ವಿಭಿನ್ನ ಯೋಚನೆಯ ಹೊಸ ಜನರೇಷನ್ನಿನ ಒಬ್ಬ ನಿರ್ದೇಶಕ ಮತ್ತು ಕ್ಲೋಸಪ್‌ನಲ್ಲಿ ನಟಿಸುವ ಪ್ರತಿಭಾವಂತ ನಟಿ ಹುಟ್ಟಿಕೊಂಡಿದ್ದಾರೆ ಅನ್ನುವುದು ವೃತ್ರ ಚಿತ್ರದ ಸಾರ್ಥಕತೆ.
ರಾಜೇಶ್ ಶೆಟ್ಟಿ
ಇದೊಂದು ಥ್ರಿಲ್ಲರ್. ಹೊಸತಾಗಿ ಪೊಲೀಸ್ ಇಲಾಖೆ ಸೇರಿಕೊಂಡ ಕ್ರೈಂಬ್ರಾಂಚ್‌ನ ಅಧಿಕಾರಿ ಇಂದ್ರಾ ರಾವ್(ನಿತ್ಯಶ್ರೀ)ಗೆ ಒಂದು ಸೂಸೈಡ್ ಕೇಸ್ ಬರುತ್ತದೆ. ಆ ಕೇಸ್ ಹಿಂದೆ ಬಿದ್ದಾಗ ವಿಭಿನ್ನವಾದ ತಿರುವುಗಳು ಸಿಕ್ಕಿ ಆಕೆಯನ್ನು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಈ ದಾರಿ ಸ್ವಲ್ಪ ಸುದೀರ್ಘ.
ಒಂಚೂರು ಕುತೂಹಲದಿಂದ ಆಗೊಮ್ಮೆ ಈಗೊಮ್ಮೆ ಆಕಳಿಸಿಕೊಂಡು ಸಾಗುವಾಗ ಇನ್ನೇನು ಇಂಟರ್‌ವಲ್ ಬಂದುಬಿಡುತ್ತದೆ ಅನ್ನುವಷ್ಟರಲ್ಲಿ ಸಿನಿಮಾ ಟೇಕಾಫ್ ಆಗುತ್ತದೆ. ಅಲ್ಲಿಂದ ದಾರಿ ಸ್ಪೀಡು. ಜಾಸ್ತಿ ವಿವರಿಸದೆ, ಯಾವುದನ್ನೂ ಅತಿಯಾಗಿ ಹೇಳದೇ ಇರುವುದು ಈ ಸಿನಿಮಾದ ಒಳ್ಳೆಯ ಗುಣ. ಯಾವ ದೃಶ್ಯವನ್ನೂ ವೈಭವೀಕರಣಗೊಳಿಸದೇ ಇರುವುದು ನಿರ್ದೇಶಕರ ಕಥನಗಾರಿಕೆಯ ಸ್ಟೈಲು.
ರಶ್ಮಿಕಾ ನಟಿಸದ್ದಕ್ಕೆ ಬೇಸರವಿಲ್ಲ, ನಿತ್ಯಾಶ್ರಿ ಅದ್ಭುತ ನಟಿ: ಗೌತಮ್
ನಿರ್ದೇಶಕರು ತಣ್ಣಗಿನ ದನಿಯಲ್ಲಿ ಒಂದು ಕತೆ ಹೇಳಿದ್ದಾರೆ. ಒಳ್ಳೆಯವರಲ್ಲಿ ಅಸುರ ಗುಣ ಇರಬಹುದು ಎಂಬ ತತ್ವವನ್ನು ಥ್ರಿಲ್ಲರ್ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಈ ಪ್ರಯೋಗದ ಮೂಲಕ ಭರವಸೆ ಹುಟ್ಟಿಸುತ್ತಾರೆ. ಎಲ್ಲರೂ ಒಂದೇ ಥರ ಮಾತನಾಡುವುದು, ಅನವಶ್ಯಕ ಪಾತ್ರಗಳು ಅನಗತ್ಯ ಕತೆ ಹೇಳುವುದು, ಎಲ್ಲಿ ಮೌನವಿರಬೇಕೋ ಅಲ್ಲಿ ಮೌನ ಇಲ್ಲದೇ ಇರುವುದು, ಕೆಲವು ದೃಶ್ಯಗಳಿಗೆ ಉದ್ದೇಶ ಇಲ್ಲದೇ ಇರುವುದು ಕಿರಿಕಿರಿ ಅಂಶಗಳು.
ಒಂದೇ ಕೇಸಿನಲ್ಲಿ ಜೀವನದ ನಶ್ವರತೆ ಅರ್ಥ ಮಾಡಿಕೊಳ್ಳುವ ಪಾತ್ರದಲ್ಲಿ ನಿತ್ಯಶ್ರೀ ಅಭಿನಯ ಸಿನಿಮಾದ ಹೈಲೈಟ್. ಅವರು ಸ್ಕ್ರೀನ್ ಮೇಲೆ ಇದ್ದಾಗಲೆಲ್ಲಾ ಜೀವಂತಿಕೆ ಇರುತ್ತದೆ. ಈ ಚಿತ್ರದಲ್ಲೊಂದು ಕುಂಟ ಎಂಬ ಒಂದು ಕ್ಷುಲ್ಲಕ ಪಾತ್ರ ಇದೆ. ಆತನ ಮತ್ತು ನಿತ್ಯಶ್ರೀ ಮುಖಾಮುಖಿಯಾದಾಗ ಅವನು ಒಂದು ಮಾತು ಹೇಳುತ್ತಾನೆ. ಯಾರೋ ಬರುತ್ತಾರೆ, ನಮ್ಮನ್ನು ಕಾಪಾಡುತ್ತಾರೆ ಎಂದು ಕಾಯುತ್ತಿರುತ್ತೇವೆ. ಆದರೆ ನಮ್ಮ ಈ ಸ್ಥಿತಿಗೆ ಅವರೇ ಕಾರಣರಾಗಿರುತ್ತಾರೆ. ಆ ಒಂದು ಕ್ಷಣ ಅವನು ಅವನ ಪಾತ್ರವನ್ನು ಮೀರಿ ಬೆಳೆದುಬಿಡುತ್ತಾನೆ. ಇಂಥಾ ಕೆಲವು ಅಂಶಗಳಿಂದಾಗಿ ಈ ಸಿನಿಮಾ ವಿಭಿನ್ನ ಅನ್ನಿಸುತ್ತದೆ.