Chandini Bar Review: ಬಾರ್‌ ಹುಡುಗರ ಬಯಾಗ್ರಫಿ

By Kannadaprabha NewsFirst Published Apr 22, 2023, 9:36 AM IST
Highlights

ರಾಘವೇಂದ್ರ ಕುಮಾರ್‌, ಸುಕೃತಿ ಪ್ರಭಾಕರ್‌, ಸಿದ್ದೇಶ್‌ ಬದನವಾಳು, ರಶ್ಮಿ, ಮಣಿಕಂಠ ಅಭಿನಯಿಸಿರುವ ಚಾಂದಿನಿ ಬಾರ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಕಂಡಿದೆ. ಸಿನಿಮಾ ಹೇಗಿದೆ?

ಅಬ್ಬರದ ಹೊಡೆದಾಟಗಳಿಲ್ಲದ, ಅನವಶ್ಯಕ ಹಾಡುಗಳಿಲ್ಲದ, ಅತಿರೇಕದ ದೃಶ್ಯಗಳಿಲ್ಲದ ಸರಳ ಸಹಜ ಘಟನೆಗಳ ಮೂಲಕವೇ ಕಟ್ಟಿದ ಬಾರ್‌ ಹುಡುಗರ ಬಯಾಗ್ರಫಿ ಈ ಸಿನಿಮಾ. ಬದುಕಿನ ಗಾಣಕ್ಕೆ ಸಿಲುಕಿ ತಿರುಗುತ್ತಾ ಬಾರ್‌ನಲ್ಲಿ ಕೆಲಸ ಮಾಡುತ್ತಾ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಹೋರಾಡುವ ಹುಡುಗರ ಕಥೆಯುಳ್ಳ ಫೀಲ್‌ ಗುಡ್‌ ಸಿನಿಮಾ.

ಸಹ ನಿರ್ದೇಶಕನಾಗಿದ್ದ ಸಿನಿಮಾ ವ್ಯಾಮೋಹಿ ಹುಡುಗನೊಬ್ಬ ಸಂಭಾವನೆ ಸಿಗದ ಕಾರಣ ಬೆಂಗಳೂರು ತೊರೆದು ಮೈಸೂರು ಸೇರಿ ಹೊಟ್ಟೆಪಾಡಿಗಾಗಿ ಬಾರ್‌ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅವನಿಗೆ ದಾರಿಯಲ್ಲಿ ಸಿಕ್ಕ ಮತ್ತೊಬ್ಬ ಜೊತೆಯಾಗುತ್ತಾನೆ. ಅಲ್ಲಿಂದ ಅವರಿಬ್ಬರ ಕತೆ ಶುರು. ಬಾರ್‌ಗೆ ಬರುವ ಚಿತ್ರವಿಚಿತ್ರ ಜನಗಳು, ಹಾರಾಡುವ ತೂರಾಡುವ ಜನರ ಕತೆಗಳು, ಕಷ್ಟತಾಪತ್ರಯಗಳು, ಹುಡುಗರ ಪ್ರೇಮ ಸಂಕಷ್ಟಗಳು ಎಲ್ಲವೂ ತೆರೆದುಕೊಳ್ಳುತ್ತಾ ಹೋಗುತ್ತವೆ. ಅಲ್ಲಲ್ಲಿ ನಗಿಸುತ್ತಾ, ಮತ್ತೊಮ್ಮೆ ಬೇಸರಕ್ಕೆ ದೂಡುತ್ತಾ, ಕಡೆಗೆ ತುಟಿ ಮೇಲೊಂದು ಸಣ್ಣ ನಗು ಉಳಿಸಿಹೋಗುವ ಬರವಣಿಗೆ ಈ ಸಿನಿಮಾದ ತಾಕತ್ತು.

SHIVAJI SURATHKAL 2 REVIEW: ಕಳೆದುಹೋಗಲು ಒಂದೊಳ್ಳೆ ಸಿನಿಮಾ

ತಾರಾಗಣ: ರಾಘವೇಂದ್ರ ಕುಮಾರ್‌

ನಿರ್ದೇಶನ: ರಾಘವೇಂದ್ರ ಕುಮಾರ್‌, ಸುಕೃತಿ ಪ್ರಭಾಕರ್‌, ಸಿದ್ದೇಶ್‌ ಬದನವಾಳು, ರಶ್ಮಿ, ಮಣಿಕಂಠ

ರೇಟಿಂಗ್‌: 3

ನಿರ್ದೇಶಕರು ಕತೆಗೆ ನಿಷ್ಠವಾಗಿದ್ದಾರೆ. ಯಾವುದನ್ನೂ ಅತಿ ಮಾಡುವುದಿಲ್ಲ. ಕೆಲವು ಅಪರಿಪೂರ್ಣ ಪಾತ್ರಗಳಿವೆ ಅನ್ನುವುದರ ಹೊರತಾಗಿ ಈ ಸಿನಿಮಾದ ಕತೆಯ ಹರಿವು ತಣ್ಣಗಿನ ನದಿ ಹರಿವಿನಷ್ಟೇ ಚಂದ. ಮೌನದಲ್ಲೇ ಮನಸ್ಸು ಪರಿವರ್ತನೆ ಮಾಡುತ್ತಾ ಸಾಗುವ ಈ ಸಿನಿಮಾ ಗೆಲ್ಲುವುದು ಸಹಜತೆಯಿಂದಲೇ. ಬರವಣಿಗೆ ಮೇಲೆ ನಿಷ್ಠೆ, ಸಿನಿಮಾ ಕುರಿತ ವ್ಯಾಮೋಹ, ಗೆಲ್ಲಬೇಕೆನ್ನುವ ಛಲ, ಶಕ್ತಿ ಮೀರಿ ಹೋರಾಡುವ ಮನಸ್ಸು ಎಲ್ಲವೂ ಈ ಸಿನಿಮಾದಲ್ಲಿ ವ್ಯಕ್ತವಾಗುತ್ತದೆ.

Gurudev Hoysala Review: ಅಬ್ಬರದ ಜೊತೆ ಪಿಸುಮಾತು ಧರಿಸಿರುವ ಪೊಲೀಸ್‌ ಕಥನ

ಇಲ್ಲಿ ಬಾರ್‌ ಹುಡುಗರ ಬಣ್ಣ ಬಣ್ಣದ ಕತೆಗಳಿವೆ. ಬದುಕಿನ ನೊಗಕ್ಕೆ ಹೆಗಲು ಕೊಡಬೇಕಾಗಿ ಬಂದ ಅನಿವಾರ್ಯ ನೋವುಗಳಿವೆ. ಮಧ್ಯದಲ್ಲಿ ಕೈ ಹಿಡಿದುವ ನಡೆಸುವ ಪ್ರೇಮವಿದೆ, ಸೋಲಿನ ನಂತರ ಸಿಹಿಯಾದ ಗೆಲುವಿದೆ. ರಾಘವೇಂದ್ರ ಕುಮಾರ್‌ ಅವರ ನಿರ್ದೇಶನ, ನಟನೆ ಗಮನಾರ್ಹ. ಸುಕೃತಿ ಪ್ರಭಾಕರ್‌ ಭಾವಾಭಿನಯ ಶ್ಲಾಘನೀಯ. ಕಲಾವಿದರಾದ ಸಿದ್ದೇಶ್‌, ಮಣಿಕಂಠ, ರಶ್ಮಿ ಎಲ್ಲರೂ ಪಾತ್ರಗಳೇ ಆಗಿ ಜೀವಿಸಿದ್ದಾರೆ.

ಪ್ರಾಮಾಣಿಕ ಪ್ರಯತ್ನದಿಂದ ಗಮನ ಸೆಳೆಯುವ, ತಿಕ್ಕಿದರೆ ಮತ್ತಷ್ಟುಮಗದಷ್ಟುಹೊಳಪು ಸಿಗಬಹುದಾಗಿದ್ದ ಆಹ್ಲಾದಕರ ಸಿನಿಮಾ.

click me!