ಒಬ್ಬ ಮಾರ್ಕ್‌, ಎರಡು ರಾತ್ರಿ, ಒಂದು ಹಗಲು: ಇಲ್ಲಿದೆ ಪವರ್‌ಫುಲ್‌ ಆ್ಯಕ್ಷನ್‌ ಸಿನಿಮಾ 'ಮಾರ್ಕ್' ವಿಮರ್ಶೆ

Published : Dec 26, 2025, 07:25 AM IST
Kichcha Sudeep

ಸಾರಾಂಶ

ಹೀರೋನ ಒಂದು ಏಟಿಗೇ ರಕ್ತ ಕಾರುವ, ಗಾಳಿಯಲ್ಲಿ ಹಾರುವ ಹತ್ತಾರು ವಿಲನ್‌ಗಳು, ನೆಲಕ್ಕೆ ಗುದ್ದಿದರೆ ನೆಲವೇ ಒಡೆಯುವಂಥಾ ಹೀರೋ ಕೇಂದ್ರಿತ ವೈಭವೀಕರಣಗಳು ಸಾಕಷ್ಟಿವೆ. ಬೋನಸ್‌ನಂತೆ ಡ್ಯಾನ್ಸಿಂಗ್ ಸ್ಟೈಲ್‌ ಫೈಟ್‌ ಇದೆ.

ಪ್ರಿಯಾ ಕೆರ್ವಾಶೆ

‘ಮಾರ್ಕ್‌’ ಸಿನಿಮಾ ಹೇಗಿರಬಹುದು ಅನ್ನುವ ಸಣ್ಣ ಅಂದಾಜು ಚಿತ್ರದ ಟ್ರೇಲರ್‌ ನೋಡಿದರೆ ತಿಳಿಯುತ್ತದೆ. ಆ ಕಣ್ಣಂದಾಜಿಗೆ ಸಿನಿಮಾ ಮೋಸ ಮಾಡೋದಿಲ್ಲ. ಹಾಗೆಂದು ಗೆಸ್‌ವರ್ಕ್‌ಗಿಂತ ಹೆಚ್ಚಿನದನ್ನೂ ಇಲ್ಲಿ ಪ್ರೇಕ್ಷಕ ನಿರೀಕ್ಷಿಸುವಂತಿಲ್ಲ. ಸಸ್ಪೆಂಡೆಡ್‌ ಎಸ್‌.ಪಿ. ಅಜಯ್‌ ಮಾರ್ಕಂಡೇಯ (ಸುದೀಪ್‌)ನದು ವಿಲಕ್ಷಣ ವ್ಯಕ್ತಿತ್ವ. ಸಸ್ಪೆನ್ಶನ್‌ನಲ್ಲಿದ್ದರೂ, ಅಧಿಕಾರದಲ್ಲಿದ್ದರೂ ಈತ ವಿಲನ್‌ಗಳಿಗೆ ಯಮ, ಶತ್ರು ಸಂಹಾರವೇ ಈತನ ಜೀವನಧರ್ಮ. ಇಂಥಾ ಮಾರ್ಕ್‌ ಮುಂದೆ ಮೂರು ಸವಾಲುಗಳಿವೆ. ಅಪಹರಣಕ್ಕೊಳಗಾಗಿ ಸಾವಿನ ಭೀತಿಯಲ್ಲಿರುವ 18 ಮಕ್ಕಳ ರಕ್ಷಣೆ ಮಾಡಬೇಕು,

ತಾಯಿಯನ್ನೇ ಕೊಂದು ಸಿಎಂ ಆಗಲು ಹೊರಟಿರುವ ಆದಿ ಕೇಶವನ ಪಿತೂರಿಯನ್ನು ಬಯಲು ಮಾಡಬೇಕು, ಡ್ರಗ್‌ ಮಾಫಿಯಾಕ್ಕೊಂದು ಗತಿ ಕಾಣಿಸಬೇಕು. ಇದನ್ನು ಪೂರೈಸಲು ಇರುವುದು ಆತನ ಮುಂದಿರುವುದು ಕೇವಲ ಎರಡು ರಾತ್ರಿ, ಒಂದು ಹಗಲಿನ ಅವಧಿ. ಸಾವಿರಾರು ಸಂಖ್ಯೆಯಲ್ಲಿ ಮಾರಕಾಸ್ತ್ರ ಹಿಡಿದ ವಿಲನ್‌ಗಳು, ಬೆರಳೆಣಿಕೆಯ ಪೊಲೀಸರು, ಒಬ್ಬ ಮಾರ್ಕ್‌. ಈ ಸರ್ಕಲ್‌ನಲ್ಲೇ ಕಥೆಯ ಪ್ರಯಾಣ. ಶಕ್ತಿ, ಯುಕ್ತಿ ಮತ್ತು ಇಚ್ಛಾಶಕ್ತಿಗಳಿಂದ ಮಾರ್ಕ್‌ ಸೀಮಿತ ಸಮಯದಲ್ಲಿ ಈ ಚಾಲೆಂಜ್‌ಗಳನ್ನು ಹೇಗೆ ಗೆಲ್ಲುತ್ತಾನೆ ಅನ್ನುವುದು ಒನ್‌ಲೈನ್‌.

ಹೀರೋನ ಒಂದು ಏಟಿಗೇ ರಕ್ತ ಕಾರುವ, ಗಾಳಿಯಲ್ಲಿ ಹಾರುವ ಹತ್ತಾರು ವಿಲನ್‌ಗಳು, ನೆಲಕ್ಕೆ ಗುದ್ದಿದರೆ ನೆಲವೇ ಒಡೆಯುವಂಥಾ ಹೀರೋ ಕೇಂದ್ರಿತ ವೈಭವೀಕರಣಗಳು ಸಾಕಷ್ಟಿವೆ. ಬೋನಸ್‌ನಂತೆ ಡ್ಯಾನ್ಸಿಂಗ್ ಸ್ಟೈಲ್‌ ಫೈಟ್‌ ಇದೆ. ಸಿನಿಮಾದುದ್ದಕ್ಕೂ ಪವರ್‌ಫುಲ್‌ ಬಿಜಿಎಂ ಇದೆ. ಮಿಸ್‌ ಆಗಿರುವುದು ಮೌನ, ಬುದ್ಧಿ ಓಡಿಸಲು ಪ್ರೇಕ್ಷಕನಿಗೆ ನೀಡಬೇಕಿದ್ದ ಸಮಯ. ‘ಅಂಧಕಾರ ತುಂಬಿದ ಅಂದವಾದ ಬಾಳಲಿ’ ಎಂಬ ಮಕ್ಕಳ ಹಾಡಿದೆ. ಘನ ಗಾಂಭೀರ್ಯದ ಪದಗಳ ಜೊತೆಗೆ ಹುಟ್ಟು ಸಾವಿನಂಥಾ ಪಾರಮಾರ್ಥಿಕ ವಿಚಾರಗಳು ಬರುವ ಇಂಥಾ ಹಾಡನ್ನು ಈ ಕಾಲದ ಮಕ್ಕಳ ಬಾಯಲ್ಲಿ ಕೇಳುವ ಫೀಲನ್ನು ಅನುಭವಿಸಿಯೇ ತಿಳಿಯಬೇಕು.

ಚಿತ್ರ: ಮಾರ್ಕ್‌

ನಿರ್ದೇಶನ: ವಿಜಯ್‌ ಕಾರ್ತಿಕೇಯ
ತಾರಾಗಣ: ಕಿಚ್ಚ ಸುದೀಪ್, ನವೀನ್ ಚಂದ್ರ, ಶೈನ್‌ ಟಾಮ್‌ ಚಾಕೊ, ಯೋಗಿ ಬಾಬು, ಗೋಪಾಲಕೃಷ್ಣ ದೇಶಪಾಂಡೆ
ರೇಟಿಂಗ್‌: 3

ಸುದೀಪ್‌ ಎನರ್ಜಿ, ಕ್ವಿಕ್‌ನೆಸ್‌, ಅಭಿನಯ ಒಂದಕ್ಕಿಂತ ಒಂದು ಮಿಗಿಲು. ಹೀರೋ ಅಬ್ಬರ, ಕಥೆಯ ವೇಗದ ಮುಂದೆ ಯೋಗಿ ರಾಜ್‌ ಕಾಮಿಡಿ ಬಿಟ್ಟರೆ ಉಳಿದ ಪಾತ್ರಗಳು ದಾಖಲಾಗೋದಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಹೆಚ್ಚಿನ ಅಚ್ಚರಿ ನಿರೀಕ್ಷಿಸುವಂತಿಲ್ಲ. ಥೇಟರಿಂದ ಹೊರಬಂದ ಮೇಲೂ ಮನಸ್ಸು ಮೆಲುಕು ಹಾಕುವುದು ಮಾರ್ಕ್‌ನ ಡ್ಯಾನ್ಸಿಂಗ್‌ ಫೈಟ್‌ ಮತ್ತು ಅಜನೀಶರ ಬ್ಯಾಗ್ರೌಂಡ್‌ ಸ್ಕೋರ್‌. ಅಷ್ಟರಮಟ್ಟಿಗೆ ಸ್ಟಾರ್‌ ಕೇಂದ್ರಿತ ಆ್ಯಕ್ಷನ್‌ ಸಿನಿಮಾವೊಂದರ ಉದ್ದೇಶ ಈಡೇರಿದಂತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Avatar Fire and Ash Review: ಪಂಡೋರಾ ದೃಶ್ಯ ಅದ್ಭುತ, ಆದರೆ ಕಥೆ ಡಲ್? ಜೇಮ್ಸ್ ಕ್ಯಾಮರೂನ್ ಹೀಗೇಕೆ ಮಾಡಿದ್ರು?
ಬಾಲಯ್ಯ ಮಾಸ್ ಶೋ, ಆಕ್ಷನ್ ಡೋಸ್ ಜಾಸ್ತಿ: ಇಲ್ಲಿದೆ ಅಘೋರನ ಕಥೆ 'ಅಖಂಡ 2' ಸಂಪೂರ್ಣ ವಿಮರ್ಶೆ!