ಮಾಧ್ಯಮಗಳಲ್ಲಿ ನೋಡುವ ಕ್ರೈಮ್ ಸುದ್ದಿಗಳನ್ನು ತೆರೆ ಮೇಲೆ ಬಂದರೆ ಹೇಗಿರುತ್ತೆ ಎನ್ನುವುದಕ್ಕೆ ‘ದಂಡುಪಾಳ್ಯಂ 4’ ಸಾಕ್ಷಿ. ಇಲ್ಲಿ ಕೊಲೆ, ಅತ್ಯಾಚಾರಗಳು, ದರೋಡೆ ನಡೆಯುತ್ತದೆ, ಪೊಲೀಸ್ ಇಲಾಖೆ ಅಲರ್ಟ್ ಆಗುತ್ತದೆ, ಕ್ರಿಮಿನಲ್‌ಗಳು ಮತ್ತಷ್ಟು ಕಿಲಾಡಿತನ ತೋರುತ್ತಾರೆ, ಮನುಷ್ಯತ್ವ ಮರೆಯಾಗಿ, ಕ್ರೌರ್ಯದ ಮದವೇರಿದಾಗ ಏನೆಲ್ಲ ಅನಾಹುತಗಳು ನಡೆಯುತ್ತವೆ ಎನ್ನುವ ಕತೆ ಈ ಚಿತ್ರದ್ದು.
ಹಾಗಂತ ಕ್ರೈಮ್ ಘಟನೆಗಳನ್ನು ವೈಭವೀಕರಣ ಮಾಡಿದ್ದಾರೆ ಎನ್ನುವ ಗುಮಾನಿಗೆ ಸಿನಿಮಾ ನೋಡಿಯೇ ಉತ್ತರ ಕಂಡುಕೊಳ್ಳಬೇಕು. ಜತೆಗೆ ಸಾಯಿಸುವುದನ್ನೇ ಕಸಬು ಮಾಡಿಕೊಂಡ ಇಂಥ ಕ್ರಿಮಿನಲ್‌ಗಳನ್ನು ಸಮಾಜದ ದೊಡ್ಡ ವ್ಯಕ್ತಿಗಳು ಹೇಗೆಲ್ಲ ಬಳಸಿಕೊಳ್ಳುತ್ತಾರೆ ಎನ್ನುವ ಅಪರಾಧ ಜಗತ್ತಿನ ಮತ್ತೊಂದು ಮುಖವನ್ನು ತೋರುವುದು ಚಿತ್ರದ ಹೈಲೈಟ್ ಆಗುತ್ತದೆ.
ದಂಡುಪಾಳ್ಯ ನಾಚಿಸೋ ಗ್ಯಾಂಗ್: ಒಂಟಿ ಮಹಿಳೆಯರೇ ಟಾರ್ಗೆಟ್!
ಆ ಮೂಲಕ ಕ್ರೈಮ್‌ಗೆ ಕೊನೆ ಹಾಡುವ ಶುಭ ಸೂಚನೆಯನ್ನೂ ನೀಡುವ ಮಟ್ಟಿಗೆ ಪಾಸಿಟಿವ್ ನೆರಳನ್ನು ಈ ಸಿನಿಮಾ ಅಪ್ಪಿಕೊಂಡಿದೆ. ನಿರ್ಮಾಪಕರೇ ಕತೆ, ಚಿತ್ರಕತೆ ಹಾಗೂ ಸಾಹಿತ್ಯ ಬರೆಯುವ ಜತೆಗೆ ಅವರು ಇಲ್ಲಿ ಪೊಲೀಸ್ ಅಧಿಕಾರಿಯೂ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕತೆ, ಕಲಾವಿದರ ಅಭಿನಯ, ಚಿತ್ರದ ನಿರೂಪಣೆಯ ವಿಚಾರಗಳ ಆಚೆಗೆ ನೋಡಿದರೆ ತಣ್ಣನೆಯ ಕ್ರೌರ್ಯವನ್ನೇ ಮೈಗೇರಿಸಿಕೊಂಡ ಕ್ರಿಮಿನಲ್‌ಗಳು ಹೇಗಿರುತ್ತಾರೆ ಎನ್ನುವ ಕಲ್ಪನೆಗೆ ತಕ್ಕಂತೆ ಪಾತ್ರಧಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಸುಮನ್ ರಂಗನಾಥ್ ತಮ್ಮದಲ್ಲದ ಪಾತ್ರವನ್ನು ನಿಭಾಯಿಸಿದ್ದಾರೆ. ಉಳಿದವರು ಈ ಕೊಲೆಗಾತಿಗೆ ಸಾಥ್ ಕೊಡುತ್ತಾರೆ. ಒಂಟಿ ಮಹಿಳೆ ಕೊಲೆ, ಅಪರಿಚಿತರಿಂದ ರಾಬರಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೀಗೆ ಆಗಾಗ ಸುದ್ದಿಗಳನ್ನು ಓದುವ ಮತ್ತು ಕೇಳುತ್ತಿರುವ ಹೊತ್ತಿನಲ್ಲೇ ‘ದಂಡುಪಾಳ್ಯಂ 4’ನಲ್ಲಿ ತೆರೆದುಕೊಳ್ಳುವ ಕ್ರೌರ್ಯದ ಘಟನೆಗಳು ಒಂದು ರೀತಿಯಲ್ಲಿ ಎಚ್ಚರಿಕೆಯೂ ಹೌದು.
ಬದಲಾದ ಲುಕ್ ನಲ್ಲಿ ಮತ್ತೆ ದಂಡುಪಾಳ್ಯ ತೆರೆಗೆ
ಇದು ಹಿಂದಿನ ಭಾಗದ ಕತೆಯ ಮುಂದುವರಿದ ಸಿನಿಮಾ. ಅಂದರೆ ‘ದಂಡುಪಾಳ್ಯಂ 4’ಯಲ್ಲಿ ಬಂಧನಕ್ಕೊಳಗಾಗಿರುವ ದಂಡುಪಾಳ್ಯಂನ ಗ್ಯಾಂಗ್ ಅನ್ನು ಬಿಡಿಸಿಕೊಳ್ಳಲು ಅವರ ಸಂಬಂಧಿಕರ ತಂಡವೊಂದು ಮುಂದಾಗುತ್ತದೆ. ತಮ್ಮವರನ್ನು ಬಿಡಿಸಿಕೊಳ್ಳಲು ಬೇಕಾಗುವ ಹಣಕ್ಕಾಗಿ ರಕ್ತ ಹರಿಸುವುದಕ್ಕೆ ಹೊರಡುತ್ತಾರೆ. ತಮ್ಮವರ ಬಿಡುಗಡೆಗಾಗಿ ಅಡ್ಡ ದಾರಿ ಹಿಡಿದು ಕ್ರಿಮಿನಲ್‌ಗಳಾದವರನ್ನು ರಾಜಕಾರಣಿಗಳು, ಪೊಲೀಸರು ಹೇಗೆ ಬಳಸಿಕೊಳ್ಳುತ್ತಾರೆ, ಮುಂದೆ ಅವರ ಅಂತ್ಯ ಹೇಗಾಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಸುಮನ್ ರಂಗನಾಥ್, ಸಂಜೀವ್, ವೆಂಕಟ್ ಪಾತ್ರಗಳು ಚಿತ್ರದ ಹೈಲೈಟ್. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.