ಆ ದಟ್ಟವಾದ ಕಾಡಿಗೆ ಹೋದವರು ಯಾರೂ ವಾಪಸ್ ಬಂದಿಲ್ಲ, ಅಲ್ಲೇನೋ ವಿಶೇಷವಾದ ಶಕ್ತಿ ಇದೆ. ಅಲ್ಲಿಗೆ ಹೋಗಿ ರಹಸ್ಯ ಭೇದಿಸುವ ಶಕ್ತಿ ಯಾರಿಗಾದರೂ ಇದೆಯೇ ಎಂದು ಪ್ರೊಫೆಸರ್ ಕೇಳಿದಾಗ ಅತ್ಯುತ್ಸಾಹಿ ಆರು ಮಂದಿ ಯುವಕರು ನಾವು ರೆಡಿ ಎಂದು ಮುನ್ನುಗ್ಗುತ್ತಾರೆ. ಅಲ್ಲಿಯವರೆಗೂ ಕಾಲೇಜು ಕ್ಯಾಂಪಸ್ ಸುತ್ತ ಸುತ್ತುತ್ತಿದ್ದ ಕ್ಯಾಮರಾ ಸೀದಾ ಪಶ್ಚಿಮ ಘಟ್ಟದ ದಟ್ಟಕಾಡಿನ ಮೇಲೆ ಹರಿದಾಡುತ್ತದೆ.
ಕೆಂಡಪ್ರದಿ
ನಾಲ್ಕು ಮಂದಿ ಹುಡುಗರು, ಇಬ್ಬರು ಚೆಲುವೆಯರು ಕಾಡು ಹೊಕ್ಕಿದ ಮೇಲೆ ಚಿತ್ರ ಹಾರರ್ ಅಂಗಳಕ್ಕೆ ಜಾರಿಕೊಳ್ಳುತ್ತದೆ. ಆರು ತಲೆಗಳಲ್ಲಿ ಪ್ರತಿ ರಾತ್ರಿ ಒಂದೊಂದೇ ತಲೆಗಳು ಇಲ್ಲವಾಗುತ್ತಾ ಹೋಗುವಾಗ ಎಲ್ಲರ ಎದೆಯಲ್ಲೂ ನಡುಕ. ವಾಪಸ್ ಹೊರಟು ಬಿಡೋಣ ಜೀವ ಉಳಿದರೆ ಸಾಕು ಎಂದು ಒಂದಿಬ್ಬರು ಹೇಳಿದರೂ, ಇನ್ನಿಬ್ಬರಿಗೆ ಅಲ್ಲೇ ಇದ್ದು ಇದಕ್ಕೆಲ್ಲಾ ಕಾರಣ ತಿಳಿಯಬೇಕು ಎನ್ನುವ ಹಠ. ಕಡೆಗೆ ಆ ಹಠ ಗೆಲ್ಲುತ್ತದಾ, ಯಾರೆಲ್ಲಾ ಪ್ರಾಣ ಕಳೆದುಕೊಂಡರು, ಯಾರೆಲ್ಲಾ ಬದುಕುಳಿದರು, ಕಾಡಿನ ರಹಸ್ಯವೇನು ಎಂಬೆಲ್ಲಾ ಸಹಜ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಚಿತ್ರವನ್ನು ಕಡೆಯವರೆಗೂ ಒಂದೇ ಉಸಿರಿನಲ್ಲಿ ನೋಡಬೇಕು. ಚಿತ್ರ ಹಾಗೆ ನೋಡಿಸಿಕೊಳ್ಳುತ್ತದೆ ಕೂಡ.
ತಾರಾಗಣ: ಗಣೇಶ್, ಹರ್ಷ, ಚಿತ್ರ, ಕಾವ್ಯ, ಸೋಮ್, ಸುಹಿತ್
ನಿರ್ದೇಶನ: ಮಹೇಶ್ ಎಂ.ಸಿ
ನಿರ್ಮಾಣ: ಹರೀಶ್ ಕುಮಾರ್ ಎಲ್.
ಸಂಗೀತ: ಮೆಲ್ವಿನ್ ಮೈಕಲ್
ಛಾಯಾಗ್ರಹಣ: ಕೃಷ್ಣ
ರೇಟಿಂಗ್: ***
ಮೊದಲಾರ್ಧದಲ್ಲಿ ಚಿತ್ರವನ್ನು ಸಹಿಸಿಕೊಳ್ಳಲು ತುಸು ಹೆಚ್ಚಾಗಿಯೇ ತಾಳ್ಮೆ ಬೇಕು. ಈ ತಾಳ್ಮೆ ನೋಡುಗನಲ್ಲಿ ಇದ್ದರೆ ಕಡೆಯಾರ್ಧದಲ್ಲಿ ಒಳ್ಳೆಯ ಮನರಂಜನೆ, ಕುತೂಹಲಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅಲ್ಲಿಗೆ ನಿರ್ದೇಶಕ ಸಸ್ಪೆನ್ಸ್ ಕಾಪಿಟ್ಟುಕೊಂಡು ಹೋಗಿದ್ದೂ ಸಾರ್ಥಕ ಎನ್ನಿಸುತ್ತದೆ.
ದೊಡ್ಡ ಮೆಡಿಕಲ್ ಮಾಫಿಯಾದ ಕುಣಿಕೆಯಲ್ಲಿ ಸುತ್ತಿಕೊಂಡ ಇಡೀ ಕತೆ ಹಾರರ್ ಅಂಗಳದಲ್ಲಿ ಸುತ್ತಾಡುತ್ತಾ ಸಾಗುತ್ತದೆ. ಇದರ ಜೊತೆಗೆ ಸ್ನೇಹದ ಮತ್ಸರ, ಅಸೂಯೆಗಳೂ ಸೇರಿಕೊಂಡು ಚಿತ್ರ ಎರಡೆರಡು ಮಗ್ಗುಲುಗಳಲ್ಲಿ ಕೂಡಿಕೊಳ್ಳುವಂತೆ ಆಗಿದೆ. ಸ್ನೇಹಿತರ ನಡುವಿನ ತಮಾಷೆ, ಪ್ರೀತಿ, ಭಯ, ಗೆಲ್ಲಬೇಕು ಎನ್ನುವ ಛಲ ಇವೆಲ್ಲವೂ ಒಟ್ಟಾಗಿ ಹಲವು ಬಣ್ಣಗಳು ಆರ್‌ಎಚ್ 100 ಒಂದರಲ್ಲೇ ಅಡಕವಾಗಿ ಎಂದು ಪ್ರೇಕ್ಷಕನಿಗೆ ಸುಲಭವಾಗಿ ಗೊತ್ತಾಗುತ್ತದೆ.
ಪುರ್‌ಸೋತ್ ಮಾಡ್ಕೊಂಡು ಪುರ್‌ಸೋತ್‌ರಾಮ ಸಿನಿಮಾ ನೋಡಿ...!
ಕಾಡಿನ ನಡುವಲ್ಲಿಯೇ ಸಾಗುವ ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ ಚೆನ್ನಾಗಿದೆ. ಮೆಲ್ವಿನ್ ಮೈಕಲ್ ಸಂಗೀತ, ಎಲ್ಲಾ ಪಾತ್ರಧಾರಿಗಳ ಶ್ರಮ ಮೆಚ್ಚಲೇಬೇಕು. ನಿರ್ದೇಶಕ ಮಹೇಶ್ ಚಿತ್ರಕತೆಯನ್ನು ಚೆನ್ನಾಗಿ ಎಣೆದು ಜೋಡಿಸಿದ್ದಾರೆ. ಜೊತೆಗೆ ಆರ್‌ಎಚ್ 100 ಇನ್ನೊಂದು ಭಾಗದಲ್ಲಿ ಬರಲಿದೆ ಎನ್ನುವ ಭರವಸೆಯನ್ನೂ ನೀಡಿದ್ದಾರೆ. ಅಲ್ಲಿಗೆ ಮೊದಲ ಭಾಗ ನೋಡಿ ಎರಡನೇ ಭಾಗಕ್ಕೆ ಪ್ರೇಕ್ಷಕ ಕುತೂಹಲದಿಂದ ಕಾಯಬಹುದು.