
ಆರ್.ಎಸ್.
90ರ ದಶಕದ ವಾತಾವರಣದಲ್ಲಿ ನಡೆಯುವ ಪ್ರೇಮ ಕಥನವಿದು. ಪ್ರೇಮದ ನವಿರುತನ, ವಿರಹ, ಆತಂಕ, ಕುತೂಹಲ, ಗಾಬರಿ, ಆಹ್ಲಾದ, ವಿಷಾದ ಎಲ್ಲವನ್ನೂ ಅಡಗಿಸಿಕೊಂಡಿರುವ ಕತೆ ಇದು. ಅದೊಂದು ಊರು. ಗ್ರಾಮೀಣ ಪ್ರದೇಶ. ಅಲ್ಲೊಬ್ಬ ಒರಟ. ಅವನಿಗೊಂದು ಪ್ರೀತಿಯಾಗುತ್ತದೆ. ಆಕೆ ಮೃದು ಹುಡುಗಿ. ಸಂಪ್ರದಾಯಸ್ಥೆ. ಊರಲ್ಲೆಲ್ಲಾ ಅಬ್ಬರಿಸಿ ಬೊಬ್ಬಿರಿಯುವ ಹೀರೋಗೆ ಆಕೆಯನ್ನು ಕಂಡರೆ ತಳಮಳ. ವೀರಾಗ್ರೇಸರ ಆಕೆಯ ಎದುರು ಹಿಡಿಯಾಗುತ್ತಾನೆ. ತಳಮಳಿಸುತ್ತಾನೆ.
ಈ ಪ್ರೇಮಕತೆಗೊಂದು ಬಾಲ್ಯದ ಫ್ಲಾಶ್‌ಬ್ಯಾಕು, ಅಡ್ಡಿ ಆತಂಕಕ್ಕೆ ಜಾತಿ ಸಮಸ್ಯೆ, ಯೋಚನೆಗೆ ಸಾಮಾಜಿಕ ಒತ್ತಡ, ಕತೆಗೆ ತೀವ್ರತೆ ಒದಗಿಸುವುದಕ್ಕೆ ಅಲ್ಲೊಂದು ಟ್ವಿಸ್ಟು.. ಹೀಗೆ ಕತೆ ಮುಂದುವರಿಯುತ್ತದೆ. ಪ್ರೇಮಕತೆಗೆ ಕಾಡುವ ಗುಣ ಇರುತ್ತದೆ. ಆ ಆಹ್ಲಾದವನ್ನು ಕಟ್ಟಿಕೊಡುವುದಕ್ಕೆ ರೂಪಕಾತ್ಮಕ ಚಿತ್ರಕ ಗುಣ ಬೇಕಾಗುತ್ತದೆ. ಅದಕ್ಕೆ ಪೂರಕವಾಗಿರುವ ಈ ಸಿನಿಮಾದ ವಾತಾವರಣ ಸೊಗಸಾಗಿದೆ. ಛಾಯಾಗ್ರಾಹಣ 90ರ ದಶಕವನ್ನು ಕಟ್ಟಿಕೊಡುವಂತೆ ಮೂಡಿ ಬಂದಿದೆ. ಕತೆ ಲವಲವಿಕೆಯಿಂದ ಆರಂಭವಾಗಿ, ಹಗುರವಾಗಿ ಸರಾಗವಾಗಿ ಮುಂದೆ ಸಾಗಿ ದ್ವಿತೀಯಾರ್ಧದಲ್ಲಿ ತೀವ್ರತೆ ಪಡೆದುಕೊಳ್ಳುತ್ತದೆ.
ಚಿತ್ರ: 1990s
ನಿರ್ದೇಶನ: ನಂದಕುಮಾರ್ ಸಿ.ಎಂ.
ತಾರಾಗಣ: ಅರುಣ್, ರಾಣಿ ವರದ್, ಸುಪ್ರೀತ್ ಆರ್, ಶಿವಾನಂದ ತುರುವನೂರು
ನವಿರುತನ ಕಳೆದು ಬದುಕಿನ ಸಂಕೀರ್ಣತೆ ಆವರಿಸಿಕೊಳ್ಳುತ್ತದೆ. ಇದೊಂದು ನಾಳೆಗಳನ್ನು ಮೊದಲೇ ಕಾಣಿಸುವ ಸಿನಿಮಾ. ಬರವಣಿಗೆ ಕೊಂಚ ಆಳವಾಗಿದ್ದರೆ ಅಂತನ್ನಿಸುವ ಸಿನಿಮಾ. ಅಲ್ಲದೇ ಚಿತ್ರದ ತುಂಬಾ ಹೊಸಬರು ತುಂಬಿಕೊಂಡಿದ್ದಾರೆ. ಆಸ್ಥೆಯಿಂದ ಪಾತ್ರಗಳಿಗೆ ಜೀವ ತುಂಬಲು ಯತ್ನಿಸಿದ್ದಾರೆ. ಪ್ರೇಮ ಮತ್ತು ವಿಷಾದ ಇವೆರಡೂ ಗಾಢವಾಗಿ ಹಬ್ಬಬಹುದಾದ ಭಾವಗಳಾದ್ದರಿಂದ ಈ ಸಿನಿಮಾ ಒಂದು ಕಾಡುವ ಪ್ರಯತ್ನವಾಗಿ ಮೂಡಿಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.