Sanju Film Review: ಸಂಬಂಧಗಳ ಸೂಕ್ಷ್ಮತೆಯ ಅನಾವರಣದಲ್ಲಿ ತಾಯಿ ಮಗನ ಬಂಧವೇ ಸಂಜು

By Kannadaprabha News  |  First Published Sep 28, 2024, 4:17 PM IST

ತಮ್ಮ ಕತೆಯನ್ನು ಹೇಳಲು ನಿರ್ದೇಶಕರು ಪರಿಸರವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಸಂಬಂಧಗಳಲ್ಲಿ ಸಂಯಮ ಎಷ್ಟು ಮುಖ್ಯ ಎಂಬುದನ್ನು ಸಾರುವ ಒಂದು ಎಳೆ ಈ ಕತೆಯಲ್ಲಿ ವಿಶೇಷವಾಗಿ ಮೂಡಿಬಂದಿದೆ.
 


ಆರ್‌.ಬಿ.ಎಸ್.

ಇಲ್ಲಿ ಪ್ರೇಮವಿದೆ, ಭಗ್ನಗೊಂಡ ಹೃದಯವಿದೆ, ಸಂಬಂಧಗಳ ತಾಕಲಾಟವಿದೆ, ಕುಟುಂಬಗಳ ಒದ್ದಾಟವಿದೆ, ಮುರಿದು ಬಿದ್ದ ಸೇತುವೆ ಇದೆ, ಭಾವನಾ ಪ್ರವಾಹವಿದೆ. ಒಟ್ಟಾರೆ ಇದೊಂದು ಸಂಬಂಧಗಳ ಸೂಕ್ಷ್ಮತೆಯನ್ನು ಅನಾವರಣಗೊಳಿಸುವ ಕಥಾಹಂದರ ಹೊಂದಿರುವ ಸಿನಿಮಾ. ಮೊದಲಾರ್ಧದಲ್ಲಿ ತೀವ್ರವಾದದ್ದು ಘಟಿಸುವುದು ಕಡಿಮೆ. ನಾಯಕ, ನಾಯಕಿ ಪರಿಚಯ, ಪ್ರೇಮ, ತಿರುಗಾಟದಂತಹ ನವಿರು ದೃಶ್ಯಗಳು ಬಂದು ಹೋಗುತ್ತವೆ. 

Latest Videos

undefined

ರುಚಿಗೆ ತಕ್ಕಷ್ಟು ಹಾಸ್ಯವೂ ಬೆರೆತಿದೆ. ಕೊಂಚ ಹಾಸ್ಯ ಹೆಚ್ಚೇ ಇದೆ. ಹಗುರವಾಗಿ ಕತೆ ಮುಂದಕ್ಕೆ ಸಾಗುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಕತೆಗೊಂದು ತಿರುವು ದೊರೆಯುತ್ತದೆ. ಸಂಬಂಧ ಸಂಕೀರ್ಣವಾಗುತ್ತದೆ. ಕಥಾ ಭಾವನಾಲೋಕ ತೀವ್ರವಾಗುತ್ತಾ ಹೋಗುತ್ತದೆ. ವಿಶೇಷವಾಗಿ ಇಲ್ಲಿ ತಾಯಿ ಮಗನ ಬಂಧ ತೋರಿಸಲಾಗಿದೆ ಮತ್ತು ಆ ಬಾಂಧವ್ಯ ಮನಸ್ಸಿಗೆ ತಾಕುತ್ತದೆ. ನಿರ್ದೇಶಕ ಯತಿರಾಜ್ ವಾಸ್ತವ ಜಗತ್ತಿ ಕಥಾ ಎಳೆಯೊಂದನ್ನು ಹಿಡಿದುಕೊಂಡು ಸಿನಿಮಾ ಕಟ್ಟಿದ್ದಾರೆ. ಅವರಿಗೆ ತೀವ್ರತೆ ದಾಟಿಸುವುದು ತಿಳಿದಿದೆ. 

ಚಿತ್ರ: ಸಂಜು
ನಿರ್ದೇಶನ: ಯತಿರಾಜ್‌
ತಾರಾಗಣ: ಮನ್ವಿತ್, ಸಾತ್ವಿಕಾ, ಅಪೂರ್ವ, ಸಂಗೀತಾ ಅನಿಲ್, ಬಾಲ ರಾಜವಾಡಿ, ಸುಂದರಶ್ರೀ
ರೇಟಿಂಗ್: 3

ಅಲ್ಲಲ್ಲಿ ಕೊಂಚ ಅನವಶ್ಯ ಅಂಶಗಳಿಗೆ ಕಡಿವಾಣ ಹಾಕಿದ್ದರೆ ಕಥಾ ತೀವ್ರತೆ ಮತ್ತಷ್ಟು ಹೆಚ್ಚಬಹುದಿತ್ತು. ತಮ್ಮ ಕತೆಯನ್ನು ಹೇಳಲು ನಿರ್ದೇಶಕರು ಪರಿಸರವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಸಂಬಂಧಗಳಲ್ಲಿ ಸಂಯಮ ಎಷ್ಟು ಮುಖ್ಯ ಎಂಬುದನ್ನು ಸಾರುವ ಒಂದು ಎಳೆ ಈ ಕತೆಯಲ್ಲಿ ವಿಶೇಷವಾಗಿ ಮೂಡಿಬಂದಿದೆ. ಅದೇ ಥರ ಸಂಯಮದಿಂದ ಕಥಾ ಜಗತ್ತಿನ ಒಳಗೆ ಹೋಗುವವರಿಗೆ, ಸಂಬಂಧದ ಗಾಢತೆಯನ್ನು ಅರ್ಥ ಮಾಡಿಕೊಳ್ಳುವವರಿಗೆ ಹತ್ತಿರವಾಗುನ ಸಿನಿಮಾವನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

click me!