ಈ ಕತೆ ಆರಂಭವಾಗುವುದು ಹಳ್ಳಿಯ ನಾಲ್ವರು ಗೆಳೆಯರಿಂದ. ಅವರ ಪೋಕರಿತನ, ಪ್ರೇಮ ಪ್ರಸಂಗಗಳು, ಒದ್ದಾಟಗಳು, ಹಾರಾಟಗಳು, ಒಟ್ಟಾರೆ ಹಗುರ ಸನ್ನಿವೇಶಗಳು ಕತೆಯನ್ನು ಮಧ್ಯಂತರಕ್ಕೆ ತಲುಪಿಸುತ್ತವೆ.
ಆರ್.ಎಸ್.
ಹಳ್ಳಿಯ ಹಿನ್ನೆಯಲ್ಲಿ ನಡೆಯುವ ದುರಾಸೆಯ, ಅತಿಯಾಸೆಯ, ಚಂಚಲತೆಯ ಕಥನವಿದು. ಲವಲವಿಕೆಯಿಂದ, ಹಾಸ್ಯ ಪ್ರಧಾನವಾಗಿ ಆರಂಭವಾಗುವ ಈ ಸಿನಿಮಾ ಹೋಗ್ತಾ ಹೋಗ್ತಾ ಗಂಭೀರವಾಗುತ್ತಾ ಹೋಗುತ್ತದೆ. ಅಂತ್ಯ ಭಾಗದಲ್ಲಂತೂ ಅದ್ದೂರಿಯಾಗಿ ಕರುಣಾರಸವನ್ನು ದುಡಿಸಿಕೊಂಡಿರುವ ನಿರ್ದೇಶಕರು ಪ್ರೇಕ್ಷಕರ ಮನಸ್ಸಲ್ಲಿ ಅಯ್ಯೋ ಪಾಪ ಅನ್ನಿಸುತ್ತಾರೆ. ಒಂದು ಘನಗಂಭೀರ ವಿಚಾರವನ್ನು ದಾಟಿಸಲು ಯತ್ನಿಸುತ್ತಾರೆ. ಈ ಹಂತದಲ್ಲಿ ಬರುವ ವಾಸುಕಿ ವೈಭವ್ ಅವರ ಒಂದು ಹಾಡು ಆಹ್ಲಾದಕರವಾಗಿದೆ. ಕಣ್ಣು ಮುಚ್ಚಿ ಆ ಹಾಡನ್ನು ಮತ್ತಷ್ಟು ಕೇಳುತ್ತಲೇ ಇದ್ದುಬಿಡೋಣ ಅನ್ನಿಸುತ್ತದೆ.
ಆ ಹಾಡು ಈ ಸಿನಿಮಾದ ಹೈಲೈಟ್ ಎಂದರೂ ತಪ್ಪಿಲ್ಲ. ಈ ಕತೆ ಆರಂಭವಾಗುವುದು ಹಳ್ಳಿಯ ನಾಲ್ವರು ಗೆಳೆಯರಿಂದ. ಅವರ ಪೋಕರಿತನ, ಪ್ರೇಮ ಪ್ರಸಂಗಗಳು, ಒದ್ದಾಟಗಳು, ಹಾರಾಟಗಳು, ಒಟ್ಟಾರೆ ಹಗುರ ಸನ್ನಿವೇಶಗಳು ಕತೆಯನ್ನು ಮಧ್ಯಂತರಕ್ಕೆ ತಲುಪಿಸುತ್ತವೆ. ಆ ವೇಳೆಯಲ್ಲಿ ಇದ್ದಕ್ಕಿದ್ದಂತೆ ಶ್ರೀಕೃಷ್ಣ ಪರಮಾತ್ಮ ಪ್ರತ್ಯಕ್ಷನಾಗುತ್ತಾನೆ ಮತ್ತು ಕತೆಗೆ ಬೇರೆ ಆಯಾಮ ದೊರಕುತ್ತದೆ.
ಸಂಪತ್ತು ಎಂಬ ಅಂಶ ಬಂದಾಗ ಸಂಬಂಧಗಳು ಹೇಗೆ ಹಾಳಾಗುತ್ತವೆ ಎಂಬುದನ್ನು ನಿರ್ದೇಶಕರು ಸೂಕ್ಷ್ಮವಾಗಿ ಹೇಳುತ್ತಾರೆ. ಮನೆ ಒಡೆಯಲು, ಊರು ಹಾಳಾಗಲು ಮಾನವನ ದುರಾಸೆಯೇ ಮೂಲ ಕಾರಣ ಎಂದು ಹೇಳುವುದರ ಜೊತೆಗೆ ಅಂತ್ಯದಲ್ಲೊಂದು ಊಹೆಗೂ ಮೀರಿದ ಟ್ಟಿಸ್ಟ್ ಅನ್ನೂ ಇಟ್ಟಿದ್ದಾರೆ. ಆ ಟ್ವಿಸ್ಟು ಚಿಂತನಾತ್ಮಕ ಹೊಳಹನ್ನು ದಾಟಿಸುವುದರ ಜೊತೆಗೆ ಮನಸ್ಸನ್ನು ಕರುಣಾರ್ದ್ರಗೊಳಿಸುತ್ತದೆ. ನಿರ್ದೇಶಕರು ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿರುವುದು ಈ ಸಿನಿಮಾದಲ್ಲಿ ಕಾಣಿಸುತ್ತದೆ.
ಚಿತ್ರ: ನಾರಾಯಣ ನಾರಾಯಣ
ನಿರ್ದೇಶನ: ಶ್ರೀಕಾಂತ್ ಕೆಂಚಪ್ಪ
ತಾರಾಗಣ: ಪವನ್ ಕುಮಾರ್, ದರ್ಶನ್ ಸೂರ್ಯ, ಕೀರ್ತಿ ಕೃಷ್ಣ, ದರ್ಶನ್, ಶಶಿಕಾಂತ್ ಗಟ್ಟಿ, ಬಿಂಬಿಕಾ, ಕೃಷ್ಣಪ್ಪ
ನಾನು ಕೂಡ ಕೃಷ್ಣ ಭಕ್ತ: ನಿರ್ದೇಶಕ ಶ್ರೀಕಾಂತ್, ‘ನಾಲ್ಕು ವರ್ಷಗಳ ಶ್ರಮ ಈ ಸಿನಿಮಾ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂದರು. ನಿರ್ಮಾಪಕ ಕೃಷ್ಣಪ್ಪ, ‘ಈಗಾಗಲೇ ಎರಡು ಸಿನಿಮಾ ಮಾಡಿ ಚಿತ್ರರಂಗದ ಸಹವಾಸ ಬೇಡ ಅಂತ ಇದ್ದೆ. ಆದರೆ ಈ ಕೃಷ್ಣನ ಕಥೆ ಇಷ್ಟವಾಯಿತು. ನಾನು ಕೂಡ ಕೃಷ್ಣ ಭಕ್ತ. ಹಾಗಾಗಿ ಈ ಸಿನಿಮಾ ಮಾಡಲು ಒಪ್ಪಿಕೊಂಡೆ‘ ಎಂದರು. ಸತ್ಯ ರಾಧಾಕೃಷ್ಣ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಗುರುಕಿರಣ್, ಬಿಂಬಿಕಾ, ಕೀರ್ತಿ ಕೃಷ್ಣ, ದರ್ಶನ್ ನಟಿಸಿದ್ದಾರೆ. ಚಿತ್ರದ ವಿತರಣೆ ಹಕ್ಕನ್ನು ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಪಡೆದುಕೊಂಡಿದ್ದಾರೆ.