ಪ್ರೇಮಕತೆಯಲ್ಲಿ ಒಂದು ಮಹಾ ತಿರುವು ಎದುರಾಗುತ್ತದೆ. ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ಶುರು ಮಾಡುತ್ತಾರೆ. ಆ ತನಿಖೆಯಲ್ಲಿ ಅಚ್ಚರಿದಾಯಕ ಅಂಶಗಳೆಲ್ಲಾ ಎದುರಾಗುತ್ತಾ ಹೋಗುತ್ತವೆ. ಇಲ್ಲಿ ಪ್ರೇಮದ ನವಿರುತನವಿದೆ.
ಆರ್.ಬಿ.
ಆಗೊಮ್ಮೆ ಈಗೊಮ್ಮೆ ಹೊಸ ತಂಡಗಳು ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಿರುತ್ತವೆ. ಈ ಸಿನಿಮಾ ಕೂಡ ಆ ಗಮನಾರ್ಹ ಪ್ರಯತ್ನಗಳ ಸಾಲಿಗೆ ಸೇರಿಸಬಹುದಾದ ಇನ್‌ವೆಸ್ಟಿಗೇಟಿವ್ ಥಿಲ್ಲರ್. ಕುತೂಹಲಕರ ಚಿತ್ರಕತೆಯನ್ನು ಹೊಂದಿರುವ ಸಿನಿಮಾ ಇದು. ಒಂದು ಕಾಲೇಜು ಪ್ರೇಮಕತೆ ನಡೆಯುತ್ತಿರುತ್ತದೆ. ಎಲ್ಲವೂ ಸುಗಮವಾಗಿ ನಡೆಯುತ್ತಿರ ತಿರುವಾಗ ಆ ಹುಡುಗಿ ಪ್ರಭಾವಿ ವ್ಯಕ್ತಿಯೊಬ್ಬರ ಮಗಳು ಅನ್ನುವುದು ತಿಳಿಯುತ್ತದೆ. ಇದ್ದಕ್ಕಿದ್ದಂತೆ ಆ ಪ್ರೇಮಕತೆಯಲ್ಲಿ ಒಂದು ಮಹಾ ತಿರುವು ಎದುರಾಗುತ್ತದೆ. ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ಶುರು ಮಾಡುತ್ತಾರೆ. ಆ ತನಿಖೆಯಲ್ಲಿ ಅಚ್ಚರಿದಾಯಕ ಅಂಶಗಳೆಲ್ಲಾ ಎದುರಾಗುತ್ತಾ ಹೋಗುತ್ತವೆ. ಇಲ್ಲಿ ಪ್ರೇಮದ ನವಿರುತನವಿದೆ.
ಕಾಲೇಜು ಜೀವನದ ಆಹ್ಲಾದತೆಯಿದೆ. ತ್ಯಾಗದ ವಿಷಾದವಿದೆ. ದ್ವೇಷದ ಸಂಕಟವಿದೆ. ಹುಡುಕಾಟದ ರೋಚಕತೆ ಇದೆ. ಮುಂದೇನು ಎಂಬ ಕೌತುಕವಿದೆ. ವೇಗವಿದೆ ಮತ್ತು ತೀವ್ರತೆಯಿದೆ. ಅಷ್ಟರಮಟ್ಟಿಗೆ ನಿರ್ದೇಶಕರು ಸೊಗಸಾಗಿ ಸಿನಿಮಾ ಕಟ್ಟುತ್ತಾ ಹೋಗಿದ್ದಾರೆ. ಹೊಸಬರು ಮತ್ತು ಹಿರಿಯ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿಶೇಷವಾಗಿ ಅಕ್ಷಯ ಕಾರ್ಕಳ ಮನಸ್ಸಲ್ಲಿ ಉಳಿಯುವಂತೆ ನಟಿಸಿದ್ದಾರೆ. ದೀಪಕ್ ರೈ ಪಾಣಾಜೆ, ನವೀನ್ ಡಿ ಪಡೀಲ್ ಚಿತ್ರದ ತೂಕ ಹೆಚ್ಚಿಸಿದ್ದಾರೆ. ಸಂಗೀತ ನಿರ್ದೇಶಕ ಸುನಾದ್ ಗೌಮತ್ ಮೆಚ್ಚಬಲ್ಲ ಸಂಗೀತ ನೀಡಿದ್ದಾರೆ. ಇದೊಂದು ಹೊಸ ಹುಡುಗರು ಕಟ್ಟಿಕೊಟ್ಟಿರುವ ಸೊಗಸಾದ ಪ್ರಯತ್ನ.
ಶುಭ ಕೋರಿದ ಶ್ರೀಮುರಳಿ: ಉಡುಪಿಯ ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ‘ಪ್ರತ್ಯರ್ಥ’ ಚಿತ್ರಕ್ಕೆ ಶ್ರೀಮುರಳಿ ಶುಭಕೋರಿದ್ದಾರೆ. ಇತ್ತೀಚಿಗೆ ಅವರು ಈ ಚಿತ್ರದ ಟ್ರೇಲರನ್ನು ಬಿಡುಗಡೆ ಮಾಡಿದ್ದರು. ಈ ಸಿನಿಮಾ ಫೆ.28ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಕುರಿತು ನಿರ್ದೇಶಕ ಅರ್ಜುನ್ ಕಾಮತ್, ‘ಇದು ಇನ್ವೆಸ್ಟಿಗೇಶನ್ ಥ್ರಿಲ್ಲರ್. ಈಗಿನ ಯುವಪೀಳಿಗೆಗೆ ಯಾವ ತರಹದ ಕಥೆ ಬೇಕು ಎಂದು ಅರಿತುಕೊಂಡು ಒಂದು ವರ್ಷ ಸಮಯ ತೆಗೆದುಕೊಂಡು ನಾನು, ರಾಮ್ ಮತ್ತು ಸ್ನೇಹಿತರು ಸೇರಿ ರೂಪಿಸಿದ ಕತೆ ಇದು’ ಎಂದರು.
ಚಿತ್ರ: ಪ್ರತ್ಯರ್ಥ
ನಿರ್ದೇಶನ: ಅರ್ಜುನ್ ಕಾಮತ್
ತಾರಾಗಣ: ರಾಮನಾಥ ಶಾನಭಾಗ್, ಅಕ್ಷಯ ಕಾರ್ಕಳ, ಶ್ರುತಿ ಚಂದ್ರಶೇಖರ್, ಸುಮನ್
ನಾಗೇಶ್ ಎಂ, ಜಯ್ ಆರ್ ಪ್ರಭು ಈ ಸಿನಿಮಾದ ನಿರ್ಮಾಪಕರು. ನಿತ್ಯಾನಂದ ಪೈ ಹಾಗೂ ಪ್ರೇಮಕುಮಾರ್ ವಿ, ಭರತ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ. ರಾಮ್, ಅಕ್ಷಯ್ ಕಾರ್ಕಳ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ನಾಯಕಿಯಾಗಿ ಶ್ರುತಿ ಚಂದ್ರಶೇಖರ್ ಅಭಿನಯಿಸಿದ್ದಾರೆ. ಸುಮನ್ ತಲ್ವಾರ್, ನವೀನ್ ಡಿ ಪಡೀಲ್, ರಮೇಶ್ ಭಟ್, ದೀಪಕ್ ರೈ ತಾರಾಬಳಗದಲ್ಲಿದ್ದಾರೆ.