
ಅರ್ ಕೇಶವಮೂರ್ತಿ
ಕಾಡು, ಮರಗಳ ನಡುವೆ ಅಲ್ಲಲ್ಲಿ ಕಾಣುವ ಬೆರಳೆಣಿಕೆಯ ಮನೆಗಳು, ವಿದೇಶಿ ಕನಸು ಕಾಣುವ ಚಿಗುರು ಮೀಸೆಯ ಹುಡುಗರು, ಮುದ್ದಾಗಿ ಕಾಣುವ ಸುಂದರಿಯರು, ಮಲೆಯಾಳಿ ಸಿನಿಮಾಗಳ ಪ್ರಭಾವವನ್ನೂ ಮೀರಿ ನಿಲ್ಲುವ ಯಕ್ಷಗಾನದ ಘಮಲು, ಫೇಸ್‌ಬುಕ್- ವಾಟ್ಸಪ್ ಯುಗದಲ್ಲೂ ನಮ್ಮ ಸಂಸ್ಕೃತಿ, ನಮ್ಮ ನಾಡು ಎಂದು ಓಡಾಡುತ್ತ ಬೇರೆಯವರಿಗೆ ಅಪರಿಚಿತನಂತೆ ಕಾಣುವ ಕನ್ನಡ ಮೇಸ್ಟ್ರು... ಈ ಎಲ್ಲ ಅಂಶಗಳು ಸೇರಿಕೊಂಡು ‘ಲುಂಗಿ’ ಕತೆಗೆ ದೇಸಿತನ ತಂದು ಕೊಟ್ಟಿವೆ.
ಕೆನಡಾ ಕನ್ನಡಿಗ ಪ್ರಣವ್ ಲುಂಗಿ ಚಿತ್ರಕ್ಕೆ ನಾಯಕ!
ಚಿತ್ರದ ನಾಯಕ ಮೇಸ್ಟ್ರು ಮಗ. ಬುದ್ಧಿವಂತ. ಸರ್ಟಿಫಿಕೇಟ್ ಹಿಡಿದ ಸ್ನೇಹಿತರು ದುಬೈನತ್ತ ನೋಡುತ್ತಿದ್ದರೆ ಈತ ಮಾತ್ರ ಹುಟ್ಟೂರು ಬಿಟ್ಟು ಹೋಗಲಾರ. ಅದಕ್ಕೆ ಅವನ ಅಪ್ಪನಿಗೆ ಸಿಟ್ಟು. ನಾಯಕನ ಅಜ್ಜಿಗೆ ಮೊಮ್ಮಗ ಏನೋ ಸಾಧನೆ ಮಾಡುತ್ತಾನೆಂಬ ಭರವಸೆ. ಕೊನೆಗೂ ಅಂಥದ್ದೊಂದು ಭರವಸೆಯ ಹೆಜ್ಜೆ ಇಟ್ಟಾಗ ಎಲ್ಲರು ನಗುತ್ತಾರೆ. ಯಾಕೆಂದರೆ ಇಂಜಿನಿಯರ್ ಓದಿದ ನಾಯಕ ಲುಂಗಿ ಬ್ಯುಸಿನೆಸ್ ಮಾಡಲು ಹೊರಟಿರುತ್ತಾನೆ. ಲುಂಗಿ, ನಾಯಕನ ಕೈ ಹಿಡಿಯುತ್ತದೆಯೇ? ಪ್ರೀತಿಸಿದ ಹುಡುಗಿ ಬಿಟ್ಟು ಹೋದ ಮೇಲೆ ಆತನ ಜೀವನದಲ್ಲಿ ಏನಾಗುತ್ತದೆ? ಊರು ಬಿಟ್ಟು ಹೋಗುವುದೇ ನಿರುದ್ಯೋಗ ಸಮಸ್ಯೆಗೆ ಪರಿಹಾರವೇ? ಹೀಗೊಂದಿಷ್ಟು ಪ್ರಶ್ನೆಗಳಿಗೆ ಸಿನಿಮಾ ಉತ್ತರ ನೀಡುತ್ತಾ ಹೋಗುತ್ತದೆ.
ಸ್ವಂತ ಬದುಕು ರೂಪಿಸಿಕೊಳ್ಳುವವರ ಕಥೆ ಹೇಳುತ್ತೆ'ಲುಂಗಿ'!
ಆಸಕ್ತಿದಾಯಕ ಕತೆಯೊಂದನ್ನು ಅಷ್ಟೇ ಚೆಂದವಾಗಿಸುವಲ್ಲಿ ನಾಯಕ ಪ್ರಣವ್ ಹೆಗ್ಡೆ ಪಾತ್ರ ಶ್ರಮ ಹಾಕಿದೆ. ಚಿತ್ರದಲ್ಲಿ ಈ ಪಾತ್ರದ ಹೆಸರು ರಕ್ಷಿತ್ ಶೆಟ್ಟಿ ಎಂದು ಇದ್ದಿದ್ದಕ್ಕೋ ಏನೋ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ ಆರಂಭದ ದಿನಗಳ ನಟನೆಯನ್ನು ನೆನಪಿಸುತ್ತಾರೆ ಪ್ರಣವ್ ಹೆಗ್ಡೆ. ರಾಧಿಕಾ ರಾವ್, ಅಹಲ್ಯಾ ಸುರೇಶ್ ನಟನೆ ಅವರಷ್ಟೇ ಚೆಂದ. ರಿಜೋ ಪಿ ಜಾನ್ ಕ್ಯಾಮೆರಾ ಲುಂಗಿ ಚಿತ್ರದ ಶ್ರೀಮಂತಿಕೆ ಹೆಚ್ಚಿಸುತ್ತದೆ. ಉಳಿದಂತೆ ತಾಂತ್ರಿಕವಾಗಿ, ಮೇಕಿಂಗ್ ದೃಷ್ಟಿಯಿಂದ ಅದ್ದೂರಿತನಗಳನ್ನು ನಿರೀಕ್ಷೆ ಮಾಡದೆ ಒಂದು ಸರಳ ಮತ್ತು ಶುದ್ಧ ಕನ್ನಡ ಸಿನಿಮಾ ನೋಡಲು ‘ಲುಂಗಿ’ ಉತ್ತಮ ಆಯ್ಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.