Daskat Tulu Film Review: ಚಲನಚಿತ್ರೋತ್ಸವದಲ್ಲಿ ಯಶಸ್ಸಿನ ರುಜು ಹಾಕುತ್ತಿರುವ ದೇಸಿ ತುಳು ಸಿನಿಮಾ 'ದಸ್ಕತ್'

Published : Mar 07, 2025, 08:49 PM ISTUpdated : Mar 07, 2025, 09:07 PM IST
Daskat Tulu Film Review: ಚಲನಚಿತ್ರೋತ್ಸವದಲ್ಲಿ ಯಶಸ್ಸಿನ ರುಜು ಹಾಕುತ್ತಿರುವ ದೇಸಿ ತುಳು ಸಿನಿಮಾ 'ದಸ್ಕತ್'

ಸಾರಾಂಶ

ಕರಾವಳಿ ಭಾಗದ ಒಂದಿಷ್ಟು ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ಅದ್ಭುತ ಚಿತ್ರಕ್ಕೆ ಈಗಾಗಲೇ ಥಿಯೇಟರ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸದಾಭಿರುಚಿಯ ಜೊತೆಗೆ ವ್ಯವಹಾರಿಕವಾಗಿಯೂ ಗೆದ್ದಿರುವ ದಸ್ಕತ್ ಸದ್ಯ ಕನ್ನಡ, ಮಲಯಾಳಂ ಸೇರಿದಂತೆ ಇನ್ನಿತರ ಭಾಷೆಗಳಿಗೆ ಡಬ್ ಆಗಲು ತಯಾರಾಗಿದೆ.   

ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್

ತುಳುನಾಡಿನ ಪುರುಷರ ಕುಣಿತದ ಸಂಧಿಯೊಂದಿಗೆ ಆರಂಭವಾಗುವ ಕಥಾ ಹಂದರ‌. ಹಚ್ಚ ಹಸುರಿನ ಪ್ರಕೃತಿಯ ಮಡಿಲಲ್ಲಿ ಪುಟ್ಟ ಗ್ರಾಮವೊಂದರ ಕನ್ನಡವೂ ಬಾರದ ಹಳ್ಳಿಯೊಂದರ ಜನರ ನಡುವೆ ಸಾಗುವ ಕಥೆ. ಆಟಿ ಕಳೆಂಜ, ದೈವಾರಾಧನೆ, ಹುಲಿವೇಷ ಸೇರಿದಂತೆ ಹಲವು ಜನಪದ ಆಚರಣೆಗಳನ್ನು ಸಿನಿ ಮಾಧ್ಯಮದ ಮೂಲಕ ತಂದಿಡುವ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅಲ್ಲಲ್ಲಿ ತೆರೆದಿಡುತ್ತಾ, ವ್ಯವಸ್ಥೆ ಮತ್ತು ಮುಗ್ಧ ಜನರ ನಡುವಿನ ತಿಕ್ಕಾಟದ ಜೊತೆ ಸಾಗುತ್ತಾ ಅನಾವರಣಗೊಳ್ಳುವ ಅವರ ಬದುಕು, ಅವೆಲ್ಲವನ್ನೂ ನವಿರಾದ ಹಾಸ್ಯದೊಂದಿಗೆ ಹೇಳುತ್ತಾ ಒಂದು ಅದ್ಭುತ ಸಿನಿಮಾಗಿ ತೆರೆಯ ಮೇಲೆ ಮೂಡಿರುವುದೇ ದಸ್ಕತ್. ಈ ಬಾರಿಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ  ಕನ್ನಡ ಚಿತ್ರ ಎಂಬ ಸ್ಪರ್ಧಾ ಕಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಅಪ್ಪಟ ದೇಸಿ ಚಿತ್ರ. 

ಕರಾವಳಿ ಭಾಗದ ಒಂದಿಷ್ಟು ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ಅದ್ಭುತ ಚಿತ್ರಕ್ಕೆ ಈಗಾಗಲೇ ಥಿಯೇಟರ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸದಾಭಿರುಚಿಯ ಜೊತೆಗೆ ವ್ಯವಹಾರಿಕವಾಗಿಯೂ ಗೆದ್ದಿರುವ ದಸ್ಕತ್ ಸದ್ಯ ಕನ್ನಡ, ಮಲಯಾಳಂ ಸೇರಿದಂತೆ ಇನ್ನಿತರ ಭಾಷೆಗಳಿಗೆ ಡಬ್ ಆಗಲು ತಯಾರಾಗಿದೆ. ಸಿನಿ ಜಗತ್ತಿನಲ್ಲಿ ಅತ್ಯಂತ ಸಣ್ಣ ಪಾಲುದಾರಿಕೆಯನ್ನು ಹೊಂದಿರುವ ತುಳು ಚಿತ್ರರಂಗ ಇನ್ನೇನು ತನ್ನ ಅಸ್ತಿತ್ವದ ಅಳಿವು ಉಳಿವಿನ ಪ್ರಶ್ನೆಯನ್ನು ಎದುರು ನೋಡುತ್ತಿದ್ದಾಗಲೇ ಅದಕ್ಕೊಂದು ಬೂಸ್ಟರ್ ಡೋಸ್ ಕೊಟ್ಟಿರುವ ಸಿನಿಮಾವೆಂದರೆ ತಪ್ಪಾಗಲಾರದು. 

ಬಾಲಿವುಡ್‌ನಲ್ಲಿ ಇಷ್ಟೊಂದು ಭಯಾನಕವೇ? ವಿವಾದಾತ್ಮಕ ಸೀನ್‌ನಲ್ಲಿ ನಟಿ ಜ್ಯೋತಿಕಾ

ಏನಿದು ದಸ್ಕತ್ ಎಂದರೆ?: ದಸ್ಕತ್‌ಎಂದರೆ ಸಹಿ ಎಂದರ್ಥ. ಜನರ ದೈನಂದಿನ ಬದುಕಿನ ಪ್ರತೀ ಭಾಗದಲ್ಲೂ ಒಂದೊಂದು ವಿಭಿನ್ನ ಗುರುತುಗಳಿವೆ. ರೈತ ತನ್ನ ನೇಗಿಲಿನಿಂದ ಮಾಡುವ ಉಳುಮೆ ಅದು ಆತನ ದಸ್ಕತ್. ಕೂಲಿಕಾರನ ಬೆವರಿನ ಹನಿಯಲ್ಲಿ ಆತನ ದಸ್ಕತ್ ಅಡಗಿದೆ. ಅಮ್ಮ ಮಗುವಿಗೆ ಜನ್ಮ ಕೊಡುವಾಗ ಅಲ್ಲೊಂದು ದಸ್ಕತ್ ಹಾಕ್ತಾಳೆ. ಹೀಗೆ ಜನರ ಬದಕಿನ ಪ್ರತೀ ಘಟ್ಟದಲ್ಲೂ ದಸ್ಕತ್ ಇದೆ ಅನ್ನುತ್ತಾರೆ ಚಿತ್ರತಂಡ. 

ಅಪ್ಪಟ ದೆಸೀ ಸಿನಿಮಾ: ದಸ್ಕತ್ ಒಂದು ಅಪ್ಪಟ ದೇಸಿ ಸಿನಿಮಾ. ಸಂಪೂರ್ಣವಾಗಿ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ತುಳುನಾಡಿನ ಈ ಭಾಗದಲ್ಲಿ ಮಾತ್ರ ಕಾಣ ಸಿಗುವ ಪುರ್ಸೆರ್ ಕುಣಿತವೇ ಇದಕ್ಕೆ ಸಾಕ್ಷಿ. ಇನ್ನು ಕುಣಿತ ಭಜನೆ, ಕೋಳಿ ಅಂಕ, ದೈವಾರಾಧನೆ, ಹುಲಿಕುಣಿತ, ಆಟಿಕಳೆಂಜ ಸೇರಿದಂತೆ ಹಲವು ಆಚರಣೆಗಳ ಜೊತೆಗೇ ಕಥೆ ಸಾಗುತ್ತದೆ. ಇದೆಲ್ಲದರ ಜೊತೆಗೆ ಆಯಾ ಭಾಗದ ಜನರ ನಂಬಿಕೆಗಳಿಗೂ ಧಕ್ಕೆಯಾಗದ ಹಾಗೆ ಆಚರಣೆಗಳನ್ನು ತೋರಿಸಿರುವ ಸಿನಿಮಾ ತಂಡದ ನೈಪುಣ್ಯತೆ ಇಲ್ಲಿ ಪರಿಚಯವಾಗುತ್ತದೆ. ಈ ಎಲ್ಲಾ ಆಚರಣೆಗಳಲ್ಲಿ ಬರುವ ಸಂಧಿ ಪಾರ್ಧನಗಳನ್ನೇ ಹಿನ್ನೆಲೆ ಸಂಗೀತಕ್ಕೆ ಬಳಸಿದ್ದು ಅವುಗಳಲ್ಲಿ ಬರುವ ಚರ್ಮದ ವಾದ್ಯಗಳ ಕಲರವ ಇಡೀ ಸಿನಿಮಾವನ್ನು ಜೀವಂತವಾಗಿರಿಸುತ್ತದೆ. ಯುವ ಪ್ರತಿಭೆ ಸಮರ್ಥನ್ ರಾವ್ ಸಂಗೀತದ ಮೋಡಿ ಸಿನಿಮಾ ಮುಗಿದ ಬಳಿಕವೂ ಅದೇ ಗುಂಗಿನಲ್ಲಿ ತೇಲುವಂತೆ ಮಾಡುತ್ತದೆ.  ಶಿವರಾತ್ರಿಯ ದಿನ ಊರಿನಲ್ಲಿ ಕಳ್ಳತನ ಮಾಡುವ ದೃಶ್ಯಗಳು, ತಮಗಾಗದವರಿಗೆ ಕೊಡುವ ಸಣ್ಣ ಪುಟ್ಟ ಕೀಟಲೆಗಳು ಇವೆಲ್ಲಾ ಚಿತ್ರವನ್ನು ಇನ್ನಷ್ಟು ಪ್ರಾದೇಶಿಕವಾಗಿಸುತ್ತಾ ಸಾಗುತ್ತದೆ.

ಸ್ಥಳೀಯ ಪ್ರತಿಭೆಗಳ ವಿನೂತನ ಪ್ರಯೋಗ: ದಸ್ಕತ್ ಇಂತಹದ್ದೊಂದು ಪ್ರಯೋಗಕ್ಕೆ ಸಾಕ್ಷಿಯಾಗಿ ಗೆದ್ದಿದೆ. ಈ ಹಿಂದೆ ಕನ್ನಡದಲ್ಲಿ ಕನಸು ಮಾರಾಟಕ್ಕಿದೆ ಎಂಬ ಚಿತ್ರವನ್ನು ನಿರ್ಮಿಸಿದ್ದ ತಂಡದ ಬಹುತೇಕ ಸದಸ್ಯರು ಚಿತ್ರದಲ್ಲಿದ್ದರೆ ತುಳು ರಂಗಭೂಮಿಯಲ್ಲಿ ಈಗಾಗಲೇ ಹೆಸರು ಮಾಡಿರುವ ಕಲಾವಿದರೂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶನ ಮಾಡಿದ್ದು ಚಿತ್ರದಲ್ಲಿ ಹೊಸ ದಸ್ಕತ್ ಅನ್ನೇ ಮೂಡಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಶೇಖರನ ಪಾತ್ರ ನಿರ್ವಹಿಸಿರುವ ದೀಕ್ಷಿತ್ ಅಂಡಿಂಜೆ ನಟನೆಯಂತೂ ನೆಕ್ಸ್ಟ್ ಲೆವೆಲ್ ನಲ್ಲಿದೆ.  ಕಾಂತಾರ ಸಿನಿಮಾದಲ್ಲಿ ಮಿಂಚಿದ್ದ ದೀಪಕ್ ರೈ ಪಾಣಾಜೆ ಹಾಸ್ಯದ ಸೊಗಸು ಅಲ್ಲಲ್ಲಿ ಪ್ರೇಕ್ಷಕರನ್ನು ನಗಿಸುತ್ತದೆ. ಇನ್ನುಳಿದಂತೆ ತುಳು ರಂಗಭೂಮಿಯ ಮೋಹನ್ ಶೇಣಿ, ತಿಮ್ಮಪ್ಪ ಕುಲಾಲ್, ಯುವ ಶೆಟ್ಟಿ, ಚಂದ್ರಹಾಸ ಉಲ್ಲಾಳ ಸೇರಿದಂತೆ ಹಲವು ಕಲಾವಿದರು ಇಲ್ಲಿ ಸಾಥ್ ಕೊಟ್ಟಿದ್ದಾರೆ.

ಆ ಎರಡು ಚಿತ್ರಗಳಲ್ಲಿ ನಟಿಸಿ ರವಿತೇಜ, ಚಿರಂಜೀವಿ ತಪ್ಪು ಮಾಡಿದ್ರು.. ಆದರೆ ಪವನ್ ಕಲ್ಯಾಣ್ ಮಧ್ಯದಲ್ಲಿ ಬಂದಿದ್ದೇಕೆ?

ಉತ್ತಮ ಕ್ವಾಲಿಟಿ ಹಾಗೂ ಕ್ಯಾಮರಾ ಕೈ ಚಳಕ: ಸಾಮರಸ್ಯ ಮತ್ತು ದಬ್ಬಾಳಿಕೆಯನ್ನು ಚಿತ್ರದ ಉದ್ದಗಲಕ್ಕೂ ಕಂಡರೂ ಅಲ್ಲಲ್ಲಿ ತುಳು ನಾಡಿನ ಪ್ರಕೃತಿ ಸೌಂದರ್ಯದ ಅನಾವರಣವೂ ನಡೆಯುತ್ತಾ ಸಾಗುತ್ತದೆ. ಬೆಟ್ಟ ಗುಡ್ಡಗಳು, ಭತ್ತದ ಕೃಷಿ, ತೋಟ, ಕಾಡು, ತೆಂಗು ಅಡಿಕೆಯ ತೋಟ,ಝರಿ ತೊರೆಗಳು ಮೀನುಗಾರಿಕೆ ಇವೆಲ್ಲವನ್ನೂ ತನ್ನ ಕ್ಯಾಮರಾ ಕಣ್ಣಿನಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಸಂತೋಷ್ ಆಚಾರ್ಯ ಗುಂಪಾಜೆ. ಮಲಯಾಳಂ ಸಿನಿಮಾಗಳನ್ನು ಹೋಲುವ ಪ್ರಾಕೃತಿಕ ಸೌಂದರ್ಯದ ಅನಾವರಣ ದಸ್ಕತ್ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಸಿಗುವುದಂತೂ ನಿಚ್ಚಳ. ಸದ್ಯ ಎಲ್ಲರ ಮೆಚ್ಚುಗೆಯ ರುಜು ಪಡೆದು ಮುನ್ನುಗ್ಗುತ್ತಿರುವ ಚಿತ್ರ ಕೋಸ್ಟಲ್ ವುಡ್ ಗೆ ಹೊಸ ಭರವಸೆ ನೀಡ್ತಿದೆ. ಹಲವು ಹೊಸ ಕಲಾವಿದರನ್ನು ಸಿನಿ ರಂಗಕ್ಕೆ ಕೊಡುಗೆಯಾಗಿ ನೀಡಿರುವ ಕೋಸ್ಟಲ್ ವುಡ್ ಈಗ ತನ್ನದೇ ಕಲಾವಿದರನ್ನು ಬಳಸಿಕೊಂಡು ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತನ್ನದೇ ನೆಲದ ಸೊಗಡನ್ನು ತನ್ನದೇ ಭಾಷೆಯಲ್ಲಿ ನೀಡುತ್ತಿದ್ದು ಇದಕ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವದ ವೇದಿಕೆ ದೊರಕಿರುವುದೇ ಚಿತ್ರದ ಮತ್ತೊಂದು ಯಶಸ್ಸಿಗೆ ಸಾಕ್ಷಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?