟಡಗಳು, ಬಡವರ ಮನೆಗಳು ಉರುಳುತ್ತಿವೆ.. , ಭ್ರಷ್ಟಾಚಾರ ತಾಂಡವವಾಡುತ್ತಿದೆ, ಅರ್ಥವ್ಯವಸ್ಥೆ ಕುಸಿದಿದೆ..ಆದರೆ… ಬಟ್ಟೆಯಿಂದ ಗುರುತಿಸಿ ಮನೆಯ ಮಕ್ಕಳನ್ನು ಒಡೆಯುವ ಮನೆಹಾಳ ಗುರುವಿನ ಮನೆಹಾಳ ಶಿಷ್ಯರು ಹೆಸರನ್ನು ಬಳಸಿ ಮನೆಯ ಮಂದಿಯ ಮನಸ್ಸುಗಳನ್ನು ಒಡೆದು, ಗಮನ ಬೇರೆಡೆ ತಿರುಗಿಸಿ ದೇಶ ಒಡೆದು ಅಧಿಕಾರ ಹಿಡಿಯುವ ಹುನ್ನಾರದಲ್ಲಿದ್ದಾರೆ..' ಎಂದು ಬರೆದಿದ್ದರು.

ಕೆಲಸ ಮಾಡಲಾಗದ ಅಯೋಗ್ಯ ಮೋದಿಗೇನು ಹುಚ್ಚೇ? ನಟ ಕಿಶೋರ್‌ ಮತ್ತೆ ವಾಗ್ದಾಳಿ!

click me!