8 AM Metro: ಒಂದು ಆತ್ಮಸಂಗಾತದ ಕಥೆಯ ಮೂವಿ ರಿವ್ಯೂ ಇದು

By Suvarna News  |  First Published Jul 22, 2024, 6:52 PM IST

Zee 5 ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿರುವ 8 ಎಎಂ ಮೆಟ್ರೋ ನಡು ವಯಸ್ಸಿನ, ಸಂಸಾರಸ್ಥ ಒಂದು ಹೆಣ್ಣು ಹಾಗೂ ಗಂಡಿನ ಕಥೆಯನ್ನು ನವೀರಾಗಿ ಹೇಳುವ ಕಥೆ. ಮೆಟ್ರೋ ರೈಲಲ್ಲಿ ಮೀಟಿ ಜೋಡಿಯ ಕಥೆ ಇದು.


- ವೀಣಾ ರಾವ್, ಕನ್ನಡಪ್ರಭ

8 AM Metro  ಚಿತ್ರ ಝೀ 5 ರಲ್ಲಿ  ಈಗ ಓಡುತ್ತಿದೆ. ರಾಜ್ ರಾಚಕೊಂಡ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಗುಲ್ಶನ್ ದೇವಯ್ಯ ಮತ್ತು ಘೂಮರ್ ಖ್ಯಾತಿಯ ಸಯಾಮಿ ಖೇರ್ ನಟಿಸಿದ್ದಾರೆ.

ಇರಾವತಿ ಒಬ್ಬ ಸಾಧಾರಣ ಗೃಹಿಣಿ. ಎರಡು ಮಕ್ಕಳು, ಗಂಡ ಉಮೇಶ್  ಚಾರ್ಟರ್ಡ್ ಅಕೌಂಟೆಂಟ್. ಅನುಕೂಲವಂತ ಸಂಸಾರ. ಇರಾ ಮಕ್ಕಳು ಮನೆಗೆಲಸದಲ್ಲಿ ಸೋತು ಹೈರಾಣಾಗಿರುತ್ತಾಳೆ. ಗಂಡ ಒಳ್ಳೆಯವನೇ ಆದರೂ ಅವನ ಬಿಡುವಿಲ್ಲದ ಕೆಲಸದ ಒತ್ತಡದಲ್ಲಿ ಇವಳಿಗೆ ಸಮಯ ಕೊಡಲು ಆಗುವುದಿಲ್ಲ. ಇರಾವತಿಗೆ ಜೀವನದ ಏಕತಾನತೆ ಬೋರು ಹೊಡೆಸುತ್ತಿರುತ್ತದೆ. ಗಂಡ ಮಕ್ಕಳು ಕೆಲಸಕ್ಕೆ ಶಾಲೆಗೆ ಹೋದನಂತರ ಫ್ರೆಷ್ ಕಾಫಿ ಡಿಕಾಕ್ಷನ್ ಹಾಕಿ ಅದರ ಪರಿಮಳವನ್ನು ಹೀರುತ್ತಾ ಕಾಫಿ ಗುಟುಕರಿಸುವುದು ಅವಳ ಪ್ರಿಯವಾದ ಹವ್ಯಾಸ. ಅವಳು ಕಾಫಿ ಹೀರುವುದನ್ನು ನೋಡುವಾಗ ಪ್ರೇಕ್ಷಕನಿಗೆ ತಾನೂ ಕಾಫಿ ಕುಡಿಯಬೇಕೆನಿಸಿದರೆ ಆಶ್ಚರ್ಯವಿಲ್ಲ. ಇರಾವತಿಯ ತಂದೆ ಕವಿ, ಹಾಗಾಗಿ ಇವಳಿಗೂ ಕವಿತೆ ರಚಿಸುವುದರಲ್ಲಿ ಆಸಕ್ತಿ ಇರುತ್ತದೆ. ತನಗೆ ತೋಚಿದ ಕವಿತೆಗಳನ್ನು ಒಂದು ಪುಸ್ತಕದಲ್ಲಿ ಬರೆದಿಡುತ್ತ ಇರುತ್ತಾಳೆ.

Tap to resize

Latest Videos

undefined

ಇರಾವತಿಯ ತಂಗಿ ರಿಯಾ ಗರ್ಭಿಣಿಯಾಗಿದ್ದು ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ದಾಖಲಾಗಿರುತ್ತಾಳೆ. ಅವಳನ್ನು ನೋಡುಕೊಳ್ಳುವವರು ಯಾರೂ ಇಲ್ಲದೆ ಇರಾವತಿ ತಾನಿರುವ ನಾಂದೇಡ್ ನಿಂದ ಹೈದರಾಬಾದಿಗೆ ಪ್ರಯಾಣ ಮಾಡಬೇಕಾಗುತ್ತದೆ. ಬಾಲ್ಯದಲ್ಲಿ ಒಮ್ಮೆ ರೈಲುಪ್ರಯಾಣ ಮಾಡುವಾಗ ನಡೆದ ಕಹಿಘಟನೆಯಿಂದ ಇರಾವತಿಗೆ ರೈಲೆಂದರೆ ಭಯ. ರೈಲಿನ ಪ್ರಯಾಣವೆಂದರೆ ಕುತ್ತಿಗೆ ಹಿಸುಕುವಷ್ಟು ಹಿಂಸೆ. ಗಂಡನಿಗೆ ಬಿಡುವಿಲ್ಲದ ಕಾರಣ ಕಷ್ಟಪಟ್ಟು ಮನಸ್ಸನ್ನು ಬಿಗಿ ಮಾಡಿಕೊಂಡು ರೈಲು ಪ್ರಯಾಣಕ್ಕೆ ಸಿದ್ಧಳಾಗುತ್ತಾಳೆ.

ಜಮೀನುದಾರರ ದೌರ್ಜನ್ಯ, ಪಾಳೆಗಾರರ ಅಟ್ಟಹಾಸ; ರಕ್ತದೋಕುಳಿ ಹರಿಸುವ ಮಿರ್ಜಾಪುರ್

ಹೈದರಾಬಾದಿಗೆ ಬಂದು ತಂಗಿ ಇದ್ದ ಆಸ್ಪತ್ರೆಗೆ ಬಂದು ತಂಗಿಯನ್ನು ಮಾತಾಡಿಸಿ ಮತ್ತೆ ತಂಗಿಯ ಮನೆಗೆ ಹೋಗಲು ಮೆಟ್ರೋ ಟ್ರೈನ್ ಹಿಡಿಯಬೇಕಾಗುತ್ತದೆ. ಮತ್ತೆ ಟ್ರೈನ್ ಹಿಡಿಯಬೇಕಲ್ಲಾ ಎಂದು ಇರಾವತಿಗೆ ಆತಂಕವಾಗುತ್ತದೆ. ಆದರೂ ವಿಧಿಯಿಲ್ಲದೆ ಮೆಟೋ ನಿಲ್ದಾಣಕ್ಕೆ ಬರುತ್ತಾಳೆ. ರೈಲು ಬಂದಾಗ ವಿಪರೀತ ಭಯದಿಂದ ಹತ್ತಲು ಆಗದೆ ಅಲ್ಲೇ ನಿಲ್ದಾಣದಲ್ಲಿ ಕುಸಿಯುತ್ತಾಳೆ. ಮೈಯೆಲ್ಲ ಬೆವರಿ ಮುಖ ಪೇಲವವಾಗಿರುತ್ತದೆ. ಅದೇ ಸಮಯಕ್ಕೆ ಅಲ್ಲಿಗೆ ಬರುವ ಪ್ರೀತಂ (ಗುಲ್ಶನ್ ದೇವಯ್ಯ) ಅವಳನ್ನು ಮೆಲ್ಲಗೆ ಅಲ್ಲಿದ್ದ ಕುರ್ಚಿಯಲ್ಲಿ ಕೂಡಿಸಿ ನೀರು ತೆಗೆದುಕೊಟ್ಟು ಉಪಚರಿಸುತ್ತಾನೆ. ನಂತರ ಅವಳಿಗೆ ಧೈರ್ಯ ಹೇಳಿ ಮುಂದಿನ ಟ್ರೈನ್ ಗೆ ಹತ್ತಿಸುತ್ತಾನೆ, ತನ್ನಮನೆಗೆ ತಾನೂ ಹೋಗುತ್ತಾನೆ.

ಮಾರನೇ ದಿನ ಬೆಳಗ್ಗೆ ಎಂಟಕ್ಕೆ ಅವಳು ಮತ್ತೆ ಟ್ರೈನ್ ಹಿಡಿದು ತಂಗಿ ಇರುವ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಮೆಟ್ರೋ ನಿಲ್ದಾಣಕ್ಕೆ ಬಂದ ಅವಳು ಅವನನ್ನು ಹುಡುಕುತ್ತಾಳೆ. ಪ್ರೀತಂ ಕೂಡಾ ಅದೇ ಸಮಯಕ್ಕೆ ಅಲ್ಲಿ ಬಂದಿರುತ್ತಾನೆ. ಪರಸ್ಪರ ಪರಿಚಯದ ನಗು ಔಪಚಾರಿಕ ಮಾತಿನ ವಿನಿಮಯ ಆಗುತ್ತದೆ. ಪ್ರೀತಂ ತಾನು ದಿನಾ ಅದೇ ವೇಳೆಗೆ ಆ ಮೆಟ್ರೋ ನಿಲ್ದಾಣಕ್ಕೆ ಬರುವುದೆಂದು ಹೇಳುತ್ತಾನೆ. ಇವಳೂ ಅದನ್ನೇ ಹೇಳುತ್ತಾಳೆ. ಇಬ್ಬರೂ ಮೆಟ್ರೋ ಏರುತ್ತಾರೆ. ಮೆಟ್ರೋ ಚಲಿಸುವಾಗ ಇವಳಿಗೆ ಭಯಕ್ಕೆ ಪ್ಯಾನಿಕ್ ಅಟ್ಯಾಕ್ ಆಗುತ್ತದೆ. ಅದನ್ನು ತಕ್ಷಣ ಗಮನಿಸಿದ ಅವನು ಅವಳಿಗೆ ದೀರ್ಘ ಉಸಿರಾಡಲು ಸಲಹೆ ಕೊಡುತ್ತಾನೆ. ಅವನ ಸಲಹೆಯಂತೆ ನಡೆದುಕೊಂಡು ಅವಳು ಸರಿಹೋಗುತ್ತಾಳೆ. ಆಗ ಅವನಲ್ಲಿ ಅವಳಿಗೆ ಒಂದು ಸ್ನೇಹಭಾವ ಉದಿಸುತ್ತದೆ. ಇಬ್ಬರೂ ಹೀಗೆಯೇ ಕ್ರಮೇಣ ಸ್ನೇಹಿತರಾಗುತ್ತಾರೆ. ಪ್ರೀತಂ ಕೂಡ ಎರಡು ಮಕ್ಕಳ ತಂದೆ. ಸುಂದರಿಯಾದ ಅರಿತು ನಡೆಯುವ ಹೆಂಡತಿಯಿರುವ  ತೃಪ್ತ ಸಂಸಾರ. ಅವನು ಅವನ ಸಂಸಾರದ ಬಗ್ಗೆ ಇವಳು ಇವಳ ಸಂಸಾರದ ಬಗ್ಗೆ ಬಹಳಷ್ಟು ಮಾತನಾಡಿಕೊಳ್ಳುತ್ತಾರೆ. ಪರಿಚಯ ದಿನದಿಂದ ದಿನಕ್ಕೆ ಗಾಢವಾಗುತ್ತ ಹೋಗುತ್ತದೆ. ಇಬ್ಬರೂ ಟ್ರೈನಿನ ಸಮಯಕ್ಕೆ ಕಾಯುವಂತಾಗುತ್ತದೆ. ಟ್ರೈನಿನಲ್ಲಿ ಅಕ್ಕ ಪಕ್ಕ ಕುಳಿತು ಇಬ್ಬರೂ ಬಹಳಷ್ಟು ಮಾತನಾಡಿಕೊಳ್ಳುತ್ತಾರೆ. ಅವಳ ಹವ್ಯಾಸಗಳನ್ನು ಅವನು ತಿಳಿದುಕೊಳ್ಳುತ್ತಾನೆ. ಅವನ ಅಭಿರುಚಿಯ ಬಗ್ಗೆ ಅವಳು ಆಸಕ್ತಿ ತೋರಿಸುತ್ತಾಳೆ. ಅವನೂ ಸಹ ಕಾಳಿದಾಸನ ಮೇಘದೂತವನ್ನು ಓದಿರುತ್ತಾನೆ. ಪ್ರೇಮ ವಿರಹ ಕವಿತೆ ಇಂಥವುಗಳ ಬಗ್ಗೆ ಗಾಢವಾದ ಭಾವನೆಗಳಿರುತ್ತದೆ. ಕವಿತೆಗಳ ಬಗ್ಗೆ ಇಬ್ಬರೂ ಸಾಕಷ್ಟು ಮಾತನಾಡುತ್ತಾರೆ. ಅವಳ ಕವಿತೆಗಳನ್ನು ಅವನು ಓದಿ ಭೇಷ್ ಎನ್ನುತ್ತಾನೆ. ಅವಳಿಗೆ ಖುಷಿಯಾಗುತ್ತದೆ. ಇಬ್ಬರದೂ ಒಂದು ಸುಸಂಸ್ಕೃತವಾದ ಸ್ನೇಹ ಎಂದು ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಅನಗತ್ಯ ಸಂಭಾಷಣೆಗಳಿಗೆ ಇಲ್ಲಿ ಜಾಗವೇ ಇಲ್ಲ. ಇಬ್ಬರೂ ಪ್ರಬುದ್ಧವಾಗಿ ತಮ್ಮ ಭಾವನೆಗಳನ್ನು ಯೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಪರಿ ಅನನ್ಯವೆನಿಸುತ್ತದೆ.

Gullak Web Series Review: ನಮ್ಮ ಮಧ್ಯಮ ವರ್ಗದ ಬಾಲ್ಯ ನೆನಪಿಸೋ ಕಥೆ ಗುಲಕ್!

ಇರಾವತಿಯ ತಂಗಿಗೆ ಇವರಿಬ್ಬರ ಸ್ನೇಹ ಅಷ್ಟು ಮೆಚ್ಚುಗೆಯಾಗುವುದಿಲ್ಲ. ಆದರೆ ಅಕ್ಕನ ಬಗ್ಗೆ ಅಪಾರ ಪ್ರೀತಿಯಿರುವ ಅವಳು ಏನನ್ನೂ ಮಾತನಾಡುವುದಿಲ್ಲ. ತಾಯಿಯಿಲ್ಲದ ಅವಳಿಗೆ ಅಕ್ಕನೇ ತಾಯಿ. ಒಮ್ಮೆ ವಿವಾಹೇತರ ಸಂಬಂಧದ ಬಗ್ಗೆ ಮಾತನಾಡುವಾಗ ರಿಯಾ ಈತರ ಸಂಬಂಧ ನಂಗೆ ಇಷ್ಟವಾಗುವುದಿಲ್ಲ, ಇದು ಮೋಸದ ಸಂಬಂಧ ಎಂದು ಕಿಡಿಕಾರುತ್ತಾಳೆ. ನೀನು ಜಾಗ್ರತೆಯಿಂದ ಇರು ಎಂದು ಅಕ್ಕನಿಗೆ ಎಚ್ಚರಿಕೆ ನೀಡುತ್ತಾಳೆ. ಇರಾವತಿಗೆ ಪ್ರೀತಂ ತನ್ನ ಜೊತೆಯಲ್ಲಿ ಸದಾ ತನ್ನ ಸಂಸಾರದ ಬಗ್ಗೆ ಮಾತಾಡುವಾಗ ಇವನ ಹೆಂಡತಿ ಎಷ್ಟು ಪುಣ್ಯವಂತಳು ಎನಿಸುತ್ತದೆ. ಅದನ್ನು ಆಡಿಯೂ ತೋರಿಸುತ್ತಾಳೆ. ಪ್ರೀತಂ ಬರಿದೇ ನಗುತ್ತಾನೆ. ಈ ಮಾತನ್ನು ರಿಯಾ ಮುಂದೆ ಹೇಳಿದಾಗ ಅವಳು ತನ್ನಕ್ಕನಿಗೆ ತಲೆಕೆಟ್ಟಿದೆ ಎಂಬಂತೆ ಮುಖ ಸೊಟ್ಟ ಮಾಡುತ್ತಾಳೆ.

ಒಮ್ಮೆ ಇರಾವತಿಯ ಹುಟ್ಟುಹಬ್ಬ ಬರುತ್ತದೆ. ಟ್ರೈನಿನಲ್ಲಿ ಅವಳು ಮಕ್ಕಳೊಡನೆ ಮಾತಾಡುವಾಗ ಇದನ್ನು ಗ್ರಹಿಸಿದ ಪ್ರೀತಂ ಅವಳಿಗೆ ಹುಟ್ಟುಹಬ್ಬದ ಕಾಣಿಕೆ ಎಂದು ಹೈದರಾಬಾದ್ ಸುತ್ತಿಸಲು ಒಂದು ದಿನ ಕರೆದೊಯ್ಯುತ್ತಾನೆ. ಆ ದಿನವೇ ರಿಯಾಳಿಗೆ ಆರೋಗ್ಯ ಏರುಪೇರಾಗುತ್ತದೆ. ಅವಳು ಅಕ್ಕನಿಗೆ ಹಲವಾರು ಫೋನ್ ಮಾಡಿದರೂ ಪ್ರೀತಂ ನೊಂದಿಗೆ ಸುತ್ತಾಟದಲ್ಲಿ ಇರಾಳಿಗೆ ಫೋನ್ ಸದ್ದು ಕೇಳಿಸಿರುವುದೇ ಇಲ್ಲ. ಇರಾವತಿ ಸಂಜೆ ತಡವಾಗಿ ಆಸ್ಪತ್ರೆಗೆ ಬಂದಾಗ ರಿಯಾ ಅಕ್ಕನ ಮೇಲೆ ಕೂಗಾಡುತ್ತಾಳೆ. ನೀನು ನನ್ನ ನೋಡಿಕೊಳ್ಳಲು ಬಂದಿರುವುದೋ ಅವನೊಡನೆ ಸುತ್ತಾಡಲು ಬಂದಿರುವುದೋ ಎನ್ನುತ್ತಾಳೆ. ಇರಾ ಮುಖ ಸಣ್ಣದು ಮಾಡಿಕೊಂಡು ಆಚೆ ಬಂದುಬಿಡುತ್ತಾಳೆ. ಅಕ್ಕನನ್ನು ಬೈದದಕ್ಕೆ ರಿಯಾಳಿಗೆ ಪಶ್ಚತ್ತಾಪವಾಗಿ ಅಕ್ಕನನ್ನು ಅಪ್ಪಿಕೊಂಡು ಅತ್ತುಬಿಡುತ್ತಾಳೆ. ಕ್ಷಮೆ ಕೇಳುತ್ತಾಳೆ ಹಾಗೆಯೇ ಮಾತಿನ ಭರದಲ್ಲಿ ತಾನು ತನ್ನ ಗಂಡನ ಜೊತೆ ಇಲ್ಲ, ಅವನು ಯಾರದೋ ಸ್ನೇಹ ಮಾಡಿ ತನ್ನನ್ನು ಒಂಟಿ ಮಾಡಿದ್ದಾನೆ ಎಂದು ಹೇಳಿಕೊಂಡು ಅಳುತ್ತಾಳೆ. ಇರಾಳಿಗೆ ಷಾಕ್ ಆಗುತ್ತದೆ. ರಿಯಾಳ ಗಂಡ ನೊಂದಿಗೆ ಮಾತನಾಡಿ ಗಂಡಹೆಂಡಿರನ್ನು ಒಂದು ಮಾಡುವ ಪ್ರಯತ್ನ ಮಾಡುತ್ತಾಳೆ. ಅವರಿಬ್ಬರೂ ನಿಧಾನವಾಗಿ ಪರಸ್ಪರ ಹತ್ತಿರವಾಗುತ್ತಾರೆ.

ಪ್ರೀತಂ ಇವಳಿಗೆ ಕೆಲವು ಪುಸ್ತಕಗಳನ್ನು ಕೊಡಿಸುತ್ತಾನೆ. ಅವಳಿಗೆ ಒಮ್ಮೆ ಸ್ಮಶಾನಕ್ಕೆ ಹೋಗಿ ದಹನ ಪ್ರಕ್ರಿಯೆಯನ್ನು ನೋಡಬೇಕೆಂದು ಇರುತ್ತದೆ. ತನ್ನ ತಂದೆಯ ಅಂತ್ಯಕ್ರಿಯೆ ತಾನೇ ಮಾಡಬೇಕೆಂದು ಇದ್ದರೂ ಭಾವನೆಗಳ ಒತ್ತಡದಿಂದ ಮಾಡಲಾಗಲಿಲ್ಲ ಎಂದು ಪೇಚಾಡುತ್ತಾಳೆ. ಪ್ರೀತಂ ಇರಾಳನ್ನು ಒಂದು ರುದ್ರಭೂಮಿಗೆ ಕರೆದೊಯ್ಯುತ್ತಾನೆ. ಅಲ್ಲಿ ಒಂದು ಅಂತ್ಯಸಂಸ್ಕಾರ ನೋಡುವಾಗ ಅಲ್ಲಿನ ಮೇಲ್ವಿಚಾರಕ ಬಂದು “ಬಹಳ ದಿನ ಆಯ್ತು ನೀವುಬಂದು ಆ ದಿನದಿಂದ ನೀವು ಬಂದೇ ಇಲ್ಲ” ಎನ್ನುತ್ತ ಅಸ್ಥಿಗಳಿದ್ದ ಒಂದು ಮಡಕೆಯನ್ನು ಪ್ರೀತಮನ ಕೈಲಿಡುತ್ತಾನೆ. ಅದನ್ನು ಕಂಡಾಕ್ಷಣ ದುಃಖದ ಆವೇಗದಿಂದ ಪ್ರೀತಂ ಗಳಗಳನೆ ಅತ್ತುಬಿಡುತ್ತಾನೆ. ಇದು ತನ್ನ ಪ್ರಾಣ ಸ್ನೇಹಿತನ ಅಸ್ಥಿ ತೀರಾ ಇತ್ತೀಚೆಗೆ ಅವನೊಂದು ಅಪಘಾತದಲ್ಲಿ ತೀರಿಕೊಂಡನೆಂದು ಇರಾಳಿಗೆ ಹೇಳುತ್ತಾನೆ. ಇರಾ ಅವನನ್ನು ಸಮಾಧಾನಿಸುತ್ತಾಳೆ.

ಈ ಮಧ್ಯೆ ಇರಾವತಿಯ ಗಂಡ ಒಂದು ದಿನ ಹೈದರಾಬಾದಿಗೆ ಬಂದು ರಿಯಾಳನ್ನೂ ಇರಾಳನ್ನೂ ಭೇಟಿ ಮಾಡುತ್ತಾನೆ. ಮಧ್ಯೆ ಮಧ್ಯೆ ಫೋನಿನಲ್ಲಿ ಇರಾಳ ಜೊತೆ ಮಾತನಾಡುವಾಗ ತುಂಬಾ ಪ್ರೀತಿ ಕಾಳಜಿಯಿಂದ ಮಾತನಾಡಿರುತ್ತಾನೆ. ಅವಳಿಲ್ಲದೆ ಮನೆ ಭಣಭಣ ಎನ್ನುತ್ತಿದೆ ಎಂದು ಹೇಳಿರುತ್ತಾನೆ. ಅವಳನ್ನು ತಾವೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆಂದು ಹೇಳಿರುತ್ತಾನೆ. ಇರಾಳ ಮನಸ್ಸು ಮುದಗೊಳ್ಳುತ್ತದೆ.

ನಮ್ಮ ನಿಮ್ಮ ಹಳ್ಳಿಯ ಕತೆ ಎನಿಸುವ ಪಂಚಾಯತ್: ಮಿಸ್ ಮಾಡಬಾರದ ವೆಬ್ ಸೀರಿಸ್

ಇರಾವತಿ ವಾಪಸ್ ಹೊರಡುವ ದಿನ ಹತ್ತಿರವಾಗುತ್ತದೆ. ಅವಳಿಗೆ ಒಮ್ಮೆ ಪ್ರೀತಂನ ಪತ್ನಿ ಮೃದುಲಾಳನ್ನು ಭೇಟಿ ಮಾಡಬೇಕೆಂಬ ಮನಸ್ಸಾಗುತ್ತದೆ. ಅದನ್ನು ಪ್ರೀತಂ ಬಳಿ ಹೇಳುತ್ತಾಳೆ. ಒಪ್ಪಿಕೊಂಡ ಪ್ರೀತಂ ಅವಳನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಮನೆಯಲ್ಲಿ ಯಾರೂ ಇರುವುದಿಲ್ಲ. ಮಕ್ಕಳು ಶಾಲೆಗೆ ಹೋಗಿರುತ್ತಾರೆ. ಮೃದುಲಾ ನಾಯಿಗೆ ಹುಶಾರಿಲ್ಲವೆಂದು ತಾನು ಡಾಕ್ಟರ್ ಬಳಿ ಹೋಗಿರುವೆನೆಂದು ಹೇಳಿ ಒಂದು ಚೀಟಿ ಬರೆದಿಟ್ಟಿರುತ್ತಾಳೆ. ಮನೆಯ ಅಂದಚಂದ ನೋಡಿ ಇರಾ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ. ಇದೆಲ್ಲ ತನ್ನ ಹೆಂಡತಿಯ ಕೈವಾಡ ಅವಳ ಅಭಿರುಚಿ ತನ್ನದೇನೂ ಇಲ್ಲ ಎಂದು ಪ್ರೀತಂ ನುಡಿಯುತ್ತಾನೆ. ಮನೆಯ ಮೆಟ್ಟಿಲು ಏರುವಾಗ ಎಡವಿದ ಇರಾಳನ್ನು ಪ್ರೀತಂ ಹಿಡಿದುಕೊಳ್ಳುತ್ತಾನೆ. ಅವನ ಸ್ಪರ್ಶ ಇಷ್ಟವಾಗದ ಇರಾ ಕೊಸರಿಕೊಂಡು ಹೊರಗೆ ಬಂದುಬಿಡುತ್ತಾಳೆ.

ಮಾರನೇ ದಿನ ಅವನು ಸಿಕ್ಕಾಗ ತಮ್ಮ  ಸ್ನೇಹ ಇಲ್ಲಿಗೇ ಮುಗಿಯಿತೆಂದೂ ತಾವಿನ್ನು ಎಂದೂ ಭೇಟಿ ಮಾಡಲು ಸಾಧ್ಯವಿಲ್ಲವೆಂದೂ ಹೇಳುತ್ತಾಳೆ. ಅದನ್ನು ಪ್ರೀತಂ ಕೂಡಾ ಸ್ವಾಗತಿಸುತ್ತಾನೆ. ರಿಯಾ ದಂಪತಿಗಳು ತಮ್ಮ ವೈಮನಸ್ಸು ಮರೆತು ಒಂದಾಗುತ್ತಾರೆ. ರಿಯಾಳಿಗೆ ಹೆಣ್ಣು ಮಗುವಾಗುತ್ತದೆ. ಇರಾ ಒಮ್ಮೆ ಅಚಾನಕ್  ಆಗಿ ಪ್ರೀತಂ ಮನೆಗೆ ಬರುತ್ತಾಳೆ. ಮನೆ ಬಾಗಿಲನ್ನು ತಟ್ಟಿದರೆ ಯಾರೂ ಇರುವುದಿಲ್ಲ. ಹೆಸರು  ಹಿಡಿದು ಕರೆದರೂ ಯಾರೂ ಓಗೊಡುವುದಿಲ್ಲ. ಕಿಟಕಿಯಲ್ಲಿ ಬಗ್ಗಿ ನೋಡಿದಾಗ ಅವಳಿಗೆ ಆಘಾತ ಕಾದಿರುತ್ತದೆ. ಪ್ರೀತಂನ ಹೆಂಡತಿ ಮೃದುಲಾ ಹಾಗೂ ಮಕ್ಕಳು ಇರುವ ಫೋಟೋಗೆ ಹಾರ ಹಾಕಲಾಗಿರುತ್ತದೆ. ಇರಾ ಷಾಕ್ ನಿಂದ ಚೇತರಿಸಿಕೊಂಡು  ಹಿಂತಿರುಗಿ ನೋಡಿದರೆ ಅವಳ ಬೆನ್ನಹಿಂದೆ ಪ್ರೀತಂ “ಇನ್ನು ಭೇಟಿ ಮಾಡುವುದಿಲ್ಲ ಎಂದು ಹೇಳಿದವಳು ಏಕೆ ಬಂದೆ” ಎಂದು ಕರ್ಕಶವಾಗಿ ಕೇಳುತ್ತಾನೆ, ಮತ್ತೂ ಆಘಾತಗೊಂಡ ಇರಾವತಿ ಅಲ್ಲಿಂದ ಅಕ್ಷರಶಃ ಓಡಿಬಿಡುತ್ತಾಳೆ.

<

ಮುಂದಿನ ೧೫ ನಿಮಿಷಗಳ ಚಿತ್ರವನ್ನು ನೀವೇ ನೋಡಬೇಕು. ಕೊನೆಯ ವರೆಗೂ ಸಸ್ಪೆನ್ಸ್ ಬಿಟ್ಟುಕೊಡದೆ ನಿರ್ದೇಶಕರು ನಮಗೆ ಷಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರೀತಂ ಹೆಂಡತಿ ಮಕ್ಕಳಿಗೆ ಏನಾಯಿತು? ಅವನು ತನ್ನ ಮಡದಿ ಮಕ್ಕಳೊಡನೆ ಇಟ್ಟುಕೊಂಡಿದ್ದ  ಒಡನಾಟ ಎಂಥದ್ದು? ಪ್ರೀತಂ ಸುಳ್ಳುಗಾರನೇ ಕೊಲೆಗಾರನೇ ನೀವೇ ತೆರೆಯ ಮೇಲೆ ನೋಡಿ.

ನೆಟ್‌ಫ್ಲಿಕ್ಸ್ ಚಿತ್ರ ಕ್ರ್ಯೂ ರಿವ್ಯೂ: ಚಿನ್ನ ಕಳ್ಳ ಸಾಗಣೆಯಲ್ಲಿ ಫ್ಲೈಟ್ ಓನರೇ ಭಾಗಿ!

ಗುಲ್ಶನ್ ದೇವಯ್ಯ ಅದ್ಭುತ ಅಭಿನಯ ನೀಡಿದ್ದಾನೆ. ಅವನ ಕಣ್ಣುಗಳು ಬಹಳ ಗಾಢವಾಗಿ ಕಾಡಿಸುತ್ತದೆ. ಘೂಮರ್ ನ ಒರಟುತನದ ಪಾತ್ರದಿಂದ ಹೊರಬಂದಿರುವ ಸಯಾಮಿ ಇಲ್ಲಿ ಗೃಹಿಣಿಯಾಗಿ ಮಾರ್ದವತೆಯಿಂದ ನಟಿಸಲು ಪ್ರಯತ್ನಮಾಡಿದ್ದಾಳೆ. ಆದರೂ ಮುಖದ ಭಾವನೆಗಳನ್ನು ವ್ಯಕ್ತ ಪಡಿಸುವಾಗ, ಮಾತನಾಡುವಾಗ ಇನ್ನಷ್ಟು ಮೃದುತ್ವ ಆರ್ದ್ರತೆ ಬೇಕು ಎನಿಸುತ್ತದೆ. ಆದರೂ ಮೆಚ್ಚುಗೆ ಗಳಿಸುತ್ತಾಳೆ. ಒಂದು ವಿವಾಹೇತರ ಸ್ನೇಹ ಎಷ್ಟಿರಬೇಕೋ ಅಷ್ಟೇ ಇದೆ. ಎಲ್ಲೂ ಅತಿಯಾಗಿ ಅಭಿನಯಿಸದೆ ಪಾತ್ರಕ್ಕೆ ತಕ್ಕಂತೆ ನಟಿಸಿದ ಇಬ್ಬರಿಗೂ ಹ್ಯಾಟ್ಸಾಫ್. ಹೆಂಡತಿ ಮಕ್ಕಳನ್ನು ನೆನೆದು ಗೋಳಾಡುವ ಪ್ರೀತಂ ನೋಡುಗರ ಕಣ್ಣಲ್ಲೂ ನೀರು ತರಿಸುತ್ತಾನೆ. ತನಗಿಲ್ಲದ ಒಂದು ಸಂಸಾರವನ್ನು ಇದೆಯೆಂದು ಬಿಂಬಿಸುತ್ತಾ ಸುಖೀ ಗಂಡನಂತೆ ನಟಿಸುತ್ತಾ ತನ್ನ ಸಂಸಾರದ ಕಾಲ್ಪನಿಕ  ರಸನಿಮಿಷಗಳನ್ನು ಇರಾಳೊಡನೆ ಹಂಚಿಕೊಳ್ಳುತ್ತಾ ಇರಾಳ ಸಂಸಾರದ ಏಕತಾನತೆಯನ್ನು ಹೊಡೆದೋಡಿಸುವ ಪ್ರೀತಂ ಪ್ರೇಕ್ಷಕನ ಎದೆಯಲ್ಲಿ ಆರ್ದ್ರಭಾವ ಹುಟ್ಟಿಸುತ್ತಾನೆ. ಸಿನಿಮಾ ಮುಗಿದರೂ ಕಾಡುವ ಪ್ರೀತಂ ನಮ್ಮನ್ನು ಯಾವುದೋ ಗುಂಗಿನೊಳಗೆ ಎಳೆದುಕೊಂಡಿದ್ದಾನೆ ಎಂದರೆ ಅದು ನಿರ್ದೇಶಕನ ತಾಕತ್ತು.

click me!