
ಒಂದು ಹೊಸತನದ ಕಥೆ ಲವಲವಿಕೆಯ ಅಭಿನಯ ತಾಜಾತನ ಎಲ್ಲವೂ ಮೇಳೈಸಿರುವ ಚಿತ್ರ ಕಾದಲಿಕ್ಕ ನೇರಮಿಲ್ಲೆ. ಅಂದರೆ ಪ್ರೇಮಿಸುವುದು ತಪ್ಪಲ್ಲ. ಉದಯನಿಧಿ ಸ್ಟಾಲಿನ್ ನಿರ್ಮಾಣದ ಕಿರುತಿಂಗ ಉದಯನಿಧಿ ನಿರ್ದೇಶನದ ಈ ಚಿತ್ರದಲ್ಲಿ ರವಿ ಮೋಹನ್, ನಿತ್ಯಾಮೆನನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. 2025 ರಲ್ಲಿ ಬಿಡುಗಡೆಯಾದ ಈ ಚಿತ್ರದ ಕತೆಯ ಕಾಲ 2017.
2017ರಲ್ಲಿ ಚೆನ್ನೈ ತಂದೆ ಮತ್ತು ತಾಯಿಯ ಜೊತೆ ವಾಸವಾಗಿರುವ ಶ್ರೀಯಾ ಆರ್ಕಿಟೆಕ್ಟ್. ಒಂದು ದೊಡ್ಡ ಕಂಪೆನಿಯಲ್ಲಿ ಕೆಲಸ, ಸಾಕಷ್ಟು ಸಂಬಳ ಐಷಾರಾಮಿ ಜೀವನ. ಶ್ರೀಯಾ ತನ್ನ ಜೀವನದಲ್ಲಿ ಖುಷಿಯಾಗಿ ಹಾರಾಡುವ ಹಕ್ಕಿಯಂತಿರುತ್ತಾಳೆ. ಅವಳು ಇಷ್ಟಪಟ್ಟ ಹುಡುಗ ಕರಣ್ ಜೊತೆ ಮದುವೆಯೂ ಫಿಕ್ಸ್ ಆಗುತ್ತೆ. ಶ್ರೇಯಾಳ ತಾಯಿಗೆ ಮಡಿವಂತಿಕೆ ಹೆಚ್ಚು. ಅವಳು ತನ್ನ ಮಗಳು ತನ್ನ ಭಾವಿ ಗಂಡನೊಡನೆ ಸಲುಗೆಯಿಂದ ಇರುವುದು ಇಷ್ಟ ಪಡುವುದಿಲ್ಲ. ಮದುವೆಯಾದ ಮೇಲೆ ಈ ಸಲುಗೆ ಇರಲಿ ಎಂದು ಹೇಳುತ್ತಿರುತ್ತಾಳೆ. ಕರಣ್ ಸಲಹೆಯಂತೆ ಸಂಪ್ರದಾಯದ ಮದುವೆ ಆಗುವ ಮೊದಲೇ ಅವರಿಬ್ಬರೂ ತಮ್ಮ ಮದುವೆಯನ್ನು ಕಾನೂನುಬದ್ದಗೊಳಿಸುತ್ತಾರೆ. ಆದೆ ಸಂಪ್ರದಾಯವಾಗಿ ಮದುವೆ ಆಗುವವರೆಗೂ ತಾವು ಬೇರೆ ಬೇರೆ ಇರಬೇಕೆಂದು ನಿರ್ಧರಿಸುತ್ತಾರೆ.
ಒಮ್ಮೆ ಸಡನ್ ಸರ್‌ಪ್ರೈಸ್ ಕೊಡಲು ರಜೆ ಹಾಕಿ ಕರಣ್ ನ ಕಚೇರಿಗೆ ಬರುವ ಶ್ರೇಯಾ, ಕರಣ್ ತನ್ನ ಖಾಸಗಿ ರೂಮಿನಲ್ಲಿ ಬೇರೊಬ್ಬಳೊಡನೆ ಚಕ್ಕಂದ ಆಡುವುದು ನೋಡಿ ಶಾಕ್ ಆಗುತ್ತದೆ. ಅವನ ಜೊತೆಗಿನ ಸಂಬಂಧವನ್ನು ಅಲ್ಲಿಯೇ ಕತ್ತರಿಸಿಕೊಂಡು ಬರುವ ಶ್ರೇಯಾ ಸಹಜವಾಗಿಯೇ ಅಪ್ಸೆಟ್ ಆದರೂ ಒಂದೆರಡು ದಿನಗಳಲ್ಲಿ ಸರಿಯಾಗುತ್ತಾಳೆ. ಶ್ರೇಯಾಳಿಗೆ ಆದ ದುಃಖವನ್ನು ಮರೆಯಲು ಅವಳ ಚಿಕ್ಕಮ್ಮನ ಸ್ನೇಹ ವಿಶ್ವಾಸ ದೊಡ್ಡ ಪಾತ್ರ ವಹಿಸುತ್ತದೆ.
ಕೆಲವು ದಿನಗಳ ನಂತರ ಶ್ರೇಯಾಳಿಗೆ ತನಗೊಂದು ಮಗು ಬೇಕೆಂದು ಅನಿಸುತ್ತದೆ. ಆದರೆ ಮದುವೆ ಅಥವಾ ಗಂಡಿನ ಸಂಪರ್ಕ ಇಲ್ಲದೆ ಐವಿಎಫ್ ಮೂಲಕ ಮಗು ಪಡೆಯಲು ನಿರ್ಧರಿಸುತ್ತಾಳೆ. ತನ್ನ ಕಸಿನ್ ಡಾಕ್ಟರ್ ಅಶ್ವಿನಿಯನ್ನು ಸಂಪರ್ಕಿಸಿ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾಳೆ. ತನ್ನ ಕರಣ್ ಜೊತೆಗಿನ ಕಾನೂನು ಬದ್ಧ ಮದುವೆಯನ್ನು ರದ್ದುಗೊಳಿಸಿಕೊಳ್ಳುತ್ತಾಳೆ.
ಬೆಂಗಳೂರಿನಲ್ಲಿ ವಾಸ್ತುಶಿಲ್ಪದ ಎಂಜಿನಿಯರ್ ಆಗಿರುವ ಸಿದ್ದಾರ್ಥ ತನ್ನ ತಂದೆ ಹಾಗೂ ಇಬ್ಬರು ಸ್ನೇಹಿತರ ಜೊತೆ ವಾಸಿಸುತ್ತಿರುತ್ತಾನೆ. ತಾಯಿ ಇಲ್ಲದ ಇವನಿಗೆ ತಂದೆ ಮತ್ತು ಸ್ನೇಹಿತರೇ ಸರ್ವಸ್ವ. ನಿರುಪಮಾ ಎಂಬ ಮಾಡೆಲ್‌ನಲ್ಲಿ ಅನುರಕ್ತನಾಗಿರುತ್ತಾನೆ. ಆದರೆ ಸಿದ್ದಾರ್ಥನಿಗೆ ಮದುವೆ ಮಕ್ಕಳು ಇವುಗಳಲ್ಲಿ ಆಸಕ್ತಿ ಇಲ್ಲ. ಆದರೆ ನಿರುಪಮಾಳಿಗೆ ಮಕ್ಕಳೆಂದರೆ ಇಷ್ಟ. ನಾವಿಬ್ಬರೂ ಮದುವೆಯಿಲ್ಲದೆಯೇ ಒಟ್ಟಿಗೆ ವಾಸಿಸೋಣ ಎಂಬುದು ಸಿದ್ದಾರ್ಥನ ಅಭಿಲಾಷೆಯಾದರೆ, ಮದುವೆಯಾಗಿ ನಮ್ಮದೇ ಮಕ್ಕಳನ್ನು ಹೆತ್ತು ಬೆಳೆಸೋಣ ಎಂಬ ಆಸೆ ನಿರುಪಮಾಳಿಗೆ. ಮಕ್ಕಳ ಜವಾಬ್ದಾರಿ ಬೇಡವೇ ಬೇಡ ಎನ್ನುವ ಸಿದ್ದಾರ್ಥ ನಿರುಪಮಾಳಿಗೆ ಒಂದು ಒಗಟು.
ಒಮ್ಮೆ ಸಿದ್ದಾರ್ಥ ಮತ್ತು ಅವನ ಇಬ್ಬರು ಸ್ನೇಹಿತರು ತಮ್ಮ ವೀರ್ಯವನ್ನು ಸಂರಕ್ಷಿಸಿ ಇಡಬೇಕೆಂದು ಮಾತನಾಡಿಕೊಳ್ಳುತ್ತಾರೆ. ಇದರ ಬಗ್ಗೆ ಸಿದ್ದಾರ್ಥನಿಗೆ ಆಸಕ್ತಿ ಇಲ್ಲದಿದ್ದರೂ ಸ್ನೇಹಿತರ ಒತ್ತಾಯಕ್ಕೆ ವೀರ್ಯ ಬ್ಯಾಂಕ್‌ಗೆ ವೀರ್ಯ ಕೊಡುತ್ತಾನೆ. ಆದರೆ ಅಲ್ಲಿನ ಸಿಬ್ಬಂದಿ ಗಡಿಬಿಡಿಯಲ್ಲಿ ಸಿದ್ದಾರ್ಥನ ವೀರ್ಯ ಸಂರಕ್ಷಿಸಿಡುವ ಬದಲಿಗೆ ದಾನಿಗಳ ವೀರ್ಯ ಇಡುವ ಜಾಗದಲ್ಲಿ ಇಟ್ಟು ಬಿಡುತ್ತಾರೆ. ಏನೋ ಮೋಜಿಗಾಗಿ ವೀರ್ಯ ಸಂರಕ್ಷಿಸುವ ಸಿದ್ದಾರ್ಥ ಅವನ ಲವರ್ ನಿರುಪಮಾಳಿಗೆ ಇದನ್ನು ಹೇಳುತ್ತಾನೆ. ನಿರುಪಮಾಗೆ ಇದರಿಂದ ಕೋಪ ಬರುತ್ತದೆ. ಮಕ್ಕಳೇ ಬೇಡ ಎಂದ ನೀನು ಅದು ಹೇಗೆ ನನಗೂ ತಿಳಿಸದೆ ವೀರ್ಯವನ್ನು ಬ್ಯಾಂಕಿನಲ್ಲಿ ಕೊಟ್ಟು ಬಂದೆ ಎಂದು ಜಗಳ ಮಾಡುತ್ತಾಳೆ. ಅವನು ಎಷ್ಟು ಅನುನಯಿಸಿದರೂ ಅವಳು ಒಪ್ಪುವುದಿಲ್ಲ. ನೀನು ಎರಡು ಮನಸಿನವನು ನಿನ್ನಂಥ ದ್ವಂದ್ವ ನೀತಿಯುಳ್ಳವನು ನನಗೆ ಬೇಡ, ಎಂದು ಅವನ ಸಂಬಂಧ ಕಡಿದುಕೊಳ್ಳುತ್ತಾಳೆ. ಸಿದ್ದಾರ್ಥನೂ ಸ್ವಲ್ಪ ದಿನ ಯೋಚಿಸಿ ಹೈರಾಣಾಗಿ ನಂತರ ಸ್ನೇಹಿತರ ಬೆಂಬಲದಿಂದ ಮಾಮೂಲು ಮನಸ್ಥಿತಿಗೆ ಬರುತ್ತಾನೆ.
ಇಲ್ಲಿ ಶ್ರೇಯಾ ತನ್ನ ಕಸಿನ್ ಮೂಲಕ ಐವಿಎಫ್ ಮೂಲಕ ಗರ್ಭದಾನಕ್ಕೆ ಎಲ್ಲ ಸಿದ್ಧತೆ ನಡೆಸುತ್ತಾಳೆ. ವೀರ್ಯದಾನಿಯ ಹೆಸರು ಗೌಪ್ಯವಾಗಿಟ್ಟು ಶ್ರೇಯಾಳಿಗೆ ಗರ್ಭದಾನ ಮಾಡಿಸುತ್ತಾರೆ. ಶ್ರೇಯಾ ಗರ್ಭವತಿಯಾದ ಲಕ್ಷಣಗಳು ಗೋಚರಿಸುತ್ತದೆ. ಅವಳ ಅಮ್ಮ ಆದಷ್ಟು ಬೇಗ ಕರಣ್ ಜೊತೆ ಮದುವೆಯಾಗಿ ಬಿಡು ಎಂದು ಅವಸರಿಸುತ್ತಾಳೆ. ಆದರೆ ಶ್ರೇಯಾ ತನ್ನ ಗರ್ಭ ಅವನದಲ್ಲ ಎಂದಾಗ ಅಮ್ಮನಿಗೆ ಶಾಕ್!! ಹೋಗಲಿ ಬೇರೆ ಯಾರದು ಮಗು ಎಂದಾಗ ಯಾರದು ಅಂತ ನನಗೆ ಗೊತ್ತಿದ್ದರೆ ತಾನೆ ಎಂದು ಬಿಡುವ ಶ್ರೇಯಾಳ ಬಗ್ಗೆ ಅಮ್ಮನಿಗೆ ಉರಿಗೋಪ. ಶ್ರೇಯಾಳನ್ನು ಮನೆ ಬಿಟ್ಟು ನಡಿ ಎಂದು ಅಬ್ಬರಿಸುತ್ತಾಳೆ. ಶ್ರೇಯಾ ಮನೆಯಿಂದ ಹೊರಬಂದು ತಾನೇ ಬೇರೆ ಮನೆ ಮಾಡಿಕೊಂಡಿರುತ್ತಾಳೆ. ಇವಳ ಜೊತೆ ಸ್ನೇಹಿತೆಯಂತಿರುವ ಇವಳ ಚಿಕ್ಕಮ್ಮ ಇರುತ್ತಾಳೆ.
ಒಮ್ಮೆ ಟೀವಿಯಲ್ಲಿ ಒಬ್ಬ ಅತ್ಯಾಚಾರಿ ಕೊಲೆಗಡುಕ ತನ್ನ ವೀರ್ಯದಾನ ಮಾಡಿದ್ದಾನೆ ಎಂದು ನ್ಯೂಸ್‌ನಲ್ಲಿ ನೋಡುವ ಶ್ರೇಯಾಳಿಗೆ ತನ್ನ ವೀರ್ಯದಾನಿ ಯಾರೆಂದು ತಿಳಿಯಬೇಕೆಂಬ ಬಯಕೆ ತೀವ್ರವಾಗುತ್ತದೆ. ಕಸಿನ್ ವೈದ್ಯೆ ಪ್ರಾಣ ತಿಂದು ಆ ವೀರ್ಯದಾನಿಯ ಅಡ್ರೆಸ್ ತಿಳಿದು ಅಲ್ಲಿಗೆ ಅವನನ್ನು ದೂರದಿಂದ ಒಮ್ಮೆ ನೋಡಲು ಬೆಂಗಳೂರಿಗೆ ಬರುತ್ತಾಳೆ. ಆ ವೀರ್ಯದಾನಿ ಬೇರಾರು ಅಲ್ಲ ತನ್ನ ವೀರ್ಯವನ್ನು ಬ್ಯಾಂಕಿಗೆ ನೀಡಿದ್ದ ಸಿದ್ದಾರ್ಥ!! ಶ್ರೇಯಾ ಇಳಿದುಕೊಂಡಿದ್ದ ಹೋಟೆಲಿನಲ್ಲಿ ಒಂದು ಸೆಮಿನಾರ್ ಇರುತ್ತದೆ. ಆ ಸೆಮಿನಾರ್‌ನಲ್ಲಿ ಮಾತಾಡುವಾಗ ಸಿದ್ಧಾರ್ಥನೂ ಅಲ್ಲಿರುತ್ತಾನೆ. ಸಿದ್ದಾರ್ಥನಿಗೆ ಶ್ರೇಯಾಳ ವಾಕ್ಜರಿ ಇಷ್ಟವಾಗುತ್ತದೆ. ಅವನೇ ಅವಳ ಬಳಿ ಬಂದು ಮಾತನಾಡಿಸುತ್ತಾನೆ. ಅವಳಿಗೆ ಇವನೇ ತನಗೆ ವೀರ್ಯದಾನ ಮಾಡಿರುವುದು ಎಂದು ಗೊತ್ತಾದರೂ ಹೇಳುವಂತಿಲ್ಲ. ಅವನ ಜೊತೆ ಅವನ ಮನೆಗೆ ಹೋಗುತ್ತಾಳೆ. ಅವನ ತಂದೆ ಸ್ನೇಹಿತರ ಜೊತೆ ಬೆರೆಯುತ್ತಾಳೆ. ಜಾಲಿಯಾಗಿ ಮಾತಾಡುತ್ತಾಳೆ. ಸಿದ್ದನ ಮನೆಯ ಆತಿಥ್ಯ ಸ್ವೀಕರಿಸಿ ವಾಪಸ್ ಚೆನ್ನೈ ಬರುತ್ತಾಳೆ. ಒಂದು ಶುಭದಿನ ಆರೋಗ್ಯವಂತ ಸುಂದರ ಗಂಡುಮಗುವಿಗೆ ತಾಯಿಯಾಗುತ್ತಾಳೆ.
ಎಂಟು ವರ್ಷಗಳು ಹೀಗೆ ಕಳೆದು ಹೋಗುತ್ತದೆ. ಈಗ ಶ್ರೇಯಾಳ ಮಗ ಪಾರ್ಥೀವ್‌ಗೆ ಎಂಟು ವರ್ಷ. ತುಂಬಾ ಬುದ್ಧಿವಂತ ಹಾಗೂ ತುಂಟ. ಅವನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಶ್ರೇಯಾ ಕಕ್ಕಾಬಿಕ್ಕಿಯಾಗುವಂಥ ಸಂದರ್ಭಗಳು ಬಹಳ. ಸಿದ್ದಾರ್ಥ ಒಂದು ಪ್ರಾಜೆಕ್ಟ್ ಕೆಲಸಕ್ಕಾಗಿ ಚೆನ್ನೈಗೆ ಬರುತ್ತಾನೆ. ಶ್ರೇಯಾ ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿಯೇ ಒಂದು ಮನೆ ಬಾಡಿಗೆ ಪಡೆದು ವಾಸಿಸುತ್ತಾನೆ. ಒಂದು ದಿನ ಅಕಸ್ಮಾತ್ತಾಗಿ ಪಾರ್ಥಿವ್‌ನ ಭೇಟಿ ಸಿದ್ದಾರ್ಥನಿಗೆ ಆಗುತ್ತದೆ. ಮೊದಮೊದಲು ಸಿದ್ಧ್‌ನನ್ನು ದ್ವೇಷಿಸುವ ಪಾರ್ಥು ನಂತರ ಅವನ ಒಳ್ಳೆಯ ಸ್ನೇಹಿತನಾಗಿ ಬಿಡುತ್ತಾನೆ. ಪಾರ್ಥಿಗೆ ಫುಟ್‌ಬಾಲ್ ಎಂದರೆ ಪ್ರಾಣ. ಅವನಿಗೆ ಫುಟ್‌ಬಾಲ್ ಕಲಿಸುತ್ತಾ ಸಿದ್ಧು ಅರಿವಿಲ್ಲದಂತೆ ಪಾರ್ಥಿಗೆ ಸ್ನೇಹಿತನಾಗಿ, ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಾಗುತ್ತಾರೆ. ಪಾರ್ಥಿ ಆಗಾಗ ತನ್ನ ತಾಯಿಯನ್ನು ತನ್ನ ತಂದೆ ಯಾರು, ಯಾಕೆ ಅವರು ನಮ್ಮೊಂದಿಗಿಲ್ಲ. ಎಲ್ಲಿದ್ದಾರೆ ಎಂದೆಲ್ಲಾ ಕೇಳುತ್ತಿರುತ್ತಾನೆ. ಶ್ರೇಯಾ ಅವನಿಗೆ ಉತ್ತರಿಸುವುದಲ್ಲಿ ಸುಸ್ತು ಹೊಡೆಯುತ್ತಾಳೆ. ಪಾರ್ಥಿ ಆಗಾಗ ಮನೆಯಿಂದ ತಪ್ಪಿಕೊಳ್ಳುವುದು, ತನ್ನ ತಂದೆಯನ್ನು ಹುಡುಕಲು ಹೋಗಿದ್ದೆ ಎನ್ನುವುದು ಸಾಮಾನ್ಯವಾಗುತ್ತದೆ. ಒಂದೆರಡು ಸಲ ಸಿದ್ಧ ಪಾರ್ಥಿಯನ್ನು ಮನೆಗೆ ಕರೆ ತಂದಿರುತ್ತಾನೆ. ಶ್ರೇಯಾ ಕೂಡ ಅವಳಿಗೆ ಅರಿವಿಲ್ಲದಂತೆ ಸಿದ್ಧಾರ್ಥನಿಗೆ ಮಾರು ಹೋಗಿರುತ್ತಾಳೆ. ಅವನೊಂದಿಗೆ ತನ್ನ ವೈಯುಕ್ತಿಕ ಕಷ್ಟಸುಖ ಹಂಚಿಕೊಳ್ಳುವಷ್ಟು ಸ್ನೇಹ ಬೆಳೆಸಿಕೊಂಡಿರುತ್ತಾಳೆ. ತಾನು ವಿವಾಹಿತೆ, ವಿಚ್ಛೇದಿತೆ ಅಥವಾ ವಿಧವೆ ಅಲ್ಲವೆಂದೂ ತಾನು ಐವಿಎಫ್ ಮೂಲಕ ಮಗುವನ್ನು ಪಡೆದದ್ದೆಂದೂ ಮಾತಿನ ಭರದಲ್ಲಿ ಸಿದ್ಧನಿಗೆ ಹೇಳಿರುತ್ತಾಳೆ. ಸಿದ್ಧನಿಗೆ ಶ್ರೇಯಾಳ ಮೇಲೆ ಗೌರವ ಜಾಸ್ತಿಯಾಗುತ್ತದೆ. ಅವಳ ಛಲ, ಧೈರ್ಯ ಕಂಡು ಬೆರಗಾಗುತ್ತಾನೆ. ಮನದೊಳಗೇ ಅವಳನ್ನು ಪ್ರೀತಿಸ ತೊಡಗುತ್ತಾನೆ. ಒಮ್ಮೆ ಒಂದು ರೋಡ್ ಟ್ರಿಪ್ ಮಾಡುವ ಶ್ರೇಯಾ, ಸಿದ್ದು ಮತ್ತು ಪಾರ್ಥಿ ಬೆಂಗಳೂರಿಗೆ ಹೋಗಿ ಎಂಜಾಯ್ ಮಾಡಿ ಬರುತ್ತಾರೆ. ಆಗ ಸಿದ್ಧುನ ತಂದೆಯನ್ನೂ ಭೇಟಿ ಮಾಡುತ್ತಾರೆ. ಸಿದ್ಧುನ ತಂದೆಗೆ ಪಾರ್ಥಿ ಬಹಳ ಇಷ್ಟವಾಗಿಬಿಡುತ್ತಾನೆ. ಹೀಗೆ ಇವರು ಮೂವರ ಬಾಂಡಿಂಗ್ ಗಟ್ಟಿಯಾಗತೊಡಗುತ್ತದೆ.
ಸಿದ್ಧನ ಸ್ನೇಹಿತ ಗೌಡ ಒಮ್ಮೆ ನಿರುಪಮಾಳನ್ನು ಮತ್ತೆ ಕರೆ ತರುತ್ತಾನೆ. ಸಿದ್ದಾರ್ಥ ಮತ್ತು ನಿರು ಮತ್ತೆ ಒಂದಾಗಲಿ ಎಂಬ ಆಸೆ. ಆದರೆ ನಿರುಪಮಾಳ ಬಗ್ಗೆ ಸಿದ್ಧ ಆಸಕ್ತಿ ಕಳೆದುಕೊಂಡಿರುತ್ತಾನೆ. ಸಿದ್ಧನ ಒಲವು ಶ್ರೇಯಾಳ ಕಡೆಗೆ ಇದೆಯೆಂದು ಅರಿತ ನಿರು ಗೌರವಯುತವಾಗಿ ನಿರ್ಗಮಿಸಿಬಿಡುತ್ತಾಳೆ.
ದುರದೃಷ್ಟವಶಾತ್ ಶ್ರೇಯಾ ಹಾಗೂ ಸಿದ್ದಾರ್ಥ ಕೆಲಸ ಮಾಡುವ ಕಂಪೆನಿಗಳು ಎರಡೂ ವೈರಿಗಳು. ಒಂದು ದೊಡ್ಡ ಪ್ರಾಜಕ್ಟ್ ತಮಗೇ ಸಿಗಬೇಕೆಂದು ಇಬ್ಬರೂ ಪರಸ್ಪರ ಗೊತ್ತಿಲ್ಲದೆ ಪ್ರಯತ್ನ ಮಾಡುತ್ತಿರುತ್ತಾರೆ. ಶ್ರೇಯಾಳ ಬಾಸ್ ಆ ಪ್ರಾಜಕ್ಟ್ ತಮಗೆ ಸಿಕ್ಕರೆ ಶ್ರೇಯಾಳನ್ನು ಪಾಲುದಾರಳನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ವಚನ ಕೊಡುತ್ತಾನೆ. ಆ ಪ್ರಾಜೆಕ್ಟ್ ಸಿದ್ಧನಿಗೇ ಒಲಿಯುತ್ತದೆ. ಆದರೆ ಶ್ರೇಯಾ ಕೂಡ ಹಗಲುರಾತ್ರಿ ಅದಕ್ಕಾಗಿ ಕೆಲಸ ಮಾಡಿರುತ್ತಾಳೆ. ಪಾರ್ಥಿಯ ಹುಟ್ಟುಹಬ್ಬದ ದಿನ ಪಾರ್ಟಿಯಲ್ಲಿ ತನ್ನ ಡ್ರೆಸ್ ಕೊಳೆಯಾಯಿತೆಂದು ಶ್ರೇಯಾಳ ವಾಶ್ ರೂಂ ಉಪಯೋಗಿಸುವ ಸಿದ್ಧನಿಗೆ ಅವಳ ಲ್ಯಾಪ್ ಟ್ಯಾಪ್ ಓಪನ್ ಆಗಿರುವುದು ಕಾಣಿಸುತ್ತದೆ. ಕುತೂಹಲದಿಂದ ಅದರ ಮೇಲೆ ಕಣ್ಣಾಡಿಸುವಾಗ ಶ್ರೇಯಾ ನೋಡಿ ಬಿಡುತ್ತಾಳೆ. ಕೋಪಗೊಳ್ಳುವ ಶ್ರೇಯಾ ಸಿದ್ಧನನ್ನು ಬೈದು ಹೊರಟು ಹೋಗು ಎಂದು ಬಿಡುತ್ತಾಳೆ. ಆದರೆ ಸಿದ್ದಾರ್ಥ ತನ್ನ ಪಾಜೆಕ್ಟ್ ಶ್ರೇಯಾಗೆ ಬಿಟ್ಟು ಕೊಟ್ಟು ತಾನು ತನ್ನ ಕಂಪೆನಿಗೆ ರಾಜಿನಾಮೆ ಕೊಟ್ಟು ಚೆನ್ನೈ ಹೊರಟು ಬಿಡುತ್ತಾನೆ. ಶ್ರೇಯಾಳ ಧೈರ್ಯಸಾಹಸಗಳನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು, ತನ್ನದೇ ಕಂಪೆನಿಯನ್ನು ಶುರು ಮಾಡುತ್ತಾನೆ.
ಶ್ರೇಯಾಳಿಗೆ ಸಿದ್ಧನ ಮೇಲಿನ ಕೋಪ ಮತ್ತು ಅಪಾರ್ಥ ಕಡಿಮೆಯಾಗುತ್ತದೆ. ಪಾರ್ಥಿಯ ಫುಟ್‌ಬಾಲ್ ಮ್ಯಾಚ್‌ಗೆ ಬರುವ ಸಿದ್ಧ್ ಬಳಿ ಕ್ಷಮೆಯಾಚಿಸುತ್ತಾಳೆ. ಸಿದ್ಧ್ ಅವಳು ಮತ್ತು ಪಾರ್ಥಿವ್‌ನನ್ನು ತಾನು ಬಹಳ ಮಿಸ್ ಮಾಡಿಕೊಳ್ಳುವುದಾಗಿಯೂ ಶ್ರೇಯಾ ಒಪ್ಪಿದರೆ ತಾನೂ ಅವರಿಬ್ಬರಲ್ಲಿ ಒಬ್ಬನಾಗಿ ಇರಲು ಬಯಸುತ್ತೇನೆಂದೂ ಹೇಳುತ್ತಾನೆ. ಶ್ರೇಯಾಗೆ ಆಶ್ಚರ್ಯವಾದರೂ ಖುಷಿಯಾಗುತ್ತದೆ. ಸಂತಸದಿಂದ ಒಪ್ಪಿಗೆ ಎಂಬಂತೆ ಸಿದ್ಧನ ಹೆಗಲಿಗೊರಗುತ್ತಾಳೆ. ಸಿದ್ಧನ ಗೆಳೆಯ ಸೇತು ಸಿದ್ಧನ ಫ್ರೀಜ್ ಮಾಡಿದ್ದ ವೀರ್ಯ ದಾನವಾಗಿ ಬೇರೊಬ್ಬರಿಗೆ ಉಪಯೋಗವಾಗಿದೆಯೆಂದು ಹೇಳುತ್ತಾನೆ. ಅದು ಸಿದ್ಧನಿಗೆ ಅರ್ಥವಾಯಿತೇ ಇಲ್ಲವೇ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದು ಬಿಡುತ್ತದೆ.
ಸಿದ್ಧಾರ್ಥ, ಶ್ರೇಯಾ ಪಾರ್ಥಿವ್‌ನ ಹೊಸ ಪ್ರಯಾಣ ಪ್ರಾರಂಭವಾಗುತ್ತದೆ. ಒಬ್ಬರಿಗೊಬ್ಬರ ಜೆನೆಟಿಕ್ ಕನೆಕ್ಷನ್‌ನ ಅರಿವಿಲ್ಲದೆ ಮೂವರೂ ಪ್ರೀತಿಯ ಬಂಧಕ್ಕೆ ಒಳಗಾಗಿ ಬಾಳ ಪಯಣ ಆರಂಭಿಸುತ್ತಾರೆ.
ಚಿತ್ರ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. ಶ್ರೇಯಾ ಆಗಿ ನಿತ್ಯಾ, ಸಿದ್ಧ್ ಆಗಿ ರವಿಮೋಹನ್ ಅತ್ಯಂತ ಸಹಜವಾಗಿ ನಟಿಸಿದ್ದಾರೆ. ಪಾರ್ಥಿವ್ ಪಾತ್ರದ ಮಗು ಬಹಳ ಮುದ್ದಾಗಿದೆ ಹಾಗೂ ಚುರುಕಾಗಿದೆ. ಚಿತ್ರ ಒಂದು ಕಾವ್ಯದಂತೆ ನೋಡಿಸಿಕೊಂಡು ಹೋಗುತ್ತದೆ. ಅನಾವಶ್ಯಕವಾದ ಒಂದು ಸೀನ್ ಇಲ್ಲ. ದ್ವೇಷ ಅಸೂಯೆಯ ಡೈಲಾಗ್ ಇಲ್ಲ. ಸ್ಟಂಟ್ ಇಲ್ಲ. ಪೋಷಕ ಪಾತ್ರಗಳೆಲ್ಲ ಶಕ್ತಿಯುತವಾಗಿದೆ. ಹಳೆಯ ಗಾಯಕ ಮನು (ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು) ಇದರಲ್ಲಿ ಶ್ರೇಯಾ ತಂದೆಯಾಗಿ ಅಭಿನಯಿಸಿರುವುದು ಒಂದು ವಿಶೇಷ. ತನ್ನದೇ ಮಗು ಎಂದು ಗೊತ್ತಿಲ್ಲದ ಸಿದ್ದಾಂ ಪಾರ್ಥಿವ್ ನ ಬಗ್ಗೆ ಬೆಳೆಸಿಕೊಳ್ಳುವ ಮಮತೆ, ಇದು ನಿನ್ನದೇ ಮಗು ಎಂದು ಸಿದ್ದಾಂತನಿಗೆ ಹೇಳದ ಶ್ರೇಯಾ ಒಂದು ಹಿತವಾದ ಲಹರಿಯಲ್ಲಿ ನಮ್ಮನ್ನು ತೇಲಿಸಿಬಿಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.