ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಹರ್ಷ, ವಿನಯ್, ನಿಧಿ ಹೆಗ್ಡೆ, ಪ್ರತಿಮಾ ನಾಯಕ್ ನಟನೆಯ ಶಾಖಾಹಾರಿ ಸಿನಿಮಾ ರಿಲೀಸ್ ಆಗಿದೆ.
ರಾಜೇಶ್ ಶೆಟ್ಟಿ
ತುಂಬು ಹಸಿರಿರುವ, ದಟ್ಟ ಕಾಡಿರುವ, ಸಣ್ಣ ರಸ್ತೆಗಳ ಮಲೆನಾಡ ಊರು. ರಸ್ತೆಯ ತುದಿಯಲೊಂದು ಹೆಂಚಿನ ಹೋಟೆಲು. ಗಾಸಿಪ್ಪು ಹರಡುವ, ಸಮಾಚಾರ ಕೇಳುವ, ಹಸಿವನ್ನು ಇಂಗಿಸುವ, ಕಟ್ಟಿಗೆಯ ಒಲೆ ಉರಿಯುತ್ತಲೇ ಇರುವ ಶಾಖಾಹಾರಿ ಹೋಟೆಲು. ಅಲ್ಲೊಬ್ಬ ಭಟ್ಟರು. ಯಾವ ಊರಲ್ಲಾದರೂ ಇರಬಹುದು. ಹೇಗಾದರೂ ಕಾಣಬಹುದು.
undefined
ಆ ಭಟ್ಟರಿಗೊಂದು ಪ್ರೇಮ ಕತೆ. ಪ್ರಾದೇಶಿಕ ಸಮಾಚಾರ ಬರುವಾಗ ಊರಿನ ಬಸ್ಸು ಬರುತ್ತದೆ. ಆ ಬಸ್ಸಲ್ಲಿ ಸಾಗುವ ಒಂದು ಜೋಡಿ ಕಣ್ಣುಗಳ ಜೊತೆ ರಹಸ್ಯ ಸರಸ. ಒಂದು ಪತ್ರ, ಚೂರು ವಿರಹ, ಬಚ್ಚಿಟ್ಟ ಕಣ್ಣೀರು. ಆ ಊರಲ್ಲೊಬ್ಬ ಪೊಲೀಸ್ ಅಧಿಕಾರಿ. ಕೇಸು ಕಾಟ, ದಾಂಪತ್ಯ ಒತ್ತಡದಿಂದ ಹೈರಾಣಾಗಿರುವ ಜೀವ. ಜೊತೆಗೆ ವಿಧಿ ಲೀಲೆಗೆ ಸಿಕ್ಕ ಅಮಾಯಕ ಜೀವಗಳು. ಅವರೆಲ್ಲರ ತುಸು ಸಂಕಟದ ನಿಗೂಢ ಕತೆಯೇ ಶಾಖಾಹಾರಿ.
SARAMSHA REVIEW: ಮಾಯಾವಾಸ್ತವದ ಅಲೆಗಳಲ್ಲಿ ತೇಲಾಡಿಸಿ ದಡ ಮುಟ್ಟಿಸುವ ಚಿತ್ರ
ನಿರ್ದೇಶನ: ಸಂದೀಪ್ ಸುಂಕದ್
ತಾರಾಗಣ: ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಹರ್ಷ, ವಿನಯ್, ನಿಧಿ ಹೆಗ್ಡೆ, ಪ್ರತಿಮಾ ನಾಯಕ್
ರೇಟಿಂಗ್: 4
ಕತೆಗಳೇ ಅಡಗಿದಂತಿರುವ, ತಣ್ಣನೆ ಕೊಳದಂತಿರುವ ಊರು. ಅಲ್ಲಿನ ಒಂದು ಕುಟುಂಬದಲ್ಲಿ ಆಗುವ ಆಕಸ್ಮಿಕ ಘಟನೆ ಆ ಇಡೀ ಊರನ್ನೇ ಅಲ್ಲಾಡಿಸಿಬಿಡುತ್ತದೆ. ಅಷ್ಟರ ಮಟ್ಟಿಗೆ ಇದೊಂದು ತೀಕ್ಷ್ಣ ಬರವಣಿಗೆಯ ಬುದ್ಧಿವಂತ ಥ್ರಿಲ್ಲರ್. ನಿರ್ದೇಶಕರು ಪೊಯೆಟಿಕ್ ಆಗಿ ದೃಶ್ಯ ಕಟ್ಟುತ್ತಾರೆ. ತೀವ್ರವಾಗಿ ಕತೆ ಹೇಳುತ್ತಾರೆ. ಕಳೆದವರು ಎಲ್ಲಿ ಹೋದರು ಎಂಬ ಹುಡುಕಾಟ ಜಾರಿಯಲ್ಲಿರುತ್ತದೆ. ಆ ಹುಡುಕಾಟ ಮುಗಿದಾಗ ಒಂದು ಮೌನ. ಆ ಮೌನವೇ ಈ ಚಿತ್ರಕ್ಕೆ ಅರ್ಪಣೆ.
ಅಂತ್ಯದಲ್ಲಿ ಅಲ್ಲಿಯವರೆಗೆ ಇದ್ದ ಪಾತ್ರವೇ ತನ್ನ ಘನತೆ ತೊರೆಯುವ ಮಟ್ಟಿಗೆ ನಿಲ್ಲುತ್ತದೆ ಕತೆ. ಅದನ್ನು ಅರಗಿಸಿಕೊಳ್ಳಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಕೊನೆಯಲ್ಲಿ ಬೆಂಕಿಯಲ್ಲಿ ಸುಟ್ಟು ಹೋದ ಪ್ರೇಮ ಪತ್ರದ ತುಣುಕೊಂದು ಸಿಕ್ಕಿ ಆಹ್ಲಾದ ಕೊಡುತ್ತದೆ. ಇಂಥದ್ದೊಂದು ತೀವ್ರ ಸಿನಿಮಾ ಸಾಧ್ಯವಾಗಿಸಿದ ನಿರ್ದೇಶಕ ಸಂದೀಪ್ ಸುಂಕದ್, ನಟ ರಾಕ್ಷಸರಾದ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು, ಡಿಓಪಿ ವಿಶ್ವಜಿತ್ ರಾವ್ ಮತ್ತು ಇಡೀ ತಂಡ ಮೆಚ್ಚುಗೆಗೆ ಅರ್ಹ.