ಬಾಲ್ಯ ಸರಿ ಇಲ್ಲದ ಹರೆಯದ ಹುಡುಗನ ಸಂಕಟ. ಮಗದೊಂದು ಆಕಸ್ಮಿಕವಾಗಿ ದುರಂತಕ್ಕೆ ಸಿಲುಕುವ ರೌಡಿಯೊಬ್ಬನ ಹೆಣಗಾಟ. ಇವೆಲ್ಲವನ್ನೂ ಜೋಡಿಸಿರುವುದು ಚಂದದ ಚಿತ್ರಕತೆ.
ರಾಜೇಶ್ ಶೆಟ್ಟಿ
ಶೀರ್ಷಿಕೆಯಲ್ಲಿಯೇ ಉದ್ದೇಶ, ಆಶಯ, ಆಂತರ್ಯವನ್ನು ಇಟ್ಟುಕೊಂಡಿರುವ ಸಿನಿಮಾ. ಒಂದಕ್ಕೊಂದು ಪರಸ್ಪರ ಜೋಡಿಕೊಂಡಿರುವ ಐದು ಸಣ್ಣ ವಿಡಿಯೋ ಕತೆಗಳ ಸಂಕಲನ. ರೂಪಾಂತರದ ಸ್ಥಿತಿಗೆ ಸಾಗಬೇಕಾದ ಕ್ಷಣಗಳ ನೋವನ್ನು, ವಿಷಾದವನ್ನು ದಾಟಿಸಿರುವ ದೃಶ್ಯ ರೂಪಕ. ಸಿನಿಮಾ ಆರಂಭವಾಗುವುದು ಭವಿಷ್ಯ ಕಾಲದಲ್ಲಿ. ಅಲ್ಲಿಂದ ವರ್ತಮಾನಕ್ಕೆ. ನಾಲ್ಕು ಕತೆಗಳು. ಒಂದರಲ್ಲಿ ಭಿಕ್ಷುಕಿ, ಸಮಾಜ, ಪೊಲೀಸ್ ವ್ಯವಸ್ಥೆಯ ಮಧ್ಯದ ತಾಕಲಾಟ. ಇನ್ನೊಂದು ಸಿಟಿ ನೋಡಲು ಬರುವ ಮುಗ್ಧತೆಯಿಂದಲೇ ಅಯ್ಯೋ ಅನ್ನಿಸುವ ವೃದ್ಧ ಜೀವಗಳ ತೊಳಲಾಟ.
undefined
ಮತ್ತೊಂದು ಬಾಲ್ಯ ಸರಿ ಇಲ್ಲದ ಹರೆಯದ ಹುಡುಗನ ಸಂಕಟ. ಮಗದೊಂದು ಆಕಸ್ಮಿಕವಾಗಿ ದುರಂತಕ್ಕೆ ಸಿಲುಕುವ ರೌಡಿಯೊಬ್ಬನ ಹೆಣಗಾಟ. ಇವೆಲ್ಲವನ್ನೂ ಜೋಡಿಸಿರುವುದು ಚಂದದ ಚಿತ್ರಕತೆ. ಒಬ್ಬರ ಜೀವನದ ಘಟನೆಗೆ ಇನ್ನೆಲ್ಲೋ ಕೂತ ವ್ಯಕ್ತಿ ಕಾರಣನಾದಂತೆ ಇಲ್ಲಿರುವ ಎಲ್ಲಾ ಕತೆಗಳಿಗೂ ಪರಸ್ಪರ ಸಂಬಂಧವಿದೆ. ಅವೆಲ್ಲಕ್ಕೂ ಮಧ್ಯದ ಸೂತ್ರ ಅಥವಾ ತಂತು ನೋವು. ಪ್ರತಿಯೊಬ್ಬ ಕಲಾವಿದರೂ ಆ ವಿಷಾದವನ್ನು ಗಾಢವಾಗಿ, ಆಳವಾಗಿ ದಾಟಿಸಿದ್ದಾರೆ. ಆ ನೋವಲ್ಲಿ, ಜ್ಞಾನೋದಯದಲ್ಲಿ ಈ ಸಿನಿಮಾ ಗೆಲ್ಲುತ್ತದೆ.
ಚಿತ್ರ: ರೂಪಾಂತರ
ನಿರ್ದೇಶನ: ಮಿಥಿಲೇಶ್ ಎಡವಲತ್
ತಾರಾಗಣ: ರಾಜ್ ಬಿ ಶೆಟ್ಟಿ, ಲೇಖಾ ನಾಯ್ಡು, ಹನುಮಕ್ಕ, ಸೋಮಶೇಖರ್ ಬೋಲೆಗಾಂವ್, ಭರತ್ ಜಿಬಿ, ಜೈಶಂಕರ್
ರೇಟಿಂಗ್: 3.5
ಇದಕ್ಕೊಂದು ಆತ್ಮವಿದೆ. ಶುದ್ಧ ಹೃದಯವಿದೆ. ಜೊತೆಗೆ ಫಿಲಾಸಫಿಯ ಭಾರವೂ ಇದೆ. ಪ್ರತಿಯೊಂದು ಕತೆಯನ್ನು ತೀವ್ರವಾಗಿ ಆರಂಭಿಸುವ ನಿರ್ದೇಶಕರು ಅಂತ್ಯದಲ್ಲಿ ಸಣ್ಣ ಅತೃಪ್ತಿಯನ್ನು ಉಳಿಸಿಹೋಗುತ್ತಾರೆ. ಆದರೆ ಉದ್ದೇಶ ಉದಾತ್ತವಾಗಿರುವುದರಿಂದ ಮನಸ್ಸು ಮುಂದೆ ಹೋಗುತ್ತದೆ. ಹೀಗಾಗಬಾರದಿತ್ತು ಎಂಬ ಹಳಹಳಿಕೆಯೊಂದು ಕಾಡುತ್ತದೆ.
ಇದೊಂದು ಸೊಗಸಾದ ಕಾವ್ಯಾತ್ಮಕ ಸಿನಿಮಾ. ಭಾವಕೋಶವನ್ನು ಮೀಟುವ ಪ್ರಯತ್ನ. ಅದಕ್ಕಾಗಿ ಮೊದಲ ಸಿನಿಮಾ ನಿರ್ದೇಶಿಸಿರುವ ಮಿಥಿಲೇಶ್ ಎಡವಲತ್ ಮತ್ತು ಬರವಣಿಗೆಯ ಮೂಲಕ ಕಾಡುವಂತೆ ಮಾಡಿರುವ ರಾಜ್ ಬಿ ಶೆಟ್ಟಿ, ಸಂಗೀತ ನಿರ್ದೇಶಕ ಮಿದುನ್ ಮುಕುಂದನ್, ಛಾಯಾಗ್ರಾಹಕ ಪ್ರವೀಣ್ ಶ್ರೀಯಾನ್, ಪ್ರತಿಯೊಬ್ಬ ಕಲಾವಿದರು ಮೆಚ್ಚುಗೆಗೆ ಅರ್ಹರು.