
ರಾಜೇಶ್ ಶೆಟ್ಟಿ
ರಾಯಲ್ ಆಗಿ ಬದುಕುವ ಆಸೆ ಇಟ್ಟುಕೊಂಡ ತರುಣನೊಬ್ಬ ನಿಜವಾಗಿಯೂ ರಾಯಲ್ ಆಗಿ ಬದುಕುವ ಸಂದರ್ಭ ಬಂದಾಗ ಏನು ಮಾಡುತ್ತಾನೆ ಎಂಬ ಆಸಕ್ತಿಕರ ಕಥಾ ಹಂದರ ಹೊಂದಿರುವ ಸಿನಿಮಾ ಇದು. ಪಕ್ಕಾ ಮಾಸ್ ಮಸಾಲ ಶೈಲಿಯಲ್ಲಿರುವ ಈ ಚಿತ್ರದಲ್ಲಿ ನಿರ್ದೇಶಕರು ಯಾವ ಅಂಶವನ್ನೂ ಬಿಡದೆ ಎಲ್ಲಾ ಅಂಶಗಳನ್ನೂ ಕಟ್ಟಿಕೊಟ್ಟಿದ್ದಾರೆ.
ಮನಸ್ಸು ತಟ್ಟಲು ತಾಯಿ ಸೆಂಟಿಮೆಂಟು, ಹೃದಯ ಕದಡಲು ಪ್ರೇಮ, ಫೈಟಿಂಗ್‌ಗೆ ವಿಲನ್‌ಗಳು, ಉದಾತ್ತ ಉದ್ದೇಶಕ್ಕೆ ಕೆಮಿಕಲ್‌ಯುಕ್ತ ಆಹಾರ, ರೋಮಾಂಚನಕ್ಕೆ ಹಾಡುಗಳು, ರೋಚಕತೆಗೆ ಸೊಗಸಾದ ಚಿತ್ರಕತೆ ಹೀಗೆ ಜಾಣತನದಿಂದ ಈ ಸಿನಿಮಾವನ್ನು ನೇಯ್ದಿದ್ದಾರೆ ದಿನಕರ್. ಮೊದಲಾರ್ಧದಲ್ಲಿ ಲವಲವಿಕೆಯಿಂದ ಕೊಂಡೊಯ್ಯುವ ಈ ಚಿತ್ರದ ಇಂಟರ್ವಲ್‌ನಲ್ಲಿ ಒಂದು ಅಚ್ಚರಿಯನ್ನು ಇಡುತ್ತಾರೆ ನಿರ್ದೇಶಕರು. ಅಲ್ಲಿಂದಾಚೆಗೆ ಕತೆ ಮತ್ತೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತದೆ.
ಇಡೀ ಚಿತ್ರವನ್ನು ತನ್ನ ಸೊಗಸಾದ ನಟನೆಯಿಂದ ಹೊತ್ತು ಸಾಗಿರುವುದು ವಿರಾಟ್. ಚಿತ್ರದ ಪೂರ್ತಿ ಆವರಿಸಿಕೊಂಡಿರುವ ಅವರು ತನ್ನ ನಟನೆಯಿಂದ, ಸ್ಟೈಲ್‌ನಿಂದ ಮನಸ್ಸು ಗೆಲ್ಲುತ್ತಾರೆ. ಸೂಕ್ತ ಕತೆ ಸಿಕ್ಕರೆ ದೊಡ್ಡದಾಗಿ ಬೆಳೆಯುವ ಸೂಚನೆ ಕೊಡುತ್ತಾರೆ. ಅದಕ್ಕೆ ಪೂರಕವಾಗಿ ಎಲ್ಲಾ ಪಾತ್ರಧಾರಿಗಳೂ ಉತ್ತಮ ಅಭಿನಯ ನೀಡಿರುವುದು ಶ್ಲಾಘನೀಯ. ರಘು ಮುಖರ್ಜಿ ತಣ್ಣಗಿನ ನೋಟದಿಂದ, ಛಾಯಾ ಸಿಂಗ್ ಕಾರುಣ್ಯ ಭಾವದಿಂದ ಗಮನ ಸೆಳೆಯುತ್ತಾರೆ.
ಚಿತ್ರ: ರಾಯಲ್
ನಿರ್ದೇಶನ: ದಿನಕರ್ ತೂಗುದೀಪ
ತಾರಾಗಣ: ವಿರಾಟ್, ಸಂಜನಾ ಆನಂದ್, ಅಚ್ಯುತ್ ಕುಮಾರ್, ಛಾಯಾ ಸಿಂಗ್, ರಘು ಮುಖರ್ಜಿ
ರೇಟಿಂಗ್: 3
ಚಿತ್ರದಲ್ಲಿ ಅಲ್ಲಿ ಇಲ್ಲಿ ಕೊಂಚ ಲಾಜಿಕ್ ಮಿಸ್ ಹೊಡೆದರೂ ಮ್ಯಾಜಿಕ್‌ಗೇನೂ ಕೊರತೆ ಇಲ್ಲ. ವಿಸ್ತಾರವಾಗಿ ಕತೆಯನ್ನು ಹೇಳಿರುವ ನಿರ್ದೇಶಕರು ನೋಡಿಸಿಕೊಂಡು ಹೋಗುವಂತೆ ಚಿತ್ರಕತೆಯನ್ನು ಹೆಣೆದಿದ್ದಾರೆ. ಮಾಸ್ ಮಸಾಲ ಸಿನಿಮಾಗೆ ತಕ್ಕಂತೆ ಸಿನಿಮಾ ರೂಪಿಸಿದ್ದಾರೆ. ಇದೊಂದು ಯಾವುದೇ ಭಾರಗಳಿಲ್ಲದೆ ನಿರರ್ಗಳವಾಗಿ ಸಾಗುವ, ಲವಲವಿಕೆ ಕೂಡಿರುವ ಕಥನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.