
ಆರ್.ಕೇಶವಮೂರ್ತಿ
ಮಗನಿಗೆ ಅಪ್ಪ ಯಾಕೆ ಬೇಡ, ತಂಗಿ ಕಂಡರೆ ಯಾಕೆ ಸಿಟ್ಟು, ಅವನಿಗೆ ತಾಯಿ ಮಾತ್ರ ಸಾಕೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಆದರೆ, ಈ ಪ್ರಶ್ನೆಗಳಿಗೆ ಚಿತ್ರದ ಆರಂಭದಲ್ಲೇ ನಿರ್ದೇಶಕರೇ ಉತ್ತರ ಕೊಡುವ ಮೂಲಕ ಪ್ರೇಕ್ಷಕರ ತನಿಖಾ ಶ್ರಮದ ಭಾರವನ್ನು ಇಳಿಸುತ್ತಾರೆ. ಯಾಕೆಂದರೆ ಕತೆಯನ್ನು ಅವರಿಗೆ ಸುತ್ತಿಬಳಿಸಿ ಹೇಳುವ ತಾಪತ್ರಯ ಬೇಡ ಅನಿಸಿರಬೇಕು. ಅಮ್ಮ-ಮಗನ ನಡುವಿನ ಕತೆ ಹೇಳುತ್ತಲೇ ಅದಕ್ಕೊಂದು ಸಾಹಸದ ನೆರಳು ಕಲ್ಪಿಸುವ ಅನಿವಾರ್ಯತೆಯನ್ನು ಚಿತ್ರಕತೆ ಸೃಷ್ಟಿಸುತ್ತದೆ. ಹೀಗಾಗಿ ಕತೆಯ ಎಳೆಯನ್ನು ಸ್ಕ್ರೀನ್ ಪ್ಲೇ ಹೆಗಲ ಮೇಲೆ ಹೊರಿಸುವ ನಿರ್ದೇಶಕ ನಂದ ಕಿಶೋರ್, ಆ್ಯಕ್ಷನ್ ಕವಚದೊಳಗೆ ತಾಯಿ ಸೆಂಟಿಮೆಂಟನ್ನು ಸಾಧ್ಯವಾದಷ್ಟರ ಮಟ್ಟಿಗೆ ತುಂಬಿದ್ದಾರೆ. ಈ ಭಾವುಕ ತಿರುವಿನಲ್ಲಿ ನಟ ಧ್ರುವ ಸರ್ಜಾ ಕೂಡ ಆಪ್ತವಾಗಿಯೇ ಪ್ರದಕ್ಷಿಣೆ ಹಾಕಿದ್ದಾರೆ.
ತಾರಾಗಣ: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ರಾಘವೇಂದ್ರ ರಾಜ್‌ಕುಮಾರ್, ಮಯೂರಿ, ಪವಿತ್ರಾ ಲೋಕೇಶ್, ರವಿಶಂಕರ್, ಚಿಕ್ಕಣ್ಣ, ಕರಿಸುಬ್ಬು, ಶಂಕರ್ ಅಶ್ವತ್‌್ಥ, ಸಂಪತ್
ನಿರ್ದೇಶನ: ನಂದ ಕಿಶೋರ್
ನಿರ್ಮಾಣ: ಬಿ ಕೆ ಗಂಗಾಧರ್
ಸಂಗೀತ: ಚಂದನ್ ಶೆಟ್ಟಿ
ಛಾಯಾಗ್ರಾಹಣ: ವಿಜಯ್ ಮಿಲ್ಟನ್
ಸ್ಟಾರ್-4
Human Flag ಕ್ರಿಯೇಟ್ ಮಾಡೋಕೆ ಧ್ರುವ ಸರ್ಜಾ ಮಾಡಿದ ಸರ್ಕಸ್ ನೋಡಿ!
ಮುಗ್ಧ ವಯಸ್ಸಿನ ಮಕ್ಕಳ ಮೇಲೆ ಏನೇ ಪರಿಣಾಮ ಬಿದ್ದರೂ ಅವರು ಅದನ್ನು ಕೊನೆಯವರೆಗೂ ಮರೆಯಲ್ಲ. ಅದರಿಂದ ತುಂಬಾ ಡಿಸ್ಟರ್ಬ್ ಆಗುತ್ತಾರೆ. ತಂದೆಯಾದವನು ಬಂದೇ ಬರುತ್ತಾನೆ ಎಂದು ಕಾದ ಮಗನಿಗೆ ತನ್ನ ತಂದೆ ಕಾಣುತ್ತಿಲ್ಲ. ‘ನಾನೇ ನಿಮ್ಮ ಅಪ್ಪ’ ಅಂದವನ್ನು ‘ನೀನು ಯಾರಯ್ಯ’ ಎಂದು ಕೊರಳುಪಟ್ಟಿಹಿಡಿದು ಪ್ರಶ್ನಿಸುವ ಮಟ್ಟಿಗೆ ಪೊಗರು ತೋರಿಸುವ ಮಗ, ಈ ಇಬ್ಬರ ನಡುವೆ ಕಣ್ಣೀರು ಹಾಕುವ ತಾಯಿ, ತನ್ನ ಅಣ್ಣ ಎಂದಾದರೂ ಈ ಮನೆಗೆ ಬಂದೇ ಬರುತ್ತಾನೆ ಎಂದು ಕಾಯುವ ತಂಗಿ, ‘ಈತ ನೋಡಲು ರಾವಣಷ್ಟುಕೆಟ್ಟವ-ಒರಟ. ಆದರೆ, ಪ್ರೀತಿಯಲ್ಲಿ ಆ ಶ್ರೀರಾಮಚಂದ್ರನಿಗಿಂತಲೂ ಒಂದು ಕೈ ಮಿಗಿಲು’ ಎಂದುಕೊಳ್ಳುವ ನಾಯಕಿ, ಇದರ ನಡುವೆ ಎಲ್ಲಿಂದಲೋ ತೋರಿ ಬರುವ ವಿಲನ್ ಗ್ಯಾಂಗ್... ಇವಿಷ್ಟನ್ನು ಎಷ್ಟರ ಮಟ್ಟಿಗೆ ಹದವಾಗಿ ಮಿಶ್ರಣ ಮಾಡಿ ಒಂದು ಸಿನಿಮಾ ಮಾಡಲು ಬೇಕಾದ ಶ್ರಮವನ್ನೂ ಪ್ರೀತಿಯಿಂದಲೇ ಧಾರೆ ಎರೆದಿದ್ದಾರೆ ನಿರ್ದೇಶಕ ನಂದ ಕಿಶೋರ್. ಇವರ ಸೃಜನಶೀಲ ಶ್ರಮಕ್ಕೆ ವಿಜಯ್ ಮಿಲ್ಟನ್ ಕ್ಯಾಮೆರಾ ಕಣ್ಣು, ಚಂದನ್ ಶೆಟ್ಟಿಸಂಗೀತ ತಾಂತ್ರಿಕವಾಗಿ ಕೈ ಹಿಡಿಯುತ್ತದೆ.
"
ಫೈಟ್, ಡೈಲಾಗ್ ಹೇಳುವುದರಲ್ಲಿ ಮಾತ್ರವಲ್ಲ ಭಾವುಕ ಸನ್ನಿವೇಶಗಳಿಗೂ ಸೈ ಎನ್ನುವಂತೆ ಅಲ್ಲಲ್ಲಿ ಮತ್ತಷ್ಟುಆಪ್ತವಾಗಿ ಪಾತ್ರದೊಳಗೆ ಜೀವಿಸಿದ್ದಾರೆ ನಟ ಧ್ರುವ ಸರ್ಜಾ. ತುಂಬಾ ದಿನಗಳ ನಂತರ ಪವಿತ್ರಾ ಲೋಕೇಶ್ ಅವರ ನಿಜವಾದ ನಟನಾ ಸಾಮರ್ಥ್ಯವನ್ನು ‘ಪೊಗರು’ ಸಿನಿಮಾ ಬಳಸಿಕೊಂಡಿದೆ. ಆ ಮಟ್ಟಿಗೆ ಅವರು ತಮ್ಮ ಪಾತ್ರಕ್ಕೆ ಗಟ್ಟಿತನ ತಂದುಕೊಡುತ್ತಾರೆ. ಉಳಿದಂತೆ ರಾಘವೇಂದ್ರ ರಾಜ್‌ಕುಮಾರ್, ರವಿಶಂಕರ್, ಕುರಿ ಪ್ರತಾಪ್, ಕರಿಸುಬ್ಬು, ಮಯೂರಿ ಅವರ ಪಾತ್ರಗಳನ್ನು ಪ್ರೇಕ್ಷಕರು ಮರೆಯಲ್ಲ.
ನನ್ನ ಲೈಫ್‌ನಲ್ಲಿ ಇವತ್ತು ದೊಡ್ಡ ದಿನ ಎಂದೂ ಮರೆಯುವುದಿಲ್ಲ: ಚಂದನ್ ಶೆಟ್ಟಿ
ಇವರ ಜತೆಗೆ ನಿರ್ದೇಶಕನ ಕನಸಿನಲ್ಲಿ ಪಾಲು ಹಂಚಿಕೊಳ್ಳುವುದು ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ. ಪ್ರತಿ ದೃಶ್ಯದಲ್ಲೂ ಪ್ರಶಾಂತ್ ರಾಜಪ್ಪ ಅವರ ಪೆನ್ನು ನಟ ಧ್ರುವ ಸರ್ಜಾ ಎನರ್ಜಿಗಿಂತಲೂ ಹೆಚ್ಚು ಸದ್ದು ಮಾಡುತ್ತದೆ. ಒಂದು ಹಂತದಲ್ಲಿ ಸಂಭಾಷಣೆ ಹಾಗೂ ಹೀರೋ ಪಾತ್ರ ಎರಡು ಸ್ವರ್ಧೆಗೆ ಇಳಿದಂತೆ ಕಾಣುತ್ತದೆ. ಕೇಜಿಗಳ ಲೆಕ್ಕದಲ್ಲಿ ಸಂಭಾಷಣೆಗಳನ್ನು ಹೀರೋ ಮುಂದೆ ಸುರಿದು, ನಾಯಕನಿಗೇ ಸವಾಲು ಒಡ್ಡುತ್ತಾರೆ. ಬಹುಶಃ ಪ್ರಶಾಂತ್ ರಾಜಪ್ಪ ಅವರ ಬರವಣಿಗೆಯ ತಾಕತ್ತನ್ನು ನಿರ್ದೇಶಕ ನಂದಕಿಶೋರ್ ಶಕ್ತಿಮೀರಿ ಬಳಸಿಕೊಂಡಿದ್ದಾರೆ. ತಾಯಿ ಪ್ರೀತಿ, ಮಗನ ಪೊಗರು, ಪ್ರೇಯಸಿಯ ಸಂಕಟ ಮತ್ತು ಹನ್ನೆರಡು ಮೂಟೆ ಆ್ಯಕ್ಷನ್! ಮಾಸ್ ಸಿನಿಮಾಕ್ಕೆ ಮತ್ತಿನ್ನೇನು ಬೇಕು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.