
ದೇಶಾದ್ರಿ ಹೊಸ್ಮನೆ
‘ಗುರು ದೇವೋಭವ’ ಎನ್ನುವ ಮಾತಿಗೆ ತಕ್ಕಂತೆಯೇ ಇರುವ ಒಬ್ಬ ಪ್ರಾಮಾಣಿಕ ಶಿಕ್ಷಕ. ಅಂತಹ ಶಿಕ್ಷಕ, ವ್ಯವಸ್ಥೆಯಿಂದ ಕಡೆಗಣಿಸಲ್ಪಟ್ಟಒಂದು ಸರ್ಕಾರಿ ಶಾಲೆಯನ್ನು ದ್ರೋಣನ ಹಾಗೆ ತನ್ನದೇ ಬುದ್ಧಿವಂತಿಕೆ, ಚತುರತೆ, ಚಾಣಾಕ್ಷತೆ ಮತ್ತು ಮಕ್ಕಳ ಮೇಲಿನ ಕಕ್ಕುಲತೆಯೊಂದಿಗೆ ಹೇಗೆ ಅತ್ಯುತ್ತಮ ಶಾಲೆಯನ್ನಾಗಿ ಪರಿವರ್ತಿಸುತ್ತಾನೆ ಎನ್ನುವುದು ಶಿವರಾಜ್ ಕುಮಾರ್ ಪಾತ್ರಕ್ಕಿರುವ ಪ್ರಾಮುಖ್ಯತೆ, ಜತೆಗೆ ಇದು ಈ ಚಿತ್ರದ ಒನ್‌ಲೈನ್ ಕತೆ.
ಸರ್ಕಾರಿ ಶಾಲೆಗಳ ಪರಿಸ್ಥಿತಿ ಇವತ್ತು ಶೋಚನೀಯ ಎನ್ನುವುದು ಎಲ್ಲರಿಗೂ ಗೊತ್ತು. ಶಾಲೆಗಳು ಚೆನ್ನಾಗಿದ್ದರೆ ಶಿಕ್ಷಕರೇ ಇರುವುದಿಲ್ಲ, ಶಿಕ್ಷಕರಿದ್ದರೆ, ಶಾಲೆಗಳಲ್ಲಿ ಸರಿಯಾದ ವ್ಯವಸ್ಥೆಗಳೇ ಇರುವುದಿಲ್ಲ. ಅವೆಲ್ಲವನ್ನು ಕಂಡು ಬೇಸರ ಪಟ್ಟವರಿಗೆ, ಅನಿವಾರ್ಯ ಕಾರಣದಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ನೋವುಂಡವರಿಗೆ ಗುರು ಸಾಹಸ ಇಲ್ಲಿ ಇಷ್ಟವಾಗುತ್ತದೆ. ಶಿಕ್ಷಣ ಮಾಫಿಯಾದ ವಿರುದ್ಧದ ಆತನ ಹೋರಾಟ ಸರಿಯಾದದ್ದೇ ಎನಿಸುತ್ತದೆ. ಆ ಕಾರಣಕ್ಕೆ ಚಿತ್ರ ನೋಡುವ ಪ್ರತಿಯೊಬ್ಬ ಪ್ರೇಕ್ಷಕರನಿಗೂ ತಮ್ಮೂರಿನ ಸರ್ಕಾರಿ ಶಾಲೆಗೂ ಇಂತಹ ಒಬ್ಬ ಶಿಕ್ಷಕ ಬೇಕೆನಿಸುತ್ತದೆ.
ಖಡ್ಗಕ್ಕಿಂತ ಲೇಖನಿ ಹರಿತ ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಒಂದು ಪೆನ್ ಎಷ್ಟೇಲ್ಲ ಬದಲಾವಣೆ ತರಬಲ್ಲದು ಎನ್ನುವುದನ್ನು ನೋಡುಗನ ಮನಸ್ಸಿಗೆ ನಾಟುವಂತೆ ತೋರಿಸುತ್ತದೆ. ಲಾಂಗು, ಮಚ್ಚುಗಳನ್ನು ಹಿಡಿದಿದ್ದ ಶಿವಣ್ಣ, ಇಲ್ಲಿ ಸೀಮೆಸುಣ್ಣ , ಪೆನ್ ಹಿಡಿದು ವ್ಯವಸ್ಥೆಯನ್ನು ಸರಿಪಡಿಸಲು ಹೊರಾಡುತ್ತಾರೆ. ಎಡಗೈನಲ್ಲಿರುವ ಅವರ ವಾಚ್, ಬಲಗೈಗೆ ಬಂದರೆ ಎದುರಾಳಿಗೆ ಒದೆ ಗ್ಯಾರಂಟಿ ಎನ್ನುವುದನ್ನು ಸೂಚ್ಯವಾಗಿ ಬಳಸಿದ್ದಾರೆ ನಿರ್ದೇಶಕರು. ಇಷ್ಟುದಿನ ವಿಭಿನ್ನ ಪಾತ್ರಗಳಲ್ಲಿ ರಂಜಿಸಿದ್ದ ಶಿವರಾಜ್ ಕುಮಾರ್, ಶಿಕ್ಷಕರಾಗಿಯೂ ಸೈ ಎನಿಸಿಕೊಳ್ಳಬಲ್ಲರು ಎನ್ನುವುದನ್ನು ಅವರ ಪಾತ್ರವೇ ಹೇಳುತ್ತದೆ. ಶಿವರಾಜ್ ಕುಮಾರ್ ಅವರ ಅಭಿನಯದ ಕಾರಣಕ್ಕೆ ಇಷ್ಟವಾಗುವ ಸಿನಿಮಾ, ನಿರೂಪಣೆಯಲ್ಲಿನ ದೋಷದಿಂದ ಒಂದಷ್ಟುಬೇಸರ ತರಿಸುವುದು ಹೌದು. ಅದಕ್ಕೆ ನಿರ್ದೇಶಕರೇ ಹೊಣೆ.
ಚಿತ್ರತಂಡ ಅಧಿಕೃತವಾಗಿ ಹೇಳದಿದ್ದರೂ ಇದೊಂದು ರಿಮೇಕ್ ಚಿತ್ರ. ತಮಿಳಿನ ‘ಸಾಟ್ಟಯ್ ’ ಚಿತ್ರವೇ ಕನ್ನಡಕ್ಕೆ ಬಂದಿದೆ. ಆ ಸಿನಿಮಾ ನೋಡಿದವರಿಗೆ ಪ್ರತಿ ದೃಶ್ಯದ ಯಥಾ ರೂಪ ಇಲ್ಲೂ ಕಾಣಿಸಿಕೊಳ್ಳುತ್ತದೆ. ಇಷ್ಟಾಗಿಯೂ ಇಲ್ಲಿನ ನೇಟಿವಿಟಿಯ ಛಾಯೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಅದು ಚಿತ್ರದ ಪ್ಲಸ್ ಪಾಯಿಂಟ್. ಜೆ.ಎಸ್. ವಾಲಿ ಛಾಯಾಗ್ರಹಣ, ರಾಮ್ ಕ್ರಿಸ್ ಸಂಗೀತ ಚಿತ್ರದ ನಿರೂಪಣೆಯಲ್ಲಿನ ದೋಷಗಳನ್ನು ಮರೆ ಸರಿಸಿ, ರಂಜಿಸುತ್ತವೆ. ಕಲಾವಿದರ ಪೈಕಿ ನಾಯಕಿ ಇನಿಯಾ ಅವರದ್ದು ಉಪಸ್ಥಿತಿ ಮಾತ್ರ. ಬಾಬು ಹಿರಣ್ಣಯ್ಯ, ರಂಗಾಯಣ ರಘು, ಸ್ವಾತಿ ಶರ್ಮಾ ಹಾಗೂ ಲಿಖಿತ್ ಅವರ ಪಾತ್ರಗಳಲ್ಲಿನ ಅಭಿನಯ ತುಂಬಾ ಸಹಜತೆ ಇದೆ. ಆ ಕಾರಣಕ್ಕೆ ಅವೆರೆಲ್ಲ ಪ್ರೇಕ್ಷಕನಿಗೆ ಇಷ್ಟವಾಗುತ್ತಾರೆ. ಡಿಫೆರೆಂಟ್ ಡ್ಯಾನಿ ಮತ್ತು ವಿಜಿ ಸಾಹಸದಲ್ಲಿ ಶಿವರಾಜ್ ಕುಮಾರ್ ಅವರ ಆ್ಯಕ್ಷನ್ ಸನ್ನಿವೇಶಗಳು ಅವರ ಅಭಿಮಾನಿಗಳಿಗೆ ರಂಜನೀಯ ಭರ್ಜರಿ ಭೋಜನವೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.