ಸಂಯುಕ್ತಾ ಹೆಗ್ಡೆ, ಅಗ್ನಿ ಶ್ರೀಧರ್, ಅರುಣ್ ಸಾಗರ್, ಅಚ್ಯುತ್ ಕುಮಾರ್, ರೋಷನ್ ಅಗ್ನಿ ಶ್ರೀಧರ್ ನಟನೆಯ ಸಿನಿಮಾ ರಿಲೀಸ್ ಆಗಿದೆ.
ರಾಜೇಶ್ ಶೆಟ್ಟಿ
ಇದೊಂದು ನಿಗೂಢ ಸಿನಿಮಾ. ವಿಚಿತ್ರ ಜಗತ್ತಿನ ಸಿನಿಮಾ. ತಂತ್ರ ಮಂತ್ರ ಆರಾಧನೆಯ ನಿಗೂಢತೆ, ಕಾಳಿ ದೇವಿಯ ದೈವಿಕತೆ, ಸ್ತ್ರೀ ಬಲಿಯ ಕ್ಷುದ್ರತೆ ತನ್ನೊಳಗಿಟ್ಟುಕೊಂಡಿರುವ ಸಿನಿಮಾ. ಚೊಚ್ಚಲ ನಿರ್ದೇಶಕ ಅಭಿಷೇಕ್ ಬಸಂತ್ ವಿಭಿನ್ನ ಜಗತ್ತೊಂದನ್ನು ಅತ್ಯಂತ ಸ್ಟೈಲಿಶ್ ಆಗಿ ಕಟ್ಟಿಕೊಟ್ಟಿದ್ದಾರೆ. ಸೆಟ್‌ಗಳ ಅದ್ದೂರಿತನ, ವಾತಾವರಣದ ಡೀಟೇಲಿಂಗ್ ಅಚ್ಚರಿ ಹುಟ್ಟಿಸುತ್ತದೆ.
ನಿರ್ದೇಶನ: ಅಭಿಷೇಕ್ ಬಸಂತ್
ತಾರಾಗಣ: ಸಂಯುಕ್ತಾ ಹೆಗ್ಡೆ, ಅಗ್ನಿ ಶ್ರೀಧರ್, ಅರುಣ್ ಸಾಗರ್, ಅಚ್ಯುತ್ ಕುಮಾರ್, ರೋಷನ್ ಅಗ್ನಿ ಶ್ರೀಧರ್
ರೇಟಿಂಗ್: 3
ಸೂಟು ಬೂಟು ಧರಿಸಿಕೊಂಡು ಅತ್ಯಾಧುನಿಕ ಜಗತ್ತಿನಲ್ಲಿ ಬೆರೆತುಹೋಗಿರುವ ತಂತ್ರ ಮಂತ್ರ ಆರಾಧಕನಿಂದ ಕತೆ ಶುರುವಾಗುತ್ತದೆ. ಆತನ ಕ್ಷುದ್ರ ಜಗತ್ತಿಗೆ ಹುಡುಗಿಯೊಬ್ಬಳು ಬರುವಲ್ಲಿಗೆ ಕತೆ ತಿರುವು ಪಡೆದುಕೊಳ್ಳುತ್ತದೆ. ಆರಂಭದಲ್ಲಿ ಕುತೂಹಲಕರವಾಗಿಯೇ ಸಾಗುವ ಸಿನಿಮಾ ಇಂಟರ್ವಲ್ ಸಂದರ್ಭದಲ್ಲಿ ಮತ್ತೊಂದು ಆಯಾಮಕ್ಕೆ ಹೊರಳಿಕೊಳ್ಳುತ್ತದೆ.
ಈ ಚಿತ್ರದ ಅಂತ್ಯವನ್ನು ಊಹಿಸುವುದು ಅಸಾಧ್ಯವೇನಲ್ಲ. ಆದರೆ ಮಧ್ಯದಲ್ಲಿ ಬರುವ ಸ್ತ್ರೀ ಬಲಿ ಮತ್ತಿತರ ಸಂಗತಿಗಳು ಸುಲಭಕ್ಕೆ ಅರಗಿಸಿಕೊಳ್ಳಲಾಗುವುದಿಲ್ಲ. ಕನ್ನಡದ ಮಟ್ಟಿಗೆ ಇದೊಂದು ಭಿನ್ನ ಸಿನಿಮಾ. ಈ ಸಿನಿಮಾದ ಹಿನ್ನೆಲೆ ಸಂಗೀತವಂತೂ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದೆ. ಚಿತ್ರದ ನಿರೂಪಣೆಯನ್ನೂ ಸಾವಧಾನವಾಗಿ ಮಾಡಿದ್ದಾರೆ. ಅಲ್ಲಲ್ಲಿ ನಿಂತು ಚಿತ್ರಕ್ಕೆ ಚೌಕಟ್ಟು ಹಾಕಿ ಗೋಡೆಗೆ ಹಾಕಿಟ್ಟಂತೆ ಸೊಗಸಾದ ಸುಂದರವಾದ ಚಿತ್ರದಂತೆ ಕಾಣುತ್ತದೆ. ನಿಧಾನಕ್ಕೆ ಮುಂದೆ ಸರಿಯುತ್ತದೆ.
ಸಂಯುಕ್ತಾ ಹೆಗ್ಡೆ ಗಮನಾರ್ಹ ನಟನೆ ಮಾಡಿದ್ದಾರೆ. ಪ್ರಮುಖ ಪಾತ್ರಧಾರಿ ಅಗ್ನಿ ಶ್ರೀಧರ್ ಅವರ ಗತ್ತು, ಗಾಂಭೀರ್ಯ ಅವರ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಕೆಲಸ ಮೆಚ್ಚುವಂತಿದೆ. ಅಳ್ಳೆದೆಯವರಿಗೆ ಈ ಸಿನಿಮಾ ಕಷ್ಟವಾಗಬಹುದು. ತಂತ್ರ ಮಂತ್ರ ಅಲೌಕಿಕ ವಸ್ತು ವಿಚಾರ ಆಸಕ್ತರಿಗೆ ಕುತೂಹಲ ಹುಟ್ಟಿಸಬಹುದು.