Bastar the Naxal Story Movie Review: ಬಸ್ತಾರ್ ಎಂಬ ಪುಟ್ಟ ಗ್ರಾಮದಲ್ಲಿ ನಕ್ಸಲರ ಅಟ್ಟಹಾಸ

By Suvarna NewsFirst Published May 30, 2024, 3:12 PM IST
Highlights

ದಟ್ಟಾರಣ್ಯದಲ್ಲಿ ನಕ್ಸಲರು ತೋರಿದ ಅಟ್ಟಹಾಸದೊಂದಿಗೆ ರಮಣೀಯ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿದ ಬಸ್ತಾರ್ ದಿ ನಕ್ಸಲ್ ಸ್ಟೋರಿ ಸಿನಿಮಾವನ್ನು ಯಾಕೆ ನೋಡಬೇಕು ಹೇಳ್ತೀವಿ ಓದಿ.

ವೀಣಾ ರಾವ್, ಕನ್ನಡಪ್ರಭ  

ಸುದಿಪ್ತೋಸೆನ್ ನಿರ್ದೇಶನದ ಬಸ್ತಾರ್ ದಿ ನಕ್ಸಲ್ ಸ್ಟೋರಿ ಝೀ5 ನಲ್ಲಿ ಓಡುತ್ತಿದೆ. 15.೦3.24ರಲ್ಲಿ ಬಿಡುಗಡೆಯಾದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅದಾಶರ್ಮ, ರೈಮಾಸೇನ್, ಅನಂಗಶಾ ಬಿಸ್ವಾಸ್, ಶಿಲ್ಪಾ ಶುಕ್ಲಾ, ಯಶಪಾಲ್ ಶರ್ಮ, ಪುರೇಂದು ಭಟ್ಟಾಚಾರ್ಯ.

Latest Videos

ಇದೊಂದು ನೈಜ ಘಟನೆಗಳನ್ನು ಆಧರಿಸಿ ತೆಗೆದ ಚಿತ್ರ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಬಸ್ತಾರ್ ಎಂಬುದು ಛತ್ತೀಸ್‌ಘಡ್‌ದಲ್ಲಿ ಪೂರ್ಣವಾಗಿ ನಕ್ಸಲರು ಆಕ್ರಮಿಸಿಕೊಂಡ ಪ್ರದೇಶ. ಸುಮಾರು 2010ನೇ ಕಾಲ ಮಾನದ ಈ ಚಿತ್ರಕಥೆ ನಕ್ಸಲ್ ಮಾವೋವಾದಿಗಳ ಮೇಲೆ ಚಿತ್ರಿತವಾಗಿದೆ. ಅತ್ಯಂತ ಕ್ರೂರ ಕಥಾವಸ್ತು ನೋಡುಗರ ಎದೆ ಝಲ್ ಎನಿಸುವಂತೆ ಚಿತ್ರೀಕರಿಸಲಾಗಿದೆ. ಎ ಸರ್ಟಿಫಿಕೇಟ್ ಇದ್ದರೂ ಎಂಥ ಗಂಡೆದೆಯವರೂ ನೋಡಲು ಅಂಜುವಂಥ ಸಿನಿಮಾ.

ಬಸ್ತಾರ್ ದಟ್ಟ ಅರಣ್ಯಗಳಿಂದ ಕೂಡಿದ ರಮಣೀಯ ಪ್ರಕೃತಿ ಇರೋ ತಾಣ. ನಿಬಿಡ ಅರಣ್ಯಗಳು, ಗಗನ ಚುಂಬಿ ಮರಗಳು, ಅಲ್ಲಲ್ಲಿ ನೀರಿನ ಝರಿ ಜಲಪಾತ ಸುತ್ತಲೂ ಬೆಟ್ಟಗುಡ್ಡಗಳು ಆಳವಾದ ಗುಹೆಗಳು, ಕ್ರೂರ ಪ್ರಾಣಿಗಳು ಇರುವ ಸುಂದರ ಹಾಗೂ ಭಯಾನಕ ಪ್ರದೇಶ,  ಈ ಪ್ರದೇಶ ನಕ್ಸಲ್ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತ ಜಾಗ.

ಕಾಮಸೂತ್ರ to ಬಿಎ ಪಾಸ್; ಪೋಷಕರು ಹಾಗೂ ಮಕ್ಕಳೊಂದಿಗೆ ನೀವು ನೋಡಬಾರದ ಸಿನಿಮಗಳು

ಈ ಚಿತ್ರಕಥೆಯ ಸಾರಾಂಶದಂತೆ ಬಸ್ತಾರ್ ಗ್ರಾಮ 2010ರಲ್ಲಿ ಮಾವೋವಾದಿಗಳ ಹಿಡಿತದಲ್ಲಿತ್ತು. ಅಲ್ಲಿ ಜನಿಸುವ ಪ್ರತಿ ಮೊದಲ ಮಗುವೂ ಮಾವೋವಾದಿಗಳಿಗೆ ಅರ್ಪಿಸಬೇಕು. ಅಲ್ಲಿ ಅವರೇ ಸರ್ವಾಧಿಕಾರಿಗಳು. ತಮ್ಮ ಮಗುವನ್ನು ಮಾವೋವಾದಿಗಳಿಗೆ ಒಪ್ಪಿಸದ ತಂದೆ ತಾಯಿಗಳು ಶಾಲೆಗೆ ಕಳಿಸುವ ಯೋಚನೆ ಮಾಡಿದರೆ  ಮಾವೋವಾದಿಗಳು ಆ ತಂದೆ ತಾಯಿಯನ್ನು ಕ್ರೂರ ರೀತಿಯಲ್ಲಿ ಹತ್ಯೆ ಮಾಡುತ್ತಿದ್ದರು. ಹಾಗೂ ಆ ಮಗುವನ್ನು ತಮ್ಮಂತೆ ನಕ್ಸಲ್ ಆಗಿ ತರಬೇತಿ ನೀಡಿ ಬೆಳೆಸುತ್ತಿದ್ದರು.

ನಕ್ಸಲರ ಕ್ರೂರತೆಗೆ ಎಲ್ಲೆಯೇ ಇರಲಿಲ್ಲ. ಇವರಿಗೆ ನಗರಗಳಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸುವ ಪಡೆಗಳ ಬೆಂಬಲ ಬೇರೆ. ಅವರ ರಕ್ಷಣೆಯಲ್ಲಿ ಇವರು ಆಡಿದ್ದೇ ಆಟ. ಕಗ್ಗೊಲೆಗಳನ್ನು ಮಾಡಿದರೂ ಮನುಷ್ಯರನ್ನು ತರಕಾರಿ ಹಣ್ಣುಗಳಂತೆ ಕೊಚ್ಚಿ ಹಾಕಿದರೂ ಇವರಿಗೆ ನ್ಯಾಯಾಲಯದಲ್ಲಿ ಯಾವ ಕೇಸೂ ದಾಖಲಾಗುವುದಿಲ್ಲ. ಇವರ ಪರ ವಾದಿಸುವ ವಕೀಲರ ಪಡೆಗಳೇ ಇತ್ತು. ಇವರ ಕ್ರೂರತೆಯ ಪರಮಾವಧಿಯನ್ನು ಚಿತ್ರ ನೋಡಿಯೇ ತಿಳಿಯಬೇಕು. ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ಈ ನಕ್ಸಲರು ಗೆರಿಲ್ಲಾ ಯುದ್ಧದಲ್ಲಿ ಪರಿಣಿತರು. ಕೊಂಚವೂ ಮಾನವೀಯತೆ ಇಲ್ಲದೆ ತಮಗೆ ತಿರುಗಿ ಬಿದ್ದವರನ್ನು ಕೊಚ್ಚಿ ಹಾಕುವ ಕ್ರೂರಿಗಳು. ಇವರ ದಾಳಿಗೆ ಸಿಲುಕಿ ಸಿಆರ್‌ಪಿಎಫ್ ಪಡೆಗಳು ಅದೆಷ್ಟು ಪ್ರಾಣ ತೆತ್ತಿದ್ದಾರೋ ಲೆಕ್ಕವಿಲ್ಲ.

ಐಪಿಎಸ್ ನೀರಜಾ ಮಾಧವನ್ ಈ ಬಸ್ತಾರ್ ಪ್ರದೇಶಕ್ಕೆ ನಿಯೋಜಿತವಾಗಿರುವ ಪೊಲೀಸ್ ಆಫೀಸರ್. ಆದಾ ಶರ್ಮ ಈ ಪಾತ್ರವನ್ನು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಬೆಂಕಿಯುಗುಳುವ ಕಣ್ಣುಗಳು, ಸಿಂಹದಂತೆ ಘರ್ಜಿಸುವ ಧ್ವನಿ, ಹಾವಿನಂತ ಚುರುಕು ಚಲನೆ ಅವರ ಚಾಣಾಕ್ಷತೆ ನಕ್ಸಲರ ಗುಂಡಿಗೆಯಲ್ಲಿ ಛಳಿ ಹುಟ್ಟಿಸುತ್ತದೆ. ಲಂಕಾ ರೆಡ್ಡಿ ಎನ್ನುವ ಆ ನಕ್ಸಲ ಪಡೆಯ ನಾಯಕ ಬಸ್ತಾರ್ ಗ್ರಾಮದಲ್ಲಿ ಲಕ್ಷ್ಮಿ ಎಂಬ ಮಹಿಳೆಯ ಪತಿಯನ್ನು ಗ್ರಾಮಸ್ಥರ ಎದುರು ಕೊಚ್ಚಿ, ಕೊಂದು ಹಾಕುತ್ತಾನೆ. ಕಾರಣ ಆಕೆಯ ಗಂಡ ತನ್ನ ಮಕ್ಕಳನ್ನು ಶಾಲೆಗೆ ಕಳಿಸಬೇಕು. ಮತ್ತು ತನ್ನ ಗ್ರಾಮಕ್ಕೆ ಒಳ್ಳೆಯ ರಸ್ತೆ ಬೇಕು, ತನ್ನ  ಗ್ರಾಮದ ಜನ ಎಲ್ಲ ನಾಗರೀಕರಂತೆ ಸಭ್ಯ ಹಾಗೂ ನಿಶ್ಚಿಂತ ಜೀವನ ನಡೆಸಬೇಕು ಎಂದು ಕೋರಿಕೊಂಡದ್ದು ಮತ್ತು ಅದಕ್ಕಾಗಿ ಹೋರಾಡುತ್ತಿದ್ದುದು ಲಂಕಾರೆಡ್ಡಿಯ ಕಣ್ಣು ಕೆಂಪಗಾಗಿಸಿತ್ತು. ಗಂಡನನ್ನು ಕಳೆದುಕೊಂಡ ಮತ್ತು ತನ್ನ ಮಗನನ್ನು ಇಷ್ಟವಿಲ್ಲದೆ ನಕ್ಸಲರಿಗೆ ಒಪ್ಪಿಸಿದ್ದ ಲಕ್ಷ್ಮಿಯ ಮನಸಿನಲ್ಲಿ ಸೇಡು ತಾಂಡವ ಆಡುತ್ತಿರುತ್ತದೆ.

Silence 2 Movie Review: ನೈಟ್ ಕ್ಲಬ್‌ನಲ್ಲಿ ಹೆಣವಾದ ಕಾಲ್ ಗರ್ಲ್ ಕೊಲೆ ಜಾಡು ಹಿಡಿದು ಹೋದಾಗ?

ಲಕ್ಷ್ಮಿ ಪೊಲೀಸ್ ಆಫೀಸರ್ ನೀರಜಾ ಮಾಧವನ್ ಬಳಿಗೆ ಹೋಗಿ ತಾನು ಕೂಡ ನಕ್ಸಲರ ಹುಟ್ಟಡಗಿಸುವುದಕ್ಕಾಗಿ ಪ್ರತಿಜ್ಞೆ ಮಾಡಿ ಶಸ್ತ್ರಾಸ್ತ್ರ ತರಬೇತಿ ಪಡೆದು ಶಕ್ತಿಶಾಲಿ ಯೋಧಳಾಗಿರುತ್ತಾಳೆ. ಒಮ್ಮೆ ನೀರಜಾ ತನ್ನ ಕಾರ್ಯಾಚರಣೆಯಲ್ಲಿ ನಕ್ಸಲರ ಮಾಸ್ಟರ್ ಮೈಂಡ್ ನಾರಾಯಣ್ ಬಗಚಿಯನ್ನು ಹಿಡಿದು ಲಾಕಪ್ಪಿಗೆ ಹಾಕುತ್ತಾಳೆ. ಇವನನ್ನು ಬಿಡಿಸಲು ನಗರದಲ್ಲಿ ಸಭ್ಯರೆಂದು ಹೇಳಿಕೊಳ್ಳುವ ಒಂದು ಪಡೆಯೇ ಸಿದ್ಧವಾಗುತ್ತದೆ. ಅದರ ಮುಂಚೂಣಿಯಲ್ಲಿ  ವನ್ಯರಾಯ್, ನೀಲಂ ನಾಗಪಾಲ್, ಮಿಲಿಂದ್ ಕಶ್ಯಪ್ ಮುಂತಾದ ಮಾನವೀಯ ಹಕ್ಕುಗಳ ಹೋರಾಟಗಾರರು ಟೊಂಕಕಟ್ಟಿ ನಿಲ್ಲುತ್ತಾರೆ. ಇದರಲ್ಲಿ ನೀಲಂ ನಾಗಪಾಲ್ ವೃತ್ತಿಯಲ್ಲಿ ವಕೀಲೆ, ನಕ್ಸಲರ ಮಾಸ್ಟರ್ ಮೈಂಡ್ ನಾರಾಯಣ್ ಬಗಚಿಯನ್ನು ಸೆರೆಯಿಂದ ಬಿಡಿಸುವಲ್ಲಿ ಯಶಸ್ವಿಯಾಗುತ್ತಾಳೆ.  ಪಬ್ಲಿಕ್ ಪ್ರಾಸಿಕ್ಯೂಟರ್ ಯಶಪಾಲ್ ಶರ್ಮ ತನ್ನ ವಾದದಲ್ಲಿ ಸೋಲುತ್ತಾನೆ.

ಬಗಚಿಯನ್ನು ಹಿಡಿದದ್ದಕ್ಕಾಗಿ ನಕ್ಸಲರು ಭೀಕರ ಹೋರಾಟ ಮಾಡಿ 72 ಜನ ಯೋಧರನ್ನು ಬಲಿ ತೆಗೆದುಕೊಳ್ಳುತ್ತಾರೆ. ಈ ಹೋರಾಟದಲ್ಲಿ ನೀರಜಾ ಬ್ಯಾಕ್ ಅಪ್ ಕಳಿಸಿ ಎಂದು ತನ್ನ ಮೇಲಾಧಿಕಾರಿಗಳನ್ನು ಅಂಗಲಾಚಿ ಬೇಡಿಕೊಂಡರೂ ಯಾರೂ ಅವಳಿಗೆ ಸಪೋರ್ಟ್ ಮಾಡುವುದಿಲ್ಲ. ಈ ಹೋರಾಟದಲ್ಲಿ ನೀರಜಾಳಿಗೆ ವಿಷ ಬಾಣ ತಗುಲಿ ಅವಳ ಹೊಟ್ಟೆಯಲ್ಲಿದ್ದ ಮಗು ಸತ್ತು ಹೋಗುತ್ತದೆ. ಅದೃಷ್ಟವಶಾತ್ ನೀರಜಾ ಉಳಿಯುತ್ತಾಳೆ. ಚೇತರಿಸಿಕೊಂಡ ನೀರಜಾ ತನ್ನ ಯೋಧರ ದುರ್ಮರಣಕ್ಕಾಗಿ ಸೇಡು ತೀರಿಸಿಕೊಳ್ಳಲು ತಂತ್ರ ರೂಪಿಸುತ್ತಾಳೆ. ಅಳಿದುಳಿದ ತನ್ನ ಪಡೆಯನ್ನು ಹುರಿದುಂಬಿಸಿ ನಕ್ಸಲರ ಮೇಲೆ ಅಟ್ಯಾಕ್ ಮಾಡುತ್ತಾಳೆ. ಗಂಡನನ್ನು ಕಳೆದುಕೊಂಡ ಲಕ್ಷ್ಮಿಯೂ ನೀರಜಾಳ ಪಡೆ ಸೇರುತ್ತಾಳೆ. ಲಕ್ಷ್ಮಿಯ ಗುರಿ ಲಂಕಾರೆಡ್ಡಿಯ ಹನನ. 

Grey Games Film Review: ಆನ್‌ಲೈನ್‌ ಗೇಮ್‌, ಆಫ್‌ಲೈನ್‌ ಕೊಲೆ

ಅಂತ್ಯದಲ್ಲಿ ನೀರಾಜಾಳಿಗೆ ಗೆಲುವಾಗುತ್ತದೆ. ನಕ್ಸಲರ ಪಡೆ ನಿರ್ನಾಮವಾಗುತ್ತದೆ. ಲಂಕಾ ರೆಡ್ಡಿಯನ್ನು ಲಕ್ಷ್ಮಿ ಕ್ರೂರವಾಗಿ ಕೊಂದು ಹಾಕುತ್ತಾಳೆ. ನಕ್ಸಲನಾಗಿದ್ದ ತನ್ನ ಮಗನನ್ನು ಮನವೊಲಿಸಿ ಮನೆಗೆ ಕರೆತರುತ್ತಾಳೆ. ನೀರಜಾಳ ಮೇಲೆ ಎನ್‌ಕ್ವಯಿರಿ ಆಗುತ್ತದೆ. ಗೃಹಸಚಿವರ ಕಾರ್ಯಾಲಯದಲ್ಲಿ ನೀರಜಾಳ ವಿಚಾರಣೆ ನಡೆಯುತ್ತದೆ. ಸರ್ಕಾರದ ವೈಫಲ್ಯಕ್ಕೆ ನೀರಜಾ ಛೀಮಾರಿ ಹಾಕುತ್ತಾಳೆ. ಅಬ್ಬರಿಸುತ್ತಾಳೆ. ನೀರಜಾ ಆಗಿ ಆದಾ ಶರ್ಮಳ ಅಭಿನಯ ಅದ್ಭುತ. ಕೆಣಕಿದ ಸಿಂಹಿಣಿಯಂತೆ, ಸರ್ಪದಂತೆ ಅವರು ಸರ್ಕಾರದ ವಿರುದ್ಧ ಫೂತ್ಕರಿಸುವುದು ಪ್ರೇಕ್ಷಕನಿಂದ ಚಪ್ಪಾಳೆ ಗಿಟ್ಟಿಸುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರದಲ್ಲಿ ಹೀರೋಯಿನ್ ಇಲ್ಲ ಹೀರೋ ಅಂತ ಇದ್ದರೆ ಅದು ಅದಾಶರ್ಮ. ತಮ್ಮ ಪ್ರತಿಭೆಯನ್ನು ಪ್ರತಿಶತ ಅನಾವರಣಗೊಳಿಸಿರುವ ಅದಾಶರ್ಮ ಮೆಚ್ಚುಗೆ ಗಳಿಸುತ್ತಾರೆ.
 

click me!