Gullak Web Series Review: ನಮ್ಮ ಮಧ್ಯಮ ವರ್ಗದ ಬಾಲ್ಯ ನೆನಪಿಸೋ ಕಥೆ ಗುಲಕ್!

By Suvarna News  |  First Published Jul 4, 2024, 3:13 PM IST

ಮಧ್ಯಮ ಹಾಗೂ ಬಡವರ ಮನೆಯಲ್ಲಿ ಆಪತ್ತಿಗೆ ಅಂತ ಹುಂಡಿಯಲ್ಲಿ ದುಡ್ಡಿಡೋದು ಕಾಮನ್. ಅದರ ಸುತ್ತ ಹೆಣೆಯುವ ಗುಲ್ಲಕ್ ಯಾಕೆ ನೋಡುಬೇಕು ಅಂತ ಹೇಳುತ್ತೇವೆ ಓದಿ. 


ವೀಣಾ ರಾವ್, ಕನ್ನಡಪ್ರಭ

ಗುಲಕ್ ಎಂದರೆ ಮನೆಗಳಲ್ಲಿ ಆಪತ್ತಿಗೆ ಇರಲಿ ಎಂದು ಕೊಂಚ ಹಣ ಹಾಕಿಡುವ ಹುಂಡಿ ಅಥವಾ ಗೋಲಕ. ಇದು ಮಧ್ಯಮ ವರ್ಗದ ಮನೆಗಳಲ್ಲಿ ಸಾಮಾನ್ಯವಾಗಿ ಇರುತ್ತದೆ. ಈ ಗುಲಕ್ ಸೀರೀಸ್ ಸಹ ಈ ಮಧ್ಯಮ ವರ್ಗದ ಕಥೆಯನ್ನೇ ಹೇಳುತ್ತದೆ.  ನಾಲ್ಕು ಸರಣಿಗಳ ಈ ಧಾರವಾಹಿ ಒಂದು ಸರಣಿಯಲ್ಲಿ ಐದು ಎಪಿಸೋಡ್‌ಗಳನ್ನು ಹೊಂದಿದೆ. ಒಟ್ಟು ಇಪ್ಪತ್ತು ಎಪಿಸೋಡುಗಳು ನಿಮ್ಮ ಮನರಂಜಿಸಿ ನಕ್ಕು ನಲಿಸುತ್ತದೆ. ಇದನ್ನು ನೋಡುವಾಗ ಹಳೆಯ ದೂರದರ್ಶನ ಧಾರವಾಹಿಗಳಾದ ಶ್ರೀಮಾನ್ ಶ್ರೀಮತಿ, ರಜನಿ, ವಾಗ್ಲೆ ಕಿ ದುನಿಯಾ ನೆನಪಾದರೆ ಅಚ್ಚರಿಯಿಲ್ಲ. ಇನಿತೂ ಅಸಭ್ಯವಿಲ್ಲದ ಕ್ರೌರ್ಯವಿಲ್ಲದ ಮನೆಮಂದಿಯೆಲ್ಲ ಕುಳಿತು ನೋಡಿ ಎಂಜಾಯ್ ಮಾಡಬಹುದಾದ ಕಥೆ ಇದು.

Tap to resize

Latest Videos

undefined

ಟಿವಿಎಫ್ ಬ್ಯಾನರಿನ ಅಡಿಯಲ್ಲಿ ಶ್ರೇಯಂಸ್ ಪಾಂಡೆ ನಿರ್ಮಿಸಿ ಅಮೃತ್ ರಾಜ್ ನಿರ್ದೇಶಿಸಿರುವ ಗುಲಕ್ ಎಂಬ ಈ ಸರಣಿ ಮಧ್ಯಮವರ್ಗದ ನೋವು ನಲಿವುಗಳನ್ನು ಅವರ ಭಾವನಾತ್ಮಕತೆಯನ್ನು ಹುಸಿಕೋಪ ನಸುಮುನಿಸು ಕೊಂಚ ಪ್ರೀತಿ ಪರಸ್ಪರ ಆವಲಂಬನೆ ಎಲ್ಲವನ್ನೂ ಮನಸ್ಸಿಗೆ ಆಪ್ಯಾಯಮಾನವಾಗುವ ರೀತಿಯಲ್ಲಿ ಕಟ್ಟಿಕೊಡುತ್ತದೆ. ಈ ಸರಣಿಯ ವಿಶೇಷ ಎಂದರೆ ಗೋಲಕವು ಈ ಕಥೆಯನ್ನು ಹಿನ್ನೆಲೆಯಲ್ಲಿ ನಿರೂಪಿಸುತ್ತಾ ಹೋಗುತ್ತದೆ. ಪ್ರತಿ ಮಧ್ಯಮ ವರ್ಗದ ಮನೆಯಲ್ಲಿ ಇರುವ ಗೋಲಕ ಆ ಸಂಸಾರವನ್ನು ಹತ್ತಿರದಿಂದ ನೋಡುತ್ತಿರುತ್ತದೆ. ಆ ಸಂಸಾರದ ಕಷ್ಟಸುಖಗಳು ನೋವು ನಲಿವುಗಳು, ಆರ್ಥಿಕಸ್ಥಿತಿ  ಈ ಗೋಲಕಕ್ಕಿಂತ ಬೇರೆ ಯಾರಿಗೆ ತಾನೆ ಗೊತ್ತಿರುತ್ತದೆ ಎಂಬ ಒಂದು ಕಲ್ಪನೆಯಲ್ಲಿ ಈ ಸರಣಿಯನ್ನು ನಿರ್ಮಿಸಿದ್ದಾರೆ. ಹೀಗಾಗಿ ಗೋಲಕವೇ ನಿರೂಪಕನಾಗಿ ಒಂದು ಸಂಸಾರದ ಕಥೆಯನ್ನು ಹೇಳುವುದು ವಿಶಿಷ್ಟವಾಗಿದೆ.

ಸಂತೋಷ್ ಮಿಶ್ರಾ ಒಬ್ಬ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವ ಕಾರಕೂನ. ಮಧ್ಯಮ ವರ್ಗದ ಸಂಸಾರ. ಹೆಂಡತಿ ಶಾಂತಿ ಮಿಶ್ರಾ  ಗೃಹಿಣಿ. ಮಕ್ಕಳಾದ ಆನಂದ್ ಮಿಶ್ರಾ ದೊಡ್ಡವನು, ಅಮನ್ ಮಿಶ್ರಾ ಸಣ್ಣವನು. ಸಂತೋಷ್ ಮಿಶ್ರಾ ಆಗಿ ಜಮೀಲ್ ಖಾನ್, ಶಾಂತಿ ಆಗಿ ಗೀತಾಂಜಲಿ ಕುಲಕರ್ಣಿ, ಆನಂದ್ ಮಿಶ್ರಾ ಆಗಿ ವೈಭವ್ ರಾಜ್ ಗುಪ್ತಾ, ಅಮನ್ ಆಗಿ ಹರ್ಷ ಮೇಯರ್ ನಟಿಸಿದ್ದಾರೆ. ಇದರ ಜೊತೆಗೆ ಇವರ ನೆರೆಯ ಮನೆಯ ಗೃಹಿಣಿಯಾಗಿ ಸುನೀತಾ ರಾಜ್ವರ್ ಅಭಿನಯಿಸಿದ್ದಾರೆ. ಕ್ಷಮಿಸಿ ಇವರಾರು ಅಭಿನಯಿಸಿಲ್ಲ ತಾವೇ ಪಾತ್ರಗಳಾಗಿ ಪರಕಾಯ ಪ್ರವೇಶ ಮಾಡಿದ್ದಾರೆ.

ನಮ್ಮ ನಿಮ್ಮ ಹಳ್ಳಿಯ ಕತೆ ಎನಿಸುವ ಪಂಚಾಯತ್: ಮಿಸ್ ಮಾಡಬಾರದ ವೆಬ್ ಸೀರಿಸ್

ಎಂದಿನಂತೆ ಟಿವಿಎಫ್ ಕ್ರಿಯೇಷನ್ ಕೌಟುಂಬಿಕ ಸರಣಿಗಳನ್ನು ನಿರ್ಮಿಸುವಲ್ಲಿ ಕಥೆ-ಪಾತ್ರಗಳ ಆಯ್ಕೆಯಲ್ಲಿ ಉತ್ಕೃಷ್ಟತೆ ಮೆರೆದಿದೆ. ಇದೇ ಟಿವಿಎಫ್ ನ ಅಮೇಜಾನ್ ಪ್ರೈಂಮ್ ನಲ್ಲಿ ಓಡುತ್ತಿರುವ ಪಂಚಾಯತ್ ಸರಣಿಗಳ ಜನಪ್ರಿಯತೆಯನ್ನು ಗಮನಿಸಬಹುದು.

ಅಮ್ಮನ ನೆನಪು ತರೋ ದೃಶ್ಯಗಳು!
ಎಲ್ಲರ ಮನೆಯಲ್ಲಿ ನಡೆಯುವ ಕಥೆಯೇ ಆದರೂ ಗುಲಕ್ ನಮ್ಮ ಮನರಂಜಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಶಾಂತಿಯ ಕಿಟಿಪಿಟಿ ಮಕ್ಕಳನ್ನು ಗದರಿಸುವುದು ಹಾಗೆಯೇ ಪ್ರೀತಿಯನ್ನೂ ತೋರುವುದು, ರುಚಿಯಾದ ತಿಂಡಿ ಅಡುಗೆಗಳನ್ನು ಮಾಡಿ ಬಡಿಸುವುದು ಅವಳ ದೈವಭಕ್ತಿ, ಮಕ್ಕಳಿಬ್ಬರ ಗಲಾಟೆ ಜಗಳ ಪರಿಹರಿಸುವುದು ಇವೆಲ್ಲವನ್ನೂ ನೋಡಿದಾಗ ನಮ್ಮ ನಿಮ್ಮ ಅಮ್ಮನದೇ ನೆನಪಾಗುತ್ತದೆ.  ಮಕ್ಕಳ ವಿಷಯಕ್ಕೆ ಗಂಡನೊಡನೆ ಕಿತ್ತಾಡುವುದು ನಂತರ ಗಂಡನಿಗೆ ಪ್ರಿಯವಾದ ಚಹಾ ಮಾಡಿಕೊಟ್ಟು, ಅವನನ್ನು ಸುಪ್ರೀತಗೊಳಿಸುವುದು ಇವೆಲ್ಲವನ್ನೂ ಶಾಂತಿ ಅಕ್ಕರೆಯಿಂದ ಮಾಡುತ್ತಾಳೆ. ಆದರೆ ಅವಳ ಸ್ವಾಭಿಮಾನಕ್ಕೆ ಭಂಗ ತರುವಂಥ ಘಟನೆ  ಮಾತು ಏನಾದರೂ ನಡೆದರೆ ಆದಿನ ಶಾಂತಿ ರೌದ್ರೆಯಾಗುತ್ತಾಳೆ. ಆ ದಿನದ ಗಂಡಮಕ್ಕಳ ಫೇವರಿಟ್‌ಗಳಿಗೆಲ್ಲ ಖೋತಾ.

ಸಂತೋಷ್ ಮಿಶ್ರಾ ಕೂಡಾ ತನ್ನ ಸಂಸಾರವನ್ನು ಪ್ರೀತಿಸುವ ತನ್ನ ಸಂಸಾರದ ಸುಖಕ್ಕಾಗಿ ಕಷ್ಟಪಡಲು ತಯಾರಿರುವ ಸರಳ ವ್ಯಕ್ತಿ. ಸದಾ ಹೆಂಡತಿಯನ್ನು ನಗಿಸುತ್ತಾ ಅವಳನ್ನು ಸುಪ್ರೀತಗೊಳಿಸುವ ಪ್ರಯತ್ನ ಮಾಡುತ್ತಾ ಮಕ್ಕಳಿಗೆ ತಿಳಿ ಹೇಳುತ್ತಾ ಸರಸಿಯಾಗಿ ಓಡಾಡಿಕೊಂಡಿರುವ ವ್ಯಕ್ತಿ. ಭಾವನಾತ್ಮಕ ದೃಶ್ಯಗಳಲ್ಲಿ ಜಮೀಲ್ ಖಾನ್ ತನ್ನ ಕಣ್ಣಿನ ಚಲನೆಯಿಂದಲೇ ದುಃಖ ಕೋಪ, ಭಾವುಕತೆ ಪ್ರಕಟಿಸಿ ಪ್ರೇಕ್ಷಕನ ಕಣ್ಣಲ್ಲಿ ಹೀರೋ ಆಗಿಬಿಡುತ್ತಾನೆ.

Desai Film Review: ಗಾಣದ ಎಣ್ಣೆ ತಯಾರಿಸುವ ದೇಸಾಯಿ ಫ್ಯಾಮಿಲಿಯ ದಶಾವತಾರ

ಮಕ್ಕಳಿಬ್ಬರ ಪಾತ್ರದಲ್ಲಿ ವೈಭವ್ ರಾಜ್ ಮತ್ತು ಹರ್ಷ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ. ಇವರಿಬ್ಬರೂ ಅನೋನ್ಯವಾಗಿದ್ದರೂ, ಇಬ್ಬರ ಮಧ್ಯೆ ಪೈಪೋಟಿಯಂತೂ ಸದಾ ಇರುತ್ತದೆ. ಸದಾ ಜಗಳವಾಡುತ್ತಾ, ಕಚ್ಚಾಡುತ್ತ ಶತ್ರುಗಳಂತೆ ಕಾಣುವ ಇವರಿಬ್ಬರೂ,  ಆತಂಕಿತ ಅಥವಾ ಗಂಭೀರ ಪರಿಸ್ಥಿತಿಗಳಲ್ಲಿ ಎಲ್ಲರ ಮಿಡಲ್ ಕ್ಲಾಸ್ ಮನೆಗಲಂತೆ ಅಣ್ಣ-ತಮ್ಮ ಒಂದಾಗಿ ಬಿಡುತ್ತಾರೆ. ಈ ಅಣ್ಣ-ತಮ್ಮಂದಿರ ಬಾಂಧವ್ಯ (Sibling Bonding) ಮನಸ್ಸಿಗೆ ಮುದ ನೀಡುತ್ತದೆ. ತಮ್ಮ ಕೋಪ ಹಠ ಅಣ್ಣನ ದೊಡ್ಡಸ್ತಿಕೆಯ ಹಮ್ಮು, ತಾನು ದೊಡ್ಡವನು, ತಮ್ಮ ತನ್ನ ಮಾತು ಕೇಳಬೇಕು ಎಂಬ ಧೋರಣೆ ನಾನೇಕೆ ನಿನ್ನ ಮಾತು ಕೇಳಬೇಕು ಎಂಬ ತಮ್ಮನ ಅಸಡ್ಡೆ ಅಲ್ಲಲ್ಲಿ ವ್ಯಕ್ತವಾಗುತ್ತ, ನೋಡುವ ನಾವೂ ಕೂಡ ಗುಲಕ್‌ನಲ್ಲಿ ಒಂದು ಪಾತ್ರವಾಗಿ ಬಿಡುತ್ತೇವೆ.

ಎಲ್ಲರ ಸ್ವಭಾವ ಮತ್ತು ಎಪಿಸೋಡ್ ಶುರುವಾದಾಗ ಆ ಭಾಗದ ಅವತ್ತಿನ ಕತೆ ಘಟನೆಯ ಮುನ್ಸೂಚನೆ ಎಲ್ಲವನ್ನೂ ಗುಲಕ್ ಹೇಳುತ್ತದೆ. ಎಪಿಸೋಡಿನ ಕೊನೆಯಲ್ಲಿ ಆ ದಿನದ ಘಟನೆಗಳ ಸಮಾರೋಪವನ್ನೂ ಗುಲಕ್ ಮಾಡಿ ಕೊಡುತ್ತದೆ.

ದಿನವೂ ಒಬ್ಬರಲ್ಲ ಒಬ್ಬರು ಗೋಲಕಕ್ಕೆ ಚಿಲ್ಲರೆ ಕಾಸು ಹಾಕುವುದು, ಅಗತ್ಯ ಬಿದ್ದಾಗ ಅದನ್ನು ತೆಗೆದು ಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಚಿಕ್ಕವನು ಟಿವಿ ವಾಲ್ಯೂಮ್ ಹೆಚ್ಚು ಇಟ್ಟುಕೊಂಡು ನೋಡುವುದು, ಅಣ್ಣ ಅದನ್ನು ಖಂಡಿಸಿ ಕಡಿಮೆ ಮಾಡು ಎಂದು ಅರಚಾಡುವುದು, ತಮ್ಮನನ್ನು ಹೊಡೆಯಲು ಹೋಗುವುದು ಇಬ್ಬರೂ ಶತ್ರುಗಳಂತೆ ಕಿತ್ತಾಡುವುದೂ ನಮ್ಮ ಮನೆಯಲ್ಲಿ ನಡೆಯುವಂಥ ಘಟನೆಗಳೇ ತೆರೆಯ ಮೇಲೆ ನೋಡುತ್ತಿದ್ದೇವೇನೋ ಎನಿಸುತ್ತದೆ. ಅದೇ ತಮ್ಮನ ಶಾಲೆಯ ಅಸೈನ್ ಮೆಂಟುಗಳಿಗೆ ಅಣ್ಣ ಸಹಾಯ ಮಾಡುವುದು, ತಮ್ಮನಿಗೇನಾದರೂ ಬೇಕಾದರೆ ತಂದೆಯ ಬಳಿ ಶಿಫಾರಸು ಮಾಡುವುದೂ ನಾವು ನೋಡುತ್ತೇವೆ. ದೊಡ್ಡವನಾದ ಆನಂದ್ ಓದು ಮುಗಿದರೂ, ಇನ್ನೂ ನೌಕರಿ ಸಿಗದೇ ಹತಾಶನಾಗಿರುತ್ತಾನೆ. ಆಗಾಗ ನೌಕರಿ ಹುಡುಕುತ್ತಿಲ್ಲ ಎಂದು ತಾಯಿಯ ಕೈಯಲ್ಲಿ ಬೈಯಿಸಿಕೊಳ್ಳುತ್ತಾನೆ. ಆಗೆಲ್ಲ ಅಣ್ಣನಿಗೆ ತಮ್ಮನ ಬೆಂಬಲ.

Dolly Dhananjay Kotee Review: ವಿವರಗಳಲ್ಲಿಯೇ ಮನದಲ್ಲಿ ಉಳಿಯುವ ಕೋಟಿ

ಈ ಸಂಸಾರದಲ್ಲಿ ಯಾವಾಗ ಜಗಳ ಶುರುವಾಗುತ್ತದೋ, ಯಾವಾಗ ತಣ್ಣಗಾಗುತ್ತದೋ ಗೊತ್ತಾಗುವುದಿಲ್ಲ. ಮಲೆನಾಡಿನ ಮಳೆಯಂತೆ ಆಗಾಗ ಜಗಳದ ಮಳೆ ರ‍್ರೋ ಎಂದು ಶುರುವಾಗುತ್ತದೆ, ಹಾಗೆಯೇ ಎಳೆ ಬಿಸಿಲೂ ಇಣುಕಿ ವಾತಾವರಣ ತಿಳಿಯಾಗುತ್ತದೆ. ಭಾನುವಾರ ಬೆಳಗ್ಗೆ ಬೇಗ ಏಳಬೇಕೆಂಬ ತರಾತುರಿ ಇಲ್ಲ. ಆದರೂ ಸಂತೋಷ್ ಮಿಶ್ರಾನ ಮೊಬೈಲ್ ಅಲಾರಮ್ ನಸುಕನಲ್ಲೇ ಬಜಾಯಿಸಲು ಪ್ರಾರಂಭಿಸಿದರೆ ಶಾಂತಿಗೆ ನಿದ್ರಾಭಂಗ ಕೋಪ, ಭಾನುವಾರವೂ ಸುಖವಾಗಿ ಮಲಗಲು ಬಿಡುವುದಿಲ್ಲ ಎಂದು ಕಿರಿಪಿರಿ ಮಾಡುತ್ತಲೇ ಎದ್ದು ಅಡುಗೆ ಮನೆಗೆ ಹೋಗುತ್ತಾಳೆ. ಅಲ್ಲಿಂದ ಭಾನುವಾರ ಏನು ಸ್ಪೆಷಲ್ ಅಡುಗೆ ಮಾಡಬೇಕೆಂಬ ಚರ್ಚೆಯೊಂದಿಗೆ ಬೇಗ ಎದ್ದ ಕಿರಿಕರಿ ಮರೆತು ಹೋಗುತ್ತದೆ.

ಆ ಮನೆ ಸಹ ಬಹಳ ಚೆನ್ನಾಗಿ ಇದೆ. ಮಧ್ಯದಲ್ಲಿ ಆಕಾಶಕ್ಕೆ ತೆರೆದಿರುವ ಹಜಾರ ಅಲ್ಲಿ ಒಂದು ದಿವಾನ ನಾಲ್ಕು ಕುರ್ಚಿಗಳು ಹಜಾರದ ಸುತ್ತಲೂ ಇರುವ ಕೋಣೆಗಳಲ್ಲಿ ಅಡುಗೆ ಕೋಣೆ, ಮಲಗುವ ಕೋಣೆ, ದೇವರ ಕೋಣೆ, ಶೌಚಾಲಯ, ಒಂದು ಕಡೆ ಮಹಡಿಗೆ ಹೋಗುವ ಮೆಟ್ಟಿಲು, ಹೂಕುಂಡಗಳಲ್ಲಿ ಗಿಡಗಳು, ಹಳೆಯ ಕಾಲದ ಮನೆ ಎಂಬಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಆ ಮನೆ ಸಂತೋಷ್ ಮಿಶ್ರಾನಿಗೆ ಅವನ ತಂದೆಯಿಂದ ಬಂದ ಬಳುವಳಿ. ಅದರ ಮೇಲೆ ಅವನಿಗೆ ಎಲ್ಲಿಲ್ಲದ ಅಕ್ಕರೆ, ಮಮತೆ. ಮಕ್ಕಳಿಬ್ಬರೂ ತಮ್ಮ ಸ್ನೇಹಿತರ ಮನೆ ಇದಕ್ಕಿಂತ ಚೆನ್ನಾಗಿದೆ. ನಾವೂ ಈ  ಮನೆ ಮಾರಿ ಆಧುನಿಕ ಮನೆ ತೆಗೆದುಕೊಳ್ಳೋಣ ಎಂದಾಗ ಸಂತೋಷ್ ಮಿಶ್ರಾ ಕನಲಿ ಕೆಂಡವಾಗುತ್ತಾನೆ. ನಿಮ್ಮ,ನಿಮ್ಮ ಸಂಪಾದನೆಯಲ್ಲಿ ಬೇಕಾದರೆ ಬಂಗ್ಲೆಯನ್ನೇ ತೆಗೆದುಕೊಳ್ಳಿ. ಆದರೆ ಈ ಮನೆ ನನ್ನ ಅಪ್ಪನ ನೆನಪಿಗೆ ಇರುವಂಥದ್ದು. ಇದು ಬರೀ ಮನೆಯಲ್ಲ ತನ್ನ ಎಮೋಷನ್ ಎಂಬಂತೆ ಮಾತಾಡಿ ಮಕ್ಕಳ ಬಾಯಿ ಮುಚ್ಚಿಸುತ್ತಾನೆ.

ನೀರೆತ್ತುವ ಮೋಟರ್ ಫಿಟ್ ಮಾಡುವುದು, ಅದು ಕೆಟ್ಟರೆ ರಿಪೇರಿ ಮಾಡುವುದು ಸಣ್ಣ ಸಣ್ಣ ವೈರಿಂಗ್ ಮಾಡುವುದು ಇವೆಲ್ಲವನ್ನೂ ನೋಡುವಾಗ ಸಂತೋಷ್ ಮಿಶ್ರಾ ನಮಗೆ ಟಿಪಿಕಲ್ ಮಧ್ಯಮ ವರ್ಗದ ಗೃಹಸ್ಥನಂತೆ (Typical Middle Class Middle Aged Man) ಅರ್ಥಾತ್ ನಮ್ಮ ತಂದೆಯಂತೆಯೇ ಕಾಣಿಸುವುದರಲ್ಲಿ ಅಚ್ಚರಿಯಿಲ್ಲ. ಶಾಂತಿಗೆ ಡಯಾಬಿಟೀಸ್ ಇದೆ ಎಂದು ಗೊತ್ತಾದಾಗ ಮನೆಯವರೆಲ್ಲ ಅವಳ ಬಗ್ಗೆ ಕಾಳಜಿ ವಹಿಸುವುದು, ಅವಳು ದೇವಾಲಯಕ್ಕೆ ಹೋಗಿ ಬರುವಾಗ ಅವಳ ಕತ್ತಿನ ಸರ ಕಳ್ಳತನವಾಗುವುದು ಮನೆಯಲ್ಲಿ ಅದಕ್ಕಾಗಿ ಆತಂಕ, ವಾಗ್ವಾದ ಕೊನೆಗೆ ಕತ್ತಿನ ಸರ ಹೋದರೆ ಹೋಯಿತು ಜೀವ ಉಳಿಯಿತಲ್ಲ ಎಂಬ ತೀರ್ಮಾನಕ್ಕೆ ಬಂದು ಎಲ್ಲರೂ ಸುಮ್ಮನಾಗುವುದು ಇವೆಲ್ಲ ನೋಡಿದಾಗ ನಮ್ಮ ನಿಮ್ಮ ಮನೆಯ ಕಥೆಯೇ ಎಂಬಂತೆ ಫೀಲ್ ಕೊಡುವುದು ಟಿವಿಎಫ್ ನ ವಿಶೇಷತೆ. ಪ್ರತಿ ಭಾಗವೂ ಮುಗಿಯುವಾಗ ಒಂದು ಆಪ್ಯಾಯತೆಯನ್ನು ನಮಗೆ ಬಿಟ್ಟು ಹೋಗುತ್ತದೆ. ಎಲ್ಲರ ಮನೆಯಲ್ಲೂ ಇಷ್ಟೇ ಅಲ್ಲವೇ ಎಂಬ ಭಾವುಕತೆ ನಮಗೂ ಅಂಟಿಸಿಬಿಡುತ್ತದೆ.

ನೆಟ್‌ಫ್ಲಿಕ್ಸ್ ಚಿತ್ರ ಕ್ರ್ಯೂ ರಿವ್ಯೂ: ಚಿನ್ನ ಕಳ್ಳ ಸಾಗಣೆಯಲ್ಲಿ ಫ್ಲೈಟ್ ಓನರೇ ಭಾಗಿ!

ಕೇವಲ 25 ನಿಮಿಷದ ಕಾಲಾವಧಿಯ ಒಂದು ಸರಣಿಗೆ ಐದು ಎಪಿಸೋಡುಗಳು ಇರುವ ಈ ಗುಲಕ್ ಸರಣಿ ಮುಗಿದಾಗ ಮತ್ತೊಂದು ಭಾಗ ಬರುವುದೇ, ಬಂದರೆ ಚೆನ್ನಾಗಿರುತ್ತದೆ ಎಂದು ಅನಿಸಿಯೇ ಅನಿಸುತ್ತದೆ. ಮೂರು ಸರಣಿಗಳು ಮುಗಿದು ಈಗ ನಾಲ್ಕನೆಯ ಸರಣಿ ಸ್ಕ್ರೀಂ ಆಗುತ್ತಿದೆ. ಇದರ ಕೊನೆಯ ಎಪಿಸೋಡಿನಲ್ಲಿ  ಚಿಕ್ಕ ಮಗ ಅಮನ್ ತನ್ನ ಸ್ನೇಹಿತನ ಜೊತೆ ಸೇರಿ ಸಲ್ಲದ ಚಟುವಟಿಕೆಗಳಲ್ಲಿ ತೊಡಗುವುದು, ಗೆಳತಿಗೆ ಪ್ರೇಮಪತ್ರ ಬರೆದು, ತಂದೆಗೆ ಸಿಕ್ಕಿಹಾಕಿಕೊಳ್ಳುವುದು, ತಂದೆ ಕಪಾಳಕ್ಕೆ ಒಂದು ಬಾರಿಸಿದಾಗ ತನ್ನ ತಪ್ಪು ಗೊತ್ತಾಗಿ ನಾಚಿಕೆಯಿಂದ ಮನೆ ಬಿಟ್ಟು ಹೋಗುವುದು, ದೊಡ್ಡಮಗ ತಾನು ನೌಕರಿಯನ್ನು ಸಂಪಾದಿಸಿದ ಬೋನಸ್, ಗೋವಾ ಟ್ರಿಪ್ಪಿನ ಟಿಕೆಟ್ ತಂದು ಮನೆಯ ವಾತಾವರಣ ನೋಡಿ ಸಪ್ಪಗಾಗಿ ತಮ್ಮನನ್ನು ಹುಡುಕಿ ಅವನನ್ನು ಸಮಾಧಾನಿಸಿ ಮನೆಗೆ ಕರೆತರುವುದು, ಮಗನನ್ನು ಹೊಡೆದೆನಲ್ಲ ಎಂದು ತಂದೆ ಭಾವೋದ್ರೇಕಗೊಳ್ಳುವುದು, ತಾಯಿ ಗದ್ಗದಿತಳಾಗುವುದು ಕೊನೆಗೆ ಎಲ್ಲವೂ ಸುಖಾಂತವಾಗಿ ಗೋವಾ ಟಿಕೆಟ್ ತಂದೆತಾಯಿಗೆ ಆನಂದ್ ಉಡುಗೊರೆ ಕೊಡುವುದು ನಾಲ್ಕೂ ಜನ ಸಂತಸದಿಂದ ಅಪ್ಪಿಕೊಳ್ಳುವುದು ನೋಡುವಾಗ ನಮ್ಮ ಕಣ್ಣಲ್ಲೂ ಸಾರ್ಥಕತೆಗೆ ಕಣ್ಣಿರು ತುಂಬುತ್ತದೆ. ಮನಸ್ಸಿಗೆ ಒಂದು ತಂಪಾದ ಆರ್ದ್ರ ಅನುಭವ.

ಇದರ ನಡುವೆ ನೆರೆಮನೆಯ ಗೃಹಿಣಿ 'ಬಿಟ್ಟು ಕಿ ಮಾ' (ಉತ್ತರದಲ್ಲಿ ಎಲ್ಲರ ಅವರ ಮಕ್ಕಳ ಹೆಸರಿಟ್ಟು ಅವರ ಅಪ್ಪ ಅವರ ಅಮ್ಮ ಎಂದೇ ಕರೆಯುವುದು) ಅವಳ ದಾಢಸಿ ಸ್ವಭಾವ, ಬೇರೆಯವರ ವಿಷಯದಲ್ಲಿ ಮೂಗು ತೂರಿಸಿ, ಅನಗತ್ಯ ಕುತೂಹಲ ತೋರಿಸುವುದು ನಾಲಿಗೆ ಹರಿಬಿಟ್ಟಂತೆ ಮಾತನಾಡುವುದು ಕುಹಕ ನಗು, ಕುಟಿಲ ನೋಟ ಹರಿಸಿದರೂ, ಅವಹೇಳನಾಕಾರಿಯಾದ ಮಾತುಗಳನ್ನು ಆಡುತ್ತಿದ್ದರೂ,  ನೆರೆಯವರಿಗೆ ಕಷ್ಟ ಬಂದಾಗ ಮಾತ್ರ ತನ್ನದೇ ಮನೆಯ ಕಷ್ಟ ಎಂಬಂತೆ ಅವರಲ್ಲಿ ಒಂದಾಗಿ ಸಾಂತ್ವನ ಹೇಳುವುದು ಈ ಪಾತ್ರ ಸುನೀತಾ ರಾಜ್ವರ್ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇವರು ಪಂಚಾಯತ್ ಸರಣಿಯಲ್ಲೂ ಇದೇ ರೀತಿಯ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದವರು.

ಮನೆಮಂದಿಯೆಲ್ಲ ಇನಿತೂ ಕಿರಿಕರಿ ಹಿಂಸೆಯಿಲ್ಲದೆ ಸಂತೋಷವಾಗಿ ಕಳಿತು ನೋಡಿ ಎಂಜಾಯ್ ಮಾಡಬಹುದಾದ ಗುಲಕ್ ನೀವೂ ನೋಡಿ ಆನಂದಿಸಿ.
 

click me!