ರಾಮಾಯಣವನ್ನು ರಾವಣನ ಮೂಲಕ ನೋಡಿದರೆ ಹೇಗಿರುತ್ತದೆ, ಗೌತಮ ಬುದ್ಧನ ಅಹಿಂಸೆಯನ್ನು ಅಂಗುಲಿಮಾಲನ ದೃಷ್ಟಿಕೋನದಲ್ಲಿ ನೋಡಿದಾಗ ಏನನಿಸುತ್ತದೆ, ಹಾಗೆ ಚರಿತ್ರೆಯಲ್ಲಿ ವಿಲನ್ಗಳು ಅನಿಸಿಕೊಂಡವರ ನೆರಳಿನಲ್ಲಿ ಆ ದಿನಗಳ ಕತೆಗಳನ್ನು ಓದಿದಾಗ ಎಂಥ ರೋಚಕ ಮೂಡುತ್ತದೆ ಎಂಬುದಕ್ಕೆ ಸಾಹಿತಿ ಬಿ ಎಲ್ ವೇಣು ಅವರ ‘ದಳವಾಯಿ ದಂಗೆ’ ಕಾದಂಬರಿ ಉತ್ತಮ ಉದಾಹರಣೆ.
ಆರ್ ಕೇಶವಮೂರ್ತಿ
ಪಾಳೆಗಾರರ ಸಾಮ್ರಾಜ್ಯಕ್ಕೆ ಕಾವಲು ಇದ್ದ ದಳವಾಯಿಗಳ ನಾಯಕನೇ ಮುದ್ದಣ್ಣ. ಮುಂದೆ ಪಾಳೆಗಾರರ ಆಡಳಿತದಲ್ಲಿನ ಆಂತರಿಕ ಕಲಹವಾದಾಗ ಅದನ್ನೇ ಬಂಡವಾಳ ಮಾಡಿಕೊಂಡ ದಳವಾಯಿ ಮುದ್ದಣ್ಣ ಆಡಿದ ಚದುರಂಗ ಆಟವೇ ‘ದಳವಾಯಿ ದಂಗೆ’ ಚಿತ್ರದ ಮುಖ್ಯ ಕತೆ. ಪಾಳೆಗಾರರ ಇತಿಹಾಸ ಪುಟಗಳನ್ನು ದಳವಾಯಿ ಮುದ್ದಣ್ಣ ಮೂಲಕ ನೋಡುತ್ತ ಭರಮಣ್ಣ ನಾಯಕ ಮತ್ತು ದಳವಾಯಿ ಮುದ್ದಣ್ಣನನ್ನು ಮುಖಾಮುಖಿ ಆಗಿಸುತ್ತಾರೆ. ಹೀಗೆ ಇಬ್ಬರ ಮುಖಾಮುಖಿಯ ರೋಚಕ ಇತಿಹಾಸದ ಕಥನವೇ ‘ಬಿಚ್ಚುಗತ್ತಿ’ ಚಿತ್ರದ ಮುಖ್ಯ ಸರಕು.
undefined
ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಕಮಾಲ್; 'ಬಿಚ್ಚುಗತ್ತಿ' ಬಗ್ಗೆ ನೀವೇ ಕೇಳಿ!
ನಿರ್ದೇಶಕ ಹರಿ ಸಂತೋಷ್ ಅವರು ಗತಿಸಿದ ಚರಿತ್ರೆಗೆ ಸಿನಿಮಾ ಕನ್ನಡಿ ಇಡುವ ಸಾಹಸ ಮಾಡಿದ್ದಾರೆ. ಚರಿತ್ರೆಯ ಪುಟಗಳು, ಕತೆಗಳು, ವ್ಯಕ್ತಿಗಳು, ಅವರ ಜೀವನ ವರ್ತಮಾನಕ್ಕೆ ರೋಚಕವಾಗಿರುತ್ತವೆ. ಅಂಥ ಐತಿಹಾಸಿಕ ಪುಟಗಳ ಕತೆಗಳು ಸಿನಿಮಾ ಪರದೆ ಮೇಲೆ ದೃಶ್ಯಗಳಾಗಿ ಮೂಡಿದಾಗ ಕುತೂಹಲ ಹೆಚ್ಚಾಗುವುದು ಸಹಜ. ‘ಬಿಚ್ಚುಗತ್ತಿ’ ಸಿನಿಮಾ ಕೂಡ ಹೀಗೆ ಎಲ್ಲರ ಗಮನ ಸೆಳೆದಿದ್ದು ನಿಜ. ಒಬ್ಬರಿಗೆ ಸಿಂಹಾಸನದ ದಾಹ, ಮತ್ತೊಬ್ಬರಿಗೆ ಸಾಮ್ರಾಜ್ಯದ ಉಳಿಸುವ ಜವಾಬ್ದಾರಿ. ಈ ಅಧಿಕಾರ ದಾಹ, ಸಾಮ್ರಾಜ್ಯ ಕಟ್ಟುವ ಜವಾಬ್ದಾರಿ ಈ ಎರಡು ಎದೆ ಸೆಟೆದು ಎದುರುಬದರು ನಿಂತಾಗ, ಇವರ ನಡುವೆ ಸಿದ್ದಾಂಬೆ ಕತ್ತಿ ಝಳಪಿಸಿದಾಗ, ತಮ್ಮ ನಾಯಕನ ವಿರುದ್ಧವೇ ಸೈನಿಕರು ದಂಗೆ ಎದ್ದಾಗ, ಮುದ್ದಣ್ಣನ ಪತ್ನಿಯೇ ಸತ್ಯ ಬಿಚ್ಚಿಟ್ಟಾಗ, ಒಬ್ಬ ಸಾಮಾನ್ಯ ಯುವಕ ಭರಮಣ್ಣ ನಾಯಕನಾಗುವುದು ಹೇಗೆ ಎಂಬುದನ್ನು ತಿಳಿಯಲು ನೀವು ಈ ಸಿನಿಮಾ ನೋಡಬೇಕು. ಇಲ್ಲಿವರೆಗೂ ನಾವು ಓದಿರುವ ಚರಿತ್ರೆಯ ಪುಟಗಳು ತೆರೆ ಮೇಲೆ ಹೇಗೆ ಮೂಡಿವೆ ಎನ್ನುವ ಕುತೂಹಲ ಈ ಚಿತ್ರ ಉತ್ತರವಾಗುತ್ತದೆ. ಇಲ್ಲಿ ಕಾದಂಬರಿಕಾರ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
'ಬಿಚ್ಚುಗತ್ತಿ' ಗಾಗಿ ಹೊಸ ವರಸೆ ಶುರು ಮಾಡಿದ ಹರಿಪ್ರಿಯಾ!
ಆದರೆ, ಆ ಕಾದಂಬರಿಯನ್ನು ಸಿನಿಮಾ ಮಾಡುವ ಹೊತ್ತಿನಲ್ಲಿ ನಿರ್ದೇಶಕರು, ಇಡೀ ಚಿತ್ರದ ಕತೆಯನ್ನು ಮೂವರು ಪಾತ್ರಧಾರಿಗಳ ಹೆಗಲ ಮೇಲೆ ಹಾಕಿ ಸುಮ್ಮನಾಗುತ್ತಾರೆ. ಸಿದ್ದಾಂಬೆ ಹರಿಪ್ರಿಯಾ, ದಳವಾಯಿ ಮುದ್ದಣ್ಣ ಪಾತ್ರಧಾರಿ ತೆಲುಗು ನಟ ಪ್ರಭಾಕರ್, ಭರಮಣ್ಣ ನಾಯಕನಾಗಿ ರಾಜ್ವರ್ದನ್; ಇವರೇ ಚಿತ್ರವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಹೀಗಾಗಿ ಮುದ್ದಣ್ಣ ಆಡುವ ತಪ್ಪು ತಪ್ಪಾದ ಕನ್ನಡ ಭಾಷೆ, ನಿರ್ದೇಶಕರ ಅಧ್ಯಯನ ಕೊರತೆಯಿಂದ ಪೇಲವ ದೃಶ್ಯಗಳಾಗಿ ಮೂಡುವ ಈ ಚಿತ್ರ ಇಷ್ಟವಾಗುವುದು ಅದರ ಮೂಲ ಕತೆಯ ಕಾರಣಕ್ಕೆ. ಜತೆಗೆ ಹರಿಪ್ರಿಯಾ ಮತ್ತು ರಾಜ್ವರ್ಧನ್ ಅವರ ಸ್ಕ್ರೀನ್ ಪ್ರಸೆನ್ಸಿನಿಂದ. ಶ್ರೀನಿವಾಸಮೂರ್ತಿ, ರಮೇಶ್ ಪಂಡಿತ್ ಮುಂತಾದ ಪ್ರಬುದ್ಧ ನಟರಿಂದ ‘ಬಿಚ್ಚುಗತ್ತಿ’ಯನ್ನು ದರ್ಶನ ಮಾಡಿಕೊಳ್ಳಬಹುದು.
ಸೀಮಿತ ಅವಕಾಶದಲ್ಲೇ ಚಿತ್ರವನ್ನು ಕಟ್ಟಿಕೊಡುವ ಗುರುಪ್ರಶಾಂತ್ ರೈ ಅವರ ಛಾಯಾಗ್ರಹಣ. ಹಾಗಂತ ಕತೆ ಇಲ್ಲಿಗೆ ಮುಗಿದಿಲ್ಲ. ಮೊಗಲರ ದಾಳಿ ಮತ್ತು ಭರಮಣ್ಣನ ಅಬ್ಬರದ ಕಾಳಗವನ್ನು ‘ದಳವಾಯಿ ದಂಗೆ-2’ರಲ್ಲಿ ನೋಡಬಹುದು.