ವಿಚ್ಛೇದನ ಬಯಸಿದ್ದ ಜೋಡಿ ಮತ್ತೆ ಒಂದಾದಾಗ: ದೋ ಔರ್ ದೋ ಪ್ಯಾರ್ ರಿವ್ಯೂ

By Suvarna NewsFirst Published Jul 31, 2024, 10:40 AM IST
Highlights

ಇಲ್ಲ ಇವನೊಂದಿಗೆ ಇನ್ನು ಬದುಕು ಸಾಧ್ಯವೇ ಇಲ್ಲವಂದು ಡಿಸೈಡ್ ಮಾಡಿ ಬೇರೆಯಾಗುವುದು ಮಾತ್ರವಲ್ಲ, ಮತ್ತೊಂದು ಸಂಬಂಧ ಹುಡುಕಿಕೊಂಡ ನಂತರ ಹಳೇ ಸಂಗಾತಿ ಜೊತೆ ಮರಳೋ ಕಥೆ ದೋ ಔರ್ ದೋ ಪ್ಯಾರ್!

-ವೀಣಾ ರಾವ್, ಕನ್ನಡಪ್ರಭ
 
ಶಿರ್ಷಾ ಗುಹ ನಿರ್ದೇಶನದ ದೋ ಔರ್ ದೋ ಪ್ಯಾರ್ ಚಿತ್ರ ಇದೇ ಏಪ್ರಿಲ್ ನಲ್ಲಿ ರಿಲೀಸಾಗಿ ಈಗ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಓಡುತ್ತಿದೆ. ವಿದ್ಯಾ ಬಾಲನ್ ಹಾಗೂ ಪ್ರತೀಕ್ ಗಾಂಧಿ (ಸ್ಕಾಮ್ 1992 ಚಿತ್ರದ ನಾಯಕ ನಟ) ಮುಖ್ಯ ತಾರಾಗಣದಲ್ಲಿ ಇರುವ ಈ ಚಿತ್ರ  ಅಪ್ಪಟ ಮನೋರಂಜನೆಯ ಚಿತ್ರ.

ಕಾವ್ಯಾ ಗಣೇಶನ್ (ವಿದ್ಯಾ ಬಾಲನ್) ಹಾಗೂ ಅನಿರುದ್ಧ ಬ್ಯಾನರ್ಜಿ (ಪ್ರತೀಕ್ ಗಾಂಧಿ) ಪ್ರೀತಿಸಿ ಮನೆಯವರ ವಿರೋಧದೊಂದಿಗೆ ಮದುವೆಯಾಗಿರುತ್ತಾರೆ. ಕಾವ್ಯಾ ತಮಿಳಿನ ಕುಟ್ಟಿ. ಅನಿ ಬೆಂಗಾಲಿ ಬಾಬು. ಕಾವ್ಯಾಳ ತಂದೆಗೆ ಈ ಮದುವೆ ಕೊಂಚವೂ ಇಷ್ಟವಿರುವುದಿಲ್ಲ. ಆದರೆ ಕಾವ್ಯಾ ಮನೆಯಿಂದ ಓಡಿ ಹೋಗಿ ಮದುವೆಯಾಗಿರುತ್ತಾಳೆ. ಅನಿ ತನ್ನ ತಂದೆಯ ವ್ಯಾಪಾರ ವಹಿವಾಟನ್ನು ಮುನ್ನಡಿಸಿಕೊಂಡು ಹೋಗುತ್ತಿರುತ್ತಾನೆ.  ಕಾವ್ಯಾ ಕೂಡ ಉದ್ಯೋಗಸ್ಥೆ. ಇಬ್ಬರೂ ಒಂದು ಮನೆ ಕೊಂಡು, ಇಎಂಐ ತೀರಿಸುತ್ತಾ ಸಂತೋಷವಾಗಿಯೇ ಇರುತ್ತಾರೆ. ಆದರೆ ತನ್ನ ವ್ಯವಹಾರದ ಜಂಜಡಗಳಲ್ಲಿ ಸಿಲುಕಿ ಒದ್ದಾಡುವ ಅನಿ ಕಾವ್ಯಾಳಿಗೆ ಸಮಯ ಕೊಡಲು ಸೋಲುತ್ತಾನೆ. ಒಂದು ಸಣ್ಣ ಅಂತರ ಇಬ್ಬರ ನಡುವೆ ಮೂಡಿ ನಂತರ ಅದು ಇಬ್ಬರ ಇಗೋಗಳಿಂದ ದೊಡ್ಡದಾಗುತ್ತಾ ಕಂದರವಾಗುತ್ತದೆ. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸಿದರೂ ಇಬ್ಬರ ನಡುವೆ ಭೂಮ್ಯಾಕಾಶದಷ್ಟು ಅಂತರ, ಊಟ ತಿಂಡಿಗಾಗಿ ಕಾಯುವುದಿಲ್ಲ ಯಾರಿಗೆ ಏನು ಬೇಕೋ ಅದು ಮಾಡಿಕೊಳ್ಳುವುದು ತಮ್ಮ  ಪಾಡಿಗೆ ತಮ್ಮ ಸಮಯಕ್ಕೆ ಮನೆಗೆ ಬರುವುದು. ಅದು ಮನೆಯಾಗದೆ ಅವರಿಬ್ಬರ ಪಾಲಿಗೆ ರಾತ್ರಿ ಉಳಿಯುವ ತಾಣವಷ್ಟೇ ಆಗಿರುತ್ತದೆ. ಕಾವ್ಯಾಳಿಗೆ ಮಗು ಬೇಡ. ಇದು ಕೂಡ ಅವರಲ್ಲಿ ಒಂದು ಸಣ್ಣ ಅಸಹನೆ ಹುಟ್ಟಲು ಕಾರಣವಾಗಿರುತ್ತದೆ. ಇಬ್ಬರೂ ಒಂದೇ ಮಂಚದಲ್ಲೇ ಮಲಗಿದರೂ ಅವಳ ಮುಖ ಆಕಡೆ ಇವನ ಮುಖ ಈಕಡೆ. ಒಂದೊಂದು ದಿನ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿರುವುದೂ ಇಲ್ಲ. 12 ವರ್ಷದ ಅವರ ದಾಂಪತ್ಯ ಏಕತಾನತೆಯಿಂದ ಬೋರು ಹೊಡೆಸುತ್ತ ಇರುತ್ತದೆ. ಇಂಥ ಅಸಹನೀಯ ಬದುಕಿನಲ್ಲಿ ಇಬ್ಬರಿಗೂ ಬೇರೋಬ್ಬರು ಬದುಕಿನಲ್ಲಿ ಪ್ರವೇಶವಾಗುತ್ತದೆ. 

Raj B Shetty Film Review: ರೂಪಾಂತರದ ವಿಷಾದವನ್ನು

Latest Videos

ನೋರಾ (ಇಲಿಯಾನ ಡಿಕ್ರೋಜಾ) ಒಬ್ಬ ರಂಗನಟಿ. ಅನಿಯ ಜೀವನವನ್ನು ಪ್ರವೇಶಿಸಿದರೆ, ವಿಕ್ರಂ (ಸೆಂತಿಲ್ ರಾಮಮೂರ್ತಿ) ಕಾವ್ಯಾಳ ಬದುಕಿನಲ್ಲಿ ಅಡಿ ಇಡುತ್ತಾನೆ. ಮೊದಮೊದಲು ಏಕತಾನತೆಯಿಂದ ಹೊರ ಬರುವಂಥ ಒಂದು ಸ್ನೇಹವಾಗಿದ್ದರೂ, ಕ್ರಮೇಣ ಇಬ್ಬರೂ ಆ ಮದುವೆಯಾಚೆಗಿನ ಸ್ನೇಹಕ್ಕೆ ಸೋತು ಬಿಡುತ್ತಾರೆ. ವಿಕ್ರಂ ಒಬ್ಬ ಫೋಟೋಗ್ರಾಫರ್. ನ್ಯೂಯಾರ್ಕಿನಿಂದ ಮುಂಬೈಗೆ ಯಾವುದೋ ಕೆಲಸದ ಮೇಲೆ ಬಂದಿರುತ್ತಾನೆ. ವಿದ್ಯಾಳನ್ನು ನ್ಯೂಯಾರ್ಕಿಗೆ ಕರೆದೊಯ್ಯಲು ತುದಿಗಾಲಿನಲ್ಲಿ ಕಾದಿರುತ್ತಾನೆ. ಇತ್ತ ನೋರಾ ಸಹ ಅನಿಯನ್ನು ಮದುವೆಯಾಗಲು ಕಾತರಿಸುತ್ತಿರುತ್ತಾಳೆ. ನೋರಾ ಅನಿಯನ್ನು ಮದುವೆಯಾಗಲೂ, ಕಾವ್ಯಾ ವಿಕ್ರಂ ಜೊತೆ ವಿದೇಶಕ್ಕೆ ಹಾರಲೂ ಕಾನೂನುಬದ್ಧ ವಿಚ್ಛೇದನ ಬೇಕೇ ಬೇಕು. ಆದರೆ ಕಾವ್ಯಾ ಹಾಗೂ ಅನಿ ವಿಚ್ಛೇದನ ಪಡೆದುಕೊಳ್ಳಲು ಯಾಕೋ ಹಿಂದೇಟು ಹಾಕುತ್ತಿರುತ್ತಾರೆ.

ಈ ಮಧ್ಯೆ ಕಾವ್ಯಾಳ ಪ್ರೀತಿಯ ತಾತನ ಸಾವಿನಿಂದಾಗಿ ಕಾವ್ಯಾ ತನ್ನ ಹುಟ್ಟೂರಿಗೆ ಹೋಗಬೇಕಾಗುತ್ತದೆ. ತಾತ ಮತ್ತು ಕಾವ್ಯಳ ಅನುಬಂಧದ ಅರಿವಿದ್ದ ಅನಿ ಕಕ್ಕುಲಾತಿಯಿಂದ ತಾನೂ ಕಾವ್ಯಳ ಜೊತೆ ಊರಿಗೆ ಹೋಗುತ್ತಾನೆ. ಅದೇ ಮೊದಲ ಬಾರಿಗೆ ಕಾವ್ಯಾ ಅನಿ ಕಾವ್ಯಾಳ ತವರು ಊಟಿಗೆ ಹೋಗುವ ಸಂದರ್ಭ. ಮದುವೆಯಾಗಿ 12 ವರ್ಷ ಕಳೆದು ಈಗ ಅವರಿಬ್ಬರ ನಡುವೆ ಯಾವುದೇ ಪುಳಕಗಳಿಲ್ಲದಿದ್ದರೂ ತವರಿಗೆ ಹೋದಾಗ ಅವಳ ಹೆತ್ತವರು ಅನಿಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕಾತುರವಂತೂ ಇದ್ದೇ ಇರುತ್ತದೆ. ಕಾವ್ಯಾಳ ತವರಿನ ಇನ್ನೊಬ್ಬ ಸದಸ್ಯ ಲಾಸ್ ಏಂಜಲೀಸ್‌‌ನಿಂದ ಬರುವವರಿರುತ್ತಾರೆ. ಹಾಗಾಗಿ ತಾತನ ಅಂತ್ಯ ಸಂಸ್ಕಾರ ತಡವಾಗುತ್ತದೆ. ಕಾವ್ಯಾಳ ತಾಯಿ ಅನಿಯನ್ನು ಅಳಿಯನಂತೆ ಕಂಡು ಪ್ರೀತಿ ಆದರ ತೋರಿಸುತ್ತಾಳೆ. ಆದರೆ ತಂದೆ ಬಿಮ್ಮಗೆ ಬಿಗಿಸಿಕೊಂಡಿರುತ್ತಾನೆ. ಮೊದಲಿನಂತೆ ಕಾವ್ಯಳಿಗೂ ಅವಳ ತಂದೆಗೂ ಸದಾ ವಾಗ್ಯುದ್ಧ. ಈಗಲೂ ಮುಂದುವರೆಯುತ್ತದೆ. ಅಪ್ಪನಿಗೆ ಇನ್ನೂ ಕೋಪ ಆರಿಲ್ಲ. ಮನೆಯಲ್ಲಿ ಸೇರಿದ್ದ ಸದಸ್ಯರು ಕಾವ್ಯಳನ್ನು 12 ವರ್ಷದ ನಂತರ ನೋಡಿದ್ದರಿಂದ ಆತ್ಮೀಯವಾಗಿ ಮಾತಾಡುತ್ತಾರೆ. ಅನಿಯನ್ನೂ ಮಾತನಾಡಿಸುತ್ತಾರೆ. ಕಾವ್ಯಳ ಗಂಡ ಎಂದು ಉಪಚರಿಸುತ್ತಾರೆ. ತಂದೆಯ ಅಸಮಾಧಾನ ಹಾಗೂ ಜಗಳದಿಂದ ಬೇಸತ್ತ ಕಾವ್ಯ ಮನೆಯಿಂದ ಹೊರಗೆ ಹೋಗುತ್ತಾಳೆ. ಅನಿರುದ್ಧನೂ ಅವಳನ್ನು ಹಿಂಬಾಲಿಸುತ್ತಾನೆ. ಇಬ್ಬರೂ ಒಂದು ಹೋಟೆಲ್ ಹೋಗಿ ತಮ್ಮ ಇರವನ್ನು ಮರೆತು, ಮೋಜು ಮಸ್ತಿ ಮಾಡಿ ಕುಡಿದು ನಶೆಯಿಂದ ತೂರಾಡುತ್ತಾ ಮನೆಗೆ ಬರುತ್ತಾರೆ. ಮನೆಗೆ ಬಂದಮೇಲೂ ನಶೆ ಇಳಿದಿರದ ಅವರಿಬ್ಬರೂ ಸರಸವಾಡಲು ತೊಡಗುತ್ತಾರೆ. ಇಬ್ಬರೂ ಎಷ್ಟು ಮೈಮರೆತಿರುತ್ತಾರೆ ಎಂದರೆ ತಾವು ಸರಸವಾಡುತ್ತಿರುವ ಜಾಗ ತಾತನ ಶವ ಇರಿಸಿದ್ದ ರೂಂ ಎನ್ನುವುದನ್ನೇ ಇಬ್ಬರೂ ಮರೆತಿರುತ್ತಾರೆ. ಇದರಿಂದ ಮನೆಯವರ ಕೆಂಗಣ್ಣಿಗೆ ತುತ್ತಾಗುತ್ತಾರೆ. ನಾಚಿಕೆಯಿಂದ ಒಬ್ಬರನ್ನೊಬ್ಬರು ಕಳ್ಳದೃಷ್ಟಿಯಿಂದ ನೋಡುವುದಂತೂ ವಾಹ್! 

8 AM Metro: ಒಂದು ಆತ್ಮಸಂಗಾತದ ಕಥೆಯ ಮೂವಿ ರಿವ್ಯೂ ಇದು

ತಾತನ ಅಂತಿಮ ಸಂಸ್ಕಾರದ ನಂತರ ಮುಂಬೈಗೆ ಹಿಂದಿರುಗುವ ಇವರು ತಮ್ಮ ನಡುವೆ ಅಂತರ ಇದ್ದುದ್ದನ್ನೇ ಮರೆತು ಪರಸ್ಪರ ಆಕರ್ಷಿತರಾಗಿರುತ್ತಾರೆ. ವರ್ಷಗಳ ನಂತರ ಮತ್ತೆ ಇಬ್ಬರೂ ಹಾಸಿಗೆಯಲ್ಲಿ ಒಂದಾಗುತ್ತಾರೆ. ಸಂಭ್ರಮಿಸುತ್ತಾರೆ. ತಮ್ಮ ನಡುವಿನ ವೈಷಮ್ಯವನ್ನು ಗೌಣವಾಗಿಸುತ್ತಾರೆ. ಇಬ್ಬರೂ ಬೇಗ ಮನೆಗೆ ಬರುವುದು, ಒಟ್ಟಿಗೆ ಅಡುಗೆ ಮಾಡಿ, ಊಟ ಮಾಡುವುದು, ನಗುನಗುತ್ತಾ ಹರಟೆ ಹೊಡೆಯುತ್ತಾ, ಟೀ ಮಾಡಿಕೊಂಡು ಕುಡಿಯುವುದು ಇವೆಲ್ಲ ನಡೆಯುತ್ತದೆ. ಅವನು ಅವಳಿಗಾಗಿ ಮೊದಲು ಮಾಡುತ್ತಿದ್ದಂತೆ, ಬದನೆ ಕಾಯಿ ಪಲ್ಯ ಕೂಡ ಮಾಡುತ್ತಾನೆ. ಇಬ್ಬರೂ ಒಬ್ಬರಿಗೊಬ್ಬರು ತಿನ್ನಿಸಿಕೊಳ್ಳುತ್ತಾರೆ. ತಮ್ಮ ನಡುವೆ ವೈಮನಸ್ಸು ಇತ್ತೆಂಬುದೇ ಮರೆತು ಇಬ್ಬರೂ ಖುಷಿಯಾಗಿ ಇರುತ್ತಾರೆ. ಇಬ್ಬರೂ ತಮ್ಮ ತಮ್ಮ ಗೆಳೆಯ ಗೆಳತಿಯರನ್ನು ಭೇಟಿ ಮಾಡಲು ಇಷ್ಟವಿಲ್ಲದೆ ನೆಪಗಳನ್ನು ಹೇಳುತ್ತಾ ಅವೈಡ್ ಮಾಡುತ್ತಾರೆ.

ಕಾವ್ಯಾಳಿಗಾಗಿ ವಿಕ್ರಂ ಒಂದು ಮನೆಯನ್ನು ಖರೀದಿಸಲು ಯೋಚಿಸಿರುತ್ತಾನೆ. ಅದರ ಸಲುವಾಗಿ ಒಂದು ಫೋನ್ ಕಾಲ್ ಕಾವ್ಯಾಳಿಗೆ ಬರುತ್ತದೆ. ಆ ಫೋನ್ ಕರೆಯನ್ನು ಅನಿ ತೆಗೆದುಕೊಂಡು ಮಾತನಾಡಿದಾಗ ಅವನಿಗೆ ಕಾವ್ಯಾ ಬೇರೊಬ್ಬರ ಸ್ನೇಹದಲ್ಲಿ ಇರುವುದು ತಿಳಿದುಬಿಡುತ್ತದೆ. ಅವನಿಗೆ ಆಘಾತವಾಗುತ್ತದೆ. ಕಾವ್ಯಾ ಹಾಗೂ ಅನಿಗೆ ಹಣಾಹಣಿ ಜಗಳವಾಗುತ್ತದೆ. ಅನಿ ಕೂಡ ಜಗಳದ ಭರದಲ್ಲಿ ತಾನು ನೋರಾ ಪ್ರೀತಿಗೆ ಸಿಲುಕಿರುವುದು ಹೇಳಿಬಿಡುತ್ತಾನೆ. ಈಗ ಶಾಕ್ ಆಗುವ ಸರದಿ ಕಾವ್ಯಾಳದು. ‘ನೀನು ಮಗು ಬೇಡವೆಂದು ಅಬಾರ್ಷನ್ ಮಾಡಿಸಿಕೊಂಡೆ’ ಎಂದು ಅವನು ದೂರಿದರೆ, ‘ನೀನು ನನಗೆ ಸಮಯವನ್ನೇ ಕೊಡುತ್ತಿರಲಿಲ್ಲ. ನಾನು ನೀನಿದ್ದೂ ಒಂಟಿತನ ಅನುಭವಿಸಿದೆ. ಅದನ್ನು ಯಾರಿಗೆ ಹೇಳಲಿ?’ ಎಂದು ಅವಳು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬರುತ್ತಾರೆ. ಅವರವರ ಸಾಮಾನು ಸಂರಂಜಾಮು ಪ್ಯಾಕ್ ಮಾಡಿಕೊಂಡು, ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ಹೊರಡುತ್ತಾರೆ.

ಒಂದು ವರ್ಷದ ನಂತರ ಕಾವ್ಯಾಳಿಗೆ ಒಂದು ಫೋನ್ ಬರುತ್ತದೆ. ಅದರಲ್ಲಿ ಅವರ ಫ್ಲಾಟ್ ಮಾರಾಟವಾಗಿದೆಯಂತಲೂ ಆ ಹಣ ಅವಳ ಭಾಗದ್ದು ಕೆಲವೇ ದಿನದಲ್ಲಿ ಅವಳ ಖಾತೆಗೆ ಜಮೆಯಾಗುತ್ತದೆ ಎಂದು ಫೋನಿನ ಆ ಕಡೆಯ ಧ್ವನಿ ಹೇಳುತ್ತದೆ. ಕಾವ್ಯಾ ಕೊನೆಯ ಬಾರಿ ತಾನು ಅನಿಯೊಂದಿಗೆ ವಾಸಿಸಿದ್ದ ಮನೆಯನ್ನು ನೋಡಲು ಬರುತ್ತಾಳೆ. ಖಾಲಿ ಮನೆ ಅವಳನ್ನು ಸ್ವಾಗತಿಸುತ್ತದೆ. ಎಲ್ಲೆಲ್ಲೂ ತುಂಬಿದ ಧೂಳು ಅವಳನ್ನು ಅಣಕಿಸುತ್ತದೆ. ಅಲ್ಲೇ ಅವಳ ಇಷ್ಟವಾಗಿದ್ದ ಬಾಲ್ಕನಿಯಲ್ಲಿ ಧೂಳು ಕೊಡವಿ ಕುಳಿತು ತಾನು ಜೊತೆಯಲ್ಲಿ ತಂದಿದ್ದ ತಿಂಡಿಯನ್ನು ತಿನ್ನುತ್ತ ಇರುವಾಗ ಅನಿಯ ಫೋನ್ ಬರುತ್ತದೆ. ಅನಿಯೊಂದಿಗೆ ಮಾತಾಡುತ್ತಿರುವಾಗ ಅನಿ ಅಲ್ಲಿಗೆ ಬಂದೇ ಬಿಡುತ್ತಾನೆ. ಕಾವ್ಯಾ ವಿಕ್ರಮನ ಸಂಗವನ್ನು ಯಾವಾಗಲೋ ಬಿಟ್ಟಿರುತ್ತಾಳೆ ಹಾಗೂ ನೋರಾ ತನ್ನ ಮಹತ್ವಾಕಾಂಕ್ಷೆಯಿಂದ ದೊಡ್ಡ ನಟಿಯಾಗಿ, ಅನಿಯನ್ನು ತೊರೆದಿರುತ್ತಾಳೆ. ಕಾವ್ಯಾ ಅನಿ ಇಬ್ಬರೂ ಇದನ್ನು ಪರಸ್ಪರ ಹೇಳಿಕೊಂಡು ನಗಾಡುತ್ತಾರೆ. ನಿನ್ನ ಮಾತುಗಳನ್ನು ಇಡೀ ಜೀವಮಾನ ಕೇಳಲು ತಯಾರಿದ್ದೇನೆ ಎನ್ನುವ ಅನಿಯ ಮಾತಿಗೆ ನಗುತ್ತ ಕಾವ್ಯಾ ತಿಂಡಿಯ ಇನ್ನೊಂದು ತಾಟನ್ನು ಅನಿಯ ಮುಂದೆ ಹಿಡಿಯುತ್ತಾಳೆ. ಇಬ್ಬರೂ ಪರಸ್ಪರ ನಗಡುತ್ತಾ ಕಾಲೆಳೆಯುತ್ತಾ ತಿಂಡಿ ತಿನ್ನುತ್ತಾರೆ.

ಜಮೀನುದಾರರ ದೌರ್ಜನ್ಯ, ಪಾಳೆಗಾರರ ಅಟ್ಟಹಾಸ; ರಕ್ತದೋಕುಳಿ ಹರಿಸುವ ಮಿರ್ಜಾಪುರ್

ವಿದ್ಯಾ ಹಾಗೂ ಪ್ರತೀಕ್ ಇಬ್ಬರೂ ಬಹಳ ಲವಲವಿಕೆಯಿಂದ ಅಭಿನಯಿಸಿದ್ದಾರೆ. ಅವರಿಬ್ಬರ ಕೆಮೆಸ್ಟ್ರಿ ತುಂಬಾ ಚೆನ್ನಾಗಿದೆ.  ‘ದೋ ಕಿನಾರೆ ಅಲಗ್ ಹೋಗಯೀ ಔರ್ ನದಿಯಾ ಖೋಗಯೀ’ ಈ ಗೀತೆ ಮೆಲುಕು ಹಾಕುವಂತಿದೆ. ಯಾವುದೇ ಮಸಾಲೆಯಿಲ್ಲದ ಅಪ್ಪಟ ಮನರಂಜನಾ ಚಿತ್ರ ಎಂದು ಧಾರಾಳವಾಗಿ ಹೇಳಬಹುದು. ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನ ಬಯಸುವ ಈಗಿನ ಯುವಜೋಡಿಗಳು ಈ ಚಿತ್ರವನ್ನು ಒಮ್ಮೆ ನೋಡಬೇಕು.
 

click me!