
ಬೆಂಗಳೂರು: ಕಳೆದ ಎರಡ್ಮೂರು ತಿಂಗಳಿನಿಂದ ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಸಿನಿಮಾಗಳ ಅಭಿರುಚಿಯುಳ್ಳ ವೀಕ್ಷಕರಿಗೆ ಇಷ್ಟವಾಗುವಂತಹ ಮೂವಿ ಬರುತ್ತಿಲ್ಲ ಎಂಬ ಕೊರಗು ಎದುರಾಗಿದೆ. ವೀಕೆಂಡ್‌ನಲ್ಲಿ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಲು ಸಮಯ ಇಲ್ಲದಿದ್ರೆ ಮನೆಯಲ್ಲಿಯೇ ಕುಳಿತು 2001ರಲ್ಲಿ ಬಿಡುಗಡೆಯಾದ ಕನ್ನಡದ ಚಲನಚಿತ್ರವನ್ನು ನೋಡಿ ಆನಂದಿಸಬಹುದು. 2001ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ನಿಮಗೆ ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಜೊತೆಯಲ್ಲಿ ಕಾಮಿಡಿಯ ರಸದೌತಣ ಸಿಗುತ್ತದೆ. ಈ ಚಿತ್ರದ ಮೋಹಿನಿ ಮೇಲೆ ಆರಂಭದಲ್ಲಿ ನಿಮಗೆ ಖಂಡಿತ ಲವ್ ಆಗುತ್ತದೆ. ಚೆಂದದ, ಸೌಂದರ್ಯವತಿ, ಕಣ್ಣಿನಲ್ಲಿಯೇ ಕಾಮದ ಮಿಂಚು ಹರಿಸುವ ನಟಿಯೇ ಇಲ್ಲಿ ವಿಲನ್. ಮೊದಲರ್ಧ ಭಾಗ ನಿಮಲ್ಲಿ ಒಂದೊಂದೇ ಪ್ರಶ್ನೆಗಳನ್ನು ಮೂಡುವಂತೆ ಮಾಡುತ್ತದೆ. ಎರಡನೇ ಭಾಗದಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.
ಐವರು ನಟಿಯರು, ಮೂವರು ನಟರು!
ಬಹುತಾರಾಗಣವುಳ್ಳ ಸಿನಿಮಾ 2001ರಲ್ಲಿ ಬಿಡುಗಡೆಯಾಗಿತ್ತು. ನಂತರ ತೆಲುಗು ಭಾಷೆಗೆ ಡಬ್ ಆಗಿತ್ತು. ಈ ಮೂಲಕ ತೆಲಗು ಭಾಷಿಕರನ್ನು ರಂಜಿಸುವಲ್ಲಿ ಚಿತ್ರ ಸಂಪೂರ್ಣ ಯಶಸ್ವಿಯಾಗಿತ್ತು. ನಿರ್ದೇಶಕ ಸೂರ್ಯ ನಿರ್ದೇಶನದ ಈ ಚಿತ್ರದಲ್ಲಿ ಐವರು ನಟಿಯರು. ಪ್ರೇಮಾ, ತಾರಾ, ರಮ್ಯಾಕೃಷ್ಣ, ಚಾರುಲತಾ ಮತ್ತು ಸುಮನ್. 9ನೇ ಅಕ್ಟೋಬರ್ 2001ರಂದು ಸಿನಿಮಾ ಬಿಡುಗಡೆಯಾಗಿ ನೋಡುಗರನ್ನು ಹೆದರಿಸಿ ಬಾಕ್ಸ್ ಆಫಿಸ್‌ನಲ್ಲಿ ಹಣ ತುಂಬಿಸಿಕೊಂಡಿತ್ತು. ವಿನೋದ್ ಆಳ್ವ, ದೇವರಾಜ್ ಮತ್ತು ಪ್ರಮೋದ್ ಚಕ್ರವರ್ತಿ ನಾಯಕರಾಗಿ ನಟಿಸಿದ್ದರು.
ಪೂರ್ಣಿಮೆಯಂದು ನಡೆಯುವ ಕೌತಕ
ಈಗಾಗಲೇ ನಿಮಗೆ ನಾವು ಹೇಳುತ್ತಿರುವ ಸಿನಿಮಾ ಯಾವುದು ಅಂತ ಖಂಡಿತ ಗೊತ್ತಾಗಿರುತ್ತದೆ. ಬಹುತಾರಾಗಣವುಳ್ಳ 'ನೀಲಾಂಬರಿ' ಸಿನಿಮಾ ಎಲ್ಲಾ ವರ್ಗದ ವೀಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾ ಎಂದು ಹೇಳಿದ್ರೆ ತಪ್ಪಾಗಲಾರದು. ಖಾಸಗಿ ವಾಹಿನಿಯ ಐದು ಸದಸ್ಯರ ತಂಡವೊಂದು ಅರಣ್ಯ ಪ್ರದೇಶದಲ್ಲಿರುವ ಗ್ರಾಮಕ್ಕೆ ಬರುತ್ತದೆ. ಈ ಕಾಡಿನಲ್ಲಿ ಪ್ರತಿ ಪೂರ್ಣಿಮೆಯಂದು ನಡೆಯುವ ಕೌತಕ ತಿಳಿದುಕೊಳ್ಳಲು ಮುಂದಾಗಿರುತ್ತದೆ.
ಟಿವಿ ವಾಹಿನಿಯ ಸದಸ್ಯರು ಅರಣ್ಯ ಪ್ರದೇಶದ ದೊಡ್ಡ ಬಂಗಲೆಯಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಅಖಿಲಾ ಶಿವರಾಂ ಎಂಬ ಮಹಿಳೆಯನ್ನು ಭೇಟಿಯಾಗಲು ಮುಂದಾಗುತ್ತಾರೆ. ಈ ವೇಳೆ ಟಿವಿ ವಾಹಿನಿಯ ಟೀಂನಲ್ಲಿದ್ದ ಸದಸ್ಯರು ಅಖಿಲಾ ಸೌಂದರ್ಯದಲ್ಲಿ ಕಳೆದು ಹೋಗುತ್ತಾರೆ. ಅಖಿಲಾ ಶಿವರಾಂ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದಾರೆ. ಚಿತ್ರದ ಇಂಚರವೇ ಹಾಡು ಇಂದಿಗೂ ಜನಪ್ರಿಯವಾಗಿದೆ. ಹೆಣ್ಣಿನ ಸೌಂದರ್ಯವನ್ನು ವರ್ಣಿಸುವ ಹಾಡು ಇಂದಿಗೂ ಎಲ್ಲರಿಗೂ ಇಷ್ಟವಾಗುತ್ತದೆ.
ಇಲ್ಲಿಂದ ಟಿವಿ ವಾಹಿನಿಯ ಸದಸ್ಯರು ಕಾಣೆಯಾಗಲು ಆರಂಭಿಸುತ್ತಾರೆ. ನಂತರ ಅಖಿಲಾ ಶಿವರಾಂ ಯಾರು? ಒಂಟಿಯಾಗಿ ಕಾಡಿನಲ್ಲಿ ವಾಸಿಸುತ್ತಿರೋದು ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಹೋಗುತ್ತದೆ.
ಸಿನಿಮಾ ಕಥೆ ಏನು?
ಕುರುಪಿಯಾಗಿರುವ ಹುಟ್ಟಿರುವ ನೀಲಾಂಬರಿ ತಂದೆ ಕಾಡಿನ ಆಯುರ್ವೇದ ತಜ್ಞನಾಗಿರುತ್ತಾನೆ. ಮಲ್ಲಿಗೆ ಕಾಡಿನಲ್ಲಿರುವ ಬೀರನ ಮೇಲೆ ಪ್ರೇಮವಾಗುತ್ತದೆ. ಆದ್ರೆ ಬೀರ ಅದೇ ಕಾಡಿನ ಮಲ್ಲಿಯನ್ನು ಪ್ರೀತಿಸುತ್ತಾನೆ. ನೀಲಾಂಬರಿಯನ್ನು ತಿರಸ್ಕರಿಸಿ ಮಲ್ಲಿಯನ್ನು ಮದುವೆಯಾಗುತ್ತಾನೆ. ಇದರಿಂದ ಕೋಪಗೊಂಡ ನೀಲಾಂಬರಿ ತಂದೆ ಮುಂದೆ ತನ್ನ ದುಃಖವನ್ನೆಲ್ಲಾ ಹೇಳಿಕೊಳ್ಳುತ್ತಾಳೆ. ಹುಟ್ಟಿದಾಗಲೇ ನನ್ನನ್ನು ಸಾಯಿಸಬೇಕಿತ್ತು ಎಂದಾಗ ನೀಲಾಂಬರಿ ತಂದೆ ಹೃದಯಾಘಾತದಿಂದ ಸಾಯುತ್ತಾನೆ. ಸಾಯುವ ಮುನ್ನ ತನ್ನಲ್ಲಿರುವ ಎಲ್ಲಾ ಶಕ್ತಿಯನ್ನು ಮಗಳಿಗೆ ವರ್ಗಾಯಿಸಿ, ಸೌಂದರ್ಯವತಿಯಾಗುವ ರಹಸ್ಯವನ್ನು ಹೇಳುತ್ತಾನೆ.
ಅಪ್ಪನಿಂದ ಪಡೆದ ಶಕ್ತಿ ಮತ್ತು ಒಲೆಗರಿಯನ್ನು ಓದಿ, ಮಲ್ಲಿಯನ್ನು ಬಲಿ ಪಡೆದುಕೊಂಡು ನೀಲಾಂಬರಿ ಸೌಂದರ್ಯವತಿಯಾಗುತ್ತಾಳೆ. ಮಲ್ಲಿಯ ರೂಪ ಪಡೆದುಕೊಂಡರೂ ನೀಲಾಂಬರಿಯನ್ನು ಬೀರ ತಿರಸ್ಕರಿಸುತ್ತಾನೆ. ಇದರಿಂದ ನೀಲಾಂಬರಿ ಆತನನ್ನು ಸಹ ಮುಗಿಸುತ್ತಾಳೆ. ಮುಂದೆ ತಾನು ಸೌಂದರ್ಯವತಿಯಾಗಲು ಚೆಂದದ ಯುವತಿಯರನ್ನು ಬಲಿ ಪಡೆದುಕೊಳ್ಳಲು ಮುಂದಾಗುತ್ತಾಳೆ. ನಂತರ ಅಖಿಲಾ ಶಿವರಾಂ ಆಗಿ ಬದಲಾಗುತ್ತಾಳೆ. ಮುಂದೆ ಅಖಿಲಾಳ ಅಂತ್ಯ ಹೇಗಾಗುತ್ತೆ ಅನ್ನೋದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಈ ಸಿನಿಮಾವನ್ನು ಯುಟ್ಯೂಬ್‌ನಲ್ಲಿದ್ದು, ಯಾವುದೇ ಹಣ ಪಾವತಿಸದೇ ಉಚಿತವಾಗಿ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.