
ಆರ್.ಕೇಶವಮೂರ್ತಿ
ಹಾಸ್ಯ, ಭಯ, ಥ್ರಿಲ್ಲರ್ ಮತ್ತು ರೋಚಕತೆಯೊಂದಿಗೆ ಸಾಗುತ್ತಾ ‘ಅಪಾಯವಿದೆ ಎಚ್ಚರಿಕೆ’ ಎಂದು ಹೇಳುತ್ತಲೇ ನಗಿಸುತ್ತದೆ. ದೇವ್ರು, ದೆವ್ವ ಮತ್ತು ಸಂಪತ್ತಿನ ಸುತ್ತಲಿನ ಈ ಕತೆಗೆ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಜೀವಾಳ. ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುತ್ತಲೇ, ಈ ಕಾಡಿನಲ್ಲಿ ಏನೋ ಇದೆ ಎನ್ನುವ ಆಸೆ ಹುಟ್ಟಿಸಿ, ಸಿನಿಮಾ ಮುಗಿಯುವ ತನಕ ಪ್ರೇಕ್ಷಕನನ್ನು ಸೀಟು ಬಿಟ್ಟು ಎದ್ದೇಳದಂತೆ ಕಾಪಾಡಿಕೊಳ್ಳುವ ಗುಣವನ್ನು ಧಾರಾಳವಾಗಿ ಧಾರೆ ಎರೆಯಲಾಗಿದೆ. ರಾತ್ರಿ ಹೊತ್ತು ಕವಲೇದುರ್ಗದ ಕಾಡಿನಲ್ಲಿ ಏನೆಲ್ಲ ನಡೆಯುತ್ತದೆ ಎಂದು ಹೇಳುತ್ತಲೇ, ‘ನೀವು ಅಂದುಕೊಂಡಂತಿಲ್ಲ ಮತ್ತೇನೋ ಇದೆ’ ಎನ್ನುವ ಅಚ್ಚರಿ ಮೂಡಿಸುವುದು ಚಿತ್ರದ ಪ್ಲಸ್ ಪಾಯಿಂಟ್.
ಬಿಗಿಯಾದ ಚಿತ್ರಕಥೆ, ಪಾತ್ರಧಾರಿಗಳ ಸಹಜ ನಟನೆ ಮತ್ತು ಗಟ್ಟಿಯಾದ ಫ್ಲ್ಯಾಷ್ ಬ್ಯಾಕ್ ಕತೆ ಈ ಮೂರನ್ನು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ನಿಜವಾದ ಹಾರರ್ ಅನುಭವಕ್ಕೆ ಪ್ರೇಕ್ಷಕ ಪಾತ್ರನಾಗುತ್ತಾನೆ. ಆಸೆಗಳನ್ನು ಈಡೇರಿಸಿಕೊಳ್ಳಲು ಅಡ್ಡದಾರಿ ಹಿಡಿದರೆ ಏನಾಗುತ್ತದೆ ಎಂಬುದನ್ನು ಬಹು ಆಪ್ತವಾಗಿ ಹೇಳಲಾಗಿದೆ. ಸೂರಿ, ಪೆಟ್ಗೆ, ಗಾಬ್ರಿ ಎಂಬ ಮೂವರು ಹುಡುಗರು ಕವಲೇದುರ್ಗದ ಕೋಟೆ ಕಾಡಿನ ದಾರಿಯಲ್ಲಿ ಹೆಜ್ಜೆ ಹಾಕುತ್ತಾರೆ. ಗಂಧದ ಮರಗಳನ್ನು ಕಳ್ಳತನ ಮಾಡಲು ಹೋಗುವ ಈ ಮೂವರಿಗೆ ಅಲ್ಲಿ ಏನೆಲ್ಲ ಎದುರಾಗುತ್ತದೆ ಎಂಬುದು ಸಿನಿಮಾದಲ್ಲಿ ನೋಡಬೇಕು. ಕಾಡಿನ ಸಂಪತ್ತಿಗೆ ಕೈ ಹಾಕಬಾರದು ಎಂದು ಹೇಳುತ್ತಲೇ ದೇವರು ಮತ್ತು ದೆವ್ವದ ಹೆಸರಿನಲ್ಲಿ ನಡೆಯುವ ಮುಖವಾಡಗಳನ್ನೂ ಕಳಚುವುದು ಚಿತ್ರದ ಹೆಚ್ಚುಗಾರಿಕೆ.
ಚಿತ್ರ: ಅಪಾಯವಿದೆ ಎಚ್ಚರಿಕೆ
ತಾರಾಗಣ: ಅಭಿಜಿತ್ ತೀರ್ಥಹಳ್ಳಿ
ನಿರ್ದೇಶನ : ವಿಕಾಶ್ ಉತ್ತಯ್ಯ, ರಾಧಾ ಭಗವತಿ, ಅಶ್ವಿನ್ ಹಾಸನ್, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್
ರೇಟಿಂಗ್: 3
ಸೂರಿ ಪಾತ್ರದಲ್ಲಿ ವಿಕಾಶ್ ಉತ್ತಯ್ಯ, ಪೆಟ್ಗೆ ಪಾತ್ರದಲ್ಲಿ ರಾಘವ್, ಗಾಬ್ರಿ ಪಾತ್ರದಲ್ಲಿ ಮಿಥುನ್, ದೇವಿಕಳಾಗಿ ಹರಿಣಿ ಶ್ರೀಕಾಂತ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರ ನಡುವೆ ಅನಿರೀಕ್ಷಿತ ಪಾತ್ರದ ಮೂಲಕ ಇಡೀ ಚಿತ್ರಕ್ಕೆ ಹೊಸ ತಿರುವು ಕೊಡುವ ಪಾತ್ರದಲ್ಲಿ ಅಶ್ವಿನ್ ಹಾಸನ್ ಅಚ್ಚರಿಯಂತೆ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ನಾಯಕಿಯಾಗಿ ರಾಧಾ ಭಗವತಿ, ರುದ್ರನಾಗಿ ದೇವ್, ಕಲಾವತಿಯಾಗಿ ನವ್ಯಾ ಕತೆಗೆ ನ್ಯಾಯ ಸಲ್ಲಿಸಿದ್ದಾರೆ. ಹೀಗಾಗಿ ಚಿತ್ರ ನೋಡುವ ಪ್ರೇಕ್ಷಕ ಯಾವುದೇ ಅಪಾಯಗಳಿಲ್ಲದೆ ಈ ಸಿನಿಮಾ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.