
ಪ್ರಿಯಾ ಕೆರ್ವಾಶೆ
ಪಯಣ ಅನ್ನೋದು ರೂಪಕವೂ ಆಗಬಹುದು, ಯಥಾರ್ಥವೂ ಆಗಬಹುದು. ಈ ಸಿನಿಮಾದಲ್ಲಿ ಎರಡೂ ಇದೆ. ವಾಸ್ತವದ ಜರ್ನಿಯೊಳಗೆ ಕಥಾ ಜರ್ನಿ ಬೆಸೆದುಕೊಂಡಿದೆ. ಹಳೆ ಕಾರು. ವಿಲಕ್ಷಣ ವ್ಯಕ್ತಿಯೊಬ್ಬ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತಿದ್ದಾನೆ. ಆತ ನಡೆ, ನುಡಿ ನಿಗೂಢ. ಆತನ ಪ್ರಯಾಣದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಎದುರಾಗುತ್ತಾರೆ. ಅವರೂ ಕಾರ್ ಏರುತ್ತಾರೆ. ಒಂದು ಅಪರಿಚಿತ ವಾಸನೆ ವಾತಾವರಣದಲ್ಲಿದೆ. ಈ ಮೂವರ ಪ್ರಯಾಣದ ಗುರಿ ವಿರಾಜಪೇಟೆ.
ಈ ನಡುವೆ ಈ ವಿರಾಜಪೇಟೆಯಲ್ಲೇ ಒಬ್ಬ ಸೈಕೋಪಾತ್ ಇದ್ದಾನೆ. ಆತನ ಬಗ್ಗೆ ಎಚ್ಚರದಿಂದಿರುವಂತೆ ಮಾಧ್ಯಮಗಳಲ್ಲಿ ಸುದ್ದಿ ಭಿತ್ತರವಾಗುತ್ತದೆ. ಇತ್ತ ಕಾರ್‌ನೊಳಗಿನ ಮೂವರ ನಡವಳಿಕೆ, ವರ್ತನೆ ನಿಗೂಢವಾಗಿದೆ. ಅವರಲ್ಲೇ ಯಾರೋ ಒಬ್ಬ ಸೈಕೋಪಾತ್ ಇರಬಹುದಾ? ಆತನ ಸ್ಟೋರಿ ಏನಿರಬಹುದು ಅಂತ ಮನಸ್ಸು ತರ್ಕಿಸುತ್ತದೆ. ಆಗ ಮತ್ತೊಂದು ಪಾತ್ರದ ಎಂಟ್ರಿ. ಕಾರಿನೊಳಗಿರುವ ವ್ಯಕ್ತಿಗಳಿಗೆ ಪರಸ್ಪರ ಕನೆಕ್ಷನ್ ಇದೆಯಾ? ಅವರೆಲ್ಲ ವಿರಾಜಪೇಟೆಗೆ ಯಾಕೆ ಹೊರಟಿದ್ದಾರೆ? ನಿಜವಾದ ಸೈಕೋಪಾತ್ ಆ ನಾಲ್ವರಲ್ಲಿ ಒಬ್ಬರಾ, ಇಲ್ಲವೇ ಇವರು ಬಲಿಪಶುಗಳಾ ಅಥವಾ ಇನ್ನೊಬ್ಬರನ್ನು ಬಲಿಪಶುವಾಗಿಸಿದ ವಿಕೃತರಾ ಅನ್ನೋದನ್ನು ಸಿನಿಮಾ ಎರಡನೇ ಭಾಗದಲ್ಲಿ ಕಟ್ಟಿಕೊಡುತ್ತದೆ.
ಚಿತ್ರ: ಎಲ್ಲಿಗೆ ಪಯಣ ಯಾವುದೋ ದಾರಿ
ತಾರಾಗಣ: ಅಭಿಮನ್ಯು ಕಾಶಿನಾಥ್, ಸ್ಫೂರ್ತಿ ಉಡಿಮನೆ, ವಿಜಯಶ್ರೀ ಕಲಬುರಗಿ
ನಿರ್ದೇಶನ: ಕಿರಣ್ ಎಸ್ ಸೂರ್ಯ
ರೇಟಿಂಗ್ : 3
ಈ ಸಿನಿಮಾದ ನಿರೂಪಣೆ, ಕಥೆ ಸಾಗುವ ರೀತಿಯಲ್ಲಿ ಥ್ರಿಲ್ ಇದೆ. ಆರಂಭದಿಂದ ಕೊನೇವರೆಗೂ ಕುತೂಹಲವನ್ನು ಕಾಪಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸ್ಫೂರ್ತಿ ಹಾಗೂ ಅಭಿಮನ್ಯು ಪಾತ್ರವನ್ನು ಜೀವಿಸಿದ್ದಾರೆ. ಇಂಟರ್‌ವಲ್‌ವರೆಗೂ ಮೊದಲು ಅಲ್ಲಲ್ಲಿ ಅನಾವಶ್ಯಕ ಅಂಶಗಳಿವೆ. ನಂತರ ಕಥೆ ಬಿಗಿಯಾಗುತ್ತದೆ. ಸಿನಿಮಾದಲ್ಲಿ ಅಸೂಕ್ಷ್ಮ ಅನಿಸುವುದು ಹೆಣ್ಣಿನ ವರ್ಜಿನಿಟಿಯ ವಿಜೃಂಭಣೆ. ‘ಈ ಕಾಲದಲ್ಲೂ ಈ ಥರ ಯೋಚನೆ ಮಾಡ್ತೀರ’ ಎಂಬ ನೀತಾ ಪಾತ್ರಧಾರಿಯ ಮಾತು ಪ್ರೇಕ್ಷಕನ ಮಾತೂ ಆಗುತ್ತದೆ. ಅದು ಬಿಟ್ಟರೆ ಅನೂಹ್ಯ ತಿರುವುಗಳ ಆಸಕ್ತಿಕರ ಸಿನಿಮಾವಿದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.