
ಮೊದಲ ಸಿನಿಮಾದಲ್ಲಿಯೇ ಒಂದು ಸೂಕ್ಷ್ಮವಾದ ಕತೆಯನ್ನು ಆರಿಸಿಕೊಂಡ ನಿರ್ದೇಶಕರ ಶ್ಲಾಘನೀಯ ಪ್ರಯತ್ನವಿದು. ಇದು ಇಬ್ಬರು ನಿದ್ರೆ ಬರದವರ ಕತೆ. ನಿದ್ರೆ ಬರಿಸಲು ನಾನಾ ಪ್ರಯತ್ನಗಳನ್ನು ಮಾಡುವ ಕತೆ. ಆ ಪ್ರಯತ್ನಗಳಲ್ಲಿಯೇ ಪರಸ್ಪರ ಎದುರು ಬದುರಾಗುವ, ಬಡಿದಾಡುವ, ಬಹಳ ಮಹತ್ವದ ವಿಷಯೊಂದನ್ನು ದಾಟಿಸುವ ಕತೆ. ಬಾಲ್ಯದಲ್ಲಿ ಉಂಟಾಗುವ ಒತ್ತಡಗಳು, ಮನಸಿನ ಮೇಲೆ ಬೀರುವ ಪರಿಣಾಮಗಳು, ಭಯವನ್ನು ದಾಟಬೇಕಾದ ಅಗತ್ಯಗಳು, ಭೂತಕಾಲವನ್ನು ಬಿಟ್ಟು ಮಂದೆ ಸಾಗಬೇಕಾದ ಅನಿವಾರ್ಯತೆ ಇವೆಲ್ಲವನ್ನೂ ಈ ಸಿನಿಮಾ ಮಾತನಾಡುತ್ತದೆ.
ಈ ವಿಚಾರಗಳನ್ನು ಕತೆಯ ಮೂಲಕ ಸಶಕ್ತವಾಗಿ ದಾಟಿಸುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕರು. ಆ ನಿಟ್ಟಿನಲ್ಲಿ ಇದೊಂದು ವಿಭಿನ್ನ ಸಿನಿಮಾ. ಇಲ್ಲಿ ನಿದ್ರೆ ಬರದವನ ತಾಕಲಾಟಗಳಿವೆ, ಒಂದು ಸೊಗಸಾದ ಪ್ರೇಮಕತೆ ಇದೆ, ಕಿವಿಗೆ ಹಿತ ಅನ್ನಿಸುವ ಹಿನ್ನೆಲೆ ಸಂಗೀತವಿದೆ. ಪ್ರವೀರ್ ಶೆಟ್ಟಿ ನಿದ್ರೆ ಬರದವನ ಪಾತ್ರವೇ ಆಗಿದ್ದಾರೆ. ರಿಷಿಕಾ ನಾಯಕ್ ಇಷ್ಟವಾಗುವಂತೆ ನಟಿಸಿದ್ದಾರೆ. ಶೈನ್ ಶೆಟ್ಟಿ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ.
ಚಿತ್ರ: ನಿದ್ರಾದೇವಿ ನೆಕ್ಸ್ಟ್ ಡೋರ್
ನಿರ್ದೇಶನ: ಸುರಾಗ್ ಸಾಗರ್
ತಾರಾಗಣ: ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್, ಶೈನ್ ಶೆಟ್ಟಿ, ಶ್ರುತಿ ಹರಿಹರನ್
ರೇಟಿಂಗ್: 3
ಮಧ್ಯದಲ್ಲಿ ಕಥೆ ಸಾವಧಾನವಾಗಿ ಸಾಗುತ್ತಿರುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಕೊಂಚ ಕಥನ ಅತ್ತಿತ್ತ ಹೋದಂತೆ ಕಾಣಿಸುತ್ತದೆ. ಆದರೆ ಸ್ಪಷ್ಟವಾಗುತ್ತಾ ಹೋಗುತ್ತದೆ. ಸ್ಪಷ್ಟವಾಗುವ ದಾರಿ ಕೊಂಚ ದೀರ್ಘವಾದಂತೆ ಭಾಸವಾಗುತ್ತದೆ. ಅದರ ಹೊರತಾಗಿ ಇದೊಂದು ಫ್ರೆಶ್ ಆದ ಮೇಕಿಂಗ್ ಇರುವ ಸಿನಿಮಾ. ಮಕ್ಕಳ ಜೊತೆ ಬಾಲ್ಯದಲ್ಲಿ ಹೇಗೆ ವರ್ತಿಸಬೇಕು ಅನ್ನುವ ಪಾಠವನ್ನೂ ತಿಳಿಹೇಳುವ ಸಿನಿಮಾ. ಇದು ಮೌನವನ್ನು, ಅಚ್ಚರಿಯನ್ನು ಮತ್ತು ವಿಷಾದವನ್ನು ಉಂಟುಮಾಡುವ ಕುತೂಹಲಕರ ಸಿನಿಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.