
ರಾಜೇಶ್
ಆಸೆ, ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ. ಅದಕ್ಕಾಗಿ ಹೋರಾಟವೂ ನಡೆಯುತ್ತಿರುತ್ತದೆ. ಅಂಥಾ ಒಬ್ಬ ಮಹತ್ವಾಕಾಂಕ್ಷಿ ಹುಡುಗನ ಕತೆ ಇದು. ಅವನಿಗೆ ಸಿನಿಮಾ ಹೀರೋ ಆಗುವ ಕನಸು. ಆ ಕನಸು ಇನ್ನೇನು ನೆರವೇರುತ್ತದೆ ಅನ್ನುವಾಗ ಎದುರಾಗುವ ಒಂದು ತಿರುವು ಆ ತರುಣನ ಹಾದಿಯನ್ನೇ ಬದಲಿಸುತ್ತದೆ. ಅಲ್ಲಿಂದ ಕತೆ ಶುರು. ಇಲ್ಲಿ ಗ್ಯಾಂಗ್‌ಸ್ಟರ್, ರೌಡಿಗಳು, ರಾಜಕೀಯ ವ್ಯಕ್ತಿಗಳು, ಪೊಲೀಸರು, ಒಳ್ಳೆಯವರು, ದುಷ್ಟರು ಎಲ್ಲರೂ ಕತೆಯ ಭಾಗಗಳು. ಜೊತೆಗೆ ವಿಧಿಯೂ ಒಂದು ಪಾತ್ರ.
ಅನಿರೀಕ್ಷಿತ ಘಟನೆಗಳು ನಡೆಯುತ್ತಾ ಕತೆ ಮುಂದಕ್ಕೆ ಸಾಗುತ್ತಾ ಇರುತ್ತವೆ. ರಕ್ತಚರಿತ್ರೆಯ ಮಧ್ಯೆ ಒಂದು ಕ್ಯೂಟ್ ಆದ ಲವ್‌ಸ್ಟೋರಿಯೂ ನಡೆಯುತ್ತಿರುತ್ತದೆ. ಹೋರಾಟ ಮತ್ತು ಪ್ರೇಮ ಒಂದೇ ಪಥದಲ್ಲಿ ಸಾಗುವ ದೃಶ್ಯಗಳನ್ನು ನಿರ್ದೇಶಕರು ಸೊಗಸಾಗಿ ಚಿತ್ರೀಕರಿಸಿದ್ದಾರೆ. ಆರಂಭದಲ್ಲಿ ನಿರ್ದೇಶಕರು ನೇರವಾಗಿ ಕತೆ ಹೇಳುವುದಿಲ್ಲ. ಹಾಗಾಗಿ ಅಸ್ಪಷ್ಟತೆ ಉಳಿದಿರುತ್ತದೆ. ದ್ವಿತೀಯಾರ್ಧದಲ್ಲಿ ಎಲ್ಲಾ ಅಸ್ಪಷ್ಟತೆಗೂ ಸ್ಪಷ್ಟತೆ ಸಿಗುತ್ತದೆ. ಎಲ್ಲವೂ ನಿಚ್ಚಳವಾಗುತ್ತದೆ.
ಚಿತ್ರ: ರಾನಿ
ನಿರ್ದೇಶನ: ಗುರುತೇಜ್ ಶೆಟ್ಟಿ
ತಾರಾಗಣ: ಕಿರಣ್ ರಾಜ್, ಸಮೀಕ್ಷಾ, ರಾಧ್ಯ, ಅಪೂರ್ವ, ರವಿಶಂಕರ್, ಯಶ್ ಶೆಟ್ಟಿ, ಉಗ್ರಂ ಮಂಜು
ರೇಟಿಂಗ್: 3
ಗ್ಯಾಂಗ್‌ಸ್ಟರ್ ಕತೆ ಕನ್ನಡಕ್ಕೆ ಹೊಸದಲ್ಲ. ಆದರೆ ಅದನ್ನು ಹೇಗೆ ಪ್ರೆಸೆಂಟ್ ಮಾಡುತ್ತಾರೆ ಅನ್ನುವುದು ಮುಖ್ಯ. ನಿರ್ದೇಶಕರು ಇಲ್ಲಿ ಇಂಥಾ ಸಿನಿಮಾಗಳ ಸಾಧಾರಣ ಅಂಶಗಳನ್ನು ಮೀರಲು ಯತ್ನಿಸಿದ್ದಾರೆ. ಅದಕ್ಕೆ ಕಿರಣ್‌ರಾಜ್ ಸೂಕ್ತವಾಗಿ ಸಾಥ್ ಕೊಟ್ಟಿದ್ದಾರೆ. ಅವರು ಒಂದು ಕಡೆ ಪಕ್ಕದ್ಮನೆ ಹುಡುಗನ ಪಾತ್ರ, ಇನ್ನೊಂದೆಡೆ ಗ್ಯಾಂಗ್‌ಸ್ಟರ್ ಪಾತ್ರವನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ. ಇದೊಂದು ವಿಧಿಯ ಆಟದ ಕತೆ. ಅದಕ್ಕೆ ಸೋಲುವ ಮಾನವರ ಕತೆ. ಹಾಗಾಗಿ ಕೊನೆಗೆ ಸಣ್ಣದೊಂದು ಮೌನವನ್ನು ಉಳಿಸಿ ಕತೆಯನ್ನು ಕೊನೆ ಮಾಡುತ್ತಾರೆ ನಿರ್ದೇಶಕರು. ಆ ಕ್ಷಣ ಮೌನವೇ ಈ ಚಿತ್ರದ ಶಕ್ತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.